ಇತ್ತೀಚೆಗೆ ಕೇಂದ್ರ ಸರಕಾರವು ಮಿಷನರೀಸ್ ಆಫ್ ಚ್ಯಾರಿಟಿ, ಆಕ್ಸ್ ಫಾಂ ಇಂಡಿಯಾ, ಇಂಡಿಯನ್ ಮೆಡಿಕಲ್ ಅಸೊಸಿಯೇಶನ್ (ಐಎಂಎ) ಮೊದಲಾದ ಸುಮಾರು 6000 ಸರಕಾರೇತರ ಸಂಸ್ಥೆಗಳ ವಿದೇಶೀ ದೇಣಿಗೆಯನ್ನು ಪಡೆಯುವ ಪರವಾನಗಿಯನ್ನು ಪುನರ್ನವೀಕರಿಸದೆ ಸ್ಥಗಿತಗೊಳಿಸಿತು. ಈ ಮೊದಲೂ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳ ವಿದೇಶೀ ದೇಣಿಗೆ ಪಡೆಯುವ ಪರವಾನಗಿಯನ್ನು ರದ್ದು ಮಾಡಲಾಗಿತ್ತು. ಈ ಎನ್.ಜಿ.ಓ.ಗಳು ತಾವು ಪಡೆದ ವಿದೇಶೀ ದೇಣಿಗೆಯನ್ನು ವಿನಿಯೋಗ ಮಾಡುವಾಗ ವಿದೇಶೀ ದೇಣಿಗೆ ನಿಯಂತ್ರಣ ಕಾನೂನನ್ನು (ಫಾರಿನ್ ಕಾಂಟ್ರಿಬ್ಯೂಶನ್ ರೆಗ್ಯುಲೇಷನ್ ಆ್ಯಕ್ಟ್/ ಎಫ್. ಸಿ. ಆರ್. ಎ) ಉಲ್ಲಂಘಿಸಿದುದರಿಂದ ಈ ಕ್ರಮವನ್ನು ಕೈಗೊಳ್ಳಲಾಯಿತು ಎಂದು ಕೇಂದ್ರ ಸರಕಾರವು ಹೇಳಿದೆ. ಯಾವುದೇ ಸರಕಾರೇತರ ಸಂಸ್ಥೆಯು ವಿದೇಶೀ ದೇಣಿಗೆಯನ್ನು ಪಡೆಯಲು ತನ್ನನ್ನು ತಾನು ಎಫ್. ಸಿ. ಆರ್. ಎ ಕಾಯಿದೆ ಅಡಿಯಲ್ಲಿ ನೊಂದಾಯಿಸಿಕೊಳ್ಳಬೇಕಾಗುತ್ತದೆ. ಕಾಲಕಾಲಕ್ಕೆ ತಾನು ಪಡೆದ ವಿದೇಶೀ ದೇಣಿಗೆ ಹಾಗೂ ಖರ್ಚು ಮಾಡಿದ ಮಾಹಿತಿಯನ್ನು ಸರಕಾರಕ್ಕೆ ಎಫ್.ಸಿ.ಆರ್.ಎ.ಯ ವೆಬ್ಸೈಟಿನ ಎಫ್.ಸಿ. 6 ಅನ್ನುವ ನಮೂನೆಯ ಮೂಲಕ ಸರಕಾರಕ್ಕೆ ಸಲ್ಲಿಸಬೇಕು. ಇದು ಕೇಂದ್ರ ಸರಕಾರದ ಗೃಹ ಸಚಿವಾಲಯದ ನಿಯಂತ್ರಣ ಹಾಗೂ ಕಣ್ಗಾವಲಲ್ಲಿದೆ. ವಿದೇಶೀ ದೇಣಿಗೆ ಪಡೆಯುವ ಪರವಾನಗಿಯನ್ನು ಕಳೆದುಕೊಂಡ ಬಹುತೇಕ ಎನ್ಜಿಓಗಳು ಎಫ್ ಸಿ 6 ನಮೂನೆಯನ್ನು ಸಲ್ಲಿಸಲು ವಿಫಲವಾಗಿವೆ ಹಾಗೂ ಉಳಿದ ಕೆಲವು ಸಂಸ್ಥೆಗಳು ವಿದೇಶೀ ದೇಣಿಗೆ ಕಾಯ್ದೆಯನ್ನು ಉಲ್ಲಂಘಿಸಿವೆ.
ಮೊದಲು ಬಹಳಷ್ಟು ಭಾರತೀಯ ಎನ್ಜಿಓಗಳು ದೊಡ್ಡ ಪ್ರಮಾಣದಲ್ಲಿ ವಿದೇಶೀ ದೇಣಿಗೆಯನ್ನು ಪಡೆಯುತ್ತಿದ್ದುವು. ಬಹಳಷ್ಟು ಸಂದರ್ಭಗಳಲ್ಲಿ ವಿದೇಶೀ ದೇಣಿಗೆಗಳು ದುರ್ಬಳಕೆಯಾಗುತ್ತಿದ್ದವು. ಎಫ್ಸಿಆರ್ಎ 2010 ರ ಅನುಸಾರ ಸಂಸ್ಥೆಗಳು ತಾವು ಸ್ವೀಕರಿಸಿದ ವಿದೇಶೀ ದೇಣಿಗೆಯ 50% ಹಣವನ್ನು ಆಡಳಿತಾತ್ಮಕ ಉದ್ದೇಶಗಳಗೆ ಬಳಸಬಹುದಾಗಿತ್ತು. ಉಳಿದ 50% ಮೊತ್ತ ಮಾತ್ರ ನಿಜವಾದ ಯೋಜನೆಯ ಅನುಷ್ಠಾನಕ್ಕೆ ಬಳಕೆಯಾಗುತ್ತಿತ್ತು. 2020 ರಲ್ಲಿ ಕೇಂದ್ರ ಸರಕಾರವು ಎಫ್ಸಿಆರ್ಎಗೆ ತಿದ್ದುಪಡಿ ತಂದು ಸಂಸ್ಥೆಗಳು ತಾವು ಪಡೆದ ವಿದೇಶೀ ದೇಣಿಗೆಯಲ್ಲಿ ಕೇವಲ 20% ವನ್ನು ಮಾತ್ರ ಆಡಳಿತ ಉದ್ದೇಶಗಳಿಗೆ ಬಳಸಬೇಕೆಂದು ಸೂಚಿಸಿ ಉಳಿದ 80% ಮೊತ್ತವನ್ನು ಯೊಜನೆಯ ಅನುಷ್ಠಾನಕ್ಕೆ ಬಳಸಬೇಕೆಂದು ಖಡ್ಡಾಯಗೊಳಿಸಿದೆ. ಸಂಸ್ಥೆಯ ಆಡಳಿತಮಂಡಳಿಯ ಪದಾಧಿಕಾರಿಗಳ ಗೌರವಧನ, ಸಿಬ್ಬಂದಿಗಳ ವೇತನ, ವಾಹನದ ಖರ್ಚು, ಕಟ್ಟಡದ ಬಾಡಿಗೆ, ವಿದ್ಯುತ್ ಬಿಲ್, ಫೋನ್ ಬಿಲ್, ಸ್ಟೇಶನರಿ ಮೊದಲಾದವುಗಳೆಲ್ಲಾ ಆಡಳಿತಾತ್ಮಕ ಖರ್ಚಿನಡಿಲ್ಲಿ ಬರುತ್ತದೆ. ಈ ಎಲ್ಲಾ ಖರ್ಚುಗಳನ್ನು ಲಭಿಸಿದ ದೇಣಿಗೆಯ 20% ದಲ್ಲೇ ಪೂರೈಸಬೇಕು. ಇದುವರೆಗೆ ದೇಣಿಗೆಯ 50% ಮೊತ್ತವನ್ನು ಆಡಳಿತಾತ್ಮಕ ಖರ್ಚು ಎಂದು ತೋರಿಸಿ ಗಡದ್ದಾಗಿ ಖರ್ಚು ಮಾಡುತ್ತಿದ್ದ ಎನ್ಜಿಓಗಳಿಗೆ ಎಫ್ಸಿಆರ್ಎ ಯ ಹೊಸ ತಿದ್ದುಪಡಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎನ್ಜಿಓಗಳ ಪದಾಧಿಕಾರಿಗಳಿಗೆ ಹಾಗೂ ಉದ್ಯೋಗಿಗಳು ಸಿಗುತ್ತಿದ್ದ ದೊಡ್ಡ ಮೊತ್ತದ ವೇತನ ಹಾಗೂ ಗೌರವಧನಗಳು ವಿದೇಶೀ ದೇಣಿಗೆಯ ಕುರಿತು ಹೆಚ್ಚಿನ ಆಕರ್ಷಣೆಗೆ ಕಾರಣವಾಗಿದ್ದವು. ವಿದೇಶೀ ದೇಣಿಗೆಯನ್ನು ಪಡೆದು ಸಮಾಜ ಸೇವೆಯ ಹೆಸರಿನಲ್ಲಿ ಬಹಳಷ್ಟು ಜನರು ವಿಲಾಸೀ ಜೀವನವನ್ನು ನಡೆಸುತ್ತಿರುವ ಎಷ್ಟೋ ಉದಾಹರಣೆಗಳು ಇವೆ.
ಬೆಂಗಳೂರಿನಿಂದ ಕೇವಲ ನೂರು ಕಿಲೋಮೀಟರ್ ದೂರದಲ್ಲಿ ಬರಪೀಡಿತ ಜಿಲ್ಲೆಯಲ್ಲೊಂದು ಎನ್ಜಿಓ ಇದೆ. ಆ ಜಿಲ್ಲೆಯ ಬಹುತೇಕ ಜನರು ಬಡವರು. ಸುಮಾರು 40-45 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಆ ಸಂಸ್ಥೆಯು ಜಿಲ್ಲೆಯ ನಾಲ್ಕೈದು ತಾಲೂಕುಗಳಲ್ಲಿ ಕಾರ್ಯಾಚರಿಸುತ್ತಿದೆ. ಈ ಸಂಸ್ಥಯ ಮುಖ್ಯಸ್ಥರಿಗೆ ಬಹಳಷ್ಟು ವಿದೇಶೀ ಫಂಡಿಂಗ್ ಏಜನ್ಸಿಗಳ ಸಂಪರ್ಕವಿದೆ. ಸಂಸ್ಥೆಯು ಆ ಭಾಗದ ಜನರ ಬಡತನವನ್ನು ತೋರಿಸಿ ದೊಡ್ಡಮಟ್ಟಿನ ವಿದೇಶೀ ಫಂಡ್ ಅನ್ನು ತರಿಸಿಕೊಂಡಿದೆ. ತನ್ನ ವೆಬ್ಸೈಟಿನಲ್ಲಿ ಘೋಷಿಸಿಕೊಂಡಂತೆ ಸಂಸ್ಥೆಯು 90 ರ ದಶಕದ ನಂತರ 110 ಕೋಟಿ ರುಪಾಯಿಗಳಿಗಿಂತಲೂ ಹೆಚ್ಚು ವಿದೇಶೀ ದೇಣಿಗೆಯನ್ನು ಸ್ವೀಕರಿಸಿದೆ. ಮೇಲ್ನೋಟಕ್ಕೆ ಬಡಜನರಿಂದ ಬಡ ಜನರಿಗಾಗಿ ನಡೆಸಲ್ಪಡುವ ಸಂಸ್ಥೆಯೆಂದು ತೋರಿಸಿಕೊಂಡರೂ ಸಂಸ್ಥೆಯ ನಿಯಂತ್ರಣವೆಲ್ಲಾ ಇರುವುದು ಸಂಸ್ಥೆಯ ಯೋಜನಾ ನಿರ್ದೇಶಕರು ಹಾಗೂ ಅವರ ಸಂಬಂಧಿಗಳ ಕೈಯಲ್ಲಿ. ಸಂಸ್ಥೆಯು ಸಾಕಷ್ಟು ಸ್ಥಿರಾಸ್ಥಿಗಳನ್ನು ಹೊಂದಿದ್ದು ಸಂಸ್ಥೆಯ ನಿರ್ದೇಶಕರು ಹಾಗೂ ಅವರ ಸಂಬಂಧಿಕರಾಗಿರುವ ಪದಾಧಿಕಾರಿಗಳು ಐಶಾರಾಮೀ ಜೀವನವನ್ನು ನಡೆಸುತ್ತಿದ್ದಾರೆ. ಇದೇ ರೀತಿಯಲ್ಲಿ ದೇಶದಲ್ಲಿರುವ ಸಾವಿರಾರು ಎನ್ಜಿಓಗಳು ಬಡವರ ಹೆಸರಿನಲ್ಲಿ ವಿದೇಶಗಳಿಂದ ಪಡೆದ ಸಾವಿರಾರು ಕೋಟಿ ರುಪಾಯಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಕೇಂದ್ರ ಸರಕಾರವು ತಿಳಿಸಿರುವಂತೆ ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ 18000 ಸರಕಾರೇತರ ಸಂಘಟನೆಗಳು 50,975 ಕೋಟಿ ರುಪಾಯಿಗಳಷ್ಟು ವಿದೇಶೀ ದೇಣಿಗೆಯನ್ನು ಪಡೆದಿವೆ.ಇದರಲ್ಲಿ 19,941 ಕೋಟಿ ರುಪಾಯಿಗಳು ಅಮೇರಿಕಾ ದೇಶವೊಂದರಿಂದಲೇ ಬಂದಿದೆ!
ದೇಣಿಗೆಯನ್ನು ಕೊಡುವ ವಿದೇಶೀ ಸಂಸ್ಥೆಗಳಿಗೆ ಯಾವುದೋ ಹಿತಾಸಕ್ತಿಯಿರುತ್ತದೆ. ಅಮೇರಿಕದ ಫೋರ್ಡ್ ಫೌಂಡೇಶನ್ ಮತ್ತು ಅಮೇರಿಕಾದ ಬೇಹುಗಾರಿಕಾ ಸಂಸ್ಥೆಯಾದ ಸೆಂಟ್ರಲ್ ಇಂಟೆಲಿಜೆನ್ಸ್ ಏಜನ್ಸಿ (ಐ ಎ ಎ) ನಡುವೆ ಸಂಬಂಧ ಇದೆ ಎನ್ನಲಾಗುತ್ತಿದೆ. ಫೋರ್ಡ್ ಸಂಸ್ಥೆಯು ವಿವಿಧ ಬಡ ಹಾಗೂ ಅಭಿವೃದ್ಧಿಶೀಲ ದೇಶಗಳ ಸರಕಾರೇತರ ಸಂಸ್ಥೆಗಳಿಗೆ ದೇಣಿಗೆ ನೀಡುತ್ತದೆ. ದೇಣಿಗೆಯನ್ನು ಪಡೆಯುವ ಸಂಸ್ಥೆಗಳು ಫೋರ್ಡ್ ಸಂಸ್ಥೆಯು ಹಾಕಿದ ನಿಬಂಧನೆಗಳಿಗೆ ಹಾಗೂ ನಿಯಮಗಳಿಗೆ ಅನುಗುಣವಾಗಿ ದೇಣಿಗೆಯ ಹಣವನ್ನು ವಿನಿಯೋಗಿಸಬೇಕಾಗುತ್ತದೆ. ಭಾರತದಂತಹ ದೇಶದಲ್ಲಿ ಆಗುವ ಆರ್ಥಿಕ ಪ್ರಗತಿ ಹಾಗೂ ಕೈಗಾರೀಕಾ ಪ್ರಗತಿಯನ್ನು ತಡೆಯಲು ಮತ್ತು ಇಲ್ಲಿ ರಾಜಕೀಯ ಅಸ್ಥಿರತೆಯನ್ನು ಉಂಟುಮಾಡಲು ಫೋರ್ಡ್ ಫೌಂಡೇಶನ್ ಧನ ಸಹಾಯ ನೀಡುತ್ತಿದೆ. ಬೇರೆ ದೇಶಗಳಲ್ಲಿ ಅಮೇರಿಕಾದ ರಾಜಕೀಯ ಹಿತಾಸಕ್ತಿಗೆ ವಿರುದ್ಧವಾಗಿರುವ ಶಕ್ತಿಗಳನ್ನು ಅಡಗಿಸಲು ಸಿಐಎಯು ಫೋರ್ಡ್ ಫೌಂಡೇಶನ್ ಜೊತೆಗೂಡಿ ಕೆಲಸ ಮಾಡುತ್ತಿದೆ. ಇದನ್ನು ಮನಗಂಡಿರುವ ಭಾರತ ಸರಕಾರವು ಇತ್ತೀಚೆಗೆ 300 ಕೋಟಿ ರುಪಾಯಿಗಳಷ್ಟು ಮೊತ್ತದ ಫೊರ್ಡ್ ಫೌಂಡೇಶನ್ನಿನ ದೇಣಿಗೆಯನ್ನು ತಡೆಹಿಡಿದಿದೆ. ಗುಜರಾತ್ನಲ್ಲಿ ಗೋಧ್ರಾ ಹಿಂಸಾಚಾರದ ನಂತರ ನಡೆದ ದೊಂಬಿಯ ವಿಚಾರವಾಗಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ವಿರುದ್ಧ ಕಾನೂನು ಹೋರಾಟ ನಡೆಸಲು ಫೋರ್ಡ್ ಫೌಂಡೇಶನ್ ತೀಸ್ತಾ ಸೆತಲ್ವಾಡ್ಗೆ 1.75 ಕೋಟಿ ರುಪಾಯಿಗಳ ದೇಣಿಗೆ ನೀಡಿತ್ತು. ಇತರ ದೇಶಗಳ ರಾಜಕೀಯ ಹಾಗೂ ಕಾನೂನು ವ್ಯವಸ್ಥೆಗಳಲ್ಲಿ ವಿದೇಶೀ ಫಂಡಿಂಗ್ ಏಜನ್ಸಿಗಳು ಹೇಗೆ ಕೈಯಾಡಿಸುತ್ತವೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ.
ಮೇಧಾಪಾಟ್ಕರ್ ನೇತೃತ್ವದಲ್ಲಿ ಪರಿಸರವಾದಿಗಳು ನರ್ಮದಾ ನದಿಗೆ ಕಟ್ಟಲಾದ ಸರ್ದಾರ್ ಸರೋವರ ಅಣೆಕಟ್ಟಿನ ಎತ್ತರವನ್ನು ಏರಿಸದಂತೆ ಭಾರೀ ಜನಾಂದೋಲನ ಹಾಗೂ ಕಾನೂನು ಹೋರಾಟವನ್ನು ಮಾಡಿದ್ದರು. ಸರ್ದಾರ್ ಸರೋವರ ಅಣೆಕಟ್ಟನ್ನು ಎತ್ತರಿಸುವುದನ್ನು ತಡೆಹಿಡಿಯಲು ವಿಷಯವನ್ನು ಸುಪ್ರೀಂ ಕೋರ್ಟಿನವರೆಗೂ ಕೊಂಡುಹೋಗಲಾಗಿತ್ತು. ಇದರ ಪರಿಣಾಮವಾಗಿ ಸರ್ದಾರ್ ಸರೋವರ ಅಣೆಕಟ್ಟು ಯೋಜನೆಯು ದಶಕಗಳ ಕಾಲ ನಿಧಾನವಾಯಿತು. ಕೊನೆಗೆ ಸುಪ್ರೀಂ ಕೋರ್ಟ್ ಅಣೆಕಟ್ಟಿನ ಎತ್ತರವನ್ನು ಏರಿಸಲು ಒಪ್ಪಿಗೆ ಕೊಟ್ಟಿತು. ಸರ್ದಾರ್ ಸರೋವರ ಅಣೆಕಟ್ಟು ಇಂದು ಗುಜರಾತಿನ 18.45 ಲಕ್ಷ ಹೆಕ್ಟೇರ್ ಹಾಗೂ ರಾಜಸ್ತಾನದ 2.46 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುತ್ತಿದೆ. ಗುಜರಾತ್ನ ಸುಮಾರು 9500 ಹಳ್ಳಿಗಳಿಗೆ ಹಾಗೂ 173 ಪಟ್ಟಣಗಳ ಜನರಿಗೆ ಕುಡಿಯುವ ನೀರನ್ನೂ ಒದಗಿಸುತ್ತಿದೆ. 1.45 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಕೂಡಾ ಆಗುತ್ತಿದೆ. ಈ ಎಲ್ಲಾ ಜನಕಲ್ಯಾಣ ಯೋಜನೆಗಳು ದಶಕಗಳ ಕಾಲ ಜಾರಿಯಾಗದಂತೆ ತಡೆ ಹಿಡಿದವರು ಮೇಧಾಪಾಟ್ಕರ್ ಹಾಗೂ ಅವರ ಬಳಗ. ಜನಾಂದೋಲನ ನಡೆಸಲು ಹಾಗೂ ಕೋರ್ಟ್ ಖರ್ಚನ್ನು ಭರಿಸಲು ಮೇಧಾಪಾಟ್ಕರ್ ಬಳಗಕ್ಕೆ ಸಂಪನ್ಮೂಲವನ್ನು ಒದಗಿಸಿದವರು ಯಾರು?
ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು ತಮಿಳ್ನಾಡಿನ ಕೂಡಂಕುಳಂನಲ್ಲಿ ಅಣುವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಹೊರಟಾಗ ಭಾರೀ ಜನಾಂದೋಲನ ಹಾಗೂ ಕಾನೂನು ಸಮರ ಆರಂಭವಾಗಿತ್ತು. ಅಣುವಿದ್ಯುತ್ ಸ್ಥಾವರ ಯೋಜನೆಯ ವಿರುದ್ಧವಾಗಿ ಆ ಭಾಗದ ಮೀನುಗಾರರನ್ನು ಎತ್ತಿಕಟ್ಟುವ ಕೆಲಸವನ್ನು ಎನ್ಜಿಓಗಳು ಹಾಗೂ ಚರ್ಚುಗಳು ಮಾಡಿದವು. ಚರ್ಚ್ ಆಫ್ ಸೌತ್ ಇಂಡಿಯಾ ಹಾಗೂ ನ್ಯಾಷನಲ್ ಕೌನ್ಸಿಲ್ ಆಫ್ ಚರ್ಚಸ್ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವು. ಜನರ ಪ್ರತಿಭಟನೆಯು ಯೋಜನೆಯ ವೇಗವನ್ನು ಕುಂದಿಸಿತು. ಕೂಡಂಕುಲಂ ಹೋರಾಟದಲ್ಲಿ ಅಂತಾರಾಷ್ಟ್ರೀಯ ಫಂಡಿಂಗ್ ಏಜೆನ್ಸಿಯಾದ ಗ್ರೀನ್ ಪೀಸ್ ಫೌಂಡೇಶನ್ನ ಕೈವಾಡವಿದೆ ಎಂದು ಅಂದಿನ ಮನಮೋಹನ್ ಸಿಂಗ್ ಸರಕಾರ ಆಪಾದನೆ ಮಾಡಿತ್ತು. ಇತ್ತೀಚೆಗೆ ಗ್ರೀನ್ ಪೀಸ್ ಫೌಂಡೇಶನ್ನ ದೇಣಿಗೆಯನ್ನು ಕೂಡಾ ಭಾರತ ಸರಕಾರವು ನಿಷೇಧಿಸಿದೆ.
ಇದೆ ರೀತಿಯಾಗಿ ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಕಂಪೆನಿಯು ನಡೆಸುತ್ತಿದ್ದ ಸ್ಟೆರ್ಲೈಟ್ ಹೆಸರಿನ ತಾಮ್ರದ ಅದಿರು ಸಂಸ್ಕರಣೆಯ ಫ್ಯಾಕ್ಟರಿಯನ್ನು ಮುಚ್ಚಬೇಕು ಎಂಬ ಬೇಡಿಕೆಯ ಜನಾಂದೋಲನವನ್ನು ಸ್ಥಳೀಯ ಎನ್ಜಿಓಗಳು ಹಾಗೂ ಚರ್ಚ್ಗಳು ನಡೆಸುತ್ತಿದ್ದವು. ಈ ಅದಿರು ಸಂಸ್ಕರಣಾ ಯೋಜನೆಯಿಂದಾಗಿ ಪರಿಸರವು ಕಲುಷಿತವಾಗುತ್ತಿದೆ ಎನ್ನುವುದು ಇವರ ವಾದ. ಚರ್ಚುಗಳು ಹಾಗೂ ಎನ್ಜಿಓಗಳು 22 ಮೇ 2018 ರಂದು 20 ಸಾವಿರ ಜನರನ್ನು ಬೀದಿಗೆ ತಂದು ಪ್ರತಿಭಟನೆ ನಡೆಸಿದವು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಇದನ್ನು ನಿಯಂತ್ರಿಸಲು ತಮಿಳ್ನಾಡು ಪೋಲೀಸರು ಲಾಠೀಚಾರ್ಜ್ ಹಾಗೂ ಗೋಲೀಬಾರ್ ನಡೆಸಿದಾಗ 14 ಪ್ರತಿಭಟನಾಕಾರರು ಮೃತರಾದರು. ಕೊನೆಗೆ ಒತ್ತಡಕ್ಕೆ ಮಣಿದ ತಮಿಳುನಾಡು ಸರಕಾರವು ಅದಿರು ಸಂಸ್ಕರಣಾ ಘಟಕವನ್ನು ಮುಚ್ಚಲು ಆದೇಶ ನೀಡಿತು. ಈ ಕುರಿತು ಕಾನೂನು ಹೋರಾಟ ಇನ್ನೂ ನಡೆಯುತ್ತಿದೆ. ಸ್ಟೆರ್ಲೈಟ್ ಅದಿರು ಸಂಸ್ಕರಣಾ ಘಟಕವು ಮುಚ್ಚಿದ ಕಾರಣ 20 ಸಾವಿರ ಜನರು ನೇರ ಹಾಗೂ ಪರೋಕ್ಷ ಉದ್ಯೋಗವನ್ನು ಕಳೇದುಕೊಂಡರು ಹಾಗೂ ಎಲ್ಲದಕ್ಕಿಂತಲೂ ಮಿಗಿಲಾಗಿ ಇದರಿಂದಾಗಿ ಈಗ ಭಾರತವು ತಾಮ್ರವನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ದುಸ್ಥಿತಿ ಬಂದಿದೆ. ವಾರ್ಷಿಕವಾಗಿ 10 ಲಕ್ಷ ಟನ್ ತಾಮ್ರವನ್ನು ಉತ್ಪಾದಿಸುತ್ತಿದ್ದ ಸ್ಟೆರ್ಲೈಟ್ ಸಂಸ್ಥೆಯು ದೇಶದ ಅಗತ್ಯತೆಯ 40% ತಾಮ್ರವನ್ನು ಪೂರೈಸುತ್ತಿತ್ತು ಹಾಗೂ 1.6 ಲಕ್ಷ ಟನ್ ತಾಮ್ರವನ್ನು ವಿದೇಶಗಳಿಗೆ ರಫ್ತು ಮಾಡುತ್ತಿತ್ತು. ವಾರ್ಷಿಕವಾಗಿ 2500 ಕೋಟಿ ರುಪಾಯಿಗಳಷ್ಟು ವರಮಾನವನ್ನು ತೆರಿಗೆ ರೂಪದಲ್ಲಿ ಸರಕಾರಕ್ಕೆ ಕೊಡುತ್ತಿತ್ತು. ಸ್ಟೆರ್ಲೈಟ್ ಸಂಸ್ಥೆಯ ಮುಚ್ಚುಗಡೆಯ ಸಂಪೂರ್ಣ ಲಾಭ ನಮ್ಮ ಶತ್ರು ದೇಶವಾದ ಪಾಕಿಸ್ತಾನಕ್ಕೆ ಲಭಿಸಿದೆ. ಆ ನಂತರ ಪಾಕಿಸ್ತಾನದ ತಾಮ್ರದ ನಿರ್ಯಾತವು 400% ಹೆಚ್ಚಿದೆ ಹಾಗೂ ಆ ದೇಶಕ್ಕೆ ವಾರ್ಷಿಕವಾಗಿ ಸುಮಾರು 3500 ಕೋಟಿ ರುಪಾಯಿಗಳ ಹೆಚ್ಚುವರಿ ವರಮಾನವು ದೊರೆಯುತ್ತಿದೆ. ವೇದಾಂತ ಕಂಪೆನಿಯ ವಿರುದ್ಧವಾಗಿ ಜಾಗತಿಕವಾಗಿ ಕೆಲಸ ಮಾಡುತ್ತಿರುವ ಫಾಯಿಲ್ ವೇದಾಂತ ಹೆಸರಿನ ಎನ್ಜಿಓ ತೂತುಕುಡಿಯಲ್ಲಿ ಸ್ಟರ್ಲೈಟ್ ವಿರುದ್ಧದ ಹೋರಾಟಕ್ಕೆ ಧನಸಹಾಯ ಮಾಡುತ್ತಿರುವ ವಿದೇಶೀ ಸಂಸ್ಥೆಯಾಗಿದೆ.
ಭಾರತ ಸರಕಾರವು ಚೀನಾದ ಗಡಿಗಳಲ್ಲಿ ಭಾರತೀಯ ಸೈನಿಕರ ವಾಹನ ಚಲನೆಗೆ ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಮಾಡುತ್ತಿದೆ. ಚಾರಧಾಮ್ ರಸ್ತೆ ನಿರ್ಮಾಣ ಕೆಲಸವೂ ಇದಕ್ಕೆ ಪೂರಕವಾಗಿ ನಡೆಯುತ್ತಿದೆ. ಆದರೆ ಇತ್ತೀಚೆಗೆ ಸಿಟಿಜನ್ ಫಾರ್ ಗ್ರೀನ್ ಡೂನ್ ಹೆಸರಿನ ಸರಕಾರೇತರ ಸಂಸ್ಥೆಯ ಕೋಲಿನ್ ಗೊನ್ಸಾಲ್ಸ್ ಹಾಗೂ ಮೊಹಮ್ಮದ್ ಅಫ್ತಾಬ್ ಎನ್ನುವ ಇಬ್ಬರು ವ್ಯಕ್ತಿಗಳು ಹಿಮಾಲಯದಲ್ಲಿ ರಸ್ತೆ ಅಗಲ ಮಾಡುವುದರಿಂದ ಪರಿಸರದ ಸಮತೋಲನ ತಪ್ಪುತ್ತದೆ ಹಾಗೂ ಹಸಿರು ನಾಶವಾಗುತ್ತದೆ ಎಂದು ಆರೋಪಿಸಿ ಈ ಯೋಜನೆಯನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟಿನ ಬಾಗಿಲು ತಟ್ಟಿದ್ದರು. ಆದರೆ ಸುಪ್ರೀಂ ಕೋರ್ಟ್ ರಕ್ಷಣಾ ಉದ್ದೇಶದ ರಸ್ತೆ ನಿರ್ಮಾಣದ ಯೋಜನೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿತು ಎನ್ನುವುದು ಬೇರೆ ಮಾತು. ಆದರೆ ಸುಪ್ರೀಂ ಕೊರ್ಟ್ ವರೆಗೆ ಕೊಂಡೊಯ್ಯಲು ಈ ಸಂಸ್ಥೆಗೆ ಆರ್ಥಿಕ ಸಂಪನ್ಮೂಲವನ್ನು ಒದಗಿಸಿದವರು ಯಾರು?
ಆಪಲ್ ಐಫೋನ್ ತಯಾರಿಸುವ ಮಾಡುವ ಸಂಸ್ಥೆಯಾದ ಫಾಕ್ಸ್ ಕಾನ್ ಕಂಪೆನಿಯು ಚೀನಾದಿಂದ ಕಾಲ್ತೆಗೆದು ಭಾರತಕ್ಕೆ ಬರುತ್ತಿದೆ. ಫಾಕ್ಸ್ ಕಾನ್ನ ಈ ನಡೆ ಚೀನಾದ ಕೆಂಗಣ್ಣಿಗೆ ಪಾತ್ರವಾಗಿದೆ. ಕಳೆದ ವರ್ಷ ಕೋಲಾರದಲ್ಲಿರುವ ಫಾಕ್ಸ್ ಕಾನ್ ಕಂಪೆನಿಯ ನೌಕರ ಸಂಸ್ಥೆಗಳು ಪ್ರತಿಭಟನೆಯ ಹೆಸರಿನಲ್ಲಿ ಲೂಟಿ ಮಾಡಿ, ಬೆಂಕಿಹಚ್ಚಿ, ಪೀಠೋಪಕರಣಗಳನ್ನು ನಾಶಮಾಡಿ ನಡೆಸಿದ ಭಾರೀ ದಾಂಧಲೆಯಿಂದಾಗಿ ಆ ಸಂಸ್ಥೆಗೆ ಸುಮಾರು 400 ಕೋಟಿ ರುಪಾಯಿಗಳ ನಷ್ಟವಾಗಿತ್ತು. ಇತ್ತೀಚೆಗೆ ತಮಿಳುನಾಡಿನ ಶ್ರೀಪೆರಂಬೂರಿನಲ್ಲಿರುವ ಫಾಕ್ಸ್ ಕಾನ್ ಕಂಪೆನಿಯಲ್ಲಿ ನೌಕರರು ಕ್ಷುಲ್ಲಕ ಕಾರಣಕ್ಕಾಗಿ ಒಂದು ವಾರದ ಕಾಲ ಮುಷ್ಕರ ಹೂಡಿದ್ದವು. ಈ ಎರಡೂ ಕಾರ್ಮಿಕ ಮುಷ್ಕರಗಳ ಹಿಂದೆ ಚೀನಾ ಕೈವಾಡವಿದೆಯೆಂದು ಅಂದಾಜಿಸಲಾಗಿದೆ. ಇತ್ತೀಚೆಗಿನ ರೈತರ ಹೋರಾಟದಲ್ಲೂ ವಿದೇಶೀ ಸಿಕ್ಖ್ ಉಗ್ರಗಾಮಿ ಸಂಸ್ಥೆಗಳ ಹಣಕಾಸಿನ ಸಹಕಾರ ಇದ್ದುದು ಬಯಲಾಗಿದೆ. ಅಮೇರಿಕಾದ ಜಾರ್ಜ್ ಸೋರೋಸ್ ನ ಓಪನ್ ಸೊಸೈಟಿಯು ಭಾರತ ವಿರೋಧೀ ಚಟುವಟಿಕೆಗಳಿಗೆ ಹಣಕಾಸಿನ ಸಹಾಯವನ್ನು ಒದಗಿಸಲು ಯಾವತ್ತೂ ತುದಿಗಾಲಲ್ಲಿ ನಿಂತಿರುತ್ತದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುವಾಗ ವಿದೇಶೀ ದೇಣಿಗೆಯ ಮೇಲೆ ಸರಕಾರವು ನಿಯಂತ್ರಣವನ್ನು ಹೇರುವುದು ಸರಿಯೋ ತಪ್ಪೋ ಎಂಬುದನ್ನು ನಿರ್ಧರಿಸಬಹುದು.
✍️ ಗಣೇಶ್ ಭಟ್ ವಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.