ಪ್ರಕೃತಿ ಮತ್ತು ಸಂಸ್ಕೃತಿಯ ವ್ಯಾಖ್ಯಾನಿಕೆ ವಿವರಿಸಿದಂತೆ ದೊಡ್ಡದಾಗುತ್ತದೆ. ಆಧುನಿಕ ಮಾನವ ಸಹಿತ ಭೂಮಿಯ ಮೇಲಿನ ಸಕಲ ಜೀವಜಾಲಗಳಿಗೆ ಮೂಲ ಬುನಾದಿ ಪ್ರಕೃತಿಯೇ ಆಗಿದೆ. ಪ್ರಜನನ ಪ್ರಕ್ರಿಯೆಯಿಂದ ಹಿಡಿದು ಜನನ, ಜೀವನ ಮರಣದ ತನಕ ಪ್ರಕೃತಿ ಹಲವು ತರದಲ್ಲಿ ಮನುಜನನ್ನು ಭೌತಿಕ ಮತ್ತು ಅಭೌತಿಕವಾಗಿ ಪ್ರೇರೇಪಿಸುತ್ತದೆ. ಭೂಮಿಯ ಮೇಲಿನ ಇತರ ಜೀವಜಾಲಗಳ ಮೂಲ ಆಶಯ ಹೊಟ್ಟೆ ತುಂಬಿಸಿಕೊಳ್ಳುವುದು, ದೇಹ ಪೋಷಿಸುವುದು, ಪ್ರಜನನ ಪ್ರಕ್ರಿಯೆಯ ಮೂಲಕ ತನ್ನ ಪ್ರಬೇಧಕ್ಕೆ ಹೊಸತನ್ನು ಸೇರ್ಪಡೆಗೊಳಿಸುವುದಷ್ಟೇ ಆಗಿದೆ. ಆದರೆ ಮಾನವನು ಇದರ ಜೊತೆಜೊತೆಯಲ್ಲಿ ತಾನ್ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಇರುತ್ತಾನೆ. ಈ ಪ್ರಶ್ನೆಯೇ ಸಂಸ್ಕೃತಿಯ ಸೃಷ್ಟಿಯಿಂದಾಗಿದೆ. ಹೊಟ್ಟೆ ತುಂಬಿಸಲು ಬೇಕಾದ ಆಹಾರ ಅರಸುವಿಕೆಯು ಪ್ರಕೃತಿ ಪ್ರೇರಿತವಾಗಿದ್ದರೆ, ತಾನ್ಯಾರು ಎಂದು ಆತನನ್ನು ಕಾಡುವ ಹಸಿವು ಕೂಡಾ ಎಂದಿನಂತೆ ಮುಂದೆ ಸಾಗಿದೆ. ದೂರದೂರದ ಪ್ರದೇಶದಿಂದ ಹಾರಿ ಬರುವ ಹಕ್ಕಿ ಹಿಂಡು. ಆಫ್ರಿಕಾ ಸಹಿತ ಏಷ್ಯಾದಲ್ಲಿನ ಪ್ರಾಣಿಗಳ ಮಹಾವಲಸೆ ಪ್ರಕ್ರಿಯೆಯ ಆಹಾರ ಅರಸುವಿಕೆಯ ಭಾಗವೆಂಬುದು ಸ್ಪಷ್ಟ. ಆರಂಭದಲ್ಲಿ ಮಾನವನು ಕೂಡಾ ಪ್ರಾಣಿಗಳ ವಲಸೆ ಪ್ರಕ್ರಿಯೆಯನ್ನು ಗಮನಿಸಿಯೇ ಆದಿಯಲ್ಲಿ ಆಫ್ರಿಕಾ ಖಂಡದಿಂದ ಹೊರಬಿದ್ದ ಎಂದು ವೈಜ್ಞಾನಿಕ ಇತಿಹಾಸ ತಿಳಿಸುತ್ತದೆ.
ಒಂದು ನಿರ್ದಿಷ್ಟ ಸ್ಥಳ ಅಥವಾ ಪ್ರದೇಶದಲ್ಲಿ ನೆಲೆಯೂರಿ ಕೃಷಿ, ಆಹಾರ ಉತ್ಪಾದನೆ ಮಾಡುತ್ತಿದ್ದ ಕಾಲದಲ್ಲೂ ಪ್ರಕೃತಿ ಸಾಮೀಪ್ಯವನ್ನು ಮಾನವ ಹೊಂದಿದ್ದ. ಉಸಿರಾಡುವ ಗಾಳಿ, ಕುಡಿಯುವ ನೀರು, ಓಡಾಡುವ ಭೂಮಿ, ಆಹಾರವನ್ನು ಬೇಯಿಸಿ ತಿನ್ನಲು ಸಹಕಾರಿಯಾದ ಅಗ್ನಿ, ತನ್ನ ಯೋಚನಾ ಲಹರಿಗೆ ಸಾಕ್ಷಿಯಾದ ನಭವು ಮಾನವನನ್ನು ಮೂಲ ಪ್ರಕೃತಿಯನ್ನು ಗೌರವಿಸಿ ಆದರಿಸುವುದರ ಜೊತೆಯಲ್ಲಿ ಸಂಸ್ಕೃತಿಯ ಚೌಕಟ್ಟಿನ ಸೃಷ್ಠಿಗೆ ಕಾಣಿಕೆಯಾಗಿತ್ತು. ನಾಗರಿಕತೆಯೊಂದಿಗೆ ಬೆಳೆದ ಪರಸ್ಪರ ಸಹಕಾರ, ಬಹು ಭಾವಗಳ ಸ್ಪುರಣೆಯು ಮೃಗೀಯ ಲಕ್ಷಣಗಳೇ ಹೆಚ್ಚಿದ್ದ ಮಾನವನನ್ನು ಮೂಲ ಹಿಂಸಾ ಪ್ರಕೃತಿಯಿಂದ ಅಲ್ಪ ಶಾಂತ ಸಂಸ್ಕೃತಿಯ ಚೌಕಟ್ಟಿನೊಳಗೆ ತಂದು ನಿಲ್ಲಿಸಿತು ಎಂದರೆ ತಪ್ಪಾಗಲಿಕ್ಕಿಲ್ಲ. ಆದಿಯಲ್ಲಿ ಇತರ ಪ್ರಾಣಿಗಳಂತೆ ಹಸಿವು ನೀಗಿಸಿಕೊಳ್ಳಲು ಬೇಕಾದಷ್ಟು ಆಹಾರದ ಬೇಟೆ ಮತ್ತು ಸ್ವ ರಕ್ಷಣೆಯ ಕರ್ತವ್ಯವನ್ನು ನಿಭಾಯಿಸುತ್ತಿದ್ದ ಈತ ಕಾಲಾಂತರದಲ್ಲಿ ಪ್ರಕೃತಿಯ ಪ್ರೇರಣೆಯಿಂದ ಯೋಚನಾಗ್ರಸ್ತನಾಗಿ, ಶೋಧಕನಾಗಿ- ಆದಿಮ ಸಂಸ್ಕೃತಿಯ ಉಗಮಕ್ಕೂ ಕಾರಣನಾದ. ಕಲ್ಲಿನ ಆಯುಧ ತಯಾರಿ, ಬೆಂಕಿಯ ಉಪಯೋಗ, ಬೆಂಕಿಯ ಜ್ವಲಿಸುವ ವಿಧಾನ. ಚಕ್ರದ ಉಪಯೋಗ, ಭಾವನೆಗಳು, ಸಂತಸ ವ್ಯಕ್ತಪಡಿಸುವ ರೀತಿಯೆಂಬ ಸಹಜ ಪ್ರಕ್ರಿಯೆಯ ಜೊತೆ ವ್ಯಾವಹಾರಿಕತೆಗೆ ಸಹಕಾರಿಯಾದ ಧ್ವನಿಗಳ ಸ್ಪುರಣಕ್ಕೂ ತನ್ನನ್ನು ತಾನು ಒಡ್ಡಿಕೊಂಡ. ಹೀಗೆ ಮಾನವನ ಪಯಣವೆಂಬ ಇತಿಹಾಸದ ಮಜಲುಗಳು ಅಮೋಘವೆನಿಸುತ್ತವೆ. ಸುಮಾರು ಐವತ್ತು ಸಾವಿರ ವರ್ಷಗಳ ಹಿಂದೆ ಮಾನವನ ಬದುಕು ಹೇಗಿದ್ದಿರಬಹುದು ಎಂದು ಊಹಿಸುವುದೇ ಒಂದು ಸೋಜಿಗ. ಆ ಕಾಲಘಟ್ಟದ ಮಾನವನ ಬದುಕಿನ ಬಗ್ಗೆ ಸಾಕ್ಷ್ಯಚಿತ್ರ ಅಥವಾ ಸಿನಿಮಾ ಮಾಡಿದರೆ ಹೇಗಿದ್ದಿರಬಹುದು. ಮನುಷ್ಯ ಎಂದಿನಿಂದ ಪ್ರಾಣಿಗಳನ್ನು ಪಳಗಿಸತೊಡಗಿದ, ತನ್ನ ಅವಶ್ಯಕತೆಗಳಿಗೆ ಅವುಗಳನ್ನು ಹೇಗೆ ಬಳಸಿಕೊಂಡ, ಮಾನವನ ಮನ್ವಂತರದ ಪರ್ವ ಹೇಗಿದ್ದಿರಬಹುದು ಎಂಬುದೂ ಕೂಡಾ ಕೌತುಕದ ವಿಚಾರವೆ ಆಗಿದೆ.
ಮೂಲದಲ್ಲಿ ಪ್ರಕೃತಿ ಅಂದರೆ ಕಾಡಿನ ಅವ್ಯಕ್ತ ಶಕ್ತಿಯನ್ನು ನಂಬಿ, ಕಲ್ಲು, ನೀರಿನ ಮೂಲ, ಮರ ಗಿಡಗಳನ್ನು ಪೂಜಿಸುತ್ತಿದ್ದ ಈತನ ಗುಹಾಲಯಗಳ ಬದುಕು, ಪೊಟರೆಗಳಲ್ಲಿನ ವಾಸ, ಚರ್ಮದ ಬಟ್ಟೆ ಹೊದ್ದುಕೊಳ್ಳುವ ಪರಿ ಹೇಗಿದ್ದಿರಬಹುದು ಎಂಬುದು ಊಹೆಗೂ ನಿಲುಕದ್ದು. ಯಾಕೆಂದರೆ ಆತ ಕೇವಲ ಬದುಕಲಿಲ್ಲ ಬದಲಿಗೆ ಸಂಸ್ಕೃತಿಯ ಸೃಷ್ಟಿಗೂ ಕಾರಣನಾದ. ಇದರೊಂದಿಗೆ ಆದಿಮ ಕಲೆ, ಮೌಖಿಕ ಸಾಹಿತ್ಯ, ಸಂಗೀತವನ್ನು ಆವಿಷ್ಕರಿಸಿದ. ಆಧುನಿಕ ಕಾಲಘಟ್ಟದಲ್ಲಿ ಓರ್ವ ರೋಗಗ್ರಸ್ತನಾದರೆ ಆತನಿಗೆ ಸಾಕಷ್ಟು ವೈದ್ಯಕೀಯ ಚಿಕಿತ್ಸಾ ಪದ್ದತಿಗಳಿವೆ. ಆದರೆ ಅಂದು ಹೇಗಿದ್ದಿರಬಹುದು. ಮಾನವ ಬದುಕಿನ ಪರಸ್ಪರ ಕಾಳಜಿ, ಪ್ರೇಮ, ವಾತ್ಸಾಲ್ಯಗಳು ಎಂತಹುದು ಎಂಬುದು ತಲೆಯೊಳಗೆ ಓಡಾಡುವ ಇತರ ಪ್ರಶ್ನೆಗಳು. ಹಿಮಯುಗ, ಶಿಲಾಯುಗ, ಕಬ್ಬಿಣ, ಲೋಹದ ಯುಗವನ್ನು ದಾಟಿ ಆಧುನಿಕ ಯುಗದವರೆಗಿನ ಮಾನವನ ಬದುಕಿನಲ್ಲಿ ಪ್ರಕೃತಿ ಸಂಸ್ಕೃತಿಗಳ ಸಮನ್ವಯತೆ ಹೇಗೆ ಸಾಗಿದೆ ಎಂಬುದು ತಿಳಿಯಬೇಕಿರುವ ಆಸಕ್ತಿದಾಯಕ ವಿಚಾರ.
ಆಧುನಿಕ ಧರ್ಮ ಪರಂಪರೆಗಳೆಲ್ಲವೂ ಮೂಲದಲ್ಲಿ ಪ್ರಕೃತಿ ಮೂಲದವೇ ಆಗಿವೆ. ಇಂತಹ ಪ್ರಕೃತಿ ಮೂಲದ ಆಚರಣೆಗಳಿಗೆ ಒಂದು ಚೌಕಟ್ಟನ್ನು ಸೃಷ್ಠಿಸಿ ಸಂಸ್ಕೃತಿಯೊಂದಿಗೆ ಸಮೀಕರಿಸಿದ್ದು ಎನ್ನುವುದು ಸಮಜಂಸ ಎನಿಸಬಹುದು. ಸಂಸ್ಕೃತಿಯ ಹುಟ್ಟಿಗೆ ಹೇಗೆ ಪ್ರಕೃತಿ ಕಾರಣವೋ ಹಾಗೆಯೇ ಮನುಷ್ಯನ ಜೀವ ವಿಕಾಸದೊಂದಿಗೆ ಧಾರೆಯಂತೆ ಬಂದ ಜ್ಞಾನವೂ ವಿಜ್ಞಾನದ ಜೌನತ್ಯಕ್ಕೆ ಕಾರಣ. ಇಂದಿನ ಜಗತ್ತಿನ ಸಕಲ ಲೌಕಿಕ ಅತಿಭೋಗಗಳು, ವೈಜ್ಞಾನಿಕ ಎಂದು ನಾವು ಹೇಳುವ ಮೈಲುಗಲ್ಲುಗಳೆಲ್ಲವೂ ಮನುಷ್ಯನ ಧೀಶಕ್ತಿಯ ಪ್ರತಿಫಲನವೇ ಆಗಿದೆ. ವಿಜ್ಞಾನ ಎಷ್ಟು ಮುಂದುವರಿದರೂ ಕೆಲ ಪ್ರಶ್ನೆಗಳು ಮನುಷ್ಯನನ್ನು ಎರಡು ಸ್ತರಗಳಲ್ಲಿ ಕಾಡುತ್ತಿರುತ್ತವೆ. ಆಕಾಶದ ಎಲ್ಲೆ ಯಾವುದು? ಎಲ್ಲಿಯ ತನಕ ವ್ಯಾಪಿಸಿದೆ? ಅದಕ್ಕೆ ಕೊನೆ ಇಲ್ಲವೇ ಎಂಬುದು! ಇದರೊಂದಿಗೆ ಅಭೌತಿಕ ವಲಯದ ದೇವರಿದ್ದಾನೆಯೇ? ಮತ್ತು ತಾನು ಯಾರು ಎಂಬ ಪ್ರಶ್ನೆ?! ಇದರಲ್ಲಿ ಒಂದು ವಿಜ್ಞಾನದ ವಿಷಯಾಧಾರಿತ ಪ್ರಶ್ನೆಯಾದರೆ ಮಗದೊಂದು ಸಂಸ್ಕೃತಿಯ ಮುಖೇನ ಯೋಚನೆಗೆ ಗ್ರಾಸವಾದ ಆಧ್ಯಾತ್ಮಿಕತೆಯ ಪ್ರಶ್ನೆ. ಇಂತಹ ಹತ್ತು ಹಲವು ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುತ್ತ ಮುನ್ನಡೆದ ಮನುಜ ಇಂದು ಬಾಹ್ಯಾಕಾಶಕ್ಕೂ ಹಾರಿದ್ದಾರೆ. ಚಂದ್ರನ ಅಂಗಳ ನೋಡಿಯಾಗಿದೆ. ಮಂಗಳನ ಅಂಗಳದ ಶೋಧೆ ನಡೆಯುತ್ತಿದೆ.
ಪಂಚಭೂತಗಳಿಲ್ಲದೆ ಬದುಕಲು ಅಸಾಧ್ಯ ಎಂಬ ಅರಿವೂ ಆತನಿಗಿದೆ. ಜನನ, ಜೀವನಕ್ಕೆ ಕಾರಣವಾದ ಪಂಚಭೂತಗಳ ಘಣಿಯಾಗಿರುವ ಪೃಥಿವಿಯ ಬದುಕೇ ಮನುಷ್ಯನ ಧೀ ಶಕ್ತಿಗೂ ಮೂಲ. ಅದೇ ನಾಗರಿಕತೆ, ಸಂಸ್ಕೃತಿಯ ಉತ್ಥಾನಕ್ಕೂ ಕಾರಣ, ಆಧುನಿಕ ನಗರಿಕರಣಕ್ಕೂ, ವೈಜ್ಞಾನಿಕ ಮೈಲುಗಲ್ಲಿಗೂ ಅದೇ ಕಾರಣ. ಆದಿ ಮಾನವನ ಬೆಂಕಿಯ ಅವಿಷ್ಕಾರದ ಫಲವೇ ಇಂದಿನ ಎಲ್ಲ ಯಂತ್ರೋಪಕರಣಗಳ ಚಲನೆ, ಆ ಮೂಲಕವಾದ ಸಾಧನೆಗಳಿಗೆ ಕಾರಣ. ಓಡಾಡುವ ವಾಹನಗಳ ಎಂಜಿನ್ ನಲ್ಲಿ ಇಂಧನ ಉರಿದರೆ ಮಾತ್ರವೇ ವಾಹನ ಓಡುತ್ತದೆ. ಬಾಹ್ಯಾಕಾಶಕ್ಕೆ ನೆಗೆಯುವ ಕ್ಷಿಪಣಿ ವಾಹಕಗಳಲ್ಲೂ ಇದೇ ಅಗ್ನಿಯು ಮನುಷ್ಯನ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಹಕಾರಿಯಾಗುತ್ತಿದೆ. ಸೂರ್ಯನ ಮೇಲ್ಮೈಯನ್ನು ತಿಳಿಯಲು ಹೊರಟ ವಾಹಕಕ್ಕೂ ಇದೇ ಅಗ್ನಿ ಶಕ್ತಿ ನೀಡುತ್ತದೆ.
ಬದುಕಲು ಪ್ರಕೃತಿ ಹೇಗೆ ಪ್ರೇರಣೆಯೋ ಹಾಗೆಯೇ ಹೊಸತನ್ನು ತಿಳಿಯಲು ಅರಿಯಲು ಯೋಚನೆಗೆ ಒಡ್ಡುವುದು ಸಂಸ್ಕೃತಿಯೇ ಆಗಿದೆ. ಹೀಗೆ ತನ್ನನ್ನ ಪೋಷಿಸುವ ಮರ ಗಿಡ ಭೂಮಿ, ನೀರು ಪಂಚಭೂತಗಳನ್ನು ಗೌರವಿಸಿ ಪ್ರಕೃತಿ ಪ್ರೇಮವನ್ನು ಬೆಳೆಸಿಕೊಳ್ಳುವ ಜಾಗೃತಿ ನಮ್ಮೊಳಗೆ ಮೂಡಬೇಕಿದೆ. ಸಂಸ್ಕೃತಿ ಮುಖದಲ್ಲಿ ನೋಡುವುದಾದರೆ ಹಲವು ಜ್ಞಾನಧಾರೆಗಳ ಮೂಲಕ ಕೃತಿ ಸಾಹಿತ್ಯ ವೈಚಾರಿಕತೆಯ ಮೂಲಕ ಭುವಿಯನ್ನು ಬೆಳಗಿದ ಸಂಸ್ಕೃತಿಯ ಬಗ್ಗೆ ಆಸ್ಥೆಯು ಅತಿಮುಖ್ಯವಾಗಿದೆ. ದೇಶದ ರಾಷ್ಟ್ರದ ಸಂಸ್ಕೃತಿಯ ಆ ಸಂಸ್ಕೃತಿಯೊಳಗಿನ ಆಚರಣೆಗಳು ಒಂದು ಪರ್ಯಾಪ್ತತೆ, ಅವಿಚ್ಛಿನ್ನ ಪರಂಪರೆಯ ಧಾತುವೇ ಆಗಿದೆ. ಇರುಳಲ್ಲಿ ಟಿಟ್ಟಿಬಾ ಹಕ್ಕಿಯ ಶಬ್ದ ಕೇಳಿಯು ಹೇಗೆ ಹೆಸರಿಸಲಾಗದ ಆನಂದವನ್ನು ಕೊಡುತ್ತದೆಯೋ ಹಾಗೆ ಎಲ್ಲೋ ದೂರದಲ್ಲಿ ಕೇಳಿಬರುವ ಬುಡಕಟ್ಟು ಜನರ ಡೋಲಿನ ಶಬ್ದವೂ ಅಪರಿಮಿತ ಆನಂದವನ್ನು ನೀಡುವಂತಹದ್ದು. ಪ್ರಕೃತಿಯ ಸ್ವಚ್ಛ ಗಾಳಿ, ನೀರಿಗೆ ಕಾರಣವಾಗುವ ಮರ ಗಿಡದ ರಕ್ಷಣೆಗೆ ಕಟಿಬದ್ಧರಾಗೋಣ. ಸ್ವಚ್ಛ ಮನಸ್ಸಿನಿಂದ ರಾಷ್ಟ್ರದ ಸಂಸ್ಕೃತಿಯ ಧಾತುಗಳಾದ ಆಚರಣೆ, ಪರಂಪರೆಯನ್ನು ಮುನ್ನಡೆಸೋಣ. ಭಾವಿ ಜನಾಂಗಕ್ಕೆ ಸಂಸ್ಕೃತಿ ಮತ್ತು ಪ್ರಕೃತಿಯ ಮಹತ್ವವನ್ನು ತಿಳಿಸಿ ಧಾರೆಯೆರೆವ ಜವಾಬ್ದಾರಿ ವರ್ತಮಾನದ್ದು. ಸರ್ವೇ ಭವಂತು ಸುಖಿನಃ.
✍️ ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.