ಬೆಳ್ತಂಗಡಿ : ದೇವಾಲಯಗಳು, ಶಾಲೆಗಳು ಸಂಸ್ಕೃತಿಯನ್ನು ನೀಡುವ, ಬೆಂಬಲಿಸುವ ಸ್ಥಳಗಳು. ಇಂತಹ ಕಡೆಗಳಲ್ಲಿ ಸಂಸ್ಕೃತಿಯನ್ನು ಉಳಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ಕಲಾಮಂದಿರದ ಅವಶ್ಯಕತೆ ಇದೆ. ಇದರ ಅಗತ್ಯತೆಯನ್ನು ಮನಗಂಡು ಹೇರಾಜೆಯ ಕುಟುಂಬಸ್ಥರು ಕಲಾಮಂದಿರವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿರುವುದು ಶ್ಲಾಘನೀಯ ಎಂದು ಬೆಂಗಳೂರಿನ ನಿವೃತ್ತ ಸಹಾಯಕ ಪೋಲಿಸ್ ಆಯುಕ್ತ ಬಿ. ಕೆ. ಶಿವರಾಮ್ ಹೇಳಿದರು.
ಅವರು ಭಾನುವಾರ ಸಂಜೆ ಲಾಯಿಲಾ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ನಡೆದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಸಂದರ್ಭ ಹೇರಾಜೆ ನೀಲಮ್ಮ ವೆಂಕಪ್ಪ ಪೂಜಾರಿ ಕುಟುಂಬಸ್ಥರು ನಿರ್ಮಿಸಿದ ಶ್ರೀ ರಾಘವೇಂದ್ರ ಕಲಾ ಮಂದಿರವನ್ನು ಉದ್ಘಾಟಿಸಿ ಮಾತನಾಡಿದದರು.
ಧಾರ್ಮಿಕ ಉಪನ್ಯಾಸ ನೀಡಿದ ವಕೀಲ ಬಿ. ಕೆ. ಧನಂಜಯ ರಾವ್ ಅವರು, ಯುವ ಪೀಳಿಗೆಯ ಮನಸ್ಸು, ಹೃದಯಗಳ ಮೇಲೆ ಜಾಗತಿಕ ದಾಳಿಯಿಂದಾಗಿ ಸಂಬಂಧಗಳನ್ನೇ ಮರೆಯುವ ಕಾಲ ಸನ್ನಿಹಿತವಾಗುತ್ತಿದೆ. ಭಗಿನಿ-ಭಾತೃಗಳ ಸಂಬಂಧ ಅಲ್ಲಾಡುತ್ತಿದೆ. ಗುರು ಪರಂಪರೆ ನಶಿಸುತ್ತಿದೆ. ಸನಾತನ ದೇಶ ಭಾರತದಲ್ಲಿ ಸಂಬಂಧಗಳ ಸಡಿಲುವಿಕೆಯನ್ನು ಬೆಸೆಯುವ ಕೆಲಸ ಆಗಬೇಕಾಗಿದೆ. ಸಮಸ್ಯೆಗಳಿಗೆ ಮೂಲ ಕಾರಣ ಮನಸ್ಸು. ಅದನ್ನು ನಿಗ್ರಹದಲ್ಲಿಡಲು ಭಗವಂತನ ಆರಾಧನೆಯಿಂದ ಸಾಧ್ಯ. ನಮ್ಮ ಕರ್ತವ್ಯವನ್ನು ಮಾಡಿದಾಗ ಧರ್ಮ ಜಾಗೃತಿ ಉಂಟಾಗುತ್ತದೆ. ಇದರೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಂಡು ನಮ್ಮ ನೆಲೆಗಟ್ಟನ್ನು ಗಟ್ಟಿಯಾಗಿಸುವ ಸಂಬಂಧಗಳನ್ನು ಬೆಳೆಸಿಕೊಳ್ಳೋಣ ಎಂದರು.
ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುರುಪರಂಪರೆ ಹಿನ್ನಲೆಯ ದೇಶದಲ್ಲಿ ಗುರು ಶಿಷ್ಯರ ಸಂಬಂಧ ಉಳಿಯಲು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಎಲ್ಲಕ್ಕಿಂತ ಮಿಗಿಲಾಗಿ ಮಾನವರಾಗಿ ಬದುಕಲು ಕಲಿಯಬೇಕು ಎಂದರು. ವೇದಿಕೆಯಲ್ಲಿ ಉದ್ಯಮಿಗಳಾದ ದಿನೇಶ್ ಕುಂದಾಪುರ, ನಾರಾಯಣ ಬೇಗೂರು, ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ನಟ ರಾಜಶೇಖರ ಕೋಟ್ಯಾನ್, ಉದ್ಯಮಿಗಳಾದ ಸುರೇಶ್ ಮುಂಬಾಯಿ, ಸತೀಶ್ ಮುಂಬಾಯಿ ಉಪಸ್ಥಿತರಿದ್ದರು.
ತಾ| ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್. ಕುಲಾಲ್, ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ, ಕಟ್ಟಡ ಕಾಮಗಾರಿ ನಡೆಸಿದ ಮೇಸ್ತ್ರೀ ಪುರುಷ, ಲಾಯಿಲಾ ಗ್ರಾಪಂನ ಸದಸ್ಯರಾದ ವಸಂತ ಸುವರ್ಣ, ಲತಾ ನಾಗೇಶ್, ಜಯಶ್ರೀ ಇವರನ್ನು ಗೌರವಿಸಲಾಯಿತು.
ನಿವೃತ್ತ ಎಸ್ಪಿ, ಶ್ರೀ ರಾಘವೇಂದ್ರ ಸೇವಾ ಟ್ರಸ್ಟ್ನ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ಸ್ವಾಗತಿಸಿದರು. ಗುರುದೇವ ಕಾಲೇಜಿನ ಪ್ರಾಂಶುಪಾಲ ಎ. ಕೃಷ್ಣಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟ್ನ ಅಧ್ಯಕ್ಷ ಶೇಖರ ಬಂಗೇರ ಸನ್ಮಾನಿತರನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಶಂಕರ ಹೆಗ್ಡೆ ವಂದಿಸಿದರು.
ಬೆಳಗ್ಗೆ ಆರಾಧನ ಮಹೋತ್ಸವದ ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸುನೀಲ್ ಶೆಣೈ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗಂಗಾಧರ ರಾವ್ ಕೆವುಡೇಲು, ಮೂಡುಬಿದ್ರೆ ವಿಜಯಾ ಬ್ಯಾಂಕ್ನ ಅರುಣ್ ಕುಮಾರ್ ಶೆಟ್ಟಿ, ಲಾಲ ಗ್ರಾಪಂ ಅಧ್ಯಕ್ಷೆ ವೀಣಾ ರಾವ್ ಉಪಸ್ಥಿತರಿದ್ದರು. ಶ್ರೀ ರಾಘವೇಂದ್ರ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಾಗೂ ಶ್ರೀ ಗುರುದೇವ ಕಾಲೇಜು ಬೆಳ್ತಂಗಡಿ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.