“ಪ್ರತೀ ತಿಂಗಳು ನಾವು ಹೆಣ್ಣುಮಕ್ಕಳು ಬಳಸುವ ‘ಮೆನ್ಸ್ಟ್ರುಯಲ್ ಕಪ್’ ಸಾಮಾನ್ಯವಾಗಿ ಆನ್ಲೈನ್ನಲ್ಲಿ ಲಭ್ಯವಿದೆ, ಅದರಲ್ಲಿ 95% ಉತ್ಪನ್ನಗಳು ಚೈನಾದಿಂದ ಆಮದು ಮಾಡಲ್ಪಟ್ಟವುಗಳು. ಹಾಗಾದರೆ ಈ ಉತ್ಪನ್ನಗಳನ್ನು ನಾವು ಸ್ವದೇಶಿಯಾಗಿ ಮಾಡಲು ಸಾಧ್ಯವಿಲ್ಲವೇ? ಅಷ್ಟಕ್ಕೂ ಭಾರತದಲ್ಲಿ ಉತ್ಪಾದಿಸಲು ಸಾಧ್ಯವಿಲ್ಲದ ಉತ್ಪನ್ನಗಳಾದರು ಯಾವುದಿದೆ. ಇದು ಆಲೋಚನೆ ಬಂದ ತಕ್ಷಣವೇ ಸ್ವದೇಶೀ ಕಪ್ಗಳನ್ನು ಉತ್ಪಾದಿಸುವ ನಿರ್ಧಾರ ಮಾಡಿದೆ”. ಕನಸನ್ನು ನನಸಾಗಿಸಿದ, ಅಪ್ಪಟ ಸ್ವದೇಶೀ ಸಂಸ್ಥೆಯೊಂದನ್ನು ಸ್ಥಾಪಿಸಿದ ದಿಟ್ಟ ಹೆಣ್ಣು ಮಗಳು ಕರ್ನಾಟಕದ ದಿವ್ಯ ಗೋಕರ್ಣ. ಅಷ್ಟಕ್ಕೂ ಅವರು ಉತ್ಪಾದಿಸುವ ‘ಮೆನ್ಸ್ಟ್ರುಯಲ್ ಕಪ್’ ಎಂದರೇನು ಮತ್ತು ಅದಕ್ಕೂ ಮುನ್ನ ಮುಟ್ಟಿನ ದಿನಗಳಲ್ಲಿ ಬಳಸಲಾಗುತ್ತಿದ್ದ ಸಾಧನಗಳೇನು ಎಂದು ಅರಿಯೋಣ. ಮಾತ್ರವಲ್ಲದೆ ದಿವ್ಯ ಅವರ ಪ್ರೇರಣಾದಾಯಕ ಸಾಧನೆಯ ಹಾದಿಯ ಬಗ್ಗೆ ತಿಳಿಯೋಣ.
ಹೆಣ್ಣುಮಕ್ಕಳ ಜೀವನದ ಅವಿಭಾಜ್ಯ ಅಂಗವಾದ ಋತುಚಕ್ರವನ್ನು ವರ ಎಂದು ಹೇಳಲಾಗುತ್ತದೆ. ಆದರೆ ಬಹಳಷ್ಟು ಹೆಣ್ಣುಮಕ್ಕಳು ಇದನ್ನು ಶಾಪವೆಂದೇ ಭಾವಿಸುತ್ತಾರೆ. ಮುಟ್ಟು/ಋತುಸ್ರಾವದ ಸಂದರ್ಭದಲ್ಲಿ ಹೆಣ್ಣುಮಕ್ಕಳು ಅನುಭವಿಸುವ ತೊಂದರೆಗಳ ಪಟ್ಟಿ ಬಹಳಷ್ಟು ದೊಡ್ಡದು. ಮಡಿ, ಮೈಲಿಗೆಗಳ ವಿಚಾರವನ್ನು ಬದಿಗಿರಿ ನೋಡಿದರೂ ದೈಹಿಕವಾಗಿಯೂ ಮಾನಸಿಕವಾಗಿಯೂ ಈ ಸಂದರ್ಭದಲ್ಲಿ ಹೆಣ್ಣು ಬಹಳಷ್ಟು ಅಡೆತಡೆಗಳನ್ನು ಎದುರಿಸುತ್ತಾಳೆ. ಇತ್ತೀಚಿಗೆ ಮಹಿಳೆಯರ ಋತುಚಕ್ರದ ನೈರ್ಮಲ್ಯದ ಕುರಿತಾಗಿ ಅನೇಕ ರೀತಿಯ ಕಾರ್ಯಕ್ರಮಗಳು ಕಾಣಸಿಗುತ್ತದೆ. ಖುದ್ದು ದೇಶದ ಪ್ರಧಾನಿಯೂ ಈ ಕುರಿತಾಗಿ ಜಾಗೃತಿಯನ್ನು ಮೂಡಿಸಿದ್ದಾರೆ.
ಹಲವು ವರ್ಷಗಳಿಗೂ ಮುನ್ನ ಋತುಸ್ರಾವ ಸಂದರ್ಭದಲ್ಲಿ ಮಹಿಳೆಯರು ಹಳೆಯ ಬಟ್ಟೆಗಳನ್ನು ಉಪಯೋಗಿಸುತ್ತಿದ್ದರು. ಆದರೆ ಬದಲಾದ ಕಾಲದಲ್ಲಿ “ಪ್ಯಾಡ್ /ಸ್ಯಾನಿಟರಿ ನ್ಯಾಪ್ಕಿನ್” ಬಳಸಲಾಗುತ್ತದೆ. ಶ್ರೀಮಂತರ ಕೈಗೆ ಮಾತ್ರ ಎಟುಕಬಹುದಾಗಿದ್ದ ಸ್ಯಾನಿಟರಿ ನಾಪ್ಕಿನ್ಗಳು ಈಗ ಜನ ಸಾಮಾನ್ಯರಿಗೂ ಲಭ್ಯವಾಗಿರುವುದು ಉತ್ತಮ ಬೆಳವಣಿಗೆ. ಔಷಧದ ಅಂಗಡಿಗೆ ತೆರಳಿ ಅಕ್ಕ ಪಕ್ಕ ಯಾರಾದರೂ ಇಲ್ಲವಲ್ಲ ಎಂದು ಖಾತರಿ ಪಡಿಸಿಕೊಂಡು ಸಂಕೋಚದಿಂದ ಹಿಡಿಯಾಗಿ, ಅಂಗಡಿಯಾತ ಪತ್ರಿಕೆಯಲ್ಲಿ ಸುತ್ತಿ ನೀಡಿದ ನ್ಯಾಪ್ಕಿನ್ ಪೊಟ್ಟಣವನ್ನು ತರುವುದೇ ಒಂದು ದೊಡ್ಡ ಸಾಧನೆಯಂತೆ ಭಾಸವಾಗುತ್ತಿದ್ದ ದಿನಗಳನ್ನು ಎಲ್ಲರೂ ಅನುಭವಿಸಿದ್ದು ಸುಳ್ಳಲ್ಲ. ಹಳೆಯ ಬಟ್ಟೆಯನ್ನು ಬಳಸಿ, ಯಾರ ಕಣ್ಣಿಗೂ ಬೀಳದಂತೆ ತೊಳೆದು, ಮನೆಯ ಮೂಲೆಯಲ್ಲಿ ಒಣಗಿಸಲ್ಪಟ್ಟ ಆ ಬಟ್ಟೆಯು ಬಿಸಿಲು ಕಾಣದೆ ಅನೇಕ ಫಂಗಲ್ಗಳಿಗೆ ತಾಣವಾಗುತ್ತಿದ್ದದು ಮತ್ತು ಅದರ ದುಷ್ಪರಿಣಾಮವನ್ನು ಅನೇಕ ಮಹಿಳೆಯರು ಅನುಭವಿಸಿದ್ದೂ ಸುಳ್ಳಲ್ಲ. ಆದರೆ ಕಾಲ ಬದಲಾಗಿದೆ ಇಂದು ಟಿವಿಯಲ್ಲಿ ಬಹಳಷ್ಟು ಸ್ಯಾನಿಟರಿ ನ್ಯಾಪ್ಕಿನ್ಗಳ ಜಾಹೀರಾತುಗಳು ಕಾಣಸಿಗುತ್ತದೆ. ಮಾತ್ರವಲ್ಲ ಪುರುಷರೂ ಈ ಜಾಹೀರಾತುಗಳಲ್ಲಿ ಕಾಣಸಿಗುತ್ತಾರೆ.
ಈಗ ಈ ಸ್ಯಾನಿಟರಿ ನ್ಯಾಪ್ಕಿನ್ನ ಇನ್ನೊಂದು ಮುಖವನ್ನು ಗಮನಿಸೋಣ. ನಮ್ಮ ದೇಶದಲ್ಲಿ ವರ್ಷವೊಂದಕ್ಕೆ ಸ್ಯಾನಿಟರಿ ನ್ಯಾಪ್ಕಿನ್ಗಳು 113 ಸಾವಿರ ಟನ್ ಪ್ಲಾಸ್ಟಿಕ್ ವೇಸ್ಟ್ ತಯಾರಿಸುತ್ತವೆ. ನಾವು ಬಳಸುವ ಪ್ಯಾಡ್ಗಳು 90% ಪ್ಲಾಸ್ಟಿಕ್ನಿಂದ ಕೂಡಿದೆ. ಜಾಹೀರಾತಿನಲ್ಲಿ ತೋರುವಂತೆಯೇ ಹಲವು ಪ್ಯಾಡ್ಗಳು ಸುಗಂಧವನ್ನು ಸೂಸುತ್ತವೆ. ಆದರೆ ನಾವು ಅರಿಯದ ವಿಚಾರ ಈ ಸುಗಂಧಕ್ಕಾಗಿ 3000 ಕ್ಕೂ ಮಿಕ್ಕಿ ವಿವಿಧ ರಾಸಾಯನಿಕಗಳ ಮಿಶ್ರಣಗಳನ್ನು ಬಳಸಲಾಗುತ್ತದೆ. ಈ ರಾಸಾಯಯನಿಕಗಳು ಬಂಜೆತನ, ಸ್ತನ ಕ್ಯಾನ್ಸರ್ಗಳಿಗೂ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಸ್ಯಾನಿಟರಿ ನ್ಯಾಪ್ಕಿನ್ಗಳಲ್ಲಿ ಬಳಸಲಾಗುವ ಬಿಸ್ಪಿನಾಲ್ನಂತಹಾ ವಸ್ತುಗಳು ಭ್ರೂಣದ ಬೆಳವಣಿಗೆ ಮತ್ತು ಮೆದುಳಿನ ಬೆಳವಣಿಗೆಗೆ ತೊಂದರೆಯನ್ನು ಉಂಟುಮಾಡಬಲ್ಲದು. ಥೈರಾಯ್ಡ್ ಗ್ರಂಥಿಯ ಮೇಲೆ ಪರಿಣಾಮವನ್ನು ಬೀರಿ ಹಾರ್ಮೋನುಗಳ ವ್ಯತ್ಯಾಸಕ್ಕೂ ಕಾರಣವಾಗಬಹುದು. ಮಹಿಳಾ ವೈದ್ಯಕೀಯ ತಜ್ಞರುಗಳ ಪ್ರಕಾರ ಇದರಿಂದ ಅಂಡಾಶಯ ಕ್ಯಾನ್ಸರ್ ಮತ್ತು ಮಧುಮೇಹದಂತಹಾ ತೊಂದರೆಗಳೂ ಕಾಣಿಸಿಕೊಳ್ಳಬಹುದು. ಹಾಗಾದರೆ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಬಳಸುವುದನ್ನು ನಿಲ್ಲಿಸಿದರೆ ಮುಂದೆ? ಇದಕ್ಕೆ ಉತ್ತರ ಕಾಟನ್ ಪ್ಯಾಡ್ ಮತ್ತು ‘ಮೆನ್ಸ್ಟ್ರುಯಲ್ ಕಪ್’
‘ಮೆನ್ಸ್ಟ್ರುಯಲ್ ಕಪ್’ ಅಥವಾ ಮುಟ್ಟಿನ ಕಪ್, ಇದರ ತಯಾರಿಕೆಗಾಗಿ ವೈದ್ಯಕೀಯ ದರ್ಜೆಯ ಸಿಲಿಕೋನ್ಗಳನ್ನೂ ಬಳಸಲಾಗುತ್ತದೆ. ವಾಸನೆ ರಹಿತವಾದ ಈ ಕಪ್ಗಳು ಪ್ಯಾಡ್ನಿಂದ ಉಂಟಾಗುವ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಅಂತಹ ಅಪಾಯ ತಡೆಯುವಲ್ಲಿ ಕೂಡ ಸಹಾಯ ಮಾಡುತ್ತದೆ. ಮಾತ್ರವಲ್ಲದೆ ಈ ಕಪ್ಗಳು ಪರಿಸರ ಸ್ನೇಹಿಯಾಗಿದ್ದು, ಅನೇಕಬಾರಿ ಬಳಸಬಹುದು ಮತ್ತು ಹಣದ ಉಳಿಕೆಯಲ್ಲೂ ಸಹಕಾರಿ. ಸ್ಯಾನಿಟರಿ ಪ್ಯಾಡ್ಗಳು ಮಣ್ಣಿನಲ್ಲಿ ಕರಗಲು 800 ವರ್ಷಗಳು ಬೇಕಾದರೆ ಈ ಕಪ್ಗಳು ಬಹು ಬೇಗ ಕರಗುತ್ತವೆ. ಮಾತ್ರವಲ್ಲದೆ ಇದನ್ನು ಸಾಧಾರಣ 10 ವರ್ಷಗಳವರೆಗೂ ಬಳಸಬಹುದಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ 75% ‘ಮೆನ್ಸ್ಟ್ರುಯಲ್ ಕಪ್’ಗಳನ್ನೂ ಚೈನಾದಿಂದ ಆಮದು ಮಾಡಲಾಗುತ್ತದೆ. ಹಾಗಾದರೆ ಸ್ವದೇಶೀ ‘ಮೆನ್ಸ್ಟ್ರುಯಲ್ ಕಪ್’ ಲಭ್ಯವಿಲ್ಲವೇ ಎಂಬ ಸಂದೇಹ ಮೂಡಬಹುದು. ಖಂಡಿತಾ ಲಭ್ಯವಿದೆ.
‘ಕಾಂಫಿ ಕಪ್’ ಎಂಬ ಅಪ್ಪಟ ಸ್ವದೇಶೀ ಬ್ರ್ಯಾಂಡ್ನ ಸಂಸ್ಥಾಪಕಿ ಕನ್ನಡತಿ ಎಂಬುದು ಹೆಮ್ಮೆಯ ವಿಚಾರ. ದಿವ್ಯ ಗೋಕರ್ಣ ಅವರು ಸ್ಯಾನಿಟರಿ ನ್ಯಾಪ್ಕಿನ್ಗಳ ವಿಲೇವಾರಿಯ ಮತ್ತು ಬಳಸುವ ಸಂದರ್ಭದಲ್ಲಿನ ತೊಂದರೆಯಿಂದ ಅದಕ್ಕೆ ಪರ್ಯಾಯವನ್ನು ಅಂತರ್ಜಾಲದಲ್ಲಿ ಹುಡುಕಾಡುವ ಸಂದರ್ಭದಲ್ಲಿ ಅವರು ಕಂಡುಕೊಂಡ ಪರ್ಯಾಯ ವಿಧಾನವೇ ಮೆನ್ಸ್ಟ್ರುಯಲ್ ಕಪ್’. ಆನ್ಲೈನ್ ಮುಖಾಂತರ ಖರೀದಿಸಿದ್ದನ್ನು ಮಾಡಿ ಬಳಸಿದಾಗ ಈ ಕಪ್ಗಳು ಒರಟಾಗಿತ್ತು. ಹಲವಾರು ಬ್ರ್ಯಾಂಡ್ಗಳನ್ನೂ ಖರೀದಿಸಿ ಬಳಸಿ ನೋಡಿದಾಗಲೂ ಇಂತಹುದೇ ಅನುಭವವಾಗಿತ್ತು. ತಾನು ಬಳಸಿ ಅದರಿಂದ ಪರಿಸರಕ್ಕಾಗುವ ಲಾಭದ ಕುರಿತಾಗಿ ಇತರರಲ್ಲೂ ಜಾಗೃತಿ ಮೂಡಿಸುತ್ತಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗುವ ಜಾಯಮಾನ ಅವರದ್ದಾಗಿರಲಿಲ್ಲ. ಹುಡುಕಾಡಿದಾಗ ತಿಳಿದು ಬಂದ ವಿಚಾರದಿಂದ ಅವರು ಅಚ್ಚರಿಗೊಂಡರು. ಪ್ರತೀ ತಿಂಗಳು ಹೆಣ್ಣು ಮಕ್ಕಳು ಬಳಸುವ ಈ ಸಾಧನವು ಚೈನಾದಿಂದ ಆಮದಾಗುತ್ತಿತ್ತು. ಇದನ್ನು ಸ್ಥಳೀಯವಾಗಿ ನಾವೇ ಯಾಕೆ ತಯಾರಿಸಬಾರದು ಎಂಬ ಆಲೋಚನೆಯು ಅವರಲ್ಲಿ ಉದಯಿಸಿತು. ಅದನ್ನೇ ಸವಾಲಾಗಿ ಸ್ವೀಕರಿಸಿ ಅವರು ಅಪ್ಪಟ ಭಾರತೀಯ ಬ್ರ್ಯಾಂಡ್ ಒಂದನ್ನು ತಯಾರಿಸುವ ನಿರ್ಧಾರಕ್ಕೆ ಬಂದರು.
ಆದರೆ ಇದು ಕಾರ್ಯಗತಗೊಳಿಸುವುದು ಸುಲಭವಾಗಿರಲಿಲ್ಲ. ಅಹ್ಮದಾಬಾದ್ನ ಕಪ್ಗಳನ್ನೂ ತಯಾರಿಸುವ ಘಟಕವನ್ನು ಸಂಪರ್ಕಿಸಿ ಮಾಹಿತಿಗಳನ್ನು ಪಡೆದರು. ಉತ್ಪಾದಕರ ಮಾಹಿತಿಗಳನ್ನು ಕಲೆಹಾಕಿ ಅಚ್ಚುಗಳನ್ನು ತರಿಸಿ, ಬ್ಯಾಂಕ್ಗಳಲ್ಲಿ ಸಾಲವನ್ನು ಪಡೆದು ತಮ್ಮದೇ ಆದ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಇದಕ್ಕಾಗಿ ಅವರು ಅವರು ಭಾರತದಲ್ಲಿ ರಬ್ಬರ್ ಮತ್ತು ಮೆಡಿಕಲ್ ಗ್ರೇಡ್ ಸಿಲಿಕಾನ್ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳನ್ನು ತಿಂಗಳುಗಳ ಕಾಲ ಹುಡುಕಿ, ಅವರ ಜೊತೆ ತಯಾರಿಕಾ ಒಪ್ಪಂದ ಮಾಡಿಕೊಂಡು, ತಯಾರಿಕೆಯ ಹಂತದಲ್ಲಿ ಬಹಳಷ್ಟು ಸುಧಾರಿತ ವಿನ್ಯಾಸವನ್ನೂ ತಯಾರಿಸಿ ಆಯ್ಕೆ ಮಾಡಿದ್ದಾರೆ. ಭಾರತದಲ್ಲೇ ತಯಾರಿಸಲ್ಪಡುವ ಕಪ್ಗಳ ಸಂಸ್ಥೆಗಳ ಮಾಲೀಕರೆಲ್ಲರೂ ಪುರುಷರು, ನಾನೊಬ್ಬಳೇ ಮಹಿಳೆ. ನನ್ನ ಸಂಸ್ಥೆಯು ತಯಾರಿಸುವ ಉತ್ಪನ್ನವನ್ನು ನಾನೇ ಖುದ್ದಾಗಿ ಬಳಸಿ ಪರಿಶೀಲಿಸುತ್ತೇನೆ. ಆದ್ದರಿಂದಲೇ ನನ್ನ ಸಂಸ್ಥೆಯ ಉತ್ಪನ್ನದಲ್ಲಿ ಸುಧಾರಣೆಯನ್ನು ತರಲು ಸಾಧ್ಯವಾಗುತ್ತಿದೆ ಮತ್ತು ಉಪಯೋಗಿಸುವ ವ್ಯಕ್ತಿಯ ದೃಷ್ಟಿಯಿಂದಲೂ ನನಗೆ ಉತ್ಪನ್ನದ ಕುರಿತಾಗಿ ತಿಳಿಯುತ್ತದೆ ಎನ್ನುವ ದಿವ್ಯ ಗೋಕರ್ಣ ಅವರ ಮಾತಿನಲ್ಲಿ ತಮ್ಮ ಉತ್ಪನ್ನದ ಕುರಿತಾಗಿ ವಿಶ್ವಾಸವಿದೆ.
ಉದ್ಯಮ ಸ್ಥಾಪಿಸುವುದು ಖಂಡಿತಾ ಸುಲಭವಾಗಿರಲಿಲ್ಲ ಎನ್ನುವ ಶಿರಸಿಯ ದಿವ್ಯ, ತಮ್ಮ ಈ ಸವಾಲಿನ ಹಾದಿಯಲ್ಲಿ ತಮ್ಮ ಬೆನ್ನಿಗೆ ನಿಂತ ಅಮ್ಮನನ್ನು ಮತ್ತು ಕುಟುಂಬವನ್ನು ತನ್ನ ಶಕ್ತಿ ಎನ್ನುತ್ತಾರೆ. ಇಂತಹ ಸಂದರ್ಭದಲ್ಲೇ ನಮ್ಮವರು ಯಾರು ಎಂದು ತಿಳಿಯುತ್ತದೆ ಎನ್ನುವ ಅವರು ತಮ್ಮ ಉತ್ಪನ್ನಗಳನ್ನು ಯಾರು ಬಳಸಿ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತಾರೆ ಎಂದು ನಾನು ನಂಬಿದ್ದೆನೋ ಅವರು ಈ ಕುರಿತಾಗಿ ಮಾತನಾಡಲೇ ಇಲ್ಲ ಮತ್ತು ಬಳಸಲೂ ಇಲ್ಲ, ಆದರೆ ಬದಲಾಗಿ ಅನೇಕ ಅಪರಿಚಿತರು ಬೆನ್ನಿಗೆ ನಿಂತು ಪ್ರೋತ್ಸಾಹಿಸಿದರು ಎನ್ನುತ್ತಾರೆ. ವಿದ್ಯಾರ್ಥಿಗಳನ್ನು ಭೇಟಿಯಾಗಿ ಕಪ್ಗಳನ್ನು ಬಳಸುವಂತೆ ಹಾಗೂ ಸ್ಯಾನಿಟರಿ ಪ್ಯಾಡ್ಗಳ ಬಳಕೆಯನ್ನು ಕಡಿಮೆ ಮಾಡುವಂತೆ ಜಾಗೃತಿ ಮೂಡಿಸುವ ಹಾಗೂ ನಮ್ಮ ಸಂಸ್ಥೆಯ ಕಪ್ಗಳನ್ನು ಉಚಿತವಾಗಿ ಬಡ ಯುವತಿಯರಿಗೆ ವಿತರಣೆ ಮಾಡುವ ಯೋಜನೆ ಇದೆ. ಉದ್ಯಮ ಅಭಿವೃದ್ಧಿಗೊಳಿಸಿ ಹಣ ಗಳಿಸುವುದಕ್ಕಿಂತಲೂ ಹೆಚ್ಚಾಗಿ ಯುವತಿಯರಲ್ಲಿ ಆರೋಗ್ಯ, ಶುಚಿತ್ವ ಹಾಗೂ ಪರಿಸರದ ಬಗೆಗಿನ ಜಾಗೃತಿ ಮೂಡಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳುತ್ತಾರೆ ದಿವ್ಯಾ.
ಹಳ್ಳಿಗಳಲ್ಲಿ ಋತುಸ್ರಾವದ ನೈರ್ಮಲ್ಯದ ಕುರಿತಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನೇಕ ಹಿಂದುಳಿದ ಮಹಿಳೆಯರಿಗೆ ತಮ್ಮ ಉತ್ಪನ್ನಗಳನ್ನು ಉಚಿತವಾಗಿಯೂ ನೀಡುತ್ತಾರೆ, ಅಲ್ಲಿ ಹೆಣ್ಣುಮಕ್ಕಳು ಮುಟ್ಟಿನ ದಿನಗಳಲ್ಲಿ ಹಳೆಯ ಬಟ್ಟೆ ಮತ್ತು ಎಲೆಗಳನ್ನು ಉಪಯೋಗಿಸುತ್ತಾರೆ, ಇದರಿಂದ ಅವರ ಆರೋಗ್ಯದಲ್ಲಿ ಅನೇಕ ಸಮಸ್ಯೆಗಳು ಕಂಡುಬರುತ್ತದೆ ಎಂದು ಬೇಸರವನ್ನು ವ್ಯಕ್ತಪಡಿಸುತ್ತಾರೆ. ಈ ಕಪ್ ಬಳಸಿದ ಕಾರಣ ತನ್ನ ಮಗಳಲ್ಲಿ ಸ್ರಾವವು ಹೆಚ್ಚಿದ್ದು, ಅದು ಒಂದು ಅರೋಗ್ಯ ಸಮಸ್ಯೆ ಎಂದು ತಿಳಿಯಲು ಸಹಕಾರಿಯಾಯಿತು ಎಂದು ತಾಯಿಯೊಬ್ಬರು ನನಗೆ ಸಂದೇಶ ಕಳುಹಿಸಿದ್ದರು. ಅದನ್ನು ಓದಿದಾಗ ನನಗೆ ನಿಜವಾಗಿಯೂ ಸಾರ್ಥಕ ಭಾವ ಮೂಡಿತ್ತು ಎನ್ನುವ ದಿವ್ಯ ಅವರು ಇತ್ತೀಚೆಗಷ್ಟೇ 2021 ರ ಸಣ್ಣ ಮತ್ತು ಮಾಧ್ಯಮ ಗಾತ್ರದ ವ್ಯವಹಾರದ “ಐಕಾನ್ ಆಫ್ ಇಂಡಿಯನ್ ಬ್ಯುಸಿನೆಸ್ನಿಂದ ಸನ್ಮಾನಿತರಾಗಿ “ಮಹಿಳಾ ನೈರ್ಮಲ್ಯ ಮತ್ತು ಆರೋಗ್ಯ ರಾಯಭಾರಿ” ಪ್ರಶಸ್ತಿಯನ್ನೂ ಪಡೆದಿದ್ದಾರೆ. “ಮುಟ್ಟಿನ ನೈರ್ಮಲ್ಯ ಮತ್ತು ನಿರ್ವಹಣೆ” ಕುರಿತಂತೆ ಕರ್ನಾಟಕದ 85ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಉಚಿತ ಕಾರ್ಯಾಗಾರ ಕೈಗೊಂಡು 16 ಸಾವಿರಕ್ಕೂ ಹೆಚ್ಚಿನ ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ.
‘ಕಾಂಫಿ ಕಪ್’ ನ ಬಳಕೆ ಮತ್ತು ಇತರ ಮಾಹಿತಿಗಳಿಗಾಗಿ www.comfycup.in, ಮೊಬೈಲ್ ಸಂಖ್ಯೆ: 7349618782ಗೆ ಸಂಪರ್ಕಿಸಬಹುದಾಗಿದೆ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.