ಬೆಳ್ತಂಗಡಿ : ಮನುಷ್ಯ ಸಂಬಂಧಗಳನ್ನು ತರ್ಕಬದ್ದವಾಗಿ ಹಿಡಿದಿಡುವ ಕೆಲಸ ಆಗಬೇಕಾಗಿದೆ. ನೂರಾರು ವಿದ್ಯಾರ್ಥಿಗಳಿಗೆ ಉಪಯೋಗವಾಗುವ ರೀತಿಯಲ್ಲಿ ಡಾ|ನಿರಂಜನ ವಾನಳ್ಳಿ ಸಾರ್ಥಕ ಕಾರ್ಯ ನಿರ್ವಹಿಸಿದ್ದಾರೆ ಎಂದು ಚಲನಚಿತ್ರ ನಟ, ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಹೇಳಿದರು.
ಅವರು ಶನಿವಾರ ಉಜಿರೆ ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ ಡಾ|ನಿರಂಜನ ವಾನಳ್ಳಿ ಅಭಿನಂದನಾ ಸಮಿತಿ ಉಜಿರೆ ಮತ್ತು ದಶಮಾನೋತ್ಸವ ವರ್ಷಾಚರಣೆಯಲ್ಲಿರುವ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಸಮಕಾಲೀನ ಕನ್ನಡ ಪತ್ರಿಕೋದ್ಯಮ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ನಿರಂಜನ ವಾನಳ್ಳಿ ೫೦ ರ ಅಭಿನಂದನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಿ ಪರಿಣತಿ ಬರುವುದು ಅನುಭವದಿಂದ. ವೃತ್ತಿ ಪರ ಗುಣ ಶ್ರೇಷ್ಠವಾಗಲು ತುಂಬಾ ವರ್ಷ ಶ್ರಮ ಪಡಬೇಕಾಗುತ್ತದೆ. ಆಂತರಿಕ ಸಬಲತೆ, ನಿಜವಾದ ಹೃದಯವನ್ನು ಗಮನಿಸುವ ಸೂಕ್ಷ್ಮವಾದ ಗುಣವನ್ನು ಪತ್ರಿಕೋದ್ಯಮದ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೆಕು. ಅಂತಃಕರಣದ ಸಂಸ್ಕಾರ ಮುಂದಿನ ತಲೆಮಾರಿಗೂ ಕೊಡಬೇಕು ಎಂದ ಅವರು ಉತ್ತಮ ಗುಣಗಳ ಪರಂಪರೆಗೆ ವಾನಳ್ಳಿ ಉತ್ತಮ ಉದಾಹರಣೆ ಎಂದು ಶ್ಲಾಘಿಸಿದರು.ರೈತ ತನ್ನ ಹೊಲದಲ್ಲಿ ಶ್ರಮ ಪಟ್ಟು ಹೇಗೆ ಬೆಳೆ ತೆಗೆಯುತ್ತಾನೋ ಅದೇ ರೀತಿಯ ಶ್ರಮಜೀವಿತ್ವ ಇದ್ದರೇನೇ ಅತ ಶ್ರೇಷ್ಠ ಪತ್ರಕರ್ತನಾಗಬಲ್ಲ. ತನ್ನ ವೃತ್ತಿಗಾಗಿ ನಿಜವಾದ ಆಶಯವನ್ನು ಹೊತ್ತು ಸಕಾರಾತ್ಮಕ ಮನೋಭಾವದಿಂದ ಉತ್ಕೃಷ್ಟತೆಯನ್ನು ಸಾಧಿಸಬಹುದು ಎಂದರು.
ಉಜಿರೆ ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್.ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ತುಮಕೂರು ವಿ.ವಿ. ಪತ್ರಿಕೋದ್ಯಮ ವಿಭಾಗ ಸಹಾಯಕ ಪ್ರಾಧ್ಯಾಪಕ ಪದ್ಮನಾಭ ಸೀಬಂತಿ ಸಂಪಾದಿಸಿದ ನುಡಿರಂಜನ ಅಭಿನಂದನ ಗ್ರಂಥವನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳ್ತೆ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಬಿಡುಗಡೆಗೊಳಿಸಿದರೆ, ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ|ಹೆಚ್. ಜಿ. ಶ್ರೀಧರ ಸಂಪಾದಿಸಿದ ಸೊಗಸು ಕಾಣುವ ಮನಸು ಎಂಬ ಹೊತ್ತಗೆಯನ್ನು ಮೈಸೂರಿನ ಉದ್ಯಮಿ ಕೆ.ನರೇಂದ್ರ ಅನಾವರಣಗೊಳಿಸಿದರೆ, ನಿರಂಜನ ವಾನಳ್ಳಿ ಅವರ ಒಂದು ಅಡಿ ಭೂಮಿ, ಬೊಗಸೆ ತುಂಬ ಪ್ರೀತಿ ಎಂಬ ೩೧ ನೇ ಕೃತಿಯನ್ನು ಮಂಗಳೂರಿನ ಮೈಂಡ್ ಸಂಸ್ಥೆಯ ನಿರ್ದೇಶಕ ಎಮ್.ಕೆ.ಸುವೃತ್ ಕುಮಾರ್ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಉಜಿರೆ ಎಸ್ಡಿಎಂ ಕಾಲೇಜಿನ ಎಂಸಿಜೆ ವಿದ್ಯಾರ್ಥಿಗಳು ಹೊರ ತಂದ ಸಮನ್ವಯ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಮೈಸೂರು ವಿವಿಯ ಪ್ರೊಫೆಶಿಯೆನ್ಸಿ ಡೆವೆಲಪ್ಮೆಂಟ್ ಎಂಡ್ ಪ್ಲೇಸ್ಮೆಂಟ್ ಸರ್ವೀಸ್ನ ನಿರ್ದೇಶಕ ಡಾ|ನಿರಂಜನ ವಾನಳ್ಳಿ, ಅಭಿನಂದನ ಸಮಿತಿ ಅಧ್ಯಕ್ಷ ಪ್ರೊ.ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಚಂದ್ರಮೋಹನ ಮರಾಠೆ, ಸಂಚಾಲಕ ಡಾ|ಮಾಧವ ಉಪಸ್ಥಿತರಿದ್ದರು.ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಕೆ.ಪ್ರತಾಪಸಿಂಹ ನಾಯಕ್ ಸ್ವಾಗತಿಸಿ ಪ್ರಸ್ತಾವಿಸಿದರು. ಪತ್ರಕರ್ತ ಸಂಘದ ಅಧ್ಯಕ್ಷ ಬಿ.ಎಸ್.ಕುಲಾಲ್ ವಂದಿಸಿದರು. ಉಜಿರೆ ಎಸ್ಡಿಎಂ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ|ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.