ಬೆಳ್ತಂಗಡಿ : ಸಾಹಿತ್ಯದ ಮೂಲಕ ಧನಾತ್ಮಕಚಿಂತನೆ ಪಸರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ನಿಕ್ ಹೇಳಿದರು. ಅವರು ಶನಿವಾರ ಸಂಜೆ ಉಜಿರೆ ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ ಡಾ| ನಿರಂಜನ ವಾನಳ್ಳಿ ಅಭಿನಂದನಾ ಸಮಿತಿ ಉಜಿರೆ ಮತ್ತು ದಶಮಾನೋತ್ಸವ ವರ್ಷಾಚರಣೆಯಲ್ಲಿರುವ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಸಮಕಾಲೀನ ಕನ್ನಡ ಪತ್ರಿಕೋದ್ಯಮ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ನಿರಂಜನ ವಾನಳ್ಳಿ 50 ರ ಅಭಿನಂದನಾ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿ ಸ್ಥಾನದಿಂದ ಮಾತನಾಡಿದರು.
ಹಕ್ಕುಗಳ ಜೊತೆಗಿರುವ ಕರ್ತವ್ಯಗಳನ್ನು ಬಡಿದೆಬ್ಬಿಸುವ ಸಾಹಿತ್ಯ ರಚನೆಯಾಗಬೇಕು. ಧನಾತ್ಮಕ ಚಿಂತಕನಾಗಿ, ಸಾಹಿತಿಯಾಗಿ ನಿರಂಜನ ವಾನಳ್ಳಿ ಬೆಳೆದು ಬಂದಿದ್ದಾರೆ. ಸಮಾಜವನ್ನು ಒಳಗಣ್ಣಿನಿಂದ ನೋಡುತ್ತಾ ಸಮಾಜವನ್ನು ಇನ್ನಷ್ಟು ಸುಂದರವಾಗಲು ಏನು ಮಾಡಬಹುದು ಎಂದು ಚಿಂತಿಸಬೇಕಾಗಿದೆ. ಒಟ್ಟಾರೆ ಸಾತ್ವಿಕ ಶಕ್ತಿ ಜಾಗೃತಿಯಾಗಬೇಕು. ಸಜ್ಜನ ಶಕ್ತಿ ಒಂದಾಗಬೇಕು ಎಂದರು.
ಅತಿಥಿ ಸ್ಥಾನದಿಂದ ಮಾತನಾಡಿದ ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ|ಬಿ.ಯಶೋವರ್ಮ ಮಾತನಾಡಿ ಅತ್ಯಲ್ಪ ಅವಧಿಯಲ್ಲಿ ಅಪಾರ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಂಡವರು ವಾನಳ್ಳಿಯವರು. ಮಾನವೀಯ ಸಂಬಂಧಗಳು, ಸಂಪರ್ಕಗಳು ಹೇಗೆ ಇರಬೇಕು ಎಂಬುದನ್ನು ಇವರ ಲೇಖನಗಳು ಗೊತ್ತುಮಾಡುತ್ತವೆಯಲ್ಲದೆ ಇವು ಬೇರೆ ಬೇರೆ ರೀತಿಯಲ್ಲಿ ಯಾವೆಲ್ಲ ರೀತಿಯ ಪರಿಣಾಮಗಳನ್ನು ಉಂಟು ಮಾಡಬಲ್ಲುದು ಎಂಬುದನ್ನು ತೋರಿಸಿಕೊಡುತ್ತವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ|ಎಂ.ಮೋಹನ ಆಳ್ವ ಅವರು, ಪ್ರೀತಿಯೇ ಬದುಕಿಗೆ ಆಧಾರ. ಇದರಿಂದ ಬೇರೆ ಬೇರೆ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಇಂದು ಕಾಲೇಜು ಮಟ್ಟದಲ್ಲಿ ಗುರು-ಶಿಷ್ಯರ ಸಂಬಂಧ ಹದೆಗೆಡುತ್ತಿರುವ ಸಂದರ್ಭದಲ್ಲಿ ವಾನಳ್ಳಿ ಹಾಗೂ ಅವರ ಶಿಷ್ಯ ವೃಂದ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮನೋಹರ ಮಸ್ಕಿ, ಸವಿತಾ ನಿರಂಜನ ವಾನಳ್ಳಿ, ಅಭಿನಂದನಾ ಸಮಿತಿಗೌರವಾಧ್ಯಕ್ಷ ಪ್ರತಾಪಸಿಂಹ ನಾಯಕ್, ಉಪಾಧ್ಯಕ್ಷ ಹರೀಶ್ಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್.ಕುಲಾಲ್ ಉಪಸ್ಥಿತರಿದ್ದರು. ಈ ಸಂದರ್ಭ ವಾನಳ್ಳಿ ದಂಪತಿಯನ್ನುಅಭಿನಂದಿಸಲಾಯಿತು.
ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಮೋಹನ ಮರಾಠೆ ಸ್ವಾಗತಿಸಿದರು. ಸಂಚಾಲಕ ಡಾ|ಮಾಧವವ ಅಭಿನಂದನಾ ನುಡಿಗಳನ್ನಾಡಿದರು. ಅಧ್ಯಕ್ಷ ಭಾಸ್ಕರ ಹೆಗಡೆ ವಂದಿಸಿದರು. ಉಜಿರೆ ಎಸ್ಡಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ|ಬಿ.ಎ.ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.ಬಳಿಕ ಆರತಿ ಪಟ್ರಮೆ ಮತ್ತು ಬಳಗದವರಿಂದ ಗದಾಯುದ್ಧ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.