ಯುವ ಜನರೇ ಹೆಚ್ಚಾಗಿ ಬಳಸುವ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್ಸ್ಟಾಗ್ರಾಮ್ನಲ್ಲಿ “ಮೇಕ್ ಮೈ ಟ್ರಿಪ್” ಸಂಸ್ಥೆಯ ಜಾಹೀರಾತೊಂದು ಗಮನ ಸೆಳೆಯಿತು. ಜಾಹೀರಾತು ಚಿಕ್ಕದು, ವಿದೇಶಿ ವ್ಯಕ್ತಿಯೊಬ್ಬ ಉದಾಸೀನ ಮತ್ತು ತೀರಾ ಇಷ್ಟವಿಲ್ಲದೆ ಒತ್ತಾಯಕ್ಕೊಳಪಟ್ಟು ಯಾವುದೋ ಕೆಲಸವನ್ನು ಮಾಡಲು ಅನಿವಾರ್ಯತೆ ಬಂದಾಗ ತೋರುವ ಮುಖಭಾವವನ್ನು ತೋರುವ GIF ಭಾವಚಿತ್ರ. ಆದರೆ ಅದರಲ್ಲಿ “ದೇವಸ್ಥಾನಕ್ಕೆ ಹೋಗಲು ಪೋಷಕರು ಒತ್ತಾಯಿಸುತ್ತಿರುವ ಸಂದರ್ಭ” ಎಂಬ ಹಣೆಪಟ್ಟಿ ಸೇರಿತ್ತು. ಜಾಹೀರಾತಿನಲ್ಲಿ ತಪ್ಪೇನಿದೆ ಎಂದು ಬಹಳಷ್ಟು ಜನ ಕೇಳಬಹುದು. ಇದಕ್ಕೆ ಉತ್ತರವೂ ನಮ್ಮಲ್ಲೇ ಇದೆ. ಇದಕ್ಕಾಗಿ ಇತರ ಕೆಲವು ಜಾಹೀರಾತುಗಳ ಉದಾಹರಣೆಗಳನ್ನು ಗಮನಿಸೋಣ.
ಬಹು ಜನರ ಭರವಸೆಯನ್ನು ಹೊಂದಿರುವ ಪ್ರತಿಷ್ಠಿತ ಆಭರಣ ಮಳಿಗೆಯೊಂದರ ಜಾಹೀರಾತಿನಲ್ಲಿ ಗರ್ಭಿಣಿ ಮಹಿಳೊಬ್ಬಳ ಸೀಮಂತ ಶಾಸ್ತ್ರದ ಸಂಭ್ರಮ, ಈ ಸಮಾರಂಭದಲ್ಲಿ ಭಾಗವಹಿಸುವ ಎಲ್ಲರೂ ಧರಿಸಿರುವುದು ಆಭರಣ ಮಳಿಗೆಯೊಂದರ ಸಂಗ್ರಹಗಳನ್ನು. ಮೇಲ್ನೋಟಕ್ಕೆ ಈ ಜಾಹೀರಾತಿನಲ್ಲಿ ಯಾವುದೇ ತಪ್ಪು ಅಥವಾ ವಿರೋಧಿಸುವಂತಹ ವಿಚಾರ ಗೋಚರಿಸುವುದಿಲ್ಲ.
ಎರಡನೆಯದ್ದು ಪ್ರತಿಷ್ಠಿತ ವಾಹನಗಳ ಟಯರ್ ಉತ್ಪಾದನಾ ಸಂಸ್ಥೆಯದ್ದು. ದೇಶದ ಎಲ್ಲರಿಗೂ ಉಚಿತ ಜ್ಞಾನವನ್ನು ಹಂಚುವ ಬಹು ಬೇಡಿಕೆಯ ನಟನೊಬ್ಬ ರಸ್ತೆಯಿರುವುದು ವಾಹನಗಳ ಚಲನೆಗಾಗಿ ಹೊರತು ಪಟಾಕಿ ಸಿಡಿಸಲು ಅಲ್ಲ ಎಂಬ ಸಂದೇಶವನ್ನು ನೀಡುತ್ತಾನೆ. ಇಲ್ಲಿಯೂ ವಿರೋಧಿಸುವ ಯಾವ ಅಂಶಗಳೂ ಕಾಣಿಸುತ್ತಿಲ್ಲ.
ಮೂರನೆಯ ಜಾಹೀರಾತು ಪ್ರಾಣಿ ದಯಾ ಸಂಘಟನೆಯ ಜಾಹೀರಾತು. ಅದರಲ್ಲಿ ಸಂಸ್ಥೆಯು ಗೋವನ್ನು ರಕ್ಷಿಸಬೇಕು ಎಂಬ ಉದ್ದೇಶದ ಜಾಹೀರಾತನ್ನು ನೀಡುತ್ತಿದೆ. ಇಲ್ಲಿಯೂ ಯಾವುದೇ ರೀತಿಯ ತಪ್ಪು ಕಾಣಿಸುತ್ತಿಲ್ಲ.
ಆದರೂ ಈ ಮೇಲಿನ ಎಲ್ಲಾ ಜಾಹೀರಾತುಗಳನ್ನೂ ವಿರೋಧಿಸಲಾಯಿತು. ಕೆಲವು ಜಾಹೀರಾತುಗಳ ಪ್ರಸಾರವನ್ನು ನಿಲ್ಲಿಸಿ ಹಿಂಪಡೆಯಲಾಯಿತು. ಮೇಲ್ನೋಟಕ್ಕೆ ವಿರೋಧ ವ್ಯಕ್ತಪಡಿಸಿದ ಗುಂಪು ತಪ್ಪಾಗಿ ಕಾಣಿಸುತ್ತಿದೆ ಅಲ್ಲವೇ? ಆದರೆ ಈ ಜಾಹೀರಾತುಗಳನ್ನು ಸರಿಯಾಗಿ ಗಮನಿಸೋಣ. ಮೊದಲನೇ ಜಾಹೀರಾತಿನಲ್ಲಿ ಗರ್ಭಿಣಿ ಮಹಿಳೆಯು ಹಿಂದೂ, ಆಕೆ ವಿವಾಹಿತಳಾಗಿ ಸ್ವೀಕರಿಸಿರುವುದು ಮುಸಲ್ಮಾನ ಕುಟುಂಬವನ್ನು, ಎರಡನೇ ಜಾಹೀರಾತಿನಲ್ಲಿ ಪಟಾಕಿ ಸಿಡಿಸಬಾರದು ಎನ್ನುವ ಜಾಹೀರಾತನ್ನು ಪ್ರಸಾರ ಮಾಡಲು ಬಳಸಿದ್ದು ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಮೂರನೇ ಜಾಹೀರಾತು ಪ್ರಕಟವಾದದ್ದು ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ. ಈ ಮೂರೂ ಜಾಹೀರಾತನ್ನು ಹೋಲಿಸುವಾಗ ಕಂಡುಬರುವ ಸಾಮಾನ್ಯ ಅಂಶ “ಹಿಂದೂ ಧರ್ಮ”.
ಧರ್ಮಗಳ ಮಧ್ಯೆ ಸಾಮರಸ್ಯದ ಕುರಿತಾಗಿ ಜಾಹೀರಾತಿನ ಪ್ರಸರಣಕ್ಕೆ ಯಾರೂ ಆಕ್ಷೇಪಣೆ ಮಾಡಲಾರರು, ಆದರೆ ಲವ್ ಜಿಹಾದ್, ಮತಾಂತರ ಇತ್ಯಾದಿಗಳ ಕುರಿತಾಗಿ ಗಂಭೀರ ವಾತಾವರಣ ಸೃಷ್ಟಿಯಾಗಿರುವ ಸಂದರ್ಭದಲ್ಲಿ ಇಂತಹಾ ಜಾಹೀರಾತಿನ ಅವಶ್ಯಕತೆ ನಿಜವಾಗಿಯೂ ಇದೆಯಾ? ಅಥವಾ ಈ ಜಾಹೀರಾತನ್ನು ಇತರ ಧರ್ಮಗಳ ಬಳಸಿ ಮಾಡಲು ಸಾಧ್ಯವಿದೆಯೇ? ಪಟಾಕಿ ಉರಿಸುವ ಕುರಿತಾಗಿ ಜ್ಞಾನದ ಹಂಚಿಕೆಯು ದೀಪಾವಳಿ ಹಬ್ಬದ ಸಂದರ್ಭದಲ್ಲೇ ಏಕೆ ಮುನ್ನೆಲೆಗೆ ಬರುತ್ತದೆ? ಅಥವಾ ಪಟಾಕಿ ಉರಿಸುವ ಮುಖಾಂತರ ಮಾತ್ರವೇ ಮಾರ್ಗವನ್ನು ತಪ್ಪಾಗಿ ಬಳಸಲಾಗುವುದೇ? ಸಾವಿರಾರು ಜಾನುವಾರುಗಳನ್ನು ಇತರ ಉದ್ದೇಶಗಳಿಗಾಗಿ ಮಾರಣ ಹೋಮ ನಡೆಸಿದರೂ ಉಸಿರೆತ್ತದ ಪ್ರಾಣಿ ದಯಾ ಸಂಸ್ಥೆಯು ರಕ್ಷಾ ಬಂಧನದ ಸಂದರ್ಭದಲ್ಲೇ ಈ ರೀತಿಯ ಜಾಹೀರಾತನ್ನು ನೀಡಿದ ಉದ್ದೇಶವೇನು?
ಮೇಲೆ ಹೇಳಿದ ನಾಲ್ಕು ಉದಾಹರಣೆಗಳು ಮಾತ್ರವಲ್ಲ, ಇನ್ನೂ ಬಹಳಷ್ಟು ಜಾಹೀರಾತುಗಳ ಪಟ್ಟಿಯನ್ನು ನಿಮ್ಮ ಮುಂದಿಡಲು ಸಾಧ್ಯವಿದೆ. ಜಾವೀದ್ ಹಬೀಬ್ ಎಂಬ ವೃತ್ತಿಪರ ಕೇಶ ವಿನ್ಯಾಸಗಾರ 2017ರಲ್ಲಿ ನೀಡಿದ ಜಾಹೀರಾತೊಂದರಲ್ಲಿ ತನ್ನ ಬಳಿ ಕೇಶ ವಿನ್ಯಾಸಕಾಗಿ ಮನುಷ್ಯರು ಮಾತ್ರವಲ್ಲ ದೇವರೂ ಬರುತ್ತಾರೆ ಎಂದು ತೋರಿಸಿದ್ದ. ಈ ಜಾಹೀರಾತಿನಲ್ಲಿ ಗಣಪತಿ, ದುರ್ಗೆ, ಸರಸ್ವತಿಯರನ್ನು ಅವನ ಬ್ಯೂಟಿ ಸಲೂನ್ನಲ್ಲಿ ಕುಳಿತಿರುವಂತೆ ಚಿತ್ರಿಸಲಾಗಿತ್ತು. ಹಿಂದೂ ದೇವತೆಗಳು ಮತ್ತು ದೇವರು ಮಾತ್ರವೇ ಬರುವುದೇ? ಇತರ ಮತದ ದೇವರುಗಳನ್ನೇಕೆ ಈ ರೀತಿಯಾಗಿ ಚಿತ್ರಿಸಲಿಲ್ಲ?
ಜಾಹೀರಾತುಗಳು ಸುಲಭವಾಗಿ ಮನ ಮುಟ್ಟುವ ಮಾಧ್ಯಮಗಳು. ಹೆಚ್ಚಿನ ಜಾಹೀರಾತುಗಳನ್ನು ಯುವ ಮತ್ತು ಬಾಲ್ಯದ ಸಮುದಾಯವನ್ನೇ ಕೇಂದ್ರೀಕರಿಸಿ ತಯಾರಿಸಲಾಗುತ್ತದೆ. ಈ ರೀತಿಯ ಜಾಹೀರಾತುಗಳು ನೀಡುವ ಸಂದೇಶವಾದರೂ ಏನು? ಈಗ ಮೊದಲಿನ “ಮೇಕ್ ಮೈ ಟ್ರಿಪ್” ಸಂಸ್ಥೆಯ ಜಾಹೀರಾತಿನ ವಿಚಾರಕ್ಕೆ ಬರೋಣ. ಜಾಹೀರಾತು ತಯಾರಿಕಾ ಸಂಸ್ಥೆಯು ‘ಕ್ರಿಯೇಟಿವಿಟಿ’ ಎಂಬ ಹೆಸರಿನಲ್ಲಿ ಯುವ ಜನರನ್ನು ಸೆಳೆಯುವ ಉದ್ದೇಶದಿಂದಲೇ ಈ ಜಾಹೀರಾತನ್ನು ತಯಾರಿಸಿದೆ ಎಂದೇ ಒಪ್ಪೋಣ, ಆದರೂ ದೇವಾಲಯವೇ ಏಕೆ? ಇತರ ಮತಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಕುರಿತಾಗಿ ಈ ರೀತಿಯ ಜಾಹೀರಾತುಗಳು ಏಕಿಲ್ಲ? ನೆನಪಿರಲಿ ಹಿಂದೂ ಧರ್ಮದಲ್ಲಿ ಇಂಥಾ ದಿನ ಇಂಥಾ ಸಮಯದಲ್ಲಿ ದೇವಸ್ಥಾನಕ್ಕೆ ತೆರಳಲು ಬೇಕು ಎಂಬ ಕಡ್ಡಾಯ ನಿಯಮವೂ ಇಲ್ಲ. ಈ ಜಾಹೀರಾತನ್ನು ನೋಡುವ ಒಬ್ಬ ಯುವಕ ಅಥವಾ ಯುವತಿ ಇದನ್ನು ತಮಾಷೆಯಾಗಿ ತೆಗೆದುಕೊಂಡು ತನ್ನ ಇತರ ಸ್ನೇಹಿತರನ್ನೂ ಈ ರೀತಿಯಾಗಿ ನಡೆದುಕೊಳ್ಳಲು ಪ್ರೋತ್ಸಾಹಿಸಬಹುದು ಅಥವಾ ತಾನೇ ಈ ರೀತಿಯಾಗಿ ವರ್ತಿಸಲೂ ಬಹುದು. ಈ ಜಾಹೀರಾತನ್ನು ತಮಾಷೆಯಾಗಿ ತೆಗೆದುಕೊಂಡು ನೋಡಿದರೂ ಇಂತಹಾ ಗಂಭೀರ ಪ್ರಭಾವ ಬೀರುವ ಸಾಧ್ಯತೆ ಇದೆ. ಇನ್ನು ಗಂಭೀರವಾಗಿ ತೆಗೆದುಕೊಂಡು ಗಮನಿಸಿ, ಮೇಲೆ ಹೇಳಿದ ಇತರ ಜಾಹೀರಾತುಗಳೊಂದಿಗೆ ಈ ಜಾಹೀರಾತನ್ನೂ ತುಲನೆ ಮಾಡಿ ನೋಡಿ. ಜಾಹೀರಾತಿನ ಹಿಂದಿನ ತಾತ್ಪರ್ಯವು ಮತ್ತು ಅದು ಬೀರಬಹುದಾದ ಪ್ರಭಾವವು ಮತ್ತಷ್ಟು ಗಂಭೀರವಾಗಿ ಅರ್ಥವಾಗುತ್ತದೆ.
ಜಾಹೀರಾತು ಸಂಸ್ಥೆಗಳು ಕ್ರಿಯಾಶೀಲತೆಯ ಹೆಸರಿನಲ್ಲಿ ಬಹುಸಂಖ್ಯಾತರ ಭಾವನೆಗಳಿಗೆ ನೋವುಂಟು ಮಾಡುವುದು ಹೊಸತೇನಲ್ಲ. ಸಿನೆಮಾ ಮತ್ತು ಧಾರಾವಾಹಿಗಳು ಹಲವಾರು ವರ್ಷಗಳಿಂದಲೂ ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವುದೂ ಸತ್ಯ. ಚಾಕೊಲೇಟ್ ಉತ್ಪಾದನಾ ಸಂಸ್ಥೆಯೊಂದು ತನ್ನ ಉತ್ಪನ್ನದ ಜಾಹೀರಾತಿನಲ್ಲಿ ದೇಶದ ನಕ್ಷೆಯನ್ನೇ ತಪ್ಪಾಗಿ ತೋರಿಸಿದ ಉದಾಹರಣೆಯೂ ಇದೆ. ಈ ರೀತಿಯಾಗಿ ಧರ್ಮವೊಂದನ್ನು, ದೇಶದ ಸಂಸ್ಕೃತಿ, ಸಂಸ್ಕಾರ ಮತ್ತು ದೇಶದ ಸಾರ್ವಭೌಮತೆಯನ್ನು ಗುರಿಯಾಸಿಕೊಂಡು ಪದೇ ಪದೇ ನಡೆಸುವ ತಪ್ಪುಗಳನ್ನು ಖಂಡಿಸಿದರೆ ಮತ್ತು ಅದನ್ನು ವಿರೋಧಿಸಿದರೆ ಅವರನ್ನು ಅಸಹಿಷ್ಣುಗಳು ಎಂದು ಕರೆಯಲಾಗುತ್ತದೆ.
ನೆನಪಿರಲಿ, ಈ ರೀತಿಯ ಜಾಹೀರಾತುಗಳನ್ನು ಜನರು ವಿರೋಧಿಸಿದರು, ಖಂಡಿಸಿದರು ಮತ್ತು ಅವುಗಳನ್ನು ಹಿಂತೆಗೆದುಕೊಳ್ಳುವಂತೆ ಕಾನೂನಿನ ಮೊರೆ ಹೋದರು ವಿನಹಾ ದೊಂಬಿ ಎಬ್ಭಿಸಿ ಕೊಲೆ ಬೆದರಿಕೆಗಳನ್ನು ಹಾಕಲಿಲ್ಲ. ಆದರೂ ಅನೇಕ ಮಾಧ್ಯಮಗಳು “ಪ್ರಸಿದ್ಧ ವ್ಯಕ್ತಿಗಳು” ಅವರನ್ನು ಅಸಹಿಷ್ಣುಗಳು ಎಂದರೇ ಹೊರತು ತಪ್ಪು ಮಾಡಿದವರಿಗೆ ತಿದ್ದಿಕೊಳ್ಳುವ ಮತ್ತು ಮುಂದೆ ಅಂತಹಾ ತಪ್ಪುಗಳನ್ನು ಮಾಡದಂತೆ ಜಾಗ್ರತೆ ವಹಿಸುವಂತೆ ಸಲಹೆಯನ್ನು ನೀಡಲಿಲ್ಲ.
ಒಂದು ಸಮಾಜವಾಗಿ ಇಂತಹ ಸಂದಭದಲ್ಲಿ ನಾವೇನು ಮಾಡಬಹುದು? ನನಗೆ ಇಷ್ಟವಾಗಲಿಲ್ಲ, ನಾನು ನೋಡಲಿಲ್ಲ ಮತ್ತು ನಾನು ಹಂಚಿಕೊಳ್ಳಲಿಲ್ಲ ಎಂದು ಹೇಳಿ ಸುಮ್ಮನಾಗುವುದಷ್ಟೇ ನಮ್ಮ ಜವಾಬ್ದಾರಿಯೇ? ನಾವು ಕಾನೂನು ಪರಿಣಿತರಲ್ಲ, ನಮ್ಮಲ್ಲಿ ರಾಜಕೀಯ ಅಥವಾ ಹಣ ಬಲವಿಲ್ಲ ಎಂದು ಕಾರಣಗಳನ್ನು ಹೇಳಿ ಸುಮ್ಮನಾಗುವುದು, ಈ ರೀತಿಯ ಮೌನವೇ ಅವರಿಗೆ ಸಹಕಾರಿ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹಾ ವಿಚಾರಗಳು ಕಂಡಾಗ ನಾವೇ ಅದನ್ನು ವಿರೋಧಿಸಬೇಕೇ ಹೊರತು ನಮ್ಮ ಸಂಸ್ಕೃತಿಯ ಕುರಿತಾಗಿ ಹೆಮ್ಮೆಯಿರುವ ನಮ್ಮ ಅಜ್ಜಿಯೋ ಅಜ್ಜನೋ ಮಾಡಲು ಸಾಧ್ಯವಿಲ್ಲ. ವಿರೋಧಿಸುವುದು ಎಂದರೆ ತಪ್ಪು ಪದಬಳಕೆ, ಕೆಟ್ಟ ಭಾಷಾ ಪ್ರಯೋಗವಲ್ಲ ನೆನಪಿರಲಿ. ಸಂಯಮದಿಂದ ಅವರು ಯಾವ ರೀತಿಯಾಗಿ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ ಮತ್ತು ಅವರು ಅದನ್ನು ಏಕೆ ನಿಲ್ಲಿಸಬೇಕು ಎಂಬುದನ್ನು ಸಮರ್ಪಕವಾದ ವಾದದೊಂದಿಗೆ ಸಾಮಾಜಿಕ ಜಾಲತಾಣದಲ್ಲೇ ಉತ್ತರವನ್ನು ನೀಡಬೇಕು. ನೆನಪಿರಲಿ ಕೋಪಗೊಂಡು ಬಯ್ಯುವುದರಿಂದ ಪ್ರಯೋಜವಿಲ್ಲ, ಬದಲಾಗಿ ಅವುಗಳನ್ನು ಬಳಸಿ, ನಮ್ಮನ್ನು ಅಸಹಿಷ್ಣುಗಳು ಎನ್ನಲು ಅವರು ಇದನ್ನು ಅಸ್ತ್ರವಾಗಿ ಬಳಸುತ್ತಾರೆ. ನಮ್ಮ ಸಂಸ್ಕೃತಿ, ಧರ್ಮದ ಕುರಿತಾಗಿ ಹೆಮ್ಮೆಯಿರಬೇಕು ಮತ್ತು ಅದರ ಕುರಿತಾಗಿ ಜ್ಞಾನ ಮತ್ತು ಅರಿವೂ ಇರಬೇಕು. ಇದರಿಂದ ಇಂತಹಾ ಜಾಹೀರಾತುಗಳು ನಮ್ಮನ್ನು ಪ್ರಭಾವಿಸಲು ಸಾಧ್ಯವಾಗದು ಮತ್ತು ಅವುಗಳನ್ನು ವಿರೋಧಿಸುವಾಗ ಏಕೆ ವಿರೋಧಿಸುತ್ತಿದ್ದೇವೆ ಎನ್ನುವ ಚರ್ಚೆ ಮತ್ತು ವಾದಗಳ ಸಂದರ್ಭದಲ್ಲಿ ನಮ್ಮ ನಿಲುವುಗಳ ಪರವಾಗಿ ಧೃಢವಾಗಿ ನಿಲ್ಲಲು ಸಾಧ್ಯವಾಗುತ್ತದೆ.
✍️ ದೀಪಾ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.