2021 ಡಿಸೆಂಬರ್ 16, ನಾವು “ಸ್ವರ್ಣಿಮ ವಿಜಯ” ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ವಿಶ್ವದ ಇತಿಹಾಸದಲ್ಲೇ ಸುವರ್ಣ ಇತಿಹಾಸವನ್ನು ಭಾರತ ರಚಿಸಿದ ದಿನವಿದು. ಭಾರತವು ಪಾಕಿಸ್ಥಾನದ ಮೇಲೆ ಯುದ್ಧವನ್ನು ಯಶಸ್ವಿಯಾಗಿ ಗೆಲ್ಲುವುದರ ಮೂಲಕ ಪಾಕಿಸ್ಥಾನದಲ್ಲಿ ಮಲತಾಯಿ ಧೋರಣೆಗೊಳಗಾಗಿ ಕಡೆಗಣಿಸಲ್ಪಟ್ಟ ಬಂಗಾಳ ಪಾಕಿಸ್ಥಾನವನ್ನು ತುಂಡರಿಸಿ “ಬಾಂಗ್ಲಾದೇಶ” ಎಂಬ ನೂತನ ದೇಶದ ಉದಯಕ್ಕೆ ಕಾರಣವಾದ ಸುವರ್ಣ ಮಹೋತ್ಸವ. ಭಾರತ ಪಾಕಿಸ್ಥಾನದ ವಿಭಜನೆಯ ದುರಂತ ಅಧ್ಯಾಯದ ಇತಿಹಾಸವನ್ನು ನಾವೆಲ್ಲರೂ ಅರಿತಿದ್ದೇವೆ. ಧರ್ಮದ ಆಧಾರದಲ್ಲಿ ವಿಭಜನೆಗೊಂಡು ಉದಯಗೊಂಡ ಪಾಕಿಸ್ಥಾನವೆಂಬ ಹೊಸ ದೇಶದಲ್ಲಿ ಅವಗಣನೆಗೆ ಈಡಾಗಿ ಯಾವುದೇ ಅಭಿವೃದ್ಧಿಯನ್ನು ಕಾಣದೆ ಬೇಸತ್ತ ಬಂಗಾಳ ಪ್ರದೇಶದ ಪಾಕಿಸ್ಥಾನೀಯರ ಪ್ರತ್ಯೇಯ ರಾಷ್ಟ್ರದ ಉದಯದ ಈ ಯುದ್ಧವನ್ನು ಬಾಂಗ್ಲಾ ವಿಮೋಚನಾ ಯುದ್ಧವೆಂದು ಕರೆಯಲಾಗುತ್ತದೆ.
ಈ ಯುದ್ಧವು ಸತತವಾಗಿ ಅಧಿಕಾರದಲ್ಲಿದ್ದ ಪಶ್ಚಿಮ ಪಾಕಿಸ್ಥಾನ ಮತ್ತು ಬಹುಮತ ಹೊಂದಿದ್ದ ಪೂರ್ವ ಪಾಕಿಸ್ಥಾನಗಳ ನಡುವಿನ ತಿಕ್ಕಾಟವಾಗಿತ್ತು. ಈ ಸಂದರ್ಭದಲ್ಲಿ ನಾಯಕರು ಬಂಗಾಳ ಪ್ರದೇಶದ ಪಾಕಿಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಬಂಡುಕೋರರನ್ನು ಹತ್ತಿಕ್ಕುವ ಕಾರಣವನ್ನು ನೀಡಿ ಹಿಂಸಾಕಾಂಡವನ್ನೇ ನಡೆಸಿದರು. ಅಲ್ಲಿ ಸುಮಾರು ಮೂರರಿಂದ ಮೂವತ್ತು ಲಕ್ಷ ಜನರನ್ನು ಕೊಲ್ಲಲಾದರೆ, ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗಿತ್ತು ಮತ್ತು ಅದರಲ್ಲಿ ಬಹುಪಾಲು ಹಿಂದೂ ಮಹಿಳೆಯರೇ ಅತ್ಯಾಚಾರಕ್ಕೆ ಬಲಿಯಾಗಿದ್ದರು. ಈ ಸಂದರ್ಭದಲ್ಲಿ ಸಾವಿರಾರು ಪಶ್ಚಿಮ ಪಾಕಿಸ್ಥಾನೀಯರು ಆಶ್ರಯವನ್ನು ಅರಸಿ ಭಾರತಕ್ಕೆ ವಲಸೆ ಬರಲು ಪ್ರಾರಂಭಿಸಿದರು.
27 ಮಾರ್ಚ್ 1971 ರಂದು ಭಾರತದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಸ್ವಾತಂತ್ರ್ಯಕ್ಕಾಗಿ ಪೂರ್ವ ಪಾಕಿಸ್ತಾನದ ಜನರ ಹೋರಾಟಕ್ಕೆ ತಮ್ಮ ಸರಕಾರದ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ಭಾರತ-ಪೂರ್ವ ಪಾಕಿಸ್ತಾನದ ಗಡಿಯನ್ನು ಭಾರತದಲ್ಲಿ ಸುರಕ್ಷಿತ ಆಶ್ರಯಕ್ಕಾಗಿ ನಿರಾಶ್ರಿತರಿಗಾಗಿ ತೆರೆಯಲಾಯಿತು. ಪಶ್ಚಿಮ ಬಂಗಾಲ, ಬಿಹಾರ, ಅಸ್ಸಾಮ್ , ಮೇಘಾಲಯ ಮತ್ತು ತ್ರಿಪುರಗಳ ಸರಕಾರಗಳು ಗಡಿಯಗುಂಟ ನಿರಾಶ್ರಿತರ ಶಿಬಿರಗಳನ್ನು ವ್ಯವಸ್ಥೆಗೊಳಿಸಿದವು. ಕೂಡಲೇ ಪಾಕಿಸ್ಥಾನದ ದೇಶಭ್ರಷ್ಟ ಸೈನ್ಯಾಧಿಕಾರಿಗಳು ಮತ್ತು ಸ್ವಯಂಸೇವಕರು ಈ ಶಿಬಿರಗಳನ್ನು ಮುಕ್ತಿವಾಹಿನಿ ಗೆರಿಲ್ಲಾಗಳ ಭರ್ತಿ ಮತ್ತು ತರಬೇತಿಗಳಿಗೆ ಬಳಸಲು ಆರಂಭಿಸಿದರು. ಮುಂದೆ ವಲಸಿಗರ ಸಂಖ್ಯೆಯು ಒಂದು ಕೋಟಿಯನ್ನು ಮುಟ್ಟಿತು. ಈ ರೀತಿಯಾಗಿ ಹೆಚ್ಚುತ್ತಿರುವ ಸಂಖ್ಯೆಯು ಭಾರತದ ಆರ್ಥಿಕತೆಗೆ ಹೊರೆಯಾಗಲು ಪ್ರಾರಂಭವಾಯಿತು. ನವೆಂಬರ್ ಹೊತ್ತಿಗೆ ಯುದ್ಧ ಅನಿವಾರ್ಯ ಎನಿಸಿತು. ಪೂರ್ವ ಪಾಕಿಸ್ಥಾನದೊಂದಿಗಿನ ಗಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಭಾರತೀಯ ಪಡೆಗಳ ಜಮಾವಣೆ ಆರಂಭವಾಗಿತ್ತು ರವಿವಾರ ಡಿಸೆಂಬರ್ 3 ರಂದು ಪಾಕಿಸ್ಥಾನಿ ವಾಯುಪಡೆಯು ಆಗ್ರಾ ಸೇರಿದಂತೆ ವಾಯುವ್ಯ ಭಾರತದ ಎಂಟು ವಿಮಾನ ನೆಲೆಗಳ ಮೇಲೆ ದಾಳಿಮಾಡಿತು. ಭಾರತವು ತೀವ್ರವಾಗಿ ಪ್ರತಿಕ್ರಿಯಿಸಿ ಪಾಕಿಸ್ಥಾನದ ಮೇಲೆ ಯುದ್ಧವನ್ನು ಸಾರಿತು. ಪೂರ್ವಗಡಿಯಲ್ಲಿ ಭಾರತದ ಸೈನ್ಯವು ಮುಕ್ತಿವಾಹಿನಿಯ ಜತೆ ಸೇರಿ ಮಿತ್ರವಾಹಿನಿಯನ್ನು ರಚಿಸಿತು. ಮರುದಿನ ಪೂರ್ವ ಪಾಕಿಸ್ಥಾನದ ಪಶ್ಚಿಮ ಪಾಕಿಸ್ಥಾನದ ಸೈನ್ಯದ ಮೇಲೆ ಭೂಮಿ, ಅಕಾಶ ಮತ್ತು ಜಲಮಾರ್ಗವಾಗಿ ಆಕ್ರಮಣ ನಡೆಸಿತು.
ಮುಂದೆ ನಡೆದ 13 ದಿನಗಳ ಯುದ್ಧದಲ್ಲಿ ಭಾರತೀಯ ಸೈನ್ಯವು ಪಾಕಿಸ್ಥಾನಿ ಸೈನ್ಯವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತು. ಪಾಕಿಸ್ಥಾನಿ ಸೈನ್ಯದ ಲೆಫ್ಟಿನಂಟ್ ಜನರಲ್ ಎ. ಎ .ಕೆ ನಿಯಾಜಿ ಶರಣಾಗತಿ ಪಾತ್ರಕ್ಕೆ ಸಹಿಯನ್ನು ಹಾಕುವ ಮೂಲಕ ಪಾಕಿಸ್ತಾನವು ಭಾರತಕ್ಕೆ ಶರಣಾಯಿತು ಮತ್ತು ಬಾಂಗ್ಲಾ ದೇಶವೆಂಬ ಹೊಸ ದೇಶವು ಉದಯಗೊಂಡಿತು.ಈ ಸಂದರ್ಭದಲ್ಲಿ ಭಾರತವು ಪಾಕಿಸ್ತಾನಿ ಭೂ ಸೇನೆಯ 54,154, ನೌಕಾದಳದ 1,381, ವಾಯು ಸೇನೆಯ 933 ಮತ್ತು 12,000 ಸರಕಾರೀ ಮತ್ತು ಸಾಮಾನ್ಯ ನಾಗರೀಕರನ್ನು ಮಾತ್ರವಲ್ಲದೆ 22,000 ಪೊಲೀಸರು ಹೀಗೆ ಒಟ್ಟು 90,368 ಯುದ್ಧ ಖೈದಿಗಳನ್ನು ಹೊಂದಿತ್ತು. ಆದರೆ ದಿಟ್ಟ ಮತ್ತು ಉತ್ತಮ ಹೃದಯವನ್ನು ಹೊಂದಿದ್ದ ಭಾರತದ ಪ್ರಧಾನಿ ಎಲ್ಲ ಯುದ್ಧ ಕೈದಿಗಳನ್ನೂ ಬಿಡುಗಡೆಗೊಳಿಸಿದರು. ಈ ಘಟನೆಯು ಇತಿಹಾಸವನ್ನು ರಚಿಸಿತು. ಇಂದಿಗೂ ಮಕ್ಕಳು ಇತಿಹಾಸದ ಈ ಘಟನೆಯನ್ನು ಶಾಲಾ ಪಠ್ಯದಲ್ಲೂ ಓದುತ್ತಾರೆ.
ಯುದ್ಧ ಕೊನೆಗೊಂಡಿತು, ವಿಜಯೋತ್ಸವವೂ ಮುಗಿಯಿತು ಆದರೆ 54 ಕುಟುಂಬಗಳು ಇಂದಿಗೂ ಯುದ್ಧದಲ್ಲಿ ಭಾಗವಹಿಸಿದ್ದ ತಮ್ಮ ಪ್ರೀತಿ ಪಾತ್ರ ಯೋಧನನ್ನು ಮರಳಿ ಕಾಣಲಿಲ್ಲ. ಮೊದಲ ಕೆಲವು ವರ್ಷಗಳು ಅವರು ಬದುಕಿದ್ದಾರೋ ಇಲ್ಲವೋ ಎಂದು ತಿಳಿಯದೆ ಕಂಗಾಲಾಗಿದ್ದ ಕುಟುಂಬದ ಹೆಸರುಗಳು ಮುಂದೆ ಅವರನ್ನು ಕೇವಲ “ಮಿಸ್ಸಿಂಗ್ 54” ಎಂದೇ ಕರೆಯಲಾಗುತ್ತದೆ. ತಮ್ಮ ಪ್ರೀತಿಯ ಪತಿಯ ವಿವರಕ್ಕಾಗಿ ಇಂದಿಗೂ ಅನೇಕ ಪತ್ನಿಯರು ದಾರಿ ಕಾಯುತ್ತಿದ್ದಾರೆ, 50 ವರ್ಷಗಳಿಂದ ತಮ್ಮ ಪ್ರೀತಿಪಾತ್ರರನ್ನು ಒಂದೇ ಒಂದು ಬಾರಿಯಾದರೂ ಕಾಣಬಹುದೇ ಎಂದು ಹೋರಾಟವನ್ನು ನಡೆಸುತ್ತಿದ್ದಾರೆ. ಯುದ್ಧವೇನೋ 13 ದಿನಗಳಲ್ಲಿ ಮುಗಿಯಿತು ಆದರೆ 54 ಕುಟುಂಬಗಳ ಹೋರಾಟ ಇಂದಿಗೂ ನಡೆದಿದೆ. 1971 ರ ಯುದ್ಧದಲ್ಲಿ ಹಲವಾರು ಭಾರತೀಯ ಯೋಧರನ್ನು ಪಾಕಿಸ್ಥಾನೀಯರು ಸೆರೆ ಹಿಡಿದಿದ್ದರು. ಅವರಲ್ಲಿ ಬಹಳಷ್ಟು ಜನರು ಯುದ್ಧದ ಬಳಿಕ ದೇಶಕ್ಕೆ ಹಿಂದಿರುಗಿದ್ದರು, ಆದರೆ 54 ಯೋಧರು ಇಂದಿಗೂ ಹಿಂದಿರುಗಲಿಲ್ಲ. ಅವರ ಕುರಿತಾದ ಯಾವ ವಿವರಗಳೂ ಲಭ್ಯವಿಲ್ಲ.
ಅವರಾರು ಯುದ್ಧದಲ್ಲಿ ಹುತಾತ್ಮರಾಗಿರಲಿಲ್ಲ, ಬದುಕುಳಿದಿದ್ದರು ಎನ್ನಲು ಸಾಕ್ಷ್ಯಗಳು ಕೂಡ ಲಭ್ಯವಿದೆ. ಡಿಸೆಂಬರ್ 27, 1971 ರಲ್ಲಿ ಪ್ರಕಟವಾದ ಟೈಮ್ ಮ್ಯಾಗಜಿನ್ನಲ್ಲಿ ಮೇಜರ್ ಎ. ಕೆ. ಘೋಷ್ ಅವರ ಭಾವಚಿತ್ರವೂ ಪ್ರಕಟವಾಗಿತ್ತು. ಫ್ಲ್ಯಾಯ್ಟ್ ಲೆಫ್ಟಿನಂಟ್ ವಿ. ವಿ. ತಾಂಬೆ ಅವರನ್ನು ಡಿಸೆಂಬರ್ 5, 1971 ರಂದು ಸಜೀವವಾಗಿ ಸೆರೆಹಿಡಿಯಲಾಗಿತ್ತು, ಈ ವಿಚಾರವು ಪಾಕಿಸ್ತಾನದ ವಾರ್ತಾಪತ್ರಿಕೆಗಳಲ್ಲಿ ಮತ್ತು ರೇಡಿಯೋದಲ್ಲಿ ಖಚಿತಪಡಿಸಲ್ಪಟ್ಟಿತ್ತು, ಆದರೆ ಯುದ್ಧವು ಮುಗಿದ ಬಳಿಕ ಅವರ ಕುರಿತಾದ ಯಾವುದೇ ವಿಚಾರವೂ ಹೊರಬರಲಿಲ್ಲ. ವರುಷಗಳ ಬಳಿಕ 1989 ರಲ್ಲಿ ತಾಂಬೆ ಅವರ ಮಾವ ಜಯಂತ್ ಜಥಾರ್ ಅವರ ಪಾಕಿಸ್ಥಾನದ ಭೇಟಿಯ ಸಂದರ್ಭದಲ್ಲಿ ಫೈಝಿಲಾಬಾದ್ ಕಾರಾಗ್ರಹಕ್ಕೆ ಭೇಟಿ ನೀಡಿದ ಸಮಯದಲ್ಲಿ ಕುರ್ತಾ ಪೈಜಾಮ ಧರಿಸಿ ವಾರ್ತಾಪತ್ರಿಕೆಯನ್ನು ಓದುತ್ತಿದ್ದ ವ್ಯಕ್ತಿಯೊಬ್ಬರು ಇವರ ದೃಷ್ಟಿಗೆ ಬಿದ್ದರು, ಜಥಾರ್ ಅವರು ತಮ್ಮ ಸೋದರಳಿಯನನ್ನು ಗುರುತಿಸಿದಾಗಲೂ ಅವರೊಂದಿಗೆ ಮಾತನಾಡಲು ಇವರಿಗೆ ಅವಕಾಶವನ್ನು ನಿರಾಕರಿಸಲಾಗಿತ್ತು. 1976 ರಲ್ಲಿ ಬಿ ಬಿ ಸಿ ಪತ್ರಕರ್ತೆ ಝುಲ್ಫಿಕರ್ ಅಲಿ ಭಟ್ಟೋ ಅವರ ಕುರಿತಾದ ಪುಸ್ತಕವೊಂದನ್ನು ಪ್ರಕಟಿಸಿದ್ದು, ಅದರಲ್ಲೂ ಝುಲ್ಫಿಕರ್ ಅವರು ತಮ್ಮ ಪಕ್ಕದ ಕೊಠಡಿಯಲ್ಲಿ 50 ಕ್ಕೂ ಹೆಚ್ಚಿನ ಖೈದಿಗಳು ಇದ್ದುದಾಗಿಯೂ, ಅವರ ಚೀರಾಟವು ತಮಗೆ ಎಂದೂ ಮರೆಯಲು ಸಾಧ್ಯವಿಲ್ಲ ಎಂದೂ ಹೇಳಿದ್ದರು ಎಂದು ಉಲ್ಲೇಖಿಸಿದ್ದರು. ಅವರ ಅಂದಾಜಿನ ಪ್ರಾಕಾರ ಆ ಖೈದಿಗಳು 1971 ರ ಯುದ್ಧದಲ್ಲಿ ಸೆರೆ ಹಿಡಿಯಲ್ಪಟ್ಟ ಭಾರತೀಯ ಯೋಧರಾಗಿರಬಹುದು ಎಂದು ಶಂಕೆಯನ್ನು ವ್ಯಕ್ತಪಡಿಸಿದ್ದರು. ಭುಟ್ಟೋ ಅವರ ಪುತ್ರಿ ಬೆನಜಿರ್ ಭುಟ್ಟೋ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗೆ ಈ ವಿಚಾರವಾಗಿ ಮಾತುಕತೆಯನ್ನು ನಡೆಸಿ ಪಾಕಿಸ್ಥಾನದಲ್ಲಿ ಇರಿಸಿಕೊಳ್ಳಲಾಗಿರುವ ಭಾರತೀಯ ಯುದ್ಧ ಖೈದಿಗಳನ್ನು ಬಿಡುಗಡೆಗೊಳಿಸುವ ಕುರಿತಾಗಿ ಗಂಭೀರವಾಗಿ ಪರಿಶೀಲಿಸುವ ಭರವಸೆಯನ್ನೂ ನೀಡಿದ್ದರು. ಆದರೆ ಫಲಿತಾಂಶ ಇಂದಿಗೂ ಸೊನ್ನೆ.
ಭಾರತೀಯ ಯೋಧರು ಅಂದು ಅಪರಿಮಿತ ಶೌರ್ಯವನ್ನು ಪ್ರದರ್ಶಿಸುವ ಮೂಲಕ ವಿಜಯವನ್ನು ಸುವರ್ಣ ಅಕ್ಷರಗಳಲ್ಲಿ ಬರೆದರೂ, ಆದರೆ ಸರಕಾರವು 93 ಸಾವಿರ ಖೈದಿಗಳನ್ನು ಬಿಡುಗಡೆಗೊಳಿಸುವ ಸಂದರ್ಭದಲ್ಲಿ ತನ್ನ 54 ವೀರ ಪುತ್ರರನ್ನು ಮರೆತುಬಿಟ್ಟಿತು. ಮುಂದೆಯೂ ಅದು ತನ್ನ ವೀರ ಪುತ್ರರನ್ನು ಸ್ಮರಿಸುವ, ಅವರನ್ನು ಕರೆತರುವ ಗಟ್ಟಿ ಪ್ರಯತ್ನವನ್ನು ನಡೆಸಲೇ ಇಲ್ಲ. ಸರಕಾರದಂತೆಯೇ ಜನರೂ ತಮ್ಮ ವೀರರನ್ನು ಮರೆತರು, ಆದರೆ ಕುಟುಂಬಗಳು ಮಾತ್ರ 50 ವರ್ಷಗಳಿಂದ ಹೋರಾಟವನ್ನು ನಡೆಸುತ್ತಲೇ ಇದೆ. ಮರೆಯದಿರೋಣ, ಅವರು “ಮಿಸ್ಸಿಂಗ್ 54” ಅಲ್ಲ 54 ವೀರ ಪುತ್ರರು.
They behaved as the uniform demanded from them.
Memories of their deeds they left behind.
Not fallen but surely forgotten, Our own Brothers who never came back.
Our soldiers who went missing in action
Let's remember them.#Missing54#KnowYourHeroes
@manhasvikas41 pic.twitter.com/MsU0fXZoW5— Jyoti pendse 🇮🇳 (@priority_n) December 3, 2020
✍️ #KnowYourHeros
Source: Dr (Col) Nikhil Moorchung Article on Deccan herald
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.