ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 3000 ಕ್ಕೂ ಹೆಚ್ಚು ಸಂತರು ಮತ್ತು ಗಣ್ಯರ ಸಮ್ಮುಖದಲ್ಲಿ ವಾರಣಾಸಿಯಲ್ಲಿ ಶ್ರೀ ಕಾಶಿ ವಿಶ್ವನಾಥ ಧಾಮದ 1 ನೇ ಹಂತವನ್ನು ಉದ್ಘಾಟಿಸಿದರು. ಕಾಶಿಯ ಕಾವಲುಗಾರ ಎಂದು ಕರೆಯಲ್ಪಡುವ ಕಾಲಭೈರವನ ದೇವಾಲಯಕ್ಕೆ ಮೊದಲು ಆಗಮಿಸಿದ ಪ್ರಧಾನಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಪ್ರಧಾನಮಂತ್ರಿಯವರು ಗಂಗಾ ನದಿಯಿಂದ ಪವಿತ್ರ ಗಂಗಾಜಲವನ್ನು ಪಡೆದು ಕಾಶಿ ವಿಶ್ವನಾಥ ಕಾರಿಡಾರ್ ಮೂಲಕ ಶ್ರೀ ಕಾಶಿ ವಿಶ್ವನಾಥ ಧಾಮವನ್ನು ತಲುಪಿದರು. ಸಂಜೆ ರೋ-ರೋ ನೌಕೆಯಲ್ಲಿ ಪ್ರಧಾನಮಂತ್ರಿಯವರು ಗಂಗಾ ಆರತಿಗೆ ಸಾಕ್ಷಿಯಾಗಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, “ಕಾಶಿ ನಮ್ಮ ಆಧ್ಯಾತ್ಮಿಕ ಆತ್ಮದ ಸಂಕೇತವಾಗಿದೆ. ಇದು ಭಾರತದ ಪ್ರಾಚೀನತೆ, ಸಂಪ್ರದಾಯಗಳ ಪ್ರತೀಕ. ಭಾರತದ ಶಕ್ತಿ, ಚಲನಶೀಲತೆ’’ ಎಂದರು.
“ಕಾಶಿಯನ್ನು ಪ್ರವೇಶಿಸಿದ ಕೂಡಲೇ ಎಲ್ಲ ಬಂಧನಗಳಿಂದ ಮನುಷ್ಯ ಮುಕ್ತನಾಗುತ್ತಾನೆ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ. ವಿಶ್ವೇಶ್ವರನ ಆಶೀರ್ವಾದ, ನಾವು ಇಲ್ಲಿಗೆ ಬಂದ ತಕ್ಷಣ ನಮ್ಮ ಅಂತರಂಗವನ್ನು ಜಾಗೃತಗೊಳಿಸುವ ಅಲೌಕಿಕ ಶಕ್ತಿ” ಎಂದರು.
ʼಹರ್ ಹರ್ ಮಹಾದೇವ್ʼ ಉದ್ಘಾರದೊಂದಿಗೆ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಪ್ರಧಾನಿಯವರ ಮಾರ್ಗದರ್ಶನ ಮತ್ತು ಪ್ರೇರಣೆಯಿಂದ ಈ ಮಂಗಳಕರ ದಿನ ಬಂದಿದೆ ಎಂದು ಹೇಳಿದರು. ಈ ಹಿಂದೆ ಮಹಾರಾಣಿ ಅಹಲ್ಯಾ ಬಾಯಿ ಹೋಳ್ಕರ್ ಅವರು ಕಾಶಿಯನ್ನು ಪುನರ್ನಿರ್ಮಿಸಿದ್ದರು ಎಂದು ಅವರು, ಮಹಾತ್ಮಾ ಗಾಂಧೀಜಿ ಅವರು ನಗರಕ್ಕೆ ಭೇಟಿ ನೀಡಿದಾಗ ಕಾಶಿಯನ್ನು ಸ್ವಚ್ಚಗೊಳಿಸುವ ಕನಸು ಕಂಡಿದ್ದರು, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ನನಸು ಮಾಡಿದ್ದಾರೆ ಎಂದರು.
ಶ್ರೀ ಕಾಶಿ ವಿಶ್ವನಾಥ ಧಾಮದ ಮೊದಲ ಹಂತವನ್ನು ಸುಮಾರು 339 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಯೋಜನೆಯು 5 ಲಕ್ಷ ಚದರ ಅಡಿಗಳಷ್ಟು ಬೃಹತ್ ಪ್ರದೇಶದಲ್ಲಿ ಹರಡಿದೆ. ಆದರೆ ಹಿಂದಿನ ಆವರಣವು ಕೇವಲ 3000 ಚದರ ಅಡಿಗಳಿಗೆ ಸೀಮಿತವಾಗಿತ್ತು.
ಕಾಶಿ ವಿಶ್ವನಾಥ ಧಾಮವನ್ನು ಪ್ರಧಾನಿ ನರೇಂದ್ರ ಮೋದಿಯವರ ಮೇಲ್ವಿಚಾರಣೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮಾರ್ಚ್ 2019 ರಲ್ಲಿ ಪ್ರಧಾನ ಮಂತ್ರಿಗಳು ಕಾಶಿ ವಿಶ್ವನಾಥ ಧಾಮಕ್ಕೆ ಅಡಿಪಾಯವನ್ನು ಹಾಕಿದರು. ಈ ಯೋಜನೆಯು ಕಾಶಿ ವಿಶ್ವನಾಥ ದೇವಾಲಯಕ್ಕೆ ಗಂಗಾ ಘಾಟ್ಗಳ ನೇರ ಸಂಪರ್ಕವನ್ನು ಒದಗಿಸುತ್ತದೆ. ಯೋಜನೆಯ 1 ನೇ ಹಂತದಲ್ಲಿ ಒಟ್ಟು 23 ಕಟ್ಟಡಗಳನ್ನು ಉದ್ಘಾಟಿಸಲಾಗಿದೆ.
ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಯಾತ್ರಿ ಸುವಿಧಾ ಕೇಂದ್ರಗಳು, ಪ್ರವಾಸಿ ಸೌಲಭ್ಯ ಕೇಂದ್ರ, ವೈದಿಕ ಕೇಂದ್ರ, ಸಿಟಿ ಮ್ಯೂಸಿಯಂ, ವೀಕ್ಷಣೆ ಗ್ಯಾಲರಿ, ಫುಡ್ ಕೋರ್ಟ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ದಿವ್ಯಾಂಗರಿಗೆ ಮತ್ತು ವೃದ್ಧರಿಗೆ ಇಳಿಜಾರು, ಎಸ್ಕಲೇಟರ್ಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ಮೂಲಕ ಸುಲಭವಾಗಿ ಪ್ರವೇಶಿಸಲು ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.