“ನಮಃ ತುಳಸೀ ಕಲ್ಯಾಣಿ, ನಮೋ ವಿಷ್ಣುಪ್ರಿಯೆ ಶುಭೇ ” ಪ್ರತಿದಿನವೂ ತುಳಸೀ ಮಾತೆಗೆ ಕೈ ಮುಗಿಯದಿರುವ ಮನೆಗಳೇ ಇರಲಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ತುಳಸಿಯು ಅತ್ಯಂತ ಮಹತ್ವವಾದ ಪಾತ್ರವನ್ನು ಹೊಂದಿದೆ. ತುಳಸೀವನವು ಹಬ್ಬಿರುವಲ್ಲಿ ಹರಿಯು ನೆಲೆಸುತ್ತಾನೆ ಎಂಬ ನಂಬಿಕೆಯನ್ನು ನಾವೆಲ್ಲರೂ ಹೊಂದಿದ್ದೇವೆ. ತುಳಸಿಯಲ್ಲಿ ಲಕ್ಷ್ಮೀಯು ನೆಲೆಸಿದ್ದಾಳೆಂದು ನಮ್ಮ ಹಿರಿಯರ ನಂಬಿಕೆ. ತುಳಸಿಯನ್ನು ಹಲವಾರು ರೀತಿಯ ಆಯುರ್ವೇದ ಔಷಧಿಗಳಲ್ಲಿಯೂ ಬಳಸಲಾಗುತ್ತಾ ಇದೆ. ಇದರಲ್ಲಿ ಇರುವಂತಹ ಔಷಧಿಯ ಗುಣಗಳು ದೇಹಕ್ಕೆ ಒಳ್ಳೆಯದು ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.
ತುಳಸಿ ಎಲೆಗಳಿಂದ ಒತ್ತಡ ನಿವಾರಣೆ :
ನಮ್ಮ ಸುತ್ತಮುತ್ತಲಿನ ವಾತಾರಣದಲ್ಲಿರುವ ಕೆಲವೊಂದು ಹಾನಿಕಾರಕ ವಸ್ತುಗಳಿಂದ ದೇಹವು ನಮ್ಮ ಸುರಕ್ಷಿತವಾಗಿಡಲು ಸಹಕಾರಿ. ಆದರೆ ದೀರ್ಘಕಾಲ ಮಾನಸಿಕ ಮತ್ತು ದೈಹಿಕ ಒತ್ತಡಗಳಿಂದ ಬೊಜ್ಜು, ಏಕಾಗ್ರತೆ ಮತ್ತು ನೆನೆಪಿನ ಶಕ್ತಿಯ ತೊಂದರೆ, ಪ್ರತಿರೋಧಕ ಶಕ್ತಿ ಕಡಿಮೆಯಾಗುವುದು, ಎಲುಬು ದುರ್ಬಲವಾಗುವುದು, ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದು ಮತ್ತು ಹೃದಯದ ಕಾಯಿಲೆಗಳು ಬರಬಹುದು. ಆದರೆ ತುಳಸಿ ಚಹಾ ಕುಡಿಯುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ತುಳಸಿಯಲ್ಲಿ ಶಮನಕಾರಿ ಮತ್ತು ಒತ್ತಡ ನಿವಾರಣೆ ಮಾಡುವಂತಹ ಗುಣಗಳು ಇವೆ. ಆದ್ದರಿಂದ ಹೆಚ್ಚಿನ ಒತ್ತಡದ ನಿವಾರಣೆಗಾಗಿ ತುಳಸೀ ಚಾಯವನ್ನು ಬಳಸುವುದು ಇತ್ತೀಚಿನ ದಿನದಲ್ಲಿ ಸಾಮಾನ್ಯವಾಗಿದೆ.
ಕೆಮ್ಮು ಮತ್ತು ಇತರ ಶ್ವಾಸಕೋಶದ ಸಮಸ್ಯೆಗೆ ತುಳಸಿಯ ಬಳಕೆಯು ಅತ್ಯುತ್ತಮ. ತುಳಸಿಯು ಅಸ್ತಮಾ ರೋಗಿಗಳಿಗೆ ತುಂಬಾ ಪರಿಣಾಮಕಾರಿ. ಇದು ಶ್ವಾಸಕೋಶದ ದಟ್ಟಣೆ ನಿವಾರಣೆ ಮಾಡಿ ಗಾಳಿಯು ಸರಾಗವಾಗಿ ಹಾದುಹೋಗಲು ನೆರವಾಗುವುದು. ತುಳಸಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೆಮ್ಮು ಮತ್ತು ಶೀತ ನಿವಾರಿಸುವುದು. ತುಳಸಿಯು ಹೇರಳವಾಗಿ ಆಮ್ಲಜನಕವನ್ನು ಹೊರಹಾಕುವುದರಿಂದ ತುಳಸಿಯು ವಾತಾವರಣವನ್ನು ಶುದ್ದಿಗೊಳಿಸುತ್ತದೆ. ಹಲವು ಬಗೆಯ ಚರ್ಮ ರೋಗಗಳಿಗೂ ತುಳಸಿಯನ್ನು ಔಷಧವನ್ನಾಗಿ ಬಳಸಲಾಗುತ್ತದೆ. ತುಳಸಿ ಎಲೆಯೊಂದಿಗೆ ಉಪ್ಪನ್ನು ಬೆರೆಸಿ ಹಚ್ಚುವುದು ಅನೇಕ ಚರ್ಮ ರೋಗಗಳಿಗೆ ಪರಿಣಾಮಕಾರೀ ಔಷಧವಾಗಿದೆ. ಶುಚಿಗೊಳಿಸಿದ ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರಿನಲ್ಲಿ ತುಳಸಿಯನ್ನು ಹಾಕುವುದರಿಂದ ನೀರಿನಲ್ಲಿನ ಸೂಕ್ಷ್ಮ ಕ್ರಿಮಿಗಳು ನಾಶವಾಗುತ್ತವೆ. ಉದಾಹರಣೆಗೆ ಗ್ರಹಣದ ಸಂದರ್ಭದಲ್ಲೂ ತುಳಸಿ ಎಲೆಗಳನ್ನು ಹೇರಳವಾಗಿ ಬಳಸಲಾಗುತ್ತದೆ.
ಪ್ರತಿ ದಿನ 5 ತುಳಸಿ ಎಲೆಯನ್ನು ನೀರಿನೊಂದಿಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಬುದ್ಧಿಶಕ್ತಿ ಹಾಗೂ ಸ್ಮರಣಶಕ್ತಿ ಹೆಚ್ಚುತ್ತದೆ. ಹಲ್ಲು ನೋವಿದ್ದರೆ 2 ರಿಂದ 4 ತುಳಸಿ ಎಲೆ ಜತೆಗೆ 2ರಿಂದ 3 ಕಾಳು ಮೆಣಸನ್ನು ಸೇರಿಸಿ ಜಜ್ಜಿ ಮಾತ್ರೆಗಳನ್ನು ಮಾಡಿ. ನೋವಿರುವ ಹಲ್ಲಿನ ನಡುವೆ ಇಟ್ಟುಕೊಂಡರೆ ನೋವು ತಕ್ಷ ಣ ಮಾಯವಾಗುತ್ತದೆ. ತುಳಸಿಯ ಎಲೆ, ಕಾಂಡ, ಬೇರು, ಹೂವು ಎಲ್ಲವನ್ನು ಒಣಗಿಸಿ ಪುಡಿ ಮಾಡಿ. ಆ ಪುಡಿಯನ್ನು 2 ರಿಂದ 5 ಗ್ರಾಂ ಹಾಲಿನ ಜತೆ ನಿಯಮಿತವಾಗಿ ಸೇವಿಸಿದರೆ ಸಂಧಿಗಳ ನೋವು ಕಡಿಮೆಯಾಗುತ್ತದೆ. ಗಂಟಲು ರೋಗ, ಬಾಯಿ ರೋಗ ಮತ್ತು ಹಲ್ಲಿನ ಸಮಸ್ಯೆ ಇದ್ದಲ್ಲಿ ತುಳಸಿ ರಸದ ಜತೆ ಅರಿಶಿನ ಮತ್ತು ಉಪ್ಪನ್ನು ಸೇರಿಸಿ ನಿಯಮಿತವಾಗಿ ಬಾಯಿ ಮುಕ್ಕಳಿಸಿದರೆ, ಗಂಟಲು, ಬಾಯಿ ಮತ್ತು ಹಲ್ಲಿನ ಸಮಸ್ಯೆಗಳು ಗುಣವಾಗುತ್ತದೆ.
ಸಂಸ್ಕೃತ ಭಾಷೆಯಲ್ಲಿ ತುಲಸಿ, ಸುಲಭಾ, ಸುರನಾ, ಬಹುಮಂಜರೀ, ವಿಷ್ಣುಪ್ರಿಯಾ, ಪಾವನೀ ಹೀಗೆ ಅನೇಕ ಹೆಸರುಗಳಲ್ಲಿ ಕರೆಯಲ್ಪಡುವ ತುಳಸಿಯು ಭಾರತೀಯ ಪರಂಪರೆಯ ಬಹುಮುಖ್ಯ ಭಾಗವಾಗಿದೆ. ಗತಿಸಿದ ಪಿತೃವಿನ ಶ್ರಾದ್ಧದಲ್ಲಿ ತುಳಸಿಯನ್ನು ಬಳಸಲಾದರೆ, ಭಗವಂತನಿಗೆ ನೈವೇದ್ಯವನ್ನು ಅರ್ಪಿಸಲೂ ತುಳಸಿಯು ಅತ್ಯವಶ್ಯಕ. ಕಾರ್ತಿಕ ಮಾಸದಲ್ಲಿ ತುಳಸಿಗೆ ನಮಸ್ಕರಿಸುವುದರಿಂದ ಪಾಪಗಳು ನಶಿಸುತ್ತವೆ ಎಂಬ ನಂಬಿಕೆಯಿದೆ. ಯುರೋಪಿನಲ್ಲಿ, ತುಳಸಿಯನ್ನು ಸತ್ತವರ ಕೈಯಲ್ಲಿರಿಸಿ ಮುಂದಿನ ಲೋಕಕ್ಕೆ ಅವರ ಸುರಕ್ಷಿತ ಪ್ರಯಾಣವನ್ನು ಖಾತ್ರಿಪಡಿಸಲಾಗುತ್ತದೆ. ಭಾರತದಲ್ಲಿ, ಮರಣಶಯ್ಯೆಯಲ್ಲಿರುವವರ ಬಾಯಿಯಲ್ಲಿರಿಸಿದರೆ ಅವರು ದೇವರ ಪಾದವನ್ನು ಸೇರುವರೆಂದು ಹೇಳಲಾಗುತ್ತದೆ. ಪುರಾತನ ಈಜಿಪ್ಷಿಯನ್ನರು ಹಾಗು ಪುರಾತನ ಗ್ರೀಕರು, ಇದು ಮೃತ್ಯುವನ್ನಪುವ ವ್ಯಕ್ತಿಗೆ ಸ್ವರ್ಗದ ಮಾರ್ಗವನ್ನು ತೋರುತ್ತದೆಂದು ನಂಬುತ್ತಾರೆ.
ವಿಷ್ಣುವಿನ ಅರ್ಚನೆಗೆ ಪ್ರಧಾನವಾದ ಸಾಧನವಾಗಿದೆ ತುಳಸಿ. ಗೋಪಿ ಚಂದನವಿಲ್ಲದಿರುವಾಗ ಆಸ್ಥಾನದಲ್ಲಿ ತುಳಸಿ ದಳವನ್ನು ಉಪಯೋಗಿಸಬಹುದೆಂದು ಸ್ಮೃತಿಗಳು ಸಾರುತ್ತವೆ. ಅಮೃತ ಪ್ರಾಪ್ತಿಗಾಗಿ ದೇವತೆಗಳು-ಅಸುರರು ಕ್ಷೀರಸಾಗರವನ್ನು ಮಥಿಸುವ ಸಂದರ್ಭದಲ್ಲಿ ಸಾಕ್ಷಾತ್ ನಾರಾಯಣ ಧನ್ವಂತರಿಯ ರೂಪದಿಂದ ಸುಧಾಕಮಂಡಲವನ್ನು ಧರಿಸಿ ಬರುತ್ತಾನೆ. ದೇವತೆಗಳಿಗೆ ಅಮೃತವನ್ನು ಬಡಿಸುವ ಆನಂದ ಧನ್ವಂತರಿಯ ಕಣ್ಣುಗಳಲ್ಲಿ ಹರಿದಾಡಿತು. ಆ ಆನಂದ ಅಶ್ರುಗಳಾಗಿ ಅಮೃತ ಕಳಸದಲ್ಲಿ ಉದುರಿದವು. ಆಗಲೇ ತುಳಸಿ ಸಸ್ಯ ಹುಟ್ಟಿತು ಎಂದು ಪುರಾಣದಲ್ಲಿ ಉಲ್ಲೇಖವಿದೆ. ‘ಯಾವ ವ್ಯಕ್ತಿ ತುಳಸಿಯ ಸ್ಮರಣಾದಿಗಳನ್ನು ಮಾಡಿ ಮೃತರಾಗಿರುತ್ತಾರೋ ಅವರು ಸ್ವರ್ಗಾದಿಲೋಕದಲ್ಲಿ ಶೋಭಾಯಮಾನರಾಗಿ ಇರುತ್ತಾರೆ’ ಎಂಬ ಅರ್ಥವಿದೆ.ತುಳಸೀ ಸಸ್ಯದಲ್ಲಿ ತ್ರಿಮುರ್ತಿಗಳಾದ ಬ್ರಹ್ಮ, ವಿಷ್ಣು, ರುದ್ರಾದಿ ದೇವತೆಗಳು, ಲಕ್ಷ್ಮೀ, ಸರಸ್ವತಿ, ಗಾಯತ್ರಿ, ಉಮಾದೇದೇವಿ, ಶಚೀದೇವಿ, ಇಂದ್ರ, ಅಗ್ನಿ, ಯಮ, ವರುಣ, ವಾಯು, ಕುಬೇರ, ಆದಿತ್ಯಾದಿಗ್ರಹದೇವತೆಗಳು, ವಿಶ್ವೇದೇವತೆಗಳು, ಅಷ್ಟವಸ್ತುಗಳು, ಚತುರ್ಧಶಮನುಗಳು, ದೇವರ್ಷಿಗಳು, ವವಿದ್ಯಾದರರು, ಗಂಧರ್ವರು, ಸಿದ್ಧರು, ಅಪ್ಸರೆಯರು ಸೇರಿದಂತೆ ಇನ್ನಿತರ ದೇವತೆಗಳ ಪತ್ನಿಯರು ತುಳಸಿ ಪುಷ್ಪದಲ್ಲಿ ಸನ್ನಿಹಿತರಾಗಿರುತ್ತಾರೆ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.