ಬೆಳ್ತಂಗಡಿ : ಆರೋಪಿಯ ಪರವಾಗಿರುವ ಪೋಲಿಸರ ಬಗ್ಗೆ, ದಲಿತರ ಜಮೀನನನ್ನು ದಲಿತರಿಗೇ ಹಂಚದಿರುವ ವಿಷಯವಾಗಿ, ಕುಡಿಯುವ ನೀರಿನ ಕುರಿತು ಹಾಗೂ ಅಕ್ರಮ ಮದ್ಯ ಮಾರಾಟದ ವಿಚಾರವಾಗಿ ತೀವ್ರ ಆಕ್ರೋಶ, ಅಸಮಾಧಾನ ಗುರುವಾರ ನಡೆದ ಪರಿಶಿಷ್ಠ ಜಾತಿ-ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಕಂಡು ಬಂತು.
ಸಭೆ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಸುಂದರ ಮಲೆಕುಡಿಯ ಅವರ ಕೈ ಕಡಿದ ಪ್ರಕರಣದಲ್ಲಿ ಬೆಳ್ತಂಗಡಿ ಪೋಲೀಸರು ಆರೋಪಿಗಳ ಪರವಾಗಿದ್ದಾರೆ. ಆಸ್ಪತ್ರೆಯಲ್ಲಿರುವ ಸುಂದರ ಅವರ ವಿರುದ್ದವೇ ತಲೆಮರೆಸಿಕೊಂಡಿರುವ ಆರೋಪಿ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ. ಇದು ಆರೋಪಿಗಳನ್ನು ರಕ್ಷಿಸುವ ತಂತ್ರದ ಭಾಗವಾಗಿದೆ ಇದಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನೆರವಾಗುತ್ತಿದ್ದಾರೆ ಎಂದು ಶೇಖರ ಎಲ್ ಆರೋಪಿಸಿದರು ಅದಕ್ಕೆ ಸಂಜೀವ ಆರ್, ವಸಂತ ಬಿ ಕೆ. ಸುಧಾಕರ ಕೋಲೋಡಿ ಸೇರಿದಂತೆ ಹಲವರು ಧ್ವನಿಗೂಡಿಸಿದರು. ಆರೋಪಿಗಳನ್ನು ರಕ್ಷಿಸುತ್ತಿರುವ ಅಧಿಕಾರಿಗಳು ತಾಲೂಕಿಗೆ ಬೇಡ. ಅವರ ವಿರುದ್ದ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದರು. ಧಾಳಿಗೊಳಗಾದ ಸುಂದರ ಮಲೆಕುಡಿಯ ಹಾಗು ಅವರ ಕುಟುಂಬದ ವಿರುದ್ದ ದಾಖಲಾಗಿರುವ ಪ್ರಕರಣವನ್ನು ಕೂಡಲೆ ಹಿಂಪಡೆಯುವಂತೆ ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.
ತಾಲೂಕಿನಲ್ಲಿರುವ ದಲಿತರಿಗೆ ಮೀಸಲಿರಿಸಲಾಗಿರುವ ಜಮೀನನ್ನು ದಲಿತರಿಗೆ ಹಂಚುವಂತೆ ವರ್ಷಗಳಿಂದ ಹೇಳುತ್ತಾ ಬರುತ್ತಿದ್ದೇವೆ. ಆದರೆ ಇನ್ನೂ ಕಂದಾಯ ಇಲಾಖೆ ಅದನ್ನು ಹಂಚುವ ಕಾರ್ಯವನ್ನು ಮಾಡುತ್ತಿಲ್ಲ. ಜಮೀನು ಅಕ್ರಮವಾಗುತ್ತಿದೆ. ಇತರರಿಗೆ ಅಕ್ರಮ ಸಕ್ರಮ ಯೋಜನೆಯಲ್ಲಿ ಹಂಚಲಾಗುತ್ತಿದೆ ಎಂದು ಚಂದು ಎಲ್ ಸಂಜೀವ ಮತ್ತಿತರರು ಆರೋಪಿಸಿದರಲ್ಲದೆ ಪ್ರತಿ ಸಭೆಯಲ್ಲಿಯೂ ಕೇವಲ ಭರವಸೆಗಳನ್ನು ಮಾತ್ರ ನೀಡಲಾಗುತ್ತಿದೆ. ಯಾವಾಗ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿ ಎಂದರು.
ಕೊಯ್ಯೂರು ಗ್ರಾಮದಲ್ಲಿ ದಲಿತರ ಕಾಲೋನಿಯ ಹೆಸರಿನಲ್ಲಿ ಬೇರೆಡೆಗೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ವೆಂಕಣ್ಣ ಕೊಯ್ಯೂರು ಒತ್ತಾಯಿಸಿದರು. ಗೋಪಾಲಗೌಡರು ಅಕ್ರಮವಾಗಿ ಇರಿಸಿಕೊಂಡಿರು ಜಮೀನಿನ ಅಳತೆಯನ್ನು ಕೂಡಲೆ ಮಾಡಬೇಕು ಎಂಬ ಒಕ್ಕೊರಲ ಬೇಡಿಕೆಯೂ ಸಭಯಲ್ಲಿ ಕೇಳಿ ಬಂತು. ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದರು. ನೆರಿಯದಲ್ಲಿ ಮೂಲನಿವಾಸಿಗಳ ಜಮೀನಿನ ಅಳತೆ ಕಾರ್ಯ ಪೂರ್ಣಗೊಂಡಿದ್ದು ಅವರಿಗೆ ಕೂಡಲೆ ಹಕ್ಕು ಪತ್ರ ವಿತರಿಸುವುದಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರು.
ತಾಲೂಕಿನ ಹಲವಾರು ದಲಿತ ಕಾಲೋನಿಗಳಲ್ಲಿ ಕುಡಿಯುವ ನೀರಿನ ವ್ಯವಸ್ತೆ ಸರಿಯಾಗಿರದ ವಿಚಾರ ಚರ್ಚೆಗೆ ಬಂತು ಕಳೆದ ಬೇಸಗೆಯಲ್ಲಿ ಈ ವಿಚಾರಗಳನ್ನು ಅಧಿಕಾರಿಗಳ ಮುಂದಿಡಲಾಗಿದ್ದರೂ ಇನ್ನೂ ಪರಿಹಾರ ಕಾಣದಿರುವುದು ಅಧಿಕಾರಿಗಳು ದಲಿತರ ಬಗ್ಗೆ ಹೊಂದಿರುವ ತಾರತಮ್ಯವನ್ನು ತೋರಿಸುತ್ತದೆ ಎಂದು ಜನರು ಆರೋಪಿಸಿದರು. ಇದನ್ನು ಪರಿಶೀಲಿಸಿ ಪರಿಹಾರ ಒದಗಿಸುವ ಭರವಸೆ ನೀಡಲಾಯಿತು.
ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣಹಾಕಿ: ತಾಲೂಕಿನಾದ್ಯಂತ ಅಕ್ರಮ ಮದ್ಯಮಾರಾಟ ನಿರಂತರವಾಗಿ ನಡೆಯುತ್ತಿದೆ. ಶಾಲೆಗಳ ಸಮೀಪವೆ ಮದ್ಯಮಾರುತ್ತಿದ್ದಾರೆ ಅಬಕಾರಿ ಇಲಾಖೆಗೆ ಮಾಮೂಲಿ ಇದೆ ಎಂದು ಮಾರುವವರೇ ಹೇಳುತ್ತಿದ್ದಾರೆ ಎಂದು ಸಭೆಯಲ್ಲಿ ರಮೇಶ್ ಕೊಯ್ಯೂರು, ವೆಂಕಣ್ಣ ಮತ್ತಿತರರು ಆರೋಪಿಸಿದರು. ಅಕ್ರಮ ಮಾರಾಟಗಾರರಿಗೆ ಇಲಾಖೆಯೆ ಬೆಂಬಲ ನೀಡುತ್ತಿದ್ದಾರೆ. ಇನ್ನೂ ಇದನ್ನು ನಿಲ್ಲಿಸದಿದ್ದರೆ ಎಲ್ಲರಿಗೂ ಮಾರಲು ಅವಕಾಶ ನೀಡಿ ಎಂದು ಜನರು ಒತ್ತಾಯಿಸಿದರು.
ಸಮಾಜ ಕಲ್ಯಾಣ ಇಲಾಖಾಧಿಕಾರಿ ದಲಿತರ ಕಾಲೋನಿಗಳಿಗೆ ಯಾಕೆ ಹೋಗುತ್ತಿಲ್ಲ ಅವರಿಗೆ ದಲಿತರ ಸಮಸ್ಯೆಗಳ ಬಗ್ಗೆ ತಿಳಿದೇ ಇಲ್ಲ. ತಮಗಿರುವ ವಾಹನವನ್ನು ತಮ್ಮ ಖಾಸಗಿ ಉಪಯೋಗಕ್ಕಾಗಿ ಬಳಸುತ್ತಿದ್ದಾರೆ ಎಂಬ ಆರೋಪವೂ ಸಭೆಯಲ್ಲಿ ಕೇಳಿ ಬಂತು.ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತು ಕಾರ್ಯನಿರ್ವಹಣಧಿಕಾರಿ ಮಹಂತೇಶ್ವಹಿಸಿದ್ದರು. ಜಿಲ್ಲಾ ಪಂಚಾಯತು ಸದಸ್ಯರುಗಳಾದ ಕೊರಗಪ್ಪ ನಾಯ್ಕ, ಸಿ ಕೆ ಚಂದ್ರಕಲಾ, ತಾಪಂ ಸದಸ್ಯೆ ವಿಮಲಾ, ಉಪತಹಶೀಲ್ದಾರ್ ಚೆನ್ನಪ್ಪಗೌಡ. ಸಮಾಜ ಕಲ್ಯಾಣಧಿಕಾರಿ ಮೋಹನ್ ಉಪಸ್ಥಿತರಿದ್ದರು.
ನೆರಿಯದಲ್ಲಿ ಕೈ ಕತ್ತರಿಸಿದ ಪ್ರಕರಣ ನಡೆಯುವುದರ ಹಿಂದಿನ ದಿನ ನೆರಿಯದಲ್ಲಿ ಪರಿಶಿಷ್ಠ ಜಾತಿ ಪಂಗಡದ ಕುಂದುಕೊರತೆ ಸಭೆ ನಡೆದಿತ್ತು. ಸಭೆಯಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಅವರು ದಲಿತರಿಗೆ ಮಾಹಿತಿ ನೀಡುವ ಬದಲು ದಲಿತ ದೌರ್ಜನ್ಯದಂತಹ ಪ್ರಕರಣಗಳನ್ನು ದಾಖಲಿಸಬಾರದು ಎಂದು ಎಂಬಿತ್ಯಾದಿಯಾಗಿ ಎಲ್ಲರ ಮುಂದೆ ಉಪದೇಶ ಮಾಡಿದ್ದರು. ಇದಾದ ಬೆನ್ನಲ್ಲಿಯೆ ಸುಂದರ ಮಲೆಕುಡಿಯ ಅವರ ಕೈ ಕತ್ತರಿಸಿದ ಘಟನೆ ನಡೆದಿದೆ ಇದು ಪೋಲೀಸರ ವರ್ತನೆಯ ಬಗ್ಗೆ ಅನುಮಾನ ಮೂಡಿಸಲು ಕಾರಣವಾಗಿದೆ.-ಸುಧಾಕರ ಮಲೆಕುಡಿಯ, ಕೋಲೋಡಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.