ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ಹಾಲಕ್ಕಿ ಸಮುದಾಯದ ತುಳಸಿ ಗೌಡ ಅವರ ಪರಿಸರದ ಪ್ರೀತಿ ಮಾಡಿದ ಸಾಧನೆ ಅಪಾರ. ವೃಕ್ಷಮಾತೆಯಾದ ಆಕೆ ಬೆಳೆಸಿದ ಮರಗಳು ಒಂದಲ್ಲಾ, ಎರಡಲ್ಲಾ, ಲಕ್ಷಗಟ್ಟಲೇ. ಹೊನ್ನಳ್ಳಿ ಗ್ರಾಮದ ನಾರಾಯಣ ಹಾಗೂ ನೀಲಿ ದಂಪತಿಗೆ 1944 ರಲ್ಲಿ ಜನಿಸಿದವರು. ಬಡತನದ ಜತೆಗೆ ತನ್ನ ಎರಡನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ಶಾಲೆ ಮೆಟ್ಟಿಲನ್ನು ಏರದೆ ತಾಯಿಯ ಜೊತೆ ಕೂಲಿ ಕೆಲಸಕ್ಕೆ ತೆರಳಲು ಪ್ರಾರಂಭಿಸಿದ್ದರು. ಗೋವಿಂದೇ ಗೌಡ ಎನ್ನುವವರ ಜತೆ ಬಾಲ್ಯ ವಿವಾಹವಾದ ತುಳಸಿ ಗೌಡ, ಚಿಕ್ಕವಯಸ್ಸಿನಲ್ಲಿಯೇ ಗಂಡನನ್ನೂ ಕಳೆದುಕೊಂಡು ವಿಧವೆಯಾದರು.
ಹುಟ್ಟಿನಿಂದ ಸಹಜವಾಗಿ ಪ್ರಕೃತಿಯ ಬಗೆಗೆ ಕಾಳಜಿ ಪ್ರೀತಿ ಹುಟ್ಟಿತ್ತು. ಊರಿನವರ ಜೊತೆ ಕಟ್ಟಿಗೆ ತರುವ ಕೆಲಸವನ್ನು ಮಾಡಿ ಪ್ರತಿ ದಿನವೂ 5 ರಿಂದ 6 ರೂಪಾಯಿ ದುಡಿಯುತ್ತಿದ್ದ ತುಳಸಿ ಅವರಿಗೆ ಅರಣ್ಯ ಇಲಾಖೆ ಬೀಜಗಳನ್ನು ಶೇಖರಣೆ ಮಾಡಿ ಸಸಿಗಳನ್ನಾಗಿ ಮಾಡಿಕೊಡುವ ಕೆಲಸವನ್ನು ನೀಡಿತ್ತು. ಹೀಗೆ ಪ್ರೀತಿಯಿಂದ ಬೀಜಗಳನ್ನು ತಂದು ಸಸಿ ಮಾಡುವ ಕೆಲಸ ಪ್ರಾರಂಭಿಸಿದರು ಕೇವಲ 1.25 ಪೈಸೆ ದಿನದ ಕೂಲಿಗೆ ಈ ಕೆಲಸವನ್ನ ಮಾಡುತ್ತಿದ್ದ ತುಳಸಿ ಗೌಡ ಕಡಿಮೆ ಕೂಲಿಗೆ ಸಸಿ ಮಾಡುವ ಕೆಲಸ ಬೇಡ ಎಂದು ಎಲ್ಲರೂ ಹೇಳಿದರು. ಆದರೆ ತಮ್ಮ ಪರಿಸರ ಕಾಳಜಿಯಿಂದ ಕೆಲಸವನ್ನು ಮಾತ್ರ ನಿಲ್ಲಿಸಲೇ ಇಲ್ಲ.
ಸುಮಾರು ವರ್ಷಕ್ಕೆ 30 ಸಾವಿರ ಗಿಡಗಳ ನಾಟಿ ಇದರೊಂದಿಗೆ ತಾನು ಬೆಳೆಸಿದ ಸಸಿಗಳನ್ನು ಹೊನ್ನಳ್ಳಿ ಭಾಗದ ಅರಣ್ಯ ಪ್ರದೇಶದಲ್ಲಿ, ಸರ್ಕಾರಿ ಕಚೇರಿ, ಶಾಲೆ, ಮನೆಗಳ ಆವರಣ, ರಸ್ತೆಗಳ ಪಕ್ಕದಲ್ಲಿ ನೆಡಲು ಪ್ರಾರಂಭಿಸಿದ್ದರು. ವರ್ಷಕ್ಕೆ ಸುಮಾರು 30 ಸಾವಿರ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯವನ್ನು ನಿರಂತರ ಮಾಡುತ್ತಾ ಬಂದರು. ಈಕೆ ನೆಟ್ಟು ಪೋಷಿಸಿದ ಸಸಿಗಳು ಇಂದು ಬೆಳೆದು ಹೆಮ್ಮರವಾಗಿ ಸಾವಿರಾರು ಜನರಿಗೆ ಗಾಳಿ ನೆರಳನ್ನು ಕೊಡುವ ಕೆಲಸ ಮಾಡುತ್ತಿವೆ. ಆಕೆ ನೆಟ್ಟ ಗಿಡ ನಮ್ಮ ಮುಂದಿನ ಪೀಳಿಗೆಗೂ ಸಹಾಯವಾಗಬಲ್ಲದು. ಇಂತಹ ಅಪರೂಪದ ಕಾಯಕದಲ್ಲಿ ತೊಡಗಿಸಿಕೊಂಡಿರುವ ವೃಕ್ಷಮಾತೆ ತುಳಸಿ ಗೌಡ.
ವೃಕ್ಷಮಾತೆ ಎನ್ನಲು ಮತ್ತೊಂದು ಕಾರಣ ತನ್ನ ಮಕ್ಕಳಂತೆ ಕಾಣುವ ಗಿಡ ಮರಗಳ ಬಗ್ಗೆಯೂ ಪರಿಸರ ವಿಜ್ಞಾನಿಗಿಂತ ಹೆಚ್ಚು ತಿಳಿದಿದ್ದಾರೆ. ಯಾವ ಯಾವ ಗಿಡಗಳನ್ನು ಯಾವ ಯಾವ ಋತುವಿನಲ್ಲಿ ನೆಡಬೇಕು. ಎಷ್ಟು ನೀರು ಗೊಬ್ಬರ ಬೇಕು. ಯಾವ ಗಿಡಗಳು ಯಾವ ಸಂದರ್ಭದಲ್ಲಿ ಹೂವು ಹಣ್ಣು ಬಿಡುತ್ತವೆ. ಹೀಗೆ ಅರಣ್ಯದಲ್ಲಿನ ಸುಮಾರು 300 ಕ್ಕೂ ಹೆಚ್ಚು ಪ್ರಭೇದದ ಮರಗಳ ಬಗ್ಗೆ ಇವರ ಅಂಗೈಯಲ್ಲೇ ಮಾಹಿತಿ ಇದೆ. ತನ್ನ ಸುತ್ತಮುತ್ತಲೂ ಯಾರು ಮರಗಳನ್ನು ಕಡಿಯದಂತೆ ನೋಡಿಕೊಂಡಿದ್ದಾರೆ. ಕೆಲವೊಮ್ಮೆ ಅರಣ್ಯದಲ್ಲಿ ತಾನು ನೆಟ್ಟ ಮರವನ್ನು ಮರಗಳ್ಳರು ಕಡಿದಾಗ ತುಳಸಿ ಕಡಿದ ಮರವನ್ನು ಅಪ್ಪಿ ಅತ್ತ ಘಟನೆಗಳು ಸಾಕಷ್ಟಿವೆ. ಈಕೆ ಲಕ್ಷಾಂತರ ಮರಗಳನ್ನು ಬೆಳೆಸಿಯೂ ಇಂದಿಗೂ ಬೀಜದಿಂದ ಸಸಿ ಮಾಡಿ ನಂತರ ನೆಟ್ಟು ಪೋಷಿಸುವ ಕೆಲಸವನ್ನು ಮುಂದುವರೆಸಿದ್ದಾರೆ.
ತುಳಸಿ ಗೌಡರ ಪರಿಸರ ಕಾಳಜಿ ವೃಕ್ಷಗಳ ಜ್ಞಾನ ಎಲ್ಲವೂ ಇಡೀ ದೇಶಕ್ಕೆ ಮಾದರಿಯಾಗಿ ನಿಜವಾದ ಪರಿಸರ ಪ್ರೇಮಿ ಹಾಗೂ ತಾಯಿಯಾಗಿ ಮುಂದಿನ ಪೀಳಿಗೆಗೂ ನೆರವಾಗುವಂತೆ ಸಾವಿರಾರು ವೃಕ್ಷಗಳನ್ನು ಪೋಷಿಸಿ ಬೆಳೆಸಿದ ಧೀಮಂತ ಮಹಿಳೆ ಅವರ ಸಾಧನೆ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದ ಕೇಂದ್ರ ಸರ್ಕಾರದ ನಡೆ ನಿಜಕ್ಕೂ ಶ್ಲಾಘನೀಯ. ದೇಶದ ಅತ್ಯುನ್ನತ ಪ್ರಶಸ್ತಿಗಳು ಸಿಗಬೇಕಾದ, ತೆರೆಮರೆಯಲ್ಲಿ ನಿಂತು ಸದಾ ಸಮಾಜ ಸೇವೆ ಮಾಡುತ್ತಿರುವ ಎಲ್ಲಾ ಭಾರತೀಯರಿಗೆ ಸ್ಫೂರ್ತಿ ನೀಡಬಲ್ಲವರಿಗೆ ಪ್ರಶಸ್ತಿ ದೊರಕುತ್ತಿದೆ ಎಂಬುದು ಹೆಮ್ಮೆಯ ಸಂಗತಿ.
✍️ ಪ್ರಣವ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.