ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಆಕಾಂಕ್ಷೆ ಯಾರ ಜೀವನದಲ್ಲಿ ಯಾವುದೇ ಕ್ಷಣದಲ್ಲಿ ಬೇಕಾದರೂ ಸೃಜಿಸಬಹುದು. ಪರಿಸರವನ್ನು ಉತ್ತಮಗೊಳಿಸುವುದು ಸಾಮೂಹಿಕ ಜವಾಬ್ದಾರಿ ಮತ್ತು ಆ ಜವಾಬ್ದಾರಿಯನ್ನು ಎಲ್ಲಾ ಮಾನವರು ಸಮಾನವಾಗಿ ಹಂಚಿಕೊಂಡಾಗ ಪರಿಶುದ್ಧ ಭೂಮಿ ನಮ್ಮದಾಗುತ್ತದೆ. ಈ ರೀತಿಯಾಗಿ ಪರಿಸರವನ್ನು ಸರಿಪಡಿಸುವ ಮತ್ತು ಅದರ ಶುದ್ಧೀಕರಣದ ಪ್ರಕ್ರಿಯೆಗೆ ಕೊಡುಗೆ ನೀಡುತ್ತಿರುವ ರಾಜಸ್ಥಾನದ 17 ವರ್ಷದ ಯುವಕ ಆದಿತ್ಯ ಬಂಗೇರ್ ಈಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾನೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಈತ ಕೊಡುಗೆ ನೀಡುತ್ತಿದ್ದಾನೆ, ಅದೂ ಸಹ ತನ್ನ ಅಮೋಘ ಕೌಶಲ್ಯವನ್ನು ಬಳಸಿಕೊಂಡು ಈತ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುತ್ತಿದ್ದಾನೆ.
ಥ್ಯ್ರಾಶ್ ಟು ಟ್ರೆಷರ್ ಎಂಬ ಕಂಪನಿಯನ್ನು ಸ್ಥಾಪಿಸಿರುವ ಈ ಭಿಲ್ವಾರಾ ಜಿಲ್ಲೆಯ ಹುಡುಗ, ಪ್ಲಾಸ್ಟಿಕ್ ತ್ಯಾಜ್ಯವನ್ನು ಫ್ಯಾಬ್ರಿಕ್ ಆಗಿ ಪರಿವರ್ತಿಸುತ್ತಿದ್ದಾನೆ. ಕಾಂಚನ್ ಇಂಡಿಯಾ ಲಿಮಿಟೆಡ್ ಎಂಬ ಜವಳಿ ತಯಾರಿಕಾ ಉದ್ಯಮ ನಡೆಸುತ್ತಿರುವ ಕುಟುಂಬದಿಂದ ಬಂದಿರುವ ಆದಿತ್ಯ 10ನೇ ತರಗತಿಯಲ್ಲಿದ್ದಾಗ ಚಿಕ್ಕಪ್ಪನೊಂದಿಗೆ ಚೀನಾ ಪ್ರವಾಸಕ್ಕೆ ತೆರಳಿದ್ದ, ಹೊಸ ಬಟ್ಟೆಯ ಉತ್ಪಾದನಾ ತಂತ್ರಗಳನ್ನು ನೋಡುವುದು ಮತ್ತು ಅದನ್ನು ಭಾರತಕ್ಕೆ ತರುವುದು ಈ ಪ್ರವಾಸದ ಉದ್ದೇಶವಾಗಿತ್ತು. ಉದ್ದೇಶವನ್ನು ಈಡೇರಿಸುವಲ್ಲಿ ಈತನ ಪ್ರವಾಸ ಯಶಸ್ವಿಯಾಗಿದೆ. “ಬೃಹತ್ ಪ್ರಮಾಣದ ತ್ಯಾಜ್ಯವನ್ನು ಬಟ್ಟೆ ಮತ್ತು ಧರಿಸಬಹುದಾದ ವಸ್ತುಗಳನ್ನಾಗಿ ಮಾಡುವ, ಫ್ಯಾಬ್ರಿಕ್ ಆಗಿ ಪರಿವರ್ತಿಸುವ ಘಟಕವನ್ನು ನಾನು ನೋಡಿದೆ. ಭೂಮಿಗೆ ತ್ಯಾಜ್ಯವನ್ನು ಕಡಿಮೆ ಮಾಡುವುದರ ಜೊತೆಗೆ, ಈ ಪ್ರಕ್ರಿಯೆಯು ಉತ್ತಮ ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸುತ್ತದೆ ಮತ್ತು ಸ್ಥಳೀಯ ಪ್ರದೇಶಗಳಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂಬುದನ್ನು ಅರಿತುಕೊಂಡೆ ”ಎಂದು ಈಗ 12 ನೇ ತರಗತಿಯಲ್ಲಿರುವ ಆದಿತ್ಯ ಹೇಳುತ್ತಾನೆ.
ಆದಿತ್ಯ ಈ ಕಲ್ಪನೆಯಿಂದ ಆಕರ್ಷಿತನಾದ ಮತ್ತು ಚೀನಾದಿಂದ ಹಿಂದಿರುಗಿದ ತಕ್ಷಣ ಈ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿದ್ದಾನೆ. ಅವನ ಕುಟುಂಬವು ಈ ಕಲ್ಪನೆಯನ್ನು ಬೆಂಬಲಿಸಿತು ಮತ್ತು ಆದಿತ್ಯ ಕಾಂಚನ್ ಇಂಡಿಯಾ ಲಿಮಿಟೆಡ್ನಿಂದ ತನ್ನ ವ್ಯವಹಾರಕ್ಕಾಗಿ ಸೀಡ್ ಫಂಡಿಂಗ್ ಪಡೆದ. ಅವನ ಕಂಪನಿಯು ಪ್ರಸ್ತುತ ಬಟ್ಟೆಯನ್ನು ಉತ್ಪಾದಿಸುತ್ತದೆ. ಭಿಲ್ವಾರಾದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಆದಿತ್ಯ ವಿದೇಶಿ ಕಂಪನಿಯೊಂದಿಗೆ ಕೈಜೋಡಿಸಿದ್ದಾನೆ.
ಕಂಪನಿಯು ಪಿಇಟಿ-ದರ್ಜೆಯ ಪ್ಲಾಸ್ಟಿಕ್ಗಳಿಂದ ಬಾಳಿಕೆ ಬರುವ ಬಟ್ಟೆಗಳನ್ನು ಉತ್ಪಾದಿಸುತ್ತದೆ ಮತ್ತು ಅವುಗಳನ್ನು ಮಾರಾಟ ಮಾಡುತ್ತದೆ. ಈ ಪ್ಲಾಸ್ಟಿಕ್ಗಳಿಂದ ಧರಿಸಬಹುದಾದ ಮತ್ತು ಇತರ ಉತ್ಪನ್ನಗಳನ್ನು ತಯಾರಿಸಬಹುದು. ತ್ಯಾಜ್ಯವನ್ನು ಸ್ಥಳೀಯ ಮೂಲಗಳು ಮತ್ತು ಮನೆಗಳಿಂದ ಸಂಗ್ರಹಿಸಲಾಗುತ್ತದೆ ಮತ್ತು ಇದರಲ್ಲಿನ ಕಲಬೆರಕೆ ವಸ್ತುವನ್ನು ತೆಗೆದುಹಾಕಿ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ. ನಂತರ ಅದನ್ನು ಕತ್ತರಿಸಿ ಉತ್ತಮವಾದ ಪ್ಲಾಸ್ಟಿಕ್ ಫಿಲಾಮೆಂಟ್ ಆಗಿ ಕರಗಿಸಲಾಗುತ್ತದೆ, ಇದನ್ನು ಹತ್ತಿಯೊಂದಿಗೆ ಬೆರೆಸಿ ಫೈಬರ್ ಅನ್ನು ಉತ್ಪಾದಿಸಲಾಗುತ್ತದೆ.
ಜನವರಿ 2021 ರಿಂದ ಈ ಕಂಪನಿಯು ಸುಮಾರು 10,000 ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ಮೂಲನೆ ಮಾಡಲು ಸಹಾಯ ಮಾಡಿದೆ ಎಂದು ಆದಿತ್ಯ ಹೇಳಿದ್ದಾನೆ. ಈ ಹಿಂದೆ ಆದಿತ್ಯ ಪ್ರತಿ ಕಿಲೋಗ್ರಾಮ್ಗೆ ರೂ. 40 ರಂತೆ ತ್ಯಾಜ್ಯವನ್ನು ಖರೀದಿಸುತ್ತಿದ್ದ, ಅದು ಹೆಚ್ಚು ವೆಚ್ಚದಾಯಕವಾಗಿರಲಿಲ್ಲ. ಈಗ, ಕಂಪನಿಯು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಲ್ಲಿಸಲು ಬಯಸುವ ಸಾರ್ವಜನಿಕರಿಗೆ ಪೋರ್ಟಲ್ ಅನ್ನು ತೆರೆದಿದೆ.
ಈತ ತನ್ನ ಕಂಪನಿಯ ಮೂಲಕ ಹಲವಾರು ಮಂದಿಗೆ ಉದ್ಯೋಗವನ್ನು ನೀಡಿದ್ದಾನೆ, ಮಾತ್ರವಲ್ಲ ಪರಿಸರ ಸಂರಕ್ಷಣೆಯ ಕಾರ್ಯವನ್ನು ಕೂಡ ಮಾಡುತ್ತಿದ್ದಾನೆ. ಈತ ತನ್ನ ಕಾರ್ಯದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ. ಕೇಂದ್ರ ಸಚಿವ ಪಿಯುಷ್ ಗೊಯಲ್ ಅವರು ಕೂಡ ಈತನ ಬಗ್ಗೆ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
India has a sea of talent! 🇮🇳
Kudos to the 17-year-old Aditya Banger from Rajasthan for his brilliant innovation of ‘Trash to Treasure’ that converts tonnes of Plastic Waste into Fabric. pic.twitter.com/Cw5BS1HQLJ
— Piyush Goyal (@PiyushGoyal) October 27, 2021
ಪ್ಲಾಸ್ಟಿಕ್ ತ್ಯಾಜ್ಯವನ್ನು ಫ್ಯಾಬ್ರಿಕ್ ಆಗಿ ಪರಿವರ್ತಿಸುತ್ತಿರುವ ರಾಜಸ್ಥಾನದ ಆದಿತ್ಯ ಬಂಗೇರ್ ಥ್ಯ್ರಾಶ್ ಟು ಟ್ರೆಷರ್ ಎಂಬ ಕಂಪನಿಯನ್ನು ಸ್ಥಾಪಿಸಿ ಹಲವಾರು ಮಂದಿಗೆ ಉದ್ಯೋಗವನ್ನು ನೀಡಿದ್ದಾನೆ, ಮಾತ್ರವಲ್ಲ ಪರಿಸರ ಸಂರಕ್ಷಣೆಯ ಕಾರ್ಯವನ್ನು ಕೂಡ ಮಾಡುತ್ತಿದ್ದಾನೆ. ಈತ ತನ್ನ ಕಾರ್ಯದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.