ನವದೆಹಲಿ : ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಕುಮ್ಮಕ್ಕಿನಂತೆ ಭಯೋತ್ಪಾದಕರಿಗೆ ಸಹಾಯ ಮಾಡಲು ಡ್ರೋನ್ ಮೂಲಕ ಶಸ್ತ್ರಾಸ್ತ್ರ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಪೊಲೀಸರು ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಜಮ್ಮು ನಗರದ ಹೊರವಲಯದಲ್ಲಿ ಈ ಬಂಧನ ನಡೆದಿದೆ.
ಈ ಇಬ್ಬರು ಓವರ್ ಗ್ರೌಂಡ್ ವರ್ಕರ್ಸ್ (ಒಜಿಡಬ್ಲ್ಯೂ) ಗಳನ್ನು ಬಂಧಿಸಿ ವಿಚಾರಣೆಗಾಗಿ ಜಮ್ಮುವಿಗೆ ಕರೆತರಲಾಗಿದೆ ಎಂದು ವರದಿಗಳು ತಿಳಿಸಿವೆ. ಬಂಧಿತ ಪೊಲೀಸ್ ಕಾನ್ಸ್ಟೇಬಲ್ ಅನಂತನಾಗ್ನ ವೆರಿನಾಗ್ ನಿವಾಸಿ ಮತ್ತು ಆತನ ಸಹಚರ ಕಾಶ್ಮೀರ ವಿಭಾಗದ ಅನಂತನಾಗ್ ಜಿಲ್ಲೆಯ ನಿವಾಸಿ. ಪಾಕಿಸ್ಥಾನದಲ್ಲಿನ ಹ್ಯಾಂಡ್ಲರ್ ಜೊತೆ ಇಬ್ಬರೂ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಮಕ್ವಾಲ್ ಸೆಕ್ಟರ್ನಲ್ಲಿ ಡ್ರೋನ್ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಇವರು ಎಸೆದಿದ್ದರು. ಈ ಪ್ರಕರಣದಲ್ಲಿ ಇದುವರೆಗೂ ಮೂವರನ್ನು ಬಂಧಿಸಲಾಗಿದೆ.
ಎಸೆದ ಶಸ್ತ್ರಾಸ್ತ್ರಗಳನ್ನು ಭಯೋತ್ಪಾದಕರ ಅಡಗುತಾಣಕ್ಕೆ ಸಾಗಿಸುವ ಜವಾಬ್ದಾರಿಯನ್ನು ಪೊಲೀಸ್ ಕಾನ್ಸ್ಟೇಬಲ್ಗೆ ನೀಡಲಾಗಿತ್ತು. ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಯಾವುದೇ ಅವಕಾಶವನ್ನು ಪಾಕಿಸ್ಥಾನ ಕೈ ಬಿಡುವುದಿಲ್ಲ. ಅಂತರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ ಭದ್ರತಾ ಪಡೆಗಳ ಕಟ್ಟುನಿಟ್ಟಿನ ಕಣ್ಗಾವಲಿನ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ಈಗ ಡ್ರೋನ್ಗಳ ಸಹಾಯದಿಂದ ಶಸ್ತ್ರಾಸ್ತ್ರಗಳನ್ನು ಕಳುಹಿಸಲಾಗುತ್ತಿದೆ. ಅಕ್ಟೋಬರ್ 2 ರಂದು, ಮಕ್ವಾಲ್ ವಲಯದಲ್ಲಿ ಡ್ರೋನ್ನಿಂದ ಎಕೆ -47 ದಾಳಿ ರೈಫಲ್, ಮೂರು ಮ್ಯಾಗಜಿನ್, 30 ರೌಂಡ್ಸ್ ಮತ್ತು ಅಮೇರಿಕನ್ ನಿರ್ಮಿತ ಟೆಲಿಸ್ಕೋಪ್ ಹೊಂದಿರುವ ಪ್ಯಾಕೆಟ್ ಅನ್ನು ಎಸೆಯಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.