“ಶಿಕ್ಷಣವೆಂದರೆ ಪಾತ್ರೆಯನ್ನು ತುಂಬುವುದಲ್ಲ, ದೀಪವನ್ನು ಬೆಳಗುವುದು” ಎಂದು ಖ್ಯಾತ ಐರಿಷ್ ಕವಿ ಡಬ್ಲ್ಯೂ.ಬಿ ಯೀಟ್ಸ್ ಹೇಳುತ್ತಾರೆ. ಇದು ಅತ್ಯಂತ ಆಸಕ್ತಿಕರ ಚಿಂತನೆ. ಶಿಕ್ಷಣ ಎಂಬುದು ಕೇವಲ ಶಾಲೆಯಲ್ಲಿ ವಿವಿಧ ವಿಷಯಗಳನ್ನು ಅಧ್ಯಯನ ಮಾಡುವ ಮೂಲಕ ವಿದ್ಯಾರ್ಥಿಗಳು ಪಡೆಯುವ ಜ್ಞಾನವಾಗಿರಬಾರದು, ವಿದ್ಯಾರ್ಥಿಗಳಿಗೆ ಆಟವಾಡಲು ಅವಕಾಶ ನೀಡುವುದು, ರಿಸ್ಕ್ ತೆಗೆದುಕೊಳ್ಳಲು ಪ್ರೇರೇಪಿಸುವುದು, ಭರವಸೆ ತುಂಬುವುದು ಶಿಕ್ಷಣವಾಗಬೇಕು ಎಂಬುದು ಇದರ ಅರ್ಥ.
ದೊಡ್ಡವನಾದ ಮೇಲೆ ನೀನು ಏನಾಗುತ್ತೀಯ ಎಂದು ಮಕ್ಕಳನ್ನು ಕೇಳಿದರೆ, ಅವರಿಂದ ಬರುವ ಉತ್ತರ ಗಗನಯಾನಿ, ವೈದ್ಯ ಶಿಕ್ಷಕ, ವಿಜ್ಞಾನಿ, ಪೈಲೆಟ್ ಎಂಬುದಾಗಿರುತ್ತದೆ. ಆದರೆ ಎಷ್ಟು ಮಕ್ಕಳು ತಾವು ಅಂದುಕೊಂಡಂತೆ ಆಗುತ್ತಾರೆ? ಹಾಗಾದರೆ ಮನಸ್ಸಿಗೆ ಹತ್ತಿರವಾದುದರಲ್ಲಿ ಆಸಕ್ತಿ ಕಳೆದುಕೊಳ್ಳುವಂತೆ ಅವರನ್ನು ಮಾಡಿದ್ದು ಯಾವುದು? ಕಾರಣಗಳು? ಮಾಧ್ಯಮಗಳು? ಅಥವಾ ಬಹುಮುಖ್ಯವಾಗಿ ವಿಧಾನಗಳು? ಮಕ್ಕಳ ಸಾಮರ್ಥ್ಯವನ್ನು ನಾವು ಗುರುತಿಸಬೇಕು ಮತ್ತು ಅವರನ್ನು ಹೊಸ ನಾವಿನ್ಯತೆಯ ಚಿಂತಕರನ್ನಾಗಿ ಮಾಡಲು ಪ್ರೇರೆಪಿಸಬೇಕು ಎಂದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ನಂಬಿದ್ದರು. ಮಕ್ಕಳು ಸೃಜನಶೀಲ, ಕಾಲ್ಪನಿಕ ಮತ್ತು ಹೊಸತನವನ್ನು ಹೊಂದುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಅವರು ಆಗಾಗ ಹೇಳುತ್ತಿದ್ದರು. ಶಿಕ್ಷಣದಲ್ಲಿ ಸೃಜನಶೀಲತೆ ಮತ್ತು ಕಲಿಕೆಯನ್ನು ಅವರು ನಂಬಿದ್ದರು. ಬೋಧನಾ ವಿಧಾನದಲ್ಲಿ ನಾವಿನ್ಯತೆಯನ್ನು ಅವರು ನಂಬಿದ್ದರು. ಇತರರಿಗಿಂತ ಭಿನ್ನವಾಗಿರಬೇಕಾದರೆ ಭಿನ್ನವಾಗಿ ಚಿಂತಿಸಬೇಕು ಎಂದು ಅವರು ನಂಬಿದ್ದರು. “ಸೃಜನಶೀಲತೆ ಎನ್ನುವುದು ಒಂದು ಪ್ರಕ್ರಿಯೆ, ಇದರ ಮೂಲಕ ನಾವು ನಿರಂತರವಾಗಿ ಚಿಂತನೆಗಳನ್ನು ಸುಧಾರಿಸಿಕೊಳ್ಳಬಹುದು ಮತ್ತು ಕಾರ್ಯಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ತರುವ ಮೂಲಕ ವಿಭಿನ್ನ ಪರಿಹಾರವನ್ನು ಕಂಡುಕೊಳ್ಳಬಹುದು. ಸೃಜನಶೀಲತೆ ಎಂದರೆ ವಿಷಯವನ್ನು ಎಲ್ಲರಂತೆಯೇ ನೋಡುವುದು ಆದರೆ ವಿಭಿನ್ನವಾಗಿ ಯೋಚಿಸುವುದು” ಎಂದು ಹೇಳುತ್ತಿದ್ದರು.
ಇಂದು ಭಾರತ ರತ್ನ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನ, ಈ ಸಂದರ್ಭದಲ್ಲಿ ಅವರ ಚಿಂತನೆಗಳ ಬಗ್ಗೆ ನಾವು ಹೆಚ್ಚು ತಿಳಿದುಕೊಳ್ಳಬೇಕು, ವಿಶೇಷವಾಗಿ ಅವರು ಹೆಚ್ಚು ಆಸಕ್ತಿ ವಹಿಸುತ್ತಿದ್ದ ವಿಜ್ಞಾನ ಮತ್ತು ಯುವಜನತೆಯ ಬಗೆಗಿನ ಅವರ ಚಿಂತನೆಗಳ ಬಗ್ಗೆ ನಾವು ತಿಳಿದುಕೊಳ್ಳಬೇಕು. ಅಂಬಿಗನ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ಕಲಾಂ ಅವರ ಒಡಹುಟ್ಟಿದವರಲ್ಲಿ ಕಿರಿಯರು. ಆಗಾಗ ತಂದೆಯ ಕಾಯಕಕ್ಕೆ ಸಹಾಯ ಮಾಡುತ್ತಿದ್ದರು. ಅವರ ತಂದೆ ದೋಣಿಯನ್ನು ನಿರ್ಮಾಣ ಮಾಡುತ್ತಿದ್ದಾಗ ಬಾಲಕ ಕಲಾಂ ಅದನ್ನು ಆಸಕ್ತಿಯಿಂದ ನೋಡುತ್ತಿದ್ದರು, ಎಷ್ಟು ಮರದ ತುಂಡುಗಳನ್ನು ಇಟ್ಟು ದೋಣಿ ನಿರ್ಮಿಸಲಾಗಿದೆ ಎಂದು ಗಮನಿಸುತ್ತಿದ್ದರು. ಒಂದು ದಿನ ಈ ಬಾಲಕ ಕ್ಷಿಪಣಿ ಮತ್ತು ರಾಕೆಟ್ ಗಳನ್ನು ನಿರ್ಮಿಸುತ್ತಾನೆ ಎಂದು ಆಗ ಯಾರೂ ಅಂದುಕೊಂಡಿರಲಿಲ್ಲ. ನಗರದಿಂದ ಬರುತ್ತಿದ್ದ ಅವರ ಸಹೋದರ ಸಂಬಂಧಿಯೊಬ್ಬರು ವಿಜ್ಞಾನ, ಆವಿಷ್ಕಾರ, ಸಾಹಿತ್ಯ ಮತ್ತು ಔಷಧಿಗಳ ಬಗ್ಗೆ ಮಾತನಾಡುತ್ತಿದ್ದರು. ಇದು ಕಲಾಂ ಅವರಲ್ಲಿ ನಾವಿನ್ಯತೆಗಳ ಬಗ್ಗೆ ಆಸಕ್ತಿಯನ್ನು ಹುಟ್ಟುಹಾಕಿತು.
ಸೃಜನಶೀಲತೆ ಚಿಂತನೆಯನ್ನು ಹುಟ್ಟುಹಾಕುತ್ತದೆ, ಚಿಂತನೆ ಜ್ಞಾನ ನೀಡುತ್ತದೆ, ಜ್ಞಾನ ನಮ್ಮನ್ನು ಶ್ರೇಷ್ಠರಾಗಿಸುತ್ತದೆ. ಕಲಾಂ ಅವರು ಈ ಸೃಜನಶೀಲತೆಯ ಉದಾಹರಣೆಯನ್ನು ತಮ್ಮ ಭಾಷಣಗಳಲ್ಲಿ ಆಗಾಗ ಉಲ್ಲೇಖಿಸುತ್ತಿದ್ದರು. ಇದು ಅವರು ತಮ್ಮ ಜೀವನದಲ್ಲಿ ಸಾಕ್ಷೀಕರಿಸಿದ್ದ ಉದಾಹರಣೆಗಳಾಗಿದ್ದವು. ಅವರೊಬ್ಬ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದರೂ ಮತ್ತು ವಿಷಯಗಳನ್ನು ತಿಳಿದುಕೊಳ್ಳಲು ಸದಾ ಅತೀವ ಆಸಕ್ತಿ ತೋರಿಸುತ್ತಿದ್ದರು. ಬಾಲ್ಯದಲ್ಲಿ ನಡೆದ ಒಂದು ಘಟನೆ ಅವರ ಮನಸ್ಸಿನಲ್ಲಿ ಆಳವಾದ ಪ್ರಭಾವವನ್ನು ಬೀರಿತ್ತು. ಅವರ ವಿಜ್ಞಾನ ಶಿಕ್ಷಕ ಶಿವ ಸುಬ್ರಹ್ಮಣಿ ಐಯ್ಯರ್ ಕಲಾಂ ಅವರನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಹಾರಾಡುತ್ತಿರುವ ಪಕ್ಷಿಗಳನ್ನು ಗಮನಿಸುವಂತೆ ಹೇಳಿದರು, ಬಳಿಕ ಅವರು ಇದಕ್ಕೆ ಸೈದ್ಧಾಂತಿಕ ಉದಾಹರಣೆಗಳನ್ನು ನೀಡಿದರು, ಈ ನೇರ ಪ್ರಾಯೋಗಿಕ ಉದಾಹರಣೆಯೂ ಬಾಲಕ ಕಲಾಂ ಮನಸ್ಸಿನಲ್ಲಿ ಆಳವಾದ ಪ್ರಭಾವವನ್ನು ಬೀರಿತು. ಆ ಕ್ಷಣವೇ ಕಲಾಂ ತನ್ನ ಜೀವನಕ್ಕೂ ಮತ್ತು ಹಾರಾಟಕ್ಕೂ ಏನು ಸಂಬಂಧವಿದೆ ಎಂಬುದನ್ನು ಅರಿತುಕೊಂಡರು. ವಿಮಾನದ ಪೈಲೆಟ್ ಆಗಬೇಕು ಅನ್ನುವ ಅವರ ಕನಸು ಈಡೇರಲಿಲ್ಲ, ಆದರೆ ‘ ವಿಂಗ್ಸ್ ಆಫ್ ಫೈಯರ್’ ಮೂಲಕ ಅವರು ಜಗತ್ತಿನಲ್ಲಿ ಅತಿ ಉನ್ನತ ಮಟ್ಟಕ್ಕೆ ಹಾರಿದರು. ಅವರ ಶಿಕ್ಷಕರು ವಿಜ್ಞಾನದಲ್ಲಿನ ಅವರ ಆಸಕ್ತಿಗೆ ಮತ್ತಷ್ಟು ಪ್ರೇರಣೆ ನೀಡಿದರು, ನಂತರ ಕಲಾಂ ಹಿಂತಿರುಗಿ ನೋಡಲೇ ಇಲ್ಲ.
ಶಿಕ್ಷಕರು ಬೋಧನೆಯನ್ನು ಪ್ರೀತಿಸಬೇಕು ಮತ್ತು ಸೃಜನಶೀಲ ಮನಸ್ಸುಗಳನ್ನು, ಕಾಲ್ಪನಿಕ ಮನಸ್ಸುಗಳನ್ನು ಹುಟ್ಟುಹಾಕುವ ಸಾಮರ್ಥ್ಯ ಅವರಿಗಿದೆ. ಪೋಷಕರು ಕೂಡ ಅಂಕಗಳ ಆಚೆಗೂ ಇರುವ ತಮ್ಮ ಮಕ್ಕಳ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಬಗ್ಗೆ ಚಿಂತಿಸಬೇಕು. ಅನ್ವೇಷಣೆಗೆ, ಪ್ರಯೋಗಕ್ಕೆ ಮತ್ತು ಉತ್ಕೃಷ್ಟ ಪರಿಣಿತಿಯನ್ನು ಪಡೆಯಲು ಮಕ್ಕಳಿಗೆ ವಾತಾವರಣಬೇಕು.
ಇಂತಹ ಒಂದು ಪರಿಪೂರ್ಣ ವಾತಾವರಣವೇ ವಿಜ್ಞಾನ ಭಾರತಿಯ ‘ವಿದ್ಯಾರ್ಥಿ ವಿಜ್ಞಾನ ಮಂಥನ (VVM) 201-22. ಈ ವಿನೂತನವಾದ ಕಾರ್ಯಕ್ರಮವು ಒಂದು ಮಾಧ್ಯಮವಾಗಿದೆ, ಸರಿಯಾದ ವಿಧಾನಗಳನ್ನು ಒದಗಿಸುತ್ತದೆ, ಮಕ್ಕಳ ಕುತೂಹಲವನ್ನು ಪೋಷಿಸಲು ಅನನ್ಯ ವಿಧಾನಗಳನ್ನು ಅನುಸರಿಸುತ್ತದೆ. ವಿಜ್ಞಾನ ಭಾರತಿ (VIBHA) ದೆಹಲಿಯಲ್ಲಿದೆ, ಇದು ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರಚುರಪಡಿಸುವ ಮತ್ತು ಜನಪ್ರಿಯಗೊಳಿಸುವ ರಾಷ್ಟ್ರೀಯ ಚಳುವಳಿಯಾಗಿದೆ. VIBHA ಪ್ರಾಚೀನ ಕಾಲದ ಮತ್ತು ಪ್ರಸ್ತುತ ಭಾರತ ನೀಡುತ್ತಿರುವ ವೈಜ್ಞಾನಿಕ ಕೊಡುಗೆಗಳನ್ನು ಉತ್ತೇಜಿಸುತ್ತಾ ಬರುತ್ತಿದೆ. ಇದು ದೇಶಾದ್ಯಂತ ರಾಜ್ಯಘಟಕಗಳು ಮತ್ತು ಅಂಗ ಸಂಸ್ಥೆಗಳನ್ನು ಹೊಂದಿರುವ ಅತಿದೊಡ್ಡ ವೈಜ್ಞಾನಿಕ ಸಂಸ್ಥೆಯಾಗಿದೆ. ಇದು ರಾಷ್ಟ್ರವ್ಯಾಪಿಯಾಗಿ ‘ವಿದ್ಯಾರ್ಥಿ ವಿಜ್ಞಾನ ಮಂಥನ (ವಿವಿಎಂ)’ ಎಂಬ ವಿಜ್ಞಾನ ಪ್ರತಿಭಾನ್ವೇಷಣೆ ಪರೀಕ್ಷೆಯನ್ನು ಆಯೋಜಿಸುತ್ತಿದೆ. ಪ್ರತಿವರ್ಷ ಈ ಪರೀಕ್ಷೆಯನ್ನು ವಿಜ್ಞಾನ ಪ್ರಸಾರ್ (ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ) ಮತ್ತು ಎನ್ಸಿಇಆರ್ಟಿ ಸಹಯೋಗದೊಂದಿಗೆ ನಡೆಸಲಾಗುತ್ತದೆ. ಈ ಪ್ರತಿಭಾನ್ವೇಷಣೆ ಪರೀಕ್ಷೆಯು ಶಾಲಾ ವಿದ್ಯಾರ್ಥಿಗಳಿಗೆ ವಿನೂತನವಾದ ಒಂದು ವೇದಿಕೆಯನ್ನು ಒದಗಿಸುತ್ತದೆ ಮತ್ತು ನಿಗದಿತ ಪಠ್ಯಕ್ರಮದ ಕಲಿಕೆಯ ಮೂಲಕ ಮತ್ತು ವೈಜ್ಞಾನಿಕ ಸಮುದಾಯದ ಪ್ರಖ್ಯಾತ ವ್ಯಕ್ತಿಗಳೊಂದಿಗೆ ಸಂವಹನಗಳನ್ನು ನಡೆಸುವ ಮೂಲಕ ಅವರಲ್ಲಿ ವೈಜ್ಞಾನಿಕ ಮನೋಭಾವವನ್ನು ವೃದ್ಧಿಸುತ್ತದೆ.
ವಿದ್ಯಾರ್ಥಿಗಳ ಚುರುಕು ಸ್ವಭಾವವನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮಗಳನ್ನು ಅವರ ಗಮನ ಸೆಳೆಯುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ವಿಜ್ಞಾನಗಳಿಗೆ ಸಂಬಂಧಿಸಿದ ವಿವಿಧ ಕಾರ್ಯಾಗಾರಗಳು, ಶಿಬಿರಗಳು, ತರಬೇತಿಗಳು ಮತ್ತು ಇಂಟರ್ನ್ಶಿಪ್ ಅನ್ನು ಇದು ಒಳಗೊಂಡಿದೆ. ವಿಶ್ವವಿಜ್ಞಾನ ಒಳನೋಟಗಳನ್ನು ಮತ್ತು ವಿಜ್ಞಾನ ಜಗತ್ತಿಗೆ ಭಾರತೀಯ ವಿಜ್ಞಾನಿಗಳ ಕೊಡುಗೆಯನ್ನು ಒಟ್ಟಿಗೆ ತರುವ ಮೂಲಕ ವಿದ್ಯಾರ್ಥಿ ವಿಜ್ಞಾನ ಮಂಥನ್ ಮಕ್ಕಳನ್ನು ನಾವಿನ್ಯಕಾರರಾಗಿ ರೂಪಿಸುವ ಗುರಿಯನ್ನು ಹೊಂದಿದೆ. ವಿವಿಧ ದೃಷ್ಟಿಕೋನಗಳನ್ನು ಹೊರಹೊಮ್ಮಿಸುವ ಮೂಲಕ ಮಗುವಿನ ಚಿಂತನೆಯನ್ನು ಇದು ಚುರುಕುಗೊಳಿಸುತ್ತದೆ, ಅವರಲ್ಲಿ ಎಲ್ಲವನ್ನು ತಿಳಿದುಕೊಳ್ಳುವ ಮನೋಭಾವ ಬೆಳೆಸುವ ಗುರಿಯನ್ನು ಇದು ಇಟ್ಟುಕೊಂಡಿದೆ. ಶಿಕ್ಷಕರು, ತಜ್ಞರು ಮತ್ತು ಉತ್ಸಾಹಿಗಳನ್ನು ಒಂದೇ ವೇದಿಕೆಗೆ ತರುವ ಮೂಲಕ ವಿಜ್ಞಾನವನ್ನು ಅರಿತುಕೊಂಡವರು, ವಿಜ್ಞಾನವನ್ನು ಕಲಿಸುವವರು ಮತ್ತು ವಿಜ್ಞಾನವನ್ನು ಸಂವಹನ ಮಾಡುವವರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.
ಡಾ. ಕಲಾಂ ಹಿಂದೆ ಯಾರೂ ಮಾಡದ ರೀತಿಯಲ್ಲಿ ವಿಜ್ಞಾನವನ್ನು ಸಾಮಾನ್ಯ ಜನರು ಮತ್ತು ಮಕ್ಕಳಲ್ಲಿ ಬೆಸೆದರು. ವಿದ್ಯಾರ್ಥಿ ವಿಜ್ಞಾನ ಮಂಥನ್ ಕಲಾಂ ಅವರ ಸೃಜನಶೀಲ ಶಿಕ್ಷಣದ ಪ್ರತಿಪಾದನೆಯ ಮೇಲೆ ನಂಬಿಕೆ ಇರಿಸಿದೆ. ಹೀಗಾಗಿ ಪಠ್ಯಕ್ರಮದ ಜೊತೆಗೆ ಕುತೂಹಲ, ವಿಮರ್ಶಾತ್ಮಕ ಚಿಂತನೆ, ಆಳವಾದ ತಿಳುವಳಿಕೆ ಮತ್ತು ಸೃಜನಶೀಲ ಬುದ್ಧಿಮತ್ತೆಯನ್ನು ಇದು ಕೇಂದ್ರೀಕರಿಸುತ್ತದೆ. ವಿಜ್ಞಾನ ಮತ್ತು ಯುವಜನತೆ ರಾಷ್ಟ್ರದ ಅಭಿವೃದ್ಧಿಯ ಎರಡು ಆಧಾರಸ್ತಂಭಗಳು. ವಿದ್ಯಾರ್ಥಿ ವಿಜ್ಞಾನ ಮಂಥನ್ ಇದಕ್ಕೆ ಗಟ್ಟಿಮುಟ್ಟಾದ ಅಡಿಪಾಯವನ್ನು ಹಾಕುವ ಗುರಿಯನ್ನು ಹೊಂದಿದೆ.
(ವಿದ್ಯಾರ್ಥಿ ವಿಜ್ಞಾನ ಮಂಥನ 2021-22ಕ್ಕೆ ಅಕ್ಟೋಬರ್ 31ರೊಳಗೆ www.vvm.org.inನಲ್ಲಿ ನೋಂದಾಯಿಸಿ)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.