ಭಾರತ ಕಂಡಂತಹ ಓರ್ವ ತತ್ವಜ್ಞಾನಿ, ರಾಜನೀತಿಜ್ಞ, ಸಮಾಜಶಾಸ್ತ್ರಜ್ಞ, ಹಿಂದುತ್ವದ ಆರಾಧಕ, ಲೇಖಕ ಹೀಗೆ ಹಲವು ಅನ್ವರ್ಥಗಳಿಂದ ಕರೆಸಿಕೊಳ್ಳುವ ಸರಳ ವ್ಯಕ್ತಿತ್ವದ ಚಿಂತಕ ಪಂಡಿತ ದೀನದಯಾಳ ಉಪಾಧ್ಯಾಯರು. ಇವರ ಜೀವನ ಮತ್ತು ವ್ಯಕ್ತಿತ್ವ ಪ್ರೇರಣೆ ನೀಡುವಂತಹದು ಮತ್ತು ಆದರ್ಶವಾದದ್ದು. 1916 ಸೆಪ್ಟೆಂಬರ್ 25 ರಂದು ಮಥುರಾ ಜಿಲ್ಲೆಯ ನಗಲಾ ಚಂದ್ರಬಾನ್ಲ್ಲಿ ಜನಿಸಿದ ಇವರು ಮೂರು ವರ್ಷ ಆಗುವುದರೊಳಗಾಗಿ ತಂದೆಯನ್ನು 8 ವರ್ಷದವನಿರುವಾಗ ತಾಯಿಯನ್ನು ಕಳೆದುಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಸಂಕಷ್ಟದ ಜೀವನ ಕಳೆದವರು. ಆದರೆ ಓದಿನಲ್ಲಿ ಮಾತ್ರ ಇವರು ಅಗ್ರೇಸರ್(ಮೊದಲಿಗ)ರಾಗಿದ್ದರು. ವಿದ್ಯಾರ್ಥಿ ಜೀವನದಲ್ಲಿ ಇರುವಾಗಲೇ ಜಿರೋ ಅಸೋಸಿಯೆಷನನ್ನು ಸ್ಥಾಪಿಸಿ ದುರ್ಬಲ ವಿದ್ಯಾರ್ಥಿಗಳ ಓದಿಗೆ ನೆರವಾಗುತ್ತಿದ್ದರು.
1937 ರಲ್ಲಿ ಕಾನಪುರದ ತನ್ನ ಸಹಪಾಠಿ ಬಾಲಾಜೀ ಮಹಾಶಬ್ದೇರವರ ಮುಖಾಂತರ ಸಂಘದ ಸಂಪರ್ಕಕ್ಕೆ ಬಂದರು. 1942 ರಲ್ಲಿ ಸಂಘದ ಪೂರ್ಣ ಪ್ರಮಾಣದ ಪ್ರಚಾರಕರಾಗಿ ಹೋರಟರು. ಇಲ್ಲಿಂದ ಅವರ ದೇಶ, ಧರ್ಮದ ಕೆಲಸಕ್ಕೆ ವೇಗ ಸಿಕ್ಕಂತಾಗಿತು. ಪಂಡಿತಜೀ ಲೇಖಕರು ಆಗಿದ್ದರು. ಅವರು ಬಾಲಕರಿಗಾಗಿ ‘ಸಾಮ್ರಾಟ್ ಚಂದ್ರಗುಪ್ತ’ ಮತ್ತು ಯುವಕರಿಗಾಗಿ ‘ಜಗದ್ಗುರು ಶಂಕರಾಚಾರ್ಯ’ ಎಂಬ ಕಾದಂಬರಿಗಳನ್ನು ರಚಿಸಿ ರಾಷ್ಟ್ರೀಯತೆಯ ಜಾಗೃತಿ ಕೆಲಸ ಮಾಡಿದರು. 1945 ರಲ್ಲಿ ರಾಷ್ಟ್ರಧರ್ಮ ಎಂಬ ಮಾಸಪತ್ರಿಕೆ, ಪಾಂಚಜನ್ಯ ಎಂಬ ವಾರಪತ್ರಿಕೆ ಪ್ರಕಟಣೆ ಆರಂಭಿಸಿದರು. ಇವುಗಳನ್ನೇ ರಾಷ್ಟ್ರೀಯತೆಯ ಜಾಗೃತಿ ಅಸ್ತ್ರವನ್ನಾಗಿ ಮಾಡಿಕೊಂಡರು.
1952 ರಲ್ಲಿ ಡಾ|| ಶ್ಯಾಮಾಪ್ರಸಾದ ಮುಜರ್ಜಿಯವರು ಸ್ಥಾಪಿಸಿದ ಜನಸಂಘದ ಸ್ಥಾಪಕ ಸದಸ್ಯರು ಇವರು. 1952 ರ ಕಾನ್ಪುರದಲ್ಲಿ ಜನಸಂಘದ ಮೊದಲ ಅಧಿವೇಶನ ನಡೆಯಿತು ಅಲ್ಲಿ ಪಂಡಿತ ಜೀ ಅವರ ಕಾರ್ಯ, ಧ್ಯೇಯ ನಿಷ್ಠೆಯನ್ನು ನೋಡಿ ಮುಖರ್ಜಿಯವರು “ನನಗೇನಾದರೂ ಇಬ್ಬರು ದೀನದಯಾಳ ಸಿಗುವುದಾದರೆ ನಾನು ಭಾರತದ ರಾಜಕೀಯ ನಕ್ಷಯನ್ನೇ ಬದಲಾಯಿಸಿ ಬಿಡುತ್ತೇನೆ” ಎಂದು ಹೇಳಿದ ಮಾತು ಪಂಡಿತ ಜೀಯವರ ಕಾರ್ಯ ಮತ್ತು ವ್ಯಕ್ತಿತ್ವದ ಪರಿಚಯ ಮಾಡಿಕೊಡುತ್ತದೆ. 17 ವರ್ಷಗಳ ಕಾಲ ಜನಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ಇದ್ದರೂ ಕೂಡಾ ಸರಳತೆಯ, ಧ್ಯೇಯ ನಿಷ್ಠ, ದೇಶಭಕ್ತ ರಾಜಕಾರಣಿಯಾಗಿ ಇದ್ದವರು ಮತ್ತು ರಾಜಕೀಯಕ್ಕೆ ಒಂದು ಹೊಸ ರೂಪ ಕೊಟ್ಟವರು. “ನಾನು ರಾಜಕೀಯಕ್ಕಾಗಿ ರಾಜಕೀಯದಲ್ಲಿ ಇಲ್ಲ ಅದಕ್ಕೆ ಹೊರತಾಗಿ ನಾನು ರಾಜಕೀಯದ ಸಂಸ್ಕೃತಿಯ ರಾಯಭಾರಿಯಾಗಿದ್ದೇನೆ. ರಾಜಕೀಯದಲ್ಲಿ ಸಂಸ್ಕೃತಿ ಇಲ್ಲವಾಗಿ ಬಿಡುವುದು ಒಳಿತಲ್ಲ. ಅಧಿಕಾರ ಸ್ಪರ್ಧೆಗಾಗಿ ರಾಜಕೀಯಕ್ಕಿಳಿಯುವುದು ಅಥವಾ ತಮ್ಮ ಸಿದ್ದಾಂತಗಳು, ಆದರ್ಶಗಳಿಗೆ ಅನುಗುಣವಾಗಿ ರಾಜಕೀಯವನ್ನು ಪ್ರವೇಶಿಸುವುದು ಈ ಎರಡು ನೆಲೆಗಳಲ್ಲಿ ಮೂಲಭೂತ ವ್ಯತ್ಯಾಸವಿದೆ ಎಂದು ಹೇಳುತ್ತಿದ್ದರು. ಮಹಾರಾಷ್ಟ್ರದಲ್ಲಿ ಒಂದು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕಾಗಿ ಉಪಾಧ್ಯಾಯರು ಬರುತ್ತಿದ್ದರು. ದಾರಿಯಲ್ಲಿ ಹೋಗುವಾಗ ಜನಸಂಘದ ಚುನಾವಣಾ ಪ್ರಚಾರದ ಫಲಕದಲ್ಲಿ ವಿರೋಧಿ ದಳದವರನ್ನು ವಿರೋಧಿಸಿ, ಅವರ ಆಡಳಿತದ ವೈಪಲ್ಯ ಅಂಶಗಳಿಂದ ಕೊಡಿದ ಫಲಕಗಳೆ ಎಲ್ಲೆಲ್ಲಿಯೂ ಕಾಣುತ್ತಿದ್ದವು. ದೀನದಯಾಳರು ಜನಸಂಘದ ಕಾರ್ಯಕರ್ತರನ್ನು ಕರೆಸಿ ‘ನೀವು ಜನಸಂಘದ ಪ್ರಚಾರ ಮಾಡುತ್ತಿರುವಿರೋ.. ಇಲ್ಲ ವಿರೋಧಿ ದಳದವರ ಪ್ರಚಾರ ಮಾಡುತ್ತಿರೋ ‘ ಎಂದು ಪ್ರಶ್ನಿಸಿದರು. ಪ್ರಚಾರದ ಫಲಕಗಳಲ್ಲಿ ನಾವು ಮಾಡುವ ಕಲ್ಯಾಣ ಕಾರ್ಯಗಳೇನು, ನಮ್ಮ ತತ್ವ ಸಿದ್ದಾಂತಗಳೇನು ಎಂಬುದನ್ನು ಹಾಕಿ ಪ್ರಚಾರ ಮಾಡಿ, ನಾವು ನಮ್ಮ ಕೆಲಸ, ಧ್ಯೇಯನಿಷ್ಠೆಯಿಂದ ನಮ್ಮನ್ನು ಗುರುತಿಸಿಕೊಳ್ಳಬೇಕು ಬದಲಾಗಿ ಇನ್ನೂಬ್ಬರನ್ನು ವಿರೋಧಿಸಿ ಅಲ್ಲ ಎಂದು ಸಾಧನೆಯ ಮಾರ್ಗ ತೋರಿದರು.
ಜಾತಿಯ ಆಧಾರದ ಮೇಲೆ ಚುನಾವಣೆಗಳು ನಡೆಯಬಾರದು, ಬದಲಾಗಿ ಪ್ರಜಾಪ್ರಭುತ್ವದ ಮೌಲ್ಯಗಳ ಆಧಾರದ ಮೇಲೆ ನಡೆಯಬೇಕು ಎಂಬುದು ದೀನದಯಾಳರ ಕನಸ್ಸಾಗಿತ್ತು. 1963 ರಲ್ಲಿ ಪ್ರಮುಖ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಿತು. ಭಾವುರಾವ್ ದೇವರಸ್ರ ಒತ್ತಾಯದ ಮೇರೆಗೆ ಉತ್ತರ ಪ್ರದೇಶದ ಜೌನಪುರ ಕ್ಷೇತ್ರದಿಂದ ಸಂಯುಕ್ತ ವಿರೋಧಿ ಪಕ್ಷದ ಉಮೇದುದಾರಾಗಿದ್ದರು ಮತ್ತು ಉಳಿದ ಮೂರು ಕ್ಷೇತ್ರಗಳ ಉಮೇದುದಾರಾಗಿದ್ದವರು ಆಚಾರ್ಯ ಕೃಪಲಾನಿ, ಡಾ. ರಾಮಮನೋಹರ ಲೋಹಿಯಾ ಮತ್ತು ಮೀನಾ ಮಸಾನಿಯವರು. ಉಪಚುನಾವಣೆ ನಡುವೆ ಫಲಿತಾಂಶ ಬಂದಾಗ ಪಂಡಿತ ಜೀ ಹೊರತು ಪಡಿಸಿ ಸಂಯುಕ್ತ ವಿರೋಧಿ ದಳದ ಮೂರು ಜನ ಜಯಗಳಿಸಿದ್ದರು ಆದರೆ ದಯಾಳರು ಸೋತಿದ್ದರು. ಚುನಾವಣಾ ಸೋಲಿಗೆ ಕಾರಣ ಹೊಡಿಕಿದಾಗ ಪಂಡಿತ ಜೀ ಚುನಾವಣೆಯಲ್ಲಿ ಸೋತಿದ್ದರು ಆದರೆ ರಾಜಕಾರಣಕ್ಕೆ ಒಂದು ಆದರ್ಶ ಹಾಕಿಕೊಟ್ಟಿದ್ದರು. ಅವರ ವಿರುದ್ಧ ಸ್ಪರ್ಧಿಸಿದ್ದ ವ್ಯಕ್ತಿ ಜಾತಿಯ ಆಧಾರದ ಮೇಲೆ ಮತವನ್ನು ಕೇಳಿದ್ದರು. ದಯಾಳರ ಜಾತಿಯ ಮತದಾರರು ಜೌನಪುರ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರು ಅದಕ್ಕೆ ಜನಸಂಘದ ಕೆಲ ಕಾರ್ಯಕರ್ತರು ಪಂಡಿತಜೀಯವರ ಹತ್ತಿರ ಬಂದು ನಾವು ನಿಮ್ಮ ಜಾತಿಯ ಆಧಾರದ ಮೇಲೆ ಮತವನ್ನು ಕೇಳೋಣ ಆಗ ನಾವು ಸುಲಭವಾಗಿ ಗೆಲ್ಲಬಹುದು ಎಂದಾಗ ಉಪಾಧ್ಯಾಯರಿಂದ ಆ ಕಾರ್ಯಕರ್ತರಿಗೆ ಛೀಮಾರಿಯಾಯಿತು. ಜಾತಿಯ ಆಧಾರದ ಮೇಲೆ ಚುನಾವಣೆಗಳನ್ನು ಮಾಡುವುದರಿಂದ ನಾವು ಜನಕ್ಕೆ ಏನನ್ನು ಹೇಳಲಿಕ್ಕೆ ಹೋರಟಿದ್ದೇವೆ, ನಾವು ಈ ಕೆಟ್ಟ ವ್ಯವಸ್ಥೆಯನ್ನು ಕಿತ್ತೊಗೆಯಲು ಕೆಲಸ ಮಾಡಬೇಕು ಬದಲಾಗಿ ನಾವೇ ಈ ಕೆಲಸ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ನಾವು ಸೋತರು ಚಿಂತೆಯಿಲ್ಲ, ಜಾತಿ ರಾಜಕಾರಣ ಮಾಡುವುದು ಬೇಡ ಎಂದರು. ಚುನಾವಣೆಯಲ್ಲಿ ಅವರು ಸೋತರು ಆದರೆ ಅವರ ಆದರ್ಶಗಳು ಗೆದ್ದಿವೆ.
ಧರ್ಮದ ಬಗ್ಗೆ ಪಂಡಿತ ಜೀಯವರು ಬಲು ಸರಳವಾದ ವ್ಯಾಖ್ಯಾನವನ್ನು ನೀಡಿದ್ದಾರೆ. “ಧರ್ಮವೆಂದರೆ ತಮಗೂ, ಇತರರಿಗೂ ಸುಗಮವಾಗುವಂತೆ ಮಾಡುವ ನೀತಿ ನಿಯಮಗಳು. ಯಾವುದು ಒಳ್ಳೆಯದೋ ಅದುವೇ ಧರ್ಮ. ಶರೀರ, ಮನಸ್ಸು, ಬುದ್ಧಿ, ಆತ್ಮ ಈ ನಾಲ್ಕು ಸ್ತರಗಳ ಸುಖವೇ ಜೀವನಲಕ್ಷ್ಯ ಅಥವಾ ಜೀವನೋದ್ದೇಶ. ಶರೀರ, ಮನಸ್ಸು, ಬುದ್ಧಿ, ಆತ್ಮ – ಇವೆಲ್ಲವುಗಳ ಅವಶ್ಯಕತೆಗಳನ್ನು ಪೂರೈಸಿ, ಮನುಷ್ಯನ ಸಮಗ್ರವಾದ ಪ್ರಗತಿಯನ್ನು ಸಾಧಿಸುವುದೇ ಆದರ್ಶವೆಂದು ಏಕಾತ್ಮ ಮಾನವತೆಯ ದರ್ಶನ ಮಾಡಿಸಿದವರು ಉಪಾಧ್ಯಾಯರು.
ಪಂಡಿತಜೀ ಅವರ ಜೀವನ, ಪರಿಶ್ರಮ, ಸರಳತೆ, ದೇಶಭಕ್ತಿ, ಧ್ಯೇಯನಿಷ್ಠೆಯ ವ್ಯಕ್ತಿತ್ವವು ಇಂದಿನ ಯುವಕರಿಗೆ, ಸಾಧಕರಿಗೆ ಪ್ರೇರಣೆ ನೀಡಿದೆ. ದೀನದಯಾಳರ ಜೀವನ ಅದೊಂದು ಆದರ್ಶಮಯ ಜೀವನ ಎಂದು ಹೇಳಬಹುದು.
✍ ಸಂತೋಷ ಸೊಗಲದ, ಸವದತ್ತಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.