ಹೆಣ್ಣು ಎಂಬ ಎರಡಕ್ಷರದ ಪದವನ್ನು ವಿವರಿಸುವುದು ಯಾರಿಂದಲೂ ಸಾಧ್ಯವಿಲ್ಲ. ನೀರಿನಲ್ಲಿ ಹರಿಯುವ ಮೀನಿನ ಹೆಜ್ಜೆ ಗುರುತನ್ನಾದರೂ ಕಂಡು ಹಿಡಿಯಬಹುದು, ಆದರೆ ಹೆಣ್ಣಿನ ಭಾವನೆಯನ್ನಲ್ಲ. ತನ್ನ 3 ವರ್ಷದ ಮಗುವು ಒಂದು ಹೊತ್ತು ಊಟ ಮಾಡದಿದ್ದರೆ ನಿದ್ರಿಸದಿದ್ದರೆ ಅಳುವ ಅದೇ ಹೆಣ್ಣು, ಅದೇ ಮಗು ತಪ್ಪು ಮಾಡಿದಾಗ ಉದ್ದಟತನ ತೋರಿದಾಗ ಸರಿದಾರಿಗೆ ತರಲು ಎರಡು ಹೊತ್ತು ಉಪವಾಸ ಹಾಕಬಲ್ಲಳು. ಧಾರವಾಹಿ ನೋಡುವಾಗ ಯಾರದ್ದೋ ಅನ್ಯಾಯಕ್ಕೆ ಬಲಿಯಾದ ನಾಯಕಿ ಅಳುವಾಗ, ತಾನೂ ಅಳುತ್ತಾ ಕೂರುವ ಅದೇ ಹೆಣ್ಣು, ತನ್ನ ಕುಟುಂಬಕ್ಕೆ ಅನ್ಯಾಯವಾಗುತ್ತಿರುವ ಅರಿವಾದಾಗ ದುರ್ಗೆಯ ಅವತಾರವನ್ನು ತಾಳುತ್ತಾಳೆ. ಪತಿ ದುಡಿದು ತಂಡ ಹಣದಲ್ಲಿ ಮನೆಯನ್ನು ಒಪ್ಪವಾಗಿ ನಡೆಸುವ ಹೆಣ್ಣು ಗಂಡ ಕುಡಿದು ಮನೆಗೆ ಹಣನೀಡದೆ ಸತಾಯಿಸುವಾಗ ತಾನೇ ದುಡಿದು ಮಕ್ಕಳನ್ನು ಸಾಕಬಲ್ಲಳು. ಅದಕ್ಕಾಗಿಯೇ ಹಿರಿಯರು “ ಹೆಣ್ಣೆಂದರೆ ಅಷ್ಟೇ ಸಾಕೆ ?” ಎಂದು ಹೇಳಿದ್ದು.
ಪ್ರತೀ ಹೆಣ್ಣುಮಕ್ಕಳು ಮದುವೆಯ ಬಗ್ಗೆ ಸಾವಿರ ಕನಸುಗಳನ್ನು ಕಂಡಿರುತ್ತಾರೆ. ಹಲವಾರು ವರ್ಷಗಳ ಕಾಲ ಸಂತೋಷವಾಗಿ ಜೊತೆಯಲ್ಲಿ ಬಾಳುವ ಬಗ್ಗೆ ಪರಸ್ಪರ ವಚನಗಳನ್ನೂ ನೀಡುತ್ತಾರೆ. ಆದರೆ ಸೈನಿಕರನ್ನು ಮದುವೆಯಾಗುವ ಹೆಣ್ಣು ಮಕ್ಕಳ ವಿಚಾರ ಮಾತ್ರ ಹಾಗಲ್ಲ. ಪ್ರತೀ ಸೈನಿಕನೂ ತನ್ನ ಕೈಹಿಡಿದು ಬಂದವಳನ್ನು ಸ್ವಾವಲಂಬಿಯನ್ನಾಗಿಸಲು ಪ್ರಯತ್ನಿಸುತ್ತಾನೆಯೇ, ಹೊರತು ಕೊನೆಯ ವರೆಗೂ ಜೊತೆಯಲ್ಲಿರುವ ಪ್ರತಿಜ್ಞೆಗಳನ್ನು ಮಾಡುವುದಿಲ್ಲ. ಯಾಕೆಂದರೆ ಆತನು ಪ್ರತಿ ಕ್ಷಣವೂ ಮರಣವನ್ನಪ್ಪಲು ತಯಾರಾಗಿಯೇ ಇರುತ್ತಾನೆ. ತನ್ನ ಪತ್ನಿ, ಮಕ್ಕಳು, ಪಾಲಕರನ್ನು ಸಹ ಅದಕ್ಕಾಗಿ ಮಾನಸಿಕವಾಗಿ ಸಿದ್ಧಗೊಳಿಸಿರುತ್ತಾನೆ. ಎಷ್ಟೇ ಸಿದ್ಧಗೊಂಡರೂ ಕಳೆದುಕೊಂಡ ಅಮೂಲ್ಯವಾದ ಜೀವದ ನೋವು ಅವರನ್ನು ಕೊನೆಯವರೆಗೂ ಕಾಡುತ್ತದಲ್ಲದೆ, ಮುಂದೇನು ಎನ್ನುವ ಪ್ರಶ್ನೆಯು ಬೃಹದಾಕಾರವಾಗಿ ಅವರ ಮುಂದೆ ನಿಂತಿರುತ್ತದೆ. ಎಷ್ಟೋ ಸೈನಿಕರ ಪತ್ನಿಯರು ಕುಗ್ರಾಮದಿಂದ ಬಂದು ವ್ಯವಹಾರ ಜ್ಞಾನ ವಿಲ್ಲದೆ ಕಷ್ಟ ಪಡುತ್ತಾರೆ. ಹೀಗೆ ಕಷ್ಟಪಡುವ ಹೆಣ್ಣು ಮಕ್ಕಳ ಕಷ್ಟವನ್ನು ತಾನೂ ಕೂಡ ಅನುಭವಿಸಿ ಅರಿತು, ತನ್ನಂತಹ ವಿಧವೆಯರ ಪಾಲಿಗೆ ಆಶಾಕಿರಣವಾಗಿ ಮೂಡಿಬಂದ ಹೆಣ್ಣೊಬ್ಬಳ ಸಾಹಸ ಗಾಥೆಯಿದೆ.
2016 ರ ನೀರಜಾ ಭಾನೋಟ್ ಪುರಸ್ಕಾರವನ್ನು ಪಡೆದುಕೊಂಡ ಸುಭಾಷಿಣಿ ವಸಂತ್ ಎಂಬ ಹೆಣ್ಣುಮಗಳ ಕಥೆಯಿದು. 2007 ರ ಜುಲೈ 31 ರಂದು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ದಂಗೆಕೋರರೊಂದಿಗೆ ಹೋರಾಡುವಾಗ 9 ಮರಾಠ ಎಲ್ ಐ ತಂಡದ ಕಮಾಂಡಿಂಗ್ ಆಫೀಸರ್ ಆಗಿದ್ದ ವಸಂತ್ ವೇಣುಗೋಪಾಲ್ ಅವರು ಮರಣವನ್ನಪ್ಪಿದ ಬಳಿಕ ಅವರ ಪತ್ನಿ ಸುಭಾಷಿಣಿ ವಸಂತ್ ಅವರ ಜೀವನವು ದೊಡ್ಡದೊಂದು ತಿರುವು ಪಡೆಯಿತು. ಶ್ರೀಮತಿ ಕರ್ನಲ್ ವಸಂತ್ ವೇಣುಗೋಪಾಲ್ ಎಂಬ ಸೈನಿಕನ ಹೆಮ್ಮೆಯ ಪತ್ನಿಯಾಗಿದ್ದ ಅವರು ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಆರ್ಮಿ ವಿಡೋ ಎಂಬ ಪಟ್ಟಕ್ಕೇರಿದ್ದರು. ದೇಶಸೇವೆಗಾಗಿ ಅವರ ಪತಿಗೆ ಮರಣೋತ್ತರವಾಗಿ ಅಶೋಕ ಚಕ್ರವು ಲಭಿಸಿತು. ಪ್ರಶಸ್ತಿಯನ್ನು ಖುದ್ದು ಸುಭಾಷಿಣಿ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪಡೆದುಕೊಂಡರು. ಮೂಲತಃ ಭರತನಾಟ್ಯ ಕಲಾವಿದೆಯಾಗಿದ್ದ ಸುಭಾಷಿಣಿ, ಪತಿಯ ಮರಣದ 10 ನೇ ದಿನ ಸೈಲೆಂಟ್ ಫ್ರಂಟ್ ಎಂಬ ನೃತ್ಯ ರೂಪಕವನ್ನು ರಚಿಸಿದ್ದರು. ನೃತ್ಯ ರೂಪಕವು ಸೈನಿಕರ ಪತ್ನಿಯರ ಜೀವನದ ಕಥೆಗಳನ್ನು ಒಳಗೊಂಡಿತ್ತು. ಸ್ವತಃ ಆಕೆಯೇ ನೃತ್ಯವನ್ನು ಅಭಿನಯಿಸಿ ಪ್ರದರ್ಶಿಸಿ ಧನ ಸಂಗ್ರಹಿಸಿ ಸೈನಿಕರ ವಿಧವೆ ಪತ್ನಿಯರ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಾರೆ.
ಪ್ರತಿಯೊಬ್ಬ ಸೈನಿಕನು ಹುತಾತ್ಮರಾದಾಗ ರಾಷ್ಟ್ರವು ಅವನನ್ನು ಗೌರವಿಸುತ್ತದೆ. ಆದರೆ ಅವರ ಕುಟಂಬವು ಮಾತ್ರ ಕೊನೆಯವರೆಗೂ ಸಂಕಟವನ್ನು ಅನುಭವಿಸುತ್ತದೆ. ಇದನ್ನೆಲ್ಲಾ ಅರಿತುಕೊಂಡ ಸುಭಾಷಿಣಿ ಅವರು ತಮ್ಮ ಪತಿಯ ನೆನಪಿಗಾಗಿ “ವಸಂತರತ್ನ ಫೌಂಡೇಶನ್ ಫಾರ್ ಆರ್ಟ್ಸ್” ಅನ್ನು ಸ್ಥಾಪಿಸಿದರು. ಸಶಸ್ತ್ರ ಪಡೆಗಳ ವಿಧವೆಯರಿಗೆ ಬೆಂಬಲದ ವ್ಯವಸ್ಥೆಗಾಗಿ ಅವರು ಇದನ್ನು ಸ್ಥಾಪಿಸಿದರು. ಹುತಾತ್ಮ ಪತ್ನಿಯರಿಗೆ ಆರ್ಥಿಕ ಸಹಾಯಕ್ಕಿಂತ ಹೆಚ್ಚಿನದಾಗಿ ಸ್ಥೈರ್ಯ ತುಂಬುವ ಅಗತ್ಯವಿದೆ ಎಂದು ಕಂಡುಕೊಂಡ ಅವರು, ಹುತಾತ್ಮ ಸೈನಿಕರ ಕಿರಿ ವಯಸ್ಸಿನ ಪತ್ನಿಯರಿಗೆ ವಿದ್ಯಾಭ್ಯಾಸವನ್ನು ಮುಂದುವರೆಸಲು ಪ್ರೋತ್ಸಾಹ ಮತ್ತು ಧನಸಾಯನ್ನು ಮಾಡುತ್ತಾರೆ. ಈ ಮಹಿಳೆಯರನ್ನು “ವೀರ ನಾರಿಯರು” ಎಂದು ಕರೆಯಲಾಗುತ್ತದೆ. ಪ್ರತಿ ಹುತಾತ್ಮ ಸೈನಿಕನ ಮಕ್ಕಳಿಗೂ ಪ್ರತಿ ವರ್ಷ 400 ರೂಪಾಯಿಗಳನ್ನು ಶಾಲಾ ಸಮವಸ್ತ್ರಕ್ಕಾಗಿ ಸರ್ಕಾರದ ವತಿಯಿಂದ ನೀಡಲಾಗುತ್ತದೆ. ಆದರೆ ಹಲವು ಮಹಿಳೆಯರಿಗೆ ಅದಕ್ಕಾಗಿ ಅರ್ಜಿ ಸಲ್ಲಿಸಲೂ ತಿಳಿದಿರುವುದಿಲ್ಲ. ಅಂತಹ ಮಹಿಳೆಯರಿಗೆ ಸಹಾಯವನ್ನು ನೀಡುವುದು ಕೂಡಾ ಈ ಸಂಸ್ಥೆಯ ಧ್ಯೇಯವಾಗಿದೆ.
2007 ಅಕ್ಟೋಬರ್ 15 ರಂದು ಪ್ರಾರಂಭವಾದ ಈ ಸಂಸ್ಥೆಯು ಪ್ರತಿ ಸೈನಿಕನ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳುವುದಲ್ಲದೆ, ಶಾಲೆಗಳ ಬಗ್ಗೆ ಮಾರ್ಗದರ್ಶವನ್ನೂ ನೀಡುತ್ತಾರೆ. ಶಾಲೆ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನವನ್ನೂ ನೀಡುವ ಮೂಲಕ ಪ್ರೋತ್ಸಾಹಿಸುತ್ತಾರೆ..ಪ್ರತಿ ಮಗುವಿನ ಹೆಸರಲ್ಲಿ 30000 ರೂಪಾಯಿಗಳ ಸ್ಥಿರ ಠೇವಣಿಯನ್ನು ನೀಡಲಾಗುತ್ತದೆ. ಇದರ ಬಡ್ಡಿಯನ್ನು ಪ್ರತಿ ವರ್ಷ ಪಡೆಯಬಹುದಾಗಿದ್ದು ಮಗು 18 ವರ್ಷ ತುಂಬುವಾಗ ಸಂಪೂರ್ಣ ಮೊತ್ತವನ್ನು ಪಡೆಯಬಹುದಾಗಿದೆ.
ಬಾಗಲಕೋಟೆ,ಬೆಳಗಾವಿ ,ಕೊಡಗು ಜಿಲ್ಲೆಗಳ ಹಿಂದುಳಿದ ಪ್ರದೇಶಗಳಿಗೆ ಹೋಗಿ ಸೈನಿಕರ ಕುಟುಂಬಗಳಿಗೆ ಸಹಾಯವನ್ನು ನೀಡುವ ಸಂಸ್ಥೆಯು, ಪ್ರಾರಂಭಿಸಿದ ವರ್ಷದಲ್ಲೇ 30 ಕುಟುಂಬಗಳಿಗೆ ಸಹಾಯವನ್ನು ನೀಡಿ ಪ್ರೋತ್ಸಾಹಿಸಿತ್ತು. ವೀಣಾ ಪ್ರಸಾದ್ ಜೊತೆಗೂಡಿ ಫಾರೆವರ್ 40 ಎಂಬ ಪತಿಯ ಜೀವನದ ಕುರಿತಾದ ಪುಸ್ತಕವನ್ನೂ ಬರೆದಿದ್ದ ಸುಭಾಷಿಣಿ ಅವರು, ವಿದುಷಿ ವೈಜಯಂತಿ ಕಾಶಿಯವರ ಬಳಿ ಭಾರತನಾಟ್ಯವನ್ನೂ ಅಭ್ಯಸಿಸುತ್ತಿದ್ದಾರೆ. ಪತಿಯ ಸಾವಿನಿಂದ ಅಳುತ್ತಾ ಕೂರದೆ ತನ್ನಂತೆಯೇ ನೊಂದವರಿಗೆ ಸಹಾಯವನ್ನು ಮಾಡುವ ಉದ್ದೇಶದಿಂದ ಸಂಸ್ಥೆಯನ್ನು ಸ್ಥಾಪಿಸಿ ಅದನ್ನು ಮುನ್ನಡೆಸುತ್ತಿರುವ ಭಾರತೀಯ ವೀರ ನಾರಿಗೆ ಸಾವಿರ ನಮನಗಳು.
✍ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.