ಪ್ರಧಾನಿ ಮೋದಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸಾಲು ಸಾಲು ಸವಾಲುಗಳ ನಡುವೆ ಭಾರತವನ್ನು ವಿಶ್ವದ ಸಶಕ್ತ ರಾಷ್ಟ್ರವನ್ನಾಗಿ ಮಾಡುವ, ವಿಶ್ವಕ್ಕೆ ಗುರುವನ್ನಾಗಿ ಮಾಡುವ ಕನಸಿನ ಜೊತೆಗೆ, ದೇಶವನ್ನು ಸಮರ್ಥ ಮತ್ತು ಸಮರ್ಪಕವಾಗಿ ಕಟ್ಟುತ್ತಿರುವ ಮಾದರಿ ನಾಯಕ ಮೋದಿ ಎಂದರೆ ಅದು ಅತಿಶಯವಲ್ಲ.
ಗುಜರಾತ್ನ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ತನ್ನ ಸಾಮರ್ಥ್ಯದ ಮೂಲಕವೇ ಧುಮುಕಿ ‘ನ್ಯಾಯಯುತ, ಸಮರ್ಥ ಆಡಳಿತ’ ನಿಜವಾದ ವ್ಯಾಖ್ಯಾನ ಏನು ಎಂಬುದನ್ನು ಜಗತ್ತಿನ ಉದ್ದಗಲಕ್ಕೆ ಸಾರಿದ ಹಿರಿಮೆ ಮೋದಿ ಅವರಿಗೆ ಸಲ್ಲುತ್ತದೆ. ಕಳೆದ ಏಳು ದಶಕಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ದೇಶದ ಎಲ್ಲಾ ಕ್ಷೇತ್ರಗಳ ಪ್ರಗತಿ, ಕಳೆದ ಎಂಟು ವರ್ಷಗಳಲ್ಲಿ ನಾಗಾಲೋಟದಲ್ಲಿ ಓಡುತ್ತಿದೆ ಎಂಬುದೇ ಪ್ರಧಾನಿ ಮೋದಿ ಅವರ ದೂರದೃಷ್ಟಿ, ಮಹತ್ವಾಕಾಂಕ್ಷೆಯ ಮನೋಸ್ಥಿತಿಗೆ ಸ್ಪಷ್ಟ ನಿದರ್ಶನ.
ತನ್ನನ್ನು ದ್ವೇಷಿಸುವವರಿಗೆ ತಾನೇನು, ತನ್ನ ಶಕ್ತಿ ಏನು ಎಂಬುದನ್ನು ತನ್ನ ಕರ್ತವ್ಯದ ಮೂಲಕವೇ ತೋರಿಸಿಕೊಟ್ಟ ಮಾದರಿ ನಾಯಕ ಮೋದಿ. ಇಂದು ಭಾರತ ವಿಶ್ವವ್ಯಾಪಿಯಾಗಿ ಸಮರ್ಥ ರಾಷ್ಟ್ರ ಎಂದು ಗುರುತಿಸಿಕೊಂಡಿದೆ ಎಂದಾದಲ್ಲಿ ಅದರ ಹಿಂದಿನ ಪ್ರೇರಕ ಶಕ್ತಿ ಮೋದಿ ಎಂಬುದು ನಿಸ್ಸಂಶಯ. ಇದಕ್ಕೆ ಸಾಕ್ಷಿ ಇಂದು ಎಲ್ಲಾ ರಾಷ್ಟ್ರಗಳು ಭಾರತದತ್ತ ಸ್ನೇಹ ಹಸ್ತ ಚಾಚಿ ಬರುತ್ತಿರುವುದು. ಭಾರತವನ್ನು ಒಳಗೊಂಡೇ ವಿಶ್ವದ ಹೆಚ್ಚಿನ ರಾಷ್ಟ್ರಗಳು ಹೆಜ್ಜೆ ಹಾಕಲು ಬಯಸುತ್ತಿರುವುದು.
ಇನ್ನು ದೇಶದೊಳಗಿನ ಪರಿಸ್ಥಿತಿಯ ಬಗ್ಗೆ ಒಂದು ಅವಲೋಕನ ನಡೆಸಿದರೆ, ಕಳೆದ ಎಂಟು ವರ್ಷಗಳಲ್ಲಿ ಮೋದಿ ಅವರ ನಾಯಕತ್ವದಲ್ಲಿ ದೇಶ, ದೇಶವಾಸಿಗಳ ಅಭಿವೃದ್ಧಿ, ಸಾಮಾಜಿಕ ಸುಧಾರಣೆಗಳು, ಆರ್ಥಿಕ ಸಶಕ್ತೀಕರಣ, ಬಡವರು, ಮಹಿಳೆಯರನ್ನು ಒಳಗೊಂಡಂತೆ ಎಲ್ಲಾ ಭಾರತೀಯರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಅವರು ಜಾರಿಗೆ ತಂದ ಯೋಜನೆಗಳು, ರೈತರ ಅಭ್ಯುದಯ, ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ, ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಸಂಚಲನ, ಕ್ರೀಡಾ ಕ್ಷೇತ್ರದ ಸಾಧನೆ, ಅಟೋಮೊಬೈಲ್ ಕ್ಷೇತ್ರ, ಇಂಧನ, ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳು, ರಸ್ತೆಗಳ ಅಭಿವೃದ್ಧಿ, ಡಿಜಿಟಲ್ ಕ್ರಾಂತಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ವಿದೇಶಿ ಬಂಡವಾಳ ಹೂಡಿಕೆಗೆ ಭಾರತ ಪ್ರಶಸ್ತ ಎನಿಸುವಂತೆ ಕೈಗಾರಿಕೋದ್ಯಮಗಳ ಅಭಿವೃದ್ಧಿ, ಬಹಳ ಮುಖ್ಯವಾಗಿ ನಮ್ಮ ದೇಶದ ರಕ್ಷಣಾ ವ್ಯವಸ್ಥೆಯಲ್ಲಿನ ಹಲವು ಬದಲಾವಣೆಗಳು ಸೇರಿದಂತೆ ಇನ್ನೂ ಹತ್ತು ಹಲವು ಯೋಜನೆಗಳು, ಸಕಾರಾತ್ಮಕ ವಿಚಾರಗಳು ಸಾಧಿಸಲ್ಪಟ್ಟಿದೆ.
ಯಾವ ಪಾಕಿಸ್ಥಾನ ಕಳೆದ ಎಂಟು ವರ್ಷಗಳ ಹಿಂದೆ ವಿನಾ ಕಾರಣ ಕ್ಯಾತೆ ತೆಗೆದು, ಕಾಲು ಕೆರೆದು ಕಾದಾಟಕ್ಕೆ ಬರುತ್ತಿತ್ತೋ, ಅಂತಹ ಪಾಕಿಸ್ಥಾನ ಪ್ರಧಾನಿ ಮೋದಿ ಅವರು ಭಾರತದಲ್ಲಿ ತಮ್ಮ ಆಡಳಿತ ಆರಂಭಿಸಿದ ಬಳಿಕ ಬಾಲ ಮುದುರಿಕೊಂಡು ಮೂಲೆ ಸೇರಿದೆ ಎಂಬುದು, ಪ್ರಧಾನಿ ಮೋದಿ ಅವರ ಸಾಮರ್ಥ್ಯಕ್ಕೆ ಸಾಕ್ಷಿ ನುಡಿಯುತ್ತದೆ. ಇದಕ್ಕೆ ಕಾರಣ ಮೋದಿ ಅವರು ಭಾರತೀಯ ಸೇನೆಗೆ ಕೊಟ್ಟ ಸ್ವಾತಂತ್ರ್ಯ. ದೇಶದ ಭದ್ರತಾ ವಲಯಕ್ಕೆ ಅವರು ನೀಡಿದ ಕೊಡುಗೆ ಎಂಬುದನ್ನು ನಾವು ಮರೆಯುವಂತಿಲ್ಲ.
ಇನ್ನು ಭಾರತದೊಳಗಿನ ಕಾಶ್ಮೀರವೇ ಬೇರೆ ರಾಷ್ಟ್ರವೇನೋ ಎಂಬ ಭಾವನೆಯಲ್ಲಿದ್ದ ಭಾರತೀಯರಿಗೆ, ಕಾಶ್ಮೀರವನ್ನು ಭಾರತದ್ದೇ ಎಂದು ತೋರಿಸಿಕೊಟ್ಟ, ಆ ಮೂಲಕ ಕಾಶ್ಮೀರಕ್ಕೆ ಸಮರ್ಪಕ ನ್ಯಾಯವನ್ನು ಒದಗಿಸಿಕೊಟ್ಟ ಕೀರ್ತಿ ಮೋದಿ ಮತ್ತವರ ಸರ್ಕಾರಕ್ಕೆ ಸಲ್ಲುತ್ತದೆ. ಸಿಎಎ ಜಾರಿ, ಶ್ರೀರಾಮ ಮಂದಿರ ನಿರ್ಮಾಣ ಹೀಗೆ ಹತ್ತಾರು ಐತಿಹಾಸಿಕ ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಭಾರತೀಯರ ಭಾವನೆಗಳಿಗೆ ಮತ್ತಷ್ಟು ಜೀವ ತುಂಬಿದ ಸರದಾರನಾಗಿಯೂ ಮೋದಿ ಅವರನ್ನು ನಾವು ನೆನಪಿಸಿಕೊಳ್ಳಬೇಕು.
ಕೊರೋನಾ ಸಂದರ್ಭದಲ್ಲಂತೂ ನೂರ ಮೂವತ್ತು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತವನ್ನು ಸಮರ್ಥವಾಗಿ ರಕ್ಷಿಸಲು ಅಗತ್ಯ ಕ್ರಮ ಕೈಗೊಂಡ ಮತ್ತು ಅವುಗಳಲ್ಲಿ ಯಶಸ್ಸು ಗಳಿಸಿ ವಿಶ್ವಕ್ಕೆ ಮಾದರಿ ನಾಯಕ ನರೇಂದ್ರ ಮೋದಿ. ಕೇವಲ ದೇಶಕ್ಕೆ ಮಾತ್ರವಲ್ಲ, ವಿದೇಶದ ಜನರನ್ನು ಈ ಸಂಕಷ್ಟದಿಂದ ಪಾರು ಮಾಡಲು ಮೋದಿ ನೇತೃತ್ವದಲ್ಲಿ ತೆಗೆದುಕೊಳ್ಳಲಾದ ಕ್ರಮಗಳು ಸ್ಮರಣೀಯ. ಅವರ ಇಂತಹ ದೂರದೃಷ್ಟಿಯ ಆಡಳಿತವೇ ದೇಶವನ್ನು ವಿಶ್ವವಂದ್ಯವಾಗಿಸಿರುವುದು ಎಂದರೆ ನಂಬಲೇಬೇಕು. ಕೊರೋನಾ ಸಂದರ್ಭದಲ್ಲಿ ನಮ್ಮ ದೇಶದ ವಿಜ್ಞಾನಿಗಳೇ ಕಂಡುಹಿಡಿದ ಕೊರೋನಾ ಲಸಿಕೆ, ಇಂದು ಲಸಿಕಾ ಅಭಿಯಾನದ ಮೂಲಕ ಅತೀ ಕಡಿಮೆ ಅವಧಿಯಲ್ಲಿ 77 ಕೋಟಿಗೂ ಅಧಿಕ ಜನರನ್ನು ತಲುಪಿದೆ. ವಿದೇಶಗಳಿಗೂ ತಲುಪಿದೆ ಎಂದಂತೆ ಅವರ ಕಾರ್ಯವೈಖರಿಯ ಬಗ್ಗೆ ನಮಗೆ ಅರಿವಾಗುತ್ತದೆ. ಇಂತಹ ನಾಯಕನನ್ನು ಪಡೆದ ಭಾರತೀಯರು ಅದೃಷ್ಟವಂತರಲ್ಲದೆ ಮತ್ತೇನು?
ದೇಶದ ಅತ್ಯಂತ ಹಿರಿಮೆಯ, ಉನ್ನತ ಹುದ್ದೆಯನ್ನು ಅಲಂಕರಿಸಿದ್ದರೂ ತನಗಾಈ, ತನ್ನ ಕುಟುಂಬಕ್ಕಾಗಿ ಎಂದು ಏನನ್ನೂ ಕೂಡಿಡದೆ, ತನ್ನನ್ನೇ ರಾಷ್ಟ್ರಕ್ಕೆ ಸಮರ್ಪಿಸಿಕೊಂಡು ಬದುಕುತ್ತಿರುವ ವ್ಯಕ್ತಿಶಕ್ತಿ ಪ್ರಧಾನಿ ಮೋದಿ. ಆ ಕಾರಣದಿಂದಲೇ ಅವರು ಪುಟ್ಟ ಮಕ್ಕಳಿಂದ ವಯೋವೃದ್ಧರ ವರೆಗೂ ಇಷ್ಟಪಡುವ ಶ್ರೇಷ್ಟ ವ್ಯಕ್ತಿಯಾಗಿ ಗುರುತಿಸಿಕೊಂಡಿರುವುದು.
ಇನ್ನು ಇವರ ನಿಸ್ವಾರ್ಥ ಸೇವೆಯನ್ನು ಸಹಿಸಲಾಗದೆ ಇವರನ್ನು ಮೂದಲಿಸುವವರು, ದ್ವೇಷಿಸುವವರಿಗೂ ಏನೂ ಕೊರತೆ ಇಲ್ಲ. ಯಾವ ವ್ಯಕ್ತಿ ನಡೆಯುವ ಹಾದಿ ಶುದ್ಧವಾಗಿದೆಯೋ, ಅಂತಹ ಜನರಿಗೆ ಅಡೆತಡೆಗಳು ಹೆಚ್ಚು ಎಂಬಂತೆ, ಅವರನ್ನು ಅವಹೇಳನ ಮಾಡುವವರು, ಅವರ ವಿರುದ್ಧ ಇಲ್ಲಸಲ್ಲದ ವಿಚಾರಗಳನ್ನು ಮಾತನಾಡುವವರಿಗೂ ಕಡಿಮೆ ಇಲ್ಲ. ಆದರೆ ಇದಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳದೆ, ತಾನಾಯಿತು, ತನ್ನ ಕೆಲಸವಾಯಿತು ಎಂಬಂತೆ ದೇಶದ ಪ್ರಗತಿ, ದೇಶವಾಸಿಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ದಣಿವರಿಯದ ನಾಯಕನಿಗೆ ನಾವು ಶರಣಾಗಲೇ ಬೇಕು.
ಮೋದಿ ಎಂದರೆ ಶಕ್ತಿ. ಮೋದಿ ಎಂದರೆ ಆತ್ಮವಿಶ್ವಾಸ, ಮೋದಿ ಎಂದರೆ ಎಲ್ಲರಲ್ಲೂ ಹುರುಪು, ಮೋದಿ ಎಂದರೆ ಸಹಿಷ್ಣು, ಮೋದಿ ಎಂದರೆ ಮಾದರಿ ನಾಯಕ. ಮೋದಿ ಎಂದರೆ ವಿಶ್ವ ನಾಯಕ. ದೇಶದ ಅಭಿವೃದ್ಧಿಯ ವಿಚಾರದಲ್ಲಿ ಮೋದಿ ಕೇವಲ ವ್ಯಕ್ತಿಯಲ್ಲ, ಅವರೊಬ್ಬ ಶಕ್ತಿ. ಮೋದಿ ಅವರ ದಾರಿಯಲ್ಲಿ ನಾವೂ ಹೆಜ್ಜೆ ಹಾಕೋಣ. ರಾಜಕೀಯ ರಹಿತವಾಗಿ ಮೋದಿ ಅವರು ಮಾಡುತ್ತಿರುವ ದೇಶ ಸೇವೆಯನ್ನು ನಾವು ಮುಂದುವರಿಸುವ ನಿಟ್ಟಿನಲ್ಲಿ ಅವರ ಈ ಜನ್ಮದಿನದ ಸಂದರ್ಭದಲ್ಲಿ ಪ್ರತಿಜ್ಞೆ ಮಾಡೋಣ. ಅವರು ಕಟ್ಟಿದ ವಿಶ್ವ ವಂದ್ಯ ಭಾರತವನ್ನು ಮತ್ತಷ್ಟು ಎತ್ತರಕ್ಕೇರಿಸುವ ಮೂಲಕ ಅವರಿಗೆ ನೈಜ ಗೌರವ ಸಲ್ಲಿಸೋಣ.
ಪ್ರಿಯ ಪ್ರಧಾನಿ ಮೋದೀಜಿ, ನಿಮಗೆ ಜನುಮ ದಿನದ ಶುಭಾಶಯಗಳು. ಮತ್ತಷ್ಟು ವರ್ಷ ನಿಮ್ಮ ಈ ಸೇವೆ ನಮ್ಮ ರಾಷ್ಟ್ರಕ್ಕೆ ಸಮರ್ಪಣೆಯಾಗಲಿ. ನಿಮ್ಮ ಅಭಿವೃದ್ಧಿಯ ದೂರದೃಷ್ಟಿ ನಮ್ಮೆಲ್ಲರಿಗೂ ದಾರಿದೀಪವಾಗಲಿ. ನಿಮಗೆ ಶುಭವಾಗಲಿ.
✍ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.