ಬದುಕಿನ ಅತೀ ಅವಶ್ಯಕತೆಗಳಲ್ಲಿ ಶಿಕ್ಷಣವೂ ಒಂದು. ಜಗತ್ತಿನಲ್ಲಿ ಶಿಕ್ಷಣವನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ವಸ್ತುವಿಷಯಗಳನ್ನು ಕದಿಯುವುದು ಸಾಧ್ಯ. ಆದರೆ ಗಳಿಸಿದ ವಿದ್ಯೆಯನ್ನು ಕದಿಯುವುದು ಸಾಧ್ಯವಿಲ್ಲ ಎಂಬುದು ಜನಜನಿತ ನುಡಿ. ಇಂದು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದ್ದು, ಶಿಕ್ಷಣದ ಮಹತ್ವವನ್ನು ತಿಳಿಯಪಡಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ಜನರು ತಮ್ಮ ಬುದ್ಧಿ ಶಕ್ತಿ, ಸಾಮರ್ಥ್ಯ ವೃದ್ಧಿಗೆ ಸಾಕ್ಷರತೆ ಎಂಬುದು ಮುಖ್ಯ ಅಂಶವೇ ಸರಿ. ಇಪ್ಪತ್ತೊಂದು ಶತಮಾನಗಳ ಈ ಅವಸರದಲ್ಲಿಯೂ ಜಗತ್ತಿನಲ್ಲಿ ಅದೆಷ್ಟೋ ಜನರು ಶಿಕ್ಷಣದ ಅರಿವಿರದೆ ಬದುಕುವ ಸ್ಥಿತಿ ಇದೆ. ಅಂತಹ ಸಾಕ್ಷರತೆಯಿಂದ ವಂಚಿತರಾದವರನ್ನು ಶಿಕ್ಷಣದತ್ತ ಮುಖ ಮಾಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಸೆ. 8 ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.
2021 ರ ಈ ಸಂದರ್ಭದಲ್ಲಿ ಕೊರೋನಾ ಮಹಾಮಾರಿಯ ಅಬ್ಬರದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಹ ಸಾಕಷ್ಟು ಅಡ್ಡ ಪರಿಣಾಮಗಳಾಗಿವೆ. ಸಾಕ್ಷರತೆಯ ಪ್ರಮಾಣ ಈ ಎರಡು ವರ್ಷಗಳಲ್ಲಿ ಕುಸಿದಿದೆ ಎಂದರೂ ತಪ್ಪಾಗಲಾರದೇನೋ. ಇಂತಹ ಸಮಸ್ಯೆಗಳನ್ನು ನಿವಾರಿಸಿ, ಸಮಾಜವನ್ನು ಸಾಕ್ಷರತಾ ಸಮಾಜವನ್ನಾಗಿಸುವ ದೃಷ್ಟಿಯಿಂದ ನಮ್ಮ ಇಂದಿನ ಶೈಕ್ಷಣಿಕ ಚಿಂತನೆಗಳು ಸಾಗಬೇಕಾಗಿರುವುದು ಇಂದಿನ ತುರ್ತು.
ಈ ಬಾರಿ ಯುನೆಸ್ಕೋ ತಿಳಿಸಿರುವಂತೆ, LITERACY FOR A HUMAN CENTRED RECOVERY: NARROWING THE DIGITAL DEVIDE ಎಂಬ ಘೋಷ ವಾಕ್ಯದ ಜೊತೆಗೆ 2021 ರ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಕೌಶಲ್ಯಗಳು ಮನುಷ್ಯ ಜೀವನದ ಪ್ರಮುಖ ಭಾಗವಾಗಿದೆ. ಕಂಪ್ಯೂಟರ್ ಪ್ರಸ್ತುತ ದಿನದ ಅಗತ್ಯತೆಯಾಗಿದೆ. ಆದರೆ ವಿಶ್ವದ 50% ಜನಸಂಖ್ಯೆ ಕಂಪ್ಯೂಟರ್ ಸೇರಿದಂತೆ ಇನ್ನಿತರ ತಾಂತ್ರಿಕ ವ್ಯವಸ್ಥೆಗಳನ್ನೊಳಗೊಂಡ ಶಿಕ್ಷಣದಿಂದ ಹೊರತಾಗಿದೆ. ಈ ನಿಟ್ಟಿನಲ್ಲಿ ಇಂದಿನ ಅವಶ್ಯಕತೆಯಾದ ತಾಂತ್ರಿಕ ಕಲಿಕೆಯ ದೃಷ್ಟಿಯಿಂದಲೂ ಸಾಕ್ಷರತೆಯ ವ್ಯಾಪ್ತಿಯನ್ನು ವಿಸ್ತರಣೆ ಮಾಡುವುದು ಈ ಧ್ಯೇಯವಾಕ್ಯದ ಉದ್ದೇಶವಾಗಿದೆ.
ಈ ಘೋಷ ವಾಕ್ಯ ಎಲ್ಲಾ ಬಗೆಯ ತಾಂತ್ರಿಕ ವಿಚಾರಗಳನ್ನು ಒಳಗೊಂಡ ಸಾಕ್ಷರತೆಯನ್ನು ವಿಸ್ತರಿಸುವುದಕ್ಕೆ ಪೂರಕವಾಗಿದೆ. ಅದಕ್ಕೆ ಸಂಬಂಧಪಟ್ಟ ಅನ್ವೇಷಣೆಗಳನ್ನು ನಡೆಸುವ ನಿಟ್ಟಿನಲ್ಲಿಯೂ ಯುನೆಸ್ಕೋ ಈ ಬಾರಿ ಈ ಧ್ಯೇಯವಾಕ್ಯವನ್ನು ನೀಡಿದೆ.
ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಶಿಕ್ಷಣ ಪಡೆಯುವಂತಾಗಿದೆ. ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಈ ಸಂಕಷ್ಟ ಸಂದರ್ಭದಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಸಮರ್ಪಕವಾಗಿ ನೀಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ವಿದ್ಯಾರ್ಥಿಗಳ ಕೈ ಹಿಡಿದದ್ದು ತಂತ್ರಜ್ಞಾನ. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಮಹತ್ವ, ಅಗತ್ಯತೆ, ಬಳಕೆಯ ಮೂಲಕ ಹೇಗೆ ಸಾಕ್ಷರತೆಯನ್ನು ವೃದ್ಧಿಸಬಹುದು ಎಂಬುದನ್ನು ನಾವು ಈ ಸಂದರ್ಭದಲ್ಲಿ ಚಿಂತಿಸಿ, ಅದಕ್ಕೆ ಪೂರಕವಾಗಿ ಅನುಕೂಲಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
ಮೊದಲೇ ಹೇಳಿದಂತೆ ಶಿಕ್ಷಣ ಮನುಷ್ಯನ ಮೂಲಭೂತ ಅಗತ್ಯತೆ ಎನ್ನಬಹುದು. ಸಾಕ್ಷರತೆಗೆ ಸಂಬಂಧಿಸಿದಂತೆ ಭಾರತದ ಬಗ್ಗೆ ಹೇಳುವುದಾದರೆ, ಎಲ್ಲರಿಗೂ ಶಿಕ್ಷಣ ನೀಡುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಸಹ ಹಲವು ಉಪಕ್ರಮಗಳನ್ನು ಜಾರಿಗೆ ತರುತ್ತಿದೆ. ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲಾಭಿವೃದ್ಧಿ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಹ ಜಾರಿಗೆ ತಂದಿದೆ. ದೇಶದಲ್ಲಿ ವಯಸ್ಕರ ಶಿಕ್ಷಣ, ಸಂಜೆ ಕಾಲೇಜುಗಳು ಸಹ ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಪಾತ್ರ ವಹಿಸುತ್ತಿವೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ.
ಶಿಕ್ಷಣ ಬದುಕಿನ ಆದ್ಯತೆ. ನಾವು ಬದುಕಿಗೆ ಬೇಕಾದ ಮತ್ತು ಬದುಕಲು ಬೇಕಾದ ಶಿಕ್ಷಣದ ಅವಶ್ಯಕತೆಯನ್ನು ಪೂರೈಸಿಕೊಳ್ಳುವ ಮತ್ತು ನಮ್ಮ ಸುತ್ತಮುತ್ತಲಿನ ಜನರಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ, ಅವರೂ ಸಾಕ್ಷರರಾಗುವತ್ತ ಪ್ರಯತ್ನ ಮಾಡಿದಲ್ಲಿ ದೇಶದಲ್ಲಿ ಸಾಕ್ಷರರ ಸಂಖ್ಯೆ ಹೆಚ್ಚುತ್ತದೆ. ದೇಶದ ಸಾಕ್ಷರತಾ ಪ್ರಮಾಣ ಸಹ ಏರಿಕೆಯಾಗುತ್ತದೆ. ಶಿಕ್ಷಣ ಎಲ್ಲರ ಅವಶ್ಯ. ಅದನ್ನು ಪಡೆಯುವ ನಿಟ್ಟಿನಲ್ಲಿ ಸಮಾಜದ ಜೊತೆಗೆ ನಮ್ಮ ಸಹಕಾರ ಸಹ ಹೆಚ್ಚು ಜನರು ಸಾಕ್ಷರರಾಗುವುದಕ್ಕೆ ಕಾರಣವಾಗಬಹುದು. ದೇಶದ ಸಾಕ್ಷರತೆಯನ್ನು ಹೆಚ್ಚಿಸುವುದಕ್ಕೆ ನಾವೂ ಕಾರಣರಾಗೋಣ. ಸಮಾಜದಲ್ಲಿ ಸಾಕ್ಷರತಾ ಅರಿವು ಮೂಡಿಸೋಣ.
✍ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.