ಪ್ಯಾರಾಲಿಂಪಿಕ್ಸ್ ಎಂಬ ವಿಶ್ವ ದರ್ಜೆಯ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾರತದ ಸಾಧನೆ ಹೆಮ್ಮೆ ಮೂಡಿಸಿದೆ. ಟೊಕಿಯೋದಲ್ಲಿ ಜರುಗಿದ ಈ ಬಾರಿಯ ಒಲಿಂಪಿಕ್ಸ್ ಭಾರತದ ಕ್ರೀಡಾಶಕ್ತಿ ಮತ್ತು ಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಿದೆ.
ಇಲ್ಲಿ ಹೆಸರಿಸಲೇ ಬೇಕಿರುವುದು ಭಾರತದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಭಾರತೀಯ ಕ್ರೀಡಾಪಟುಗಳ ಪರಿಶ್ರಮ ಮತ್ತು ಸಾಧನೆಯನ್ನು.
ಈ ಬಾರಿಯ ಪ್ಯಾರಾಲಿಂಪಿಕ್ಸ್ ಸ್ಪರ್ಧೆಯಲ್ಲಿ ಅತಿ ಹೆಚ್ಚು ಪದಕಗಳನ್ನು ಭಾರತ ಬಾಚಿಕೊಂಡಿದೆ. ಇದು ಭಾರತೀಯ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿಯೇ ಮೊದಲಾಗಿದ್ದು, ಕ್ರೀಡಾಪಟುಗಳ ಅಮೋಘ ಸಾಧನೆ ಅವರ ಪರಿಶ್ರಮ, ಕತೃತ್ವ ಶಕ್ತಿಗೆ ಸಾಕ್ಷಿ. ಪಿ.ವಿ ಸಿಂಧು, ನೀರಜ್ ಚೋಪ್ರಾರಿಂದ ಪ್ರೇರಣೆ ಪಡೆದ ಭಾರತೀಯ ವಿಶೇಷ ಚೇತನ ಕ್ರೀಡಾಳುಗಳ ತಂಡ ಕಳೆದ ತಿಂಗಳ ಕೊನೆಯ ವಾರದಂದು ಟೊಕಿಯೋದತ್ತ ಪ್ರಯಾಣ ಬೆಳೆಸಿತ್ತು. ಇವರ ಪಯಣ ಒಂದು ಸಾಧನಾಯಾನವೇ ಆಗಿತ್ತು. ಬರೋಬ್ಬರಿ 19 ಪದಕಗಳನ್ನು ಜಯಿಸಿದ ಭಾರತೀಯ ಕ್ರೀಡಾಪಟುಗಳು ದೇಶಕ್ಕೆ ದುಪ್ಪಟ್ಟು ಹೆಮ್ಮೆ ಮತ್ತು ಗೌರವ ಮೂಡಿಸಿದ್ದಾರೆ. ಭಾರತೀಯ ಪ್ಯಾರಾಲಿಂಪಿಯನ್ಸ್ ಎಲ್ಲರಿಗೂ ಮಾದರಿಯೂ ಹೌದು. ಅಂಗವೈಕಲ್ಯದ ಹೊರತಾಗಿಯೂ ಇವರು ಮಾಡಿದ ಸಾಧನೆ ಗೌರವ ಮತ್ತು ಪ್ರೇರಣೆ. ಪ್ಯಾರಾಲಿಂಪಿಕ್ಸ್ ಸ್ಪರ್ಧೆಗೆ ತನ್ನದೇ ಆದ ಇತಿಹಾಸವಿದೆ. ವಿಶೇಷ ಚೇತನರಿಗೆ ಮೀಸಲಾಗಿರುವ ಒಲಿಂಪಿಕ್ಸ್ ಸ್ಪರ್ಧೆಯು ನ್ಯೂನ್ಯತೆಗಳ ಹೊರತಾಗಿಯೂ ಓರ್ವ ಹೇಗೆ ಬದುಕಿನಲ್ಲಿ ಉನ್ನತವಾದ, ಮಹತ್ತರವಾದ ಸಾಧನೆಯನ್ನು ಮಾಡುಬಹುದು ಎಂಬುವುದಕ್ಕೆ ನಿದರ್ಶನವೂ ಆಗಿದೆ.
ಭಾರತೀಯ ಸಂಸ್ಕೃತಿಯ ಬೇರು ಇಲ್ಲಿನ ಸಾಮಾಜಿಕ ಜೀವನ. ಭಾರತೀಯ ಸಮಾಜದಲ್ಲಿ ಒಂದು ವಿಶೇಷವಾದ ಶಕ್ತಿಯ ಸಂಚಲನವಿದೆ. ಭಾರತೀಯ ಕೌಟುಂಬಿಕ ಜೀವನದಲ್ಲಿ ಸಂಯಮ, ಸಹನೆ ಜೊತೆ ಕರುಣೆಯ ಸಂವಹನವಿದೆ. ಭಾರತೀಯ ಅವಿಭಕ್ತ ಕುಟುಂಬ ಜೀವನದಲ್ಲಿ ವಿಶೇಷ ಚೇತನರು ಹೆಚ್ಚಿನ ಪ್ರೀತಿ, ವಾತ್ಸಲ್ಯಕ್ಕೆ ಭಾಜನರಾಗುತ್ತಾರೆ. ಮನೆಗಳಲ್ಲಿ ಯಾರಾದರೂ ಅಶಕ್ತರಿದ್ದಲ್ಲಿ ಅವರಿಗೆ ಹೆಚ್ಚಿನ ಮಮಕಾರ, ಪ್ರೀತಿ, ಸಹಕಾರ ನೀಡುವ ಪರಿಪಾಠ ಇಲ್ಲಿನ ಸಂಸ್ಕೃತಿ ಮೂಲದ್ದು. ಹುಟ್ಟಿದ ಮಗುವಿಗೆ ನ್ಯೂನ್ಯತೆ ಇದ್ದರೆ ಅದಕ್ಕೆ ಹೆಚ್ಚಿನ ಕಾಳಜಿ, ಅಕ್ಕರೆ ಸಿಗುತ್ತದೆ. ಎಲ್ಲರ ಪ್ರೀತಿಯ ಕೇಂದ್ರಬಿಂದು ಆ ಮಗುವಾಗುತ್ತದೆ. ಹುಟ್ಟಿದ ಮಗು ಕ್ಷೀಣವಾಗಿದ್ದರೆ ಅದಕ್ಕೆ ಬಗ್ಗೆ ಹೆಚ್ಚಿನ ಕಾಳಜಿ, ಔದಾರ್ಯ ತೋರಿ- ಅದರ ದೇಹ ಪೋಷಣೆಗೆ ಬೇಕಾದ ಸಕಲವನ್ನು ನೀಡುವ ಪರಿಪಾಠ ಇಲ್ಲಿಯದ್ದು. ಕೌಟುಂಬಿಕ ಜೀವನ ಬಡತನದಿಂದ ಕೂಡಿದ್ದರೂ ಅಂತಹ ಅಶಕ್ತ ಎನಿಸಿದ ಮಕ್ಕಳಿಗೆ ಆಹಾರದಲ್ಲೂ, ಕಾಳಜಿಯಲ್ಲೂ, ಪ್ರೀತಿಯಲ್ಲೂ ಹೆಚ್ಚಿನ ಪಾಲು. ಆ ವಿಶೇಷ ಚೇತನರು ತಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಆಸೆಯೂ ಮನೆಮಂದಿಯದ್ದಾಗಿರುತ್ತದೆ. ಇಂತಹ ಅಕ್ಕರೆಯಿಂದ ನೋಡುವ ತಾಯಂದಿರ ಆಶಾವಾದಕ್ಕೆ, ಅವರ ಪ್ರೀತಿಗೆ, ಕುಟುಂಬಿಕರ ಕಾಳಜಿಗೆ ತಮ್ಮ ಸಾಧನೆಯ ಮೂಲಕ ಧನ್ಯವಾದ ತಿಳಿಸಿದ್ದಾರೆ ಭಾರತದ ಪ್ಯಾರಾಲಿಂಪಿಕ್ ಕ್ರೀಡಾಳುಗಳು.
ಟೊಕಿಯೋದಲ್ಲಿ ಜರುಗಿದ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಪ್ಯಾರೆ(ಪ್ರೀತಿಪಾತ್ರರಾದ) ಒಲಿಂಪಿಯನ್ಸ್ ಸಾಧನೆ ಗಮನಾರ್ಹವಾದುದು. ಈ ಬಾರಿಯ ಪ್ಯಾರಾಲಿಂಪಿಕ್ಸ್ ಸಾಧನೆ ಈ ಹಿಂದಿನ ಸಾಧನೆಗಳನ್ನು ಮೀರಿಸಿದೆ. ಒಟ್ಟು 19 ಪದಕಗಳನ್ನು ಒಂದೇ ಕ್ರೀಡಾಕೂಟದಲ್ಲಿ ಜಯಿಸಿದ್ದು ಇದೇ ಮೊದಲು. ಇದರಲ್ಲಿ 5 ಚಿನ್ನ, 8 ಬೆಳ್ಳಿ ಮತ್ತು 6 ಕಂಚಿನ ಪದಕಗಳು ಒಳಗೊಂಡಿವೆ. ಹಿಂದಿನ ಸಾಲಿನ ಒಟ್ಟು 11 ಆವೃತ್ತಿಗಳಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ಕೇವಲ 12 ಮಾತ್ರ. ಈ ಹಿಂದೆ ಒಂದೇ ಆವೃತ್ತಿಯಲ್ಲಿ ಒಟ್ಟು ನಾಲ್ಕು ಪದಕ ಗೆದ್ದ ಸಾಧನೆಯೇ ಹಿರಿದಾಗಿತ್ತು. ಮನೆಮಂದಿಯ ಪ್ರೋತ್ಸಾಹ, ರಾಜ್ಯ ಮತ್ತು ಕೇಂದ್ರ ಸರಕಾರದ ಬೆಂಬಲ ಸಹಿತ ಕ್ರೀಡಾ ಇಲಾಖೆಗಳ ಉತ್ತೇಜನದಿಂದ ನಮ್ಮ ಪ್ಯಾರೇ ಒಲಿಂಪಿಯನ್ಸ್ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ. 1984 ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಜರುಗಿದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಮತ್ತು ಕಳೆದ ಬಾರಿ ಬ್ರೆಜಿಲಿನ ರಿಯೋದಲ್ಲಿ ಜರುಗಿದ ಕ್ರೀಡಾಕೂಟಗಳಲ್ಲಿ ಅತಿ ಹೆಚ್ಚಿನ ಅಂದರೆ ತಲಾ 4 ಪದಕಗಳನ್ನು ಗೆಲ್ಲಲು ಸಾಧ್ಯವಾಗಿತ್ತು.
ಭಾರತೀಯ ಪ್ಯಾರಾಲಿಂಪಿಕ್ಸ್ ಕ್ರೀಡಾಳುಗಳ ಸಾಧನೆ ಒಂದೆಡೆ ಸೋಜಿಗ ಎನಿಸಿದರೆ ಮತ್ತೊಂದೆಡೆ ಇಂತಹ ಕ್ರೀಡಾಳುಗಳ ಸಾಧನೆ ಇತರರಲ್ಲೂ ಹೆಚ್ಚಿನ ಸ್ಪೂರ್ತಿ, ಸಾಧಿಸಬೇಕು ಎಂಬ ಛಲವನ್ನು ಬಡಿದೆಬ್ಬಿಸುತ್ತದೆ. ಈ ಬಾರಿ ಅವನಿ ಲೇಖರ, ಸುಮಿತ್ ಅಂಟಿಲ್, ಮನೀಶ್ ನರ್ವಾಲ್, ಪ್ರಮೋದ್ ಭಗತ್ ಮತ್ತು ಕೃಷ್ಣ ನಗರ್ ಒಟ್ಟು ಐದು ಚಿನ್ನದ ಪದಕಗಳನ್ನು ತಂತಮ್ಮ ಕೊರಳಿಗೇರಿಸಿಕೊಂಡಿದ್ದಾರೆ. ಆ.30 ರಂದು –ಒಂದೇ ದಿನ ಒಟ್ಟು ಐದು ಪದಕಗಳನ್ನು ಭಾರತೀಯ ಕ್ರೀಡಾಳುಗಳು ತಮ್ಮದಾಗಿಸಿಕೊಂಡಿದ್ದರು. ಈ ಹಿಂದೆ ಕೇವಲ ಈಜು ಮತ್ತು ಆಟೋಟಕ್ಕೆ ಸೀಮಿತ ಎಂಬಂತಿದ್ದ ಭಾರತೀಯ ಪ್ಯಾರಾಲಿಂಪಿಕ್ ಸಾಧನೆ ಈ ಬಾರಿ ಶೂಟಿಂಗ್, ಬಿಲ್ಲುಗಾರಿಕೆ, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್ ಕ್ರೀಡೆಗೂ ವಿಸ್ತರಿಸಿದೆ. 19 ಪದಕಗಳಲ್ಲಿ ಒಟ್ಟು ಮೂರು ಪದಕಗಳು ಮಹಿಳೆಯರು ಗೆದ್ದಿದ್ದಾರೆ. ಅವನಿ ಲೇಖರ ಎರಡು ಪದಕಗಳನ್ನು ಜಯಿಸಿದ್ದು ಮಾತ್ರವಲ್ಲದೆ ಕ್ರೀಡಾಕೂಟದ ಸಮಾರೋಪ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಮುನ್ನಡೆಯುವ ಗೌರವಕ್ಕೂ ಭಾಜನರಾದರು. ಭವಿನಾಬೆನ್ ಪಟೇಲ್ ಕೂಡಾ ಒಂದು ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೆ ಪುರುಷರ ಸ್ಪರ್ಧೆಯಲ್ಲಿ ಸಿಂಗರಾಜ್ ಅಧಾನ ಎರಡು ಪದಕಗಳನ್ನು ಜಯಿಸಿದ್ದಾರೆ. ಈ ಹಿಂದೆ ಅಂದರೆ 1984 ರ ಕ್ರೀಡಾಕೂಟವೊಂದರಲ್ಲೇ ಎರಡು ಪದಕ ಗೆದ್ದ ಜೋಗಿಂದರ್ ಸಿಂಗ್ ಈ ವಿಶೇಷ ಸಾಧನೆಯನ್ನು ಮಾಡಿದ್ದರು. ಪದಕ ಪಟ್ಟಿಯಲ್ಲೂ 24 ಸ್ಥಾನಕ್ಕೆ ಜಿಗಿದ ಸಾಧನೆ ಈ ಬಾರಿಯ ಸವಿಶೇಷತೆ. ದೇವೆಂದ್ರ ಜಾಜರಿಯಾ ಮೂರನೇ ಬಾರಿ ಪ್ಯಾರಾಲಿಂಪಿಕ್ಕಿನ ಜಾವೆಲಿನ್ ಸ್ಪರ್ಧೆಯಲ್ಲಿ ಮೂರನೇ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೃಷ್ಣನಗರ್, ಅವನಿ ಲೇಖರ ಸಹಿತ ಈ ಬಾರಿಯ ಎಲ್ಲಾ ಪ್ಯಾರಾಲಿಂಪಿಯನ್ಸ್ ಭಾರತದ ಭಾವಿ ಕ್ರೀಡಾಪಟುಗಳಿಗೆ ಮಾದರಿ.
ಮುಂದಿನ ದಿನಗಳಲ್ಲಿ ಪ್ಯಾರಾಲಿಂಪಿಕ್ ಸ್ಪರ್ಧೆಯೂ ಹೆಚ್ಚಿನ ವಿಶೇಷ ಚೇತನ ಕ್ರೀಡಾಳುಗಳನ್ನು ತನ್ನತ್ತ ಸೆಳೆಯಲಿ, ಇವರ ಸಾಧನೆ ಇತರರಿಗೂ ಮಾದರಿಯಾಗಲಿ. ಮುಂದಿನ ಸಾಧನೆಯ ಪಥವು ಈ ಬಾರಿಯ ಸಾಧನೆಯನ್ನು ಮೀರಿಸುವಂತಾಗಲಿ. ದೇಶದ ಕೀರ್ತಿ ಪತಾಕೆ ಬಾನೆತ್ತರಕೆ ಹಾರಲಿ –ಭಾರತ್ ಕೆ ಪ್ಯಾರೆ- ಒಲಿಂಪಿಯನ್ಸ್ ಬಗ್ಗೆ ಹೆಮ್ಮೆ ಪಡೋಣ.
ಈ ಬಾರಿಯ ಪದಕ ವಿಜೇತರು
ಅವನಿ ಲೇಖರ | ಶೂಟಿಂಗ್ | ಚಿನ್ನ |
ಸುಮಿತ್ ಅಂಟಿಲ್ | ಜಾವಲಿನ್ | ಚಿನ್ನ |
ಮನೀಶ್ ನರ್ವಾಲ್ | ಶೂಟಿಂಗ್ | ಚಿನ್ನ |
ಪ್ರಮೋದ್ ಭಗತ್ | ಬ್ಯಾಡ್ಮಿಂಟನ್ | ಚಿನ್ನ |
ಕೃಷ್ಣ ನಗರ್ | ಬ್ಯಾಡ್ಮಿಂಟನ್ | ಚಿನ್ನ |
ಭವಿನಾ ಪಟೇಲ್ | ಟೇಬಲ್ ಟೆನ್ನಿಸ್ | ಬೆಳ್ಳಿ |
ನಿಶದ್ ಕುಮಾರ್ | ಹೈಜಂಪ್ | ಬೆಳ್ಳಿ |
ಯೋಗೇಶ್ ಕಥುನಿಯಾ | ಡಿಸ್ಕಸ್ | ಬೆಳ್ಳಿ |
ಮರಿಯಪ್ಪನ್ ತಂಗವೇಲು | ಹೈಜಂಪ್ | ಬೆಳ್ಳಿ |
ಪ್ರವೀಣ್ ಕುಮಾರ್ | ಹೈಜಂಪ್ | ಬೆಳ್ಳಿ |
ಸಿಂಗರಾಜ್ ಅಧಾನ | ಶೂಟಿಂಗ್ | ಬೆಳ್ಳಿ |
ಸುಹಾಸ್ | ಬ್ಯಾಡ್ಮಿಂಟನ್ | ಬೆಳ್ಳಿ |
ಸುಂದರ್ ಸಿಂಗ್ ಗುರ್ಜರ್ | ಜಾವಲಿನ್ | ಕಂಚು |
ಸಿಂಗರಾಜ್ ಅಧಾನ | ಶೂಟಿಂಗ್ | ಕಂಚು |
ಶರದ್ ಕುಮಾರ್ | ಹೈಜಂಪ್ | ಕಂಚು |
ಹರ್ವಿಂದರ್ | ಬಿಲ್ಲುಗಾರಿಕೆ | ಕಂಚು |
ಮನೋಜ್ ಸರ್ಕಾರ್ | ಬ್ಯಾಡ್ಮಿಂಟನ್ | ಕಂಚು |
✍ ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.