ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಕೆಲವೇ ಕೆಲವರ ತ್ಯಾಗ, ಪರಿಶ್ರಮದ ಬಗ್ಗೆ ಬಹಳ ಹೆಚ್ಚಾಗಿ ಸ್ಮರಿಸಲಾಗುತ್ತದೆ. ಆದರೆ ಈ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಇಂದಿಗೂ ಹಲವರ ಹೆಸರು ತೆರೆ-ಮರೆಯಲ್ಲಿ ಉಳಿದಿವೆ. ಇವರ ಹೆಸರನ್ನು ಮಾಧ್ಯಮದ ಮುಖ್ಯವಾಹಿನಿಗೆ ತಾರದೇ ಅಪ್ರಧಾನವಾಗಿಸಿಬಿಟ್ಟಿವೆ.
ಆದರೆ ನಾವು ಕೇಳಿರದ ಹೋರಾಟರಾರರು ನೀಡಿದ ಕೊಡುಗೆಗಳು ಇನ್ನೂ ಹಲವು. ದೇಶದ ಸ್ವಾತಂತ್ರಕ್ಕಾಗಿ ಅವರು ಮಾಡಿದ ತ್ಯಾಗವನ್ನು ನಾವು ಸ್ಮರಿಸಲೇಬೇಕು. ಇಂತಹ ಹೋರಾಟಗಾರರ ಒಂದು ಸಣ್ಣ ಉಲ್ಲೇಖ ಇಲ್ಲಿದೆ.
1.ರಾಣಿ ಗೆಡಿನ್ಲಿಯು: ನಾಗಾಲ್ಯಾಂಡ್ನ ಆಧ್ಯಾತ್ಮಿಕ ಹಾಗೂ ರಾಜಕೀಯ ಹೋರಾಟದ ನಾಯಕಿಯಾಗಿದ್ದ ಇವರು ಬ್ರಿಟಿಷ್ ಆಡಳಿತದ ವಿರುದ್ಧ ದಂಗೆ ಆರಂಭಿಸಿದ್ದರು. ಅಲ್ಲದೇ ನಾಗಾ ಧರ್ಮೀಯರನ್ನು ಕ್ರೈಸ್ತರನ್ನಾಗಿ ಪರಿವರ್ತಿಸುತ್ತ್ತಿದ್ದವರ ವಿರುದ್ಧ ಹೋರಾಡಿದ್ದರು. ತಮ್ಮ 13ನೇ ವರ್ಷದಲ್ಲಿ ಸೋದರ ಸಂಬಂಧಿಯೊಬ್ಬರು ಆರಂಭಿಸಿದ್ದ ಹೇರಕ ಚಳುವಳಿಯಲ್ಲಿ ಭಾಗವಹಿಸಿ, ಮಣಿಪುರ ಮತ್ತು ನಾಗಾಲ್ಯಾಂಡ್ಗಳಲ್ಲಿದ್ದ ಬ್ರಿಟಿಷರನ್ನು ಸದೆಬಡಿಯುವಲ್ಲಿ ಯಶಸ್ವಿಯಾದರು.
ತನ್ನ 16ನೇ ವರ್ಷದಲ್ಲಿ ಬ್ರಿಟಿಷರಿಂದ ಜೀವಾವಧಿ ಶಿಕ್ಷೆಗೆ ಒಳಗಾದರು. 1937 ನೆಹರೂರವರು ಇವರನ್ನು ಭೇಟಿಯಾದಾಗ ’ರಾಣಿ’ ಎಂಬ ಬಿರುದನ್ನು ಪಡೆದರು. 1947ರಲ್ಲಿ ಬಿಡುಗಡೆ ಹೊಂದಿದ ಇವರು, ತಮ್ಮ ನಾಗಾ ಸಮುದಾಯದ ಕಾರ್ಯಗಳನ್ನು ಇನ್ನಷ್ಟು ಚುರುಕುಗೊಳಿಸಿದರು. ಅವರಿಗೆ ಪದ್ಮ ಭೂಷಣ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು.
2.ತಿರೋತ್ ಸಿಂಗ್: ಖಾಸಿ ಸಮುದಾಯದ ಮುಖ್ಯಸ್ಥರಾಗಿದ್ದ ಇವರು ಬ್ರಿಟಿಷರ ಹಲವು ಪ್ರಯತ್ನಗಳನ್ನು ವಿಫಲಗೊಳಿಸಿ ಖಾಸಿ ಬೆಟ್ಟವನ್ನು ವಶಪಡಿಸಿಕೊಂಡರು. ಜುಲೈ 17, 1835ರಲ್ಲಿ ಅವರು ಬ್ರಿಟಿಷರಿಂದ ಹತರಾದರು.
3.ಅಳ್ಳೂರಿ ಸೀತಾರಾಮ ರಾಜು: ಇವರು 1922-24ರ ವರೆಗೆ ’ರಂಪಾ ದಂಗೆ’ಯನ್ನು ನಡೆಸಿ ಬುಡಕಟ್ಟು ನಾಯಕರು, ಮತ್ತಿತರರ ಸಹಾನುಭೂತಿಯಿಂದ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದರು. ಅಲ್ಲಿನ ಸ್ಥಳೀಯರಿಂದ ’ಮನ್ಯಂ ವೀರುಡು’ (ಕಾಡುಗಳ ರಾಜ) ಎಂದು ಕರೆಯಲ್ಪಟ್ಟರು. ಆಂಧ್ರ ಪ್ರದೇಶದ ಶ್ರೀಮಂತ ಕ್ಷತ್ರಿಯ ಮನೆತನದಲ್ಲಿ ಹುಟ್ಟಿದ ಸೀತಾರಾಮ ಅವರು, ತಮ್ಮೆಲ್ಲ ಐಶ್ವರ್ಯಗಳನ್ನು ಬಿಟ್ಟು ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿದರು. ಅರಣ್ಯ ಕಾಯ್ದೆಯಡಿ ಬುಡಕಟ್ಟು ಜನಾಂಗದವರಿಗೆ ಬ್ರಿಟಿಷರು ನೀಡುತ್ತಿದ್ದ ಕಿರುಕುಳವನ್ನು ತಡೆಗಟ್ಟಿ, ಸಶಸ್ತ್ರ ಹೋರಾಟ ನಡೆಸಿದರು.
4.ಪಿಂಗಳಿ ವೆಂಕಯ್ಯ: ಅವರು ಮಹಾತ್ಮಾ ಗಾಂಧಿಯವರ ಶ್ರದ್ಧಾವಂತ ಅನುಯಾಯಿಯಾಗಿದ್ದರು. ಭಾರತದ ತ್ರಿವರ್ಣ ರಾಷ್ಟ್ರಧ್ವಜದ ವಿನ್ಯಾಸಕಾರರಾಗಿದ್ದ ಪಿಂಗಳಿ ಅವರು ತಮ್ಮ 19ನೇ ವರ್ಷದಲ್ಲಿ ಬೋರ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಕೃಷಿಯಲ್ಲಿ ಹೆಚ್ಚಿನ ಕಾಲ ಕಳೆಯುತ್ತಿದ್ದ ವೆಂಕಯ್ಯ ಅವರು ಕಾಂಬೋಡಿಯಾ ಹತ್ತಿಯ ಬಗ್ಗೆ ವಿಶೇಷ ಅಧ್ಯಯನ ಮಾಡಿದರು. ಇದರಿಂದ ಅವರಿಗೆ ಪ್ಯಾಟ್ಟಿ ವೆಂಕಯ್ಯ (ಹತ್ತಿ ವೆಂಕಯ್ಯ) ಎಂಬ ಹೆಸರು ಬಂದಿತು.
5. ತಂಗುತುರಿ ಪ್ರಕಾಸಂ: ಓರ್ವ ರಾಜಕಾರಣಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಪ್ರಕಾಸಂ, ಮದ್ರಾಸ್ ಪ್ರಾಂತ್ಯದ ಮುಖ್ಯಸ್ಥರಾಗಿ ನಂತರ ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ವಕೀಲ ವೃತ್ತಿ ನಡೆಸುತ್ತಿದ್ದು, 1921ರಲ್ಲಿ ಈ ವೃತ್ತಿಯನ್ನು ತ್ಯಜಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. 1928ರಲ್ಲಿ ಮದ್ರಾಸ್ನ ಸೈಮನ್ ಕಮಿಷನ್ ವಿರೋಧಿಸಿ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದು ಇವರ ಪ್ರಮುಖ ಕಾರ್ಯಗಳಲ್ಲೊಂದು. ಈ ಸಂದರ್ಭ ಪೊಲೀಸರ ವಿರುದ್ಧ ಹೋರಾಟ ನಡೆಸಿದ್ದ ಪ್ರಕಾಸಂ ಅವರು ’ಆಂಧ್ರ ಕೇಸರಿ’ ಬಿರುದು ಪಡೆದರು.
6. ವೀರಪಾಂಡಿಯಾ ಕಟ್ಟಬೊಮ್ಮಯ್ಯನ್: 18ನೇ ಶತಮಾನದಲ್ಲಿ ಮಿಳುನಾಡಿನ ಅತ್ಯಂತ ಧೈರ್ಯವಂತ ಪಾಳೆಯಗಾರನಾಗಿದ್ದನು. 1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಹೋರಾಟಕ್ಕಿಂತಲೂ 60 ವರ್ಷಗಳ ಹಿಂದೆ ಬ್ರಿಟಿಷರ ಎದುರು ಹಲವು ಬಾರಿ ಯುದ್ಧ ನಡೆಸಿದವರು. ಈತನನ್ನು ಬ್ರಿಟಿಷರು 1799ರಲ್ಲಿ ಬಂಧಿಸಿ, ಆತನ ಕೋಟೆಯನ್ನು ವಶಪಡಿಸಿಕೊಳ್ಳಲಾಯಿತು. ಹಲವು ಪ್ರತಿಭಟನೆಗಳನ್ನು ನಡೆಸಿದ ವೀರಪಾಂಡಿಯಾ, ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿಗೆ ತೆರಿಗೆ ಕಟ್ಟುವುದನ್ನು ನಿರಾಕರಿಸಿದ್ದನು.
7. ಬಿನೋಯ್, ಬಾದಲ್ ಮತ್ತು ದಿನೇಶ್: ಕೋಲ್ಕತದ ಡಾಲ್ಹೌಸೀ ಸ್ಕ್ವೇರ್ ದಾಳಿಯ ಕುರಿತು ಈ ತ್ರಯರನ್ನು ನೆನಪಿಸಲಾಗುತ್ತದೆ. ಮೂಲವಾಗಿ ಬಂಗಾಳದವರಾಗಿದ್ದ ಬಾದಲ್ ಗುಪ್ತಾ, ದಿನೇಶ್ ಗುಪ್ತಾ ಹಾಗೂ ಬಿನೋಯ್ ಬಸು ಕೈದಿಗಳನ್ನು ಕ್ರೂರವಾಗಿ ಕಾಣುತ್ತಿದ್ದ ಅಂದಿನ ಕಾರಾಗ್ರಹ ಇನ್ಸ್ಪೆಕ್ಟರ್ ಕರ್ನಲ್ ಎಸ್.ಎನ್ ಸಿಂಪ್ಸನ್ ಹತ್ಯೆಗೆ ಕಾರಣರಾದವರು. ಡಾಲ್ಹೌಸೀ ಸ್ಕ್ವೇರ್ನ ಸಚಿವಾಲಯ ಕಟ್ಟಡದಲ್ಲಿ ಸಿಂಪ್ಸನ್ ಹತ್ಯೆ ಬಳಿಕ ಈ ಕಟ್ಟಡಕ್ಕೆ ಬಿ.ಬಿ.ಡಿ. ಕಟ್ಟಡವೆಂದು ಮರುನಾಮಕರಣ ಮಾಡಲಾಯಿತು.
8. ಸೂರ್ಯ ಸೇನ್: ಚಿತ್ತಗಾಂಗ್ ಸಶಸ್ತ್ರ ಹೋರಾಟದ ಮೂಲಕ ಪ್ರಬಲ ಬ್ರಿಟಿಷರನ್ನು ಎದುರಿಸಲು ಸಾಧ್ಯ ಎಂದು ಸಾಬೀತು ಪಡಿಸಿದವರು ಸೂರ್ಯ ಸೇನ್. ತಮ್ಮ 65 ಮಂದಿ ಸಶಸ್ತ್ರ ಕ್ರಾಂತಿಕಾರರ ಸಹಾಯದಿಂದ ಅಲ್ಲಿಯ ಪೊಲೀಸ್ ಪಡೆಗಳನ್ನು ಬಂಧಿಸಿ ದೂರವಾಣಿ ಟೆಲಿಗ್ರಾಫ್ ಹಾಗೂ ರೈಲು ಸಂಪರ್ಕಗಳನ್ನು ನಾಶಪಡಿಸಿದರು. ಚಿತ್ತಗಾಂಗ್ ನಗರವನ್ನು ವಶಪಡಿಸಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಗಾಂಧಿ ರಾಜ್ ಎಂದು ಘೋಷಿಸಿದರು. ಶಿಕ್ಷರಾಗಿದ್ದ ಸೇನ್ ಅನಂತರ ಕ್ರಾಂತಿಕಾರಿಯಾಗಿ ಹೋರಾಡಿದರು. ಬ್ರಿಟಿಷರಿಂದ ಬಂಧಿಸಲ್ಪಟ್ಟ ಸೇನ್ ಅವರನ್ನು ಗಲ್ಲಿಗೇರಿಸಲಾಯಿತು.
9. ಸುರೇಂದ್ರ ಸಾಯಿ: 1827ರಲ್ಲಿ ಒಡಿಶಾದ ಸಭಂಲ್ಪುರ್ ದೊರೆ ಸಾಯಿ ಮರಣಾನಂತರ ರಾಜ್ಯವನ್ನಾಳುತ್ತಿದ್ದ ಸುರೇಂದ್ರ ಸಾಯಿ, ಅಲ್ಲಿನ ಬುಡಕಟ್ಟು ಜನಾಂಗದವರಿಗೆ ಉತ್ತಮ ಸಂಸ್ಕೃತಿ ನೀಡಿ ಬ್ರಿಟಿಷರ ಎದುರಿಸುವಂತೆ ಉತ್ತೇಜಿಸಿ ಧೈರ್ಯ ತುಂಬಿದನು. ತನ್ನ 18ನೇ ವಯಸ್ಸಿನಿಂದಲೇ ಬ್ರಿಟಿಷರ ವಿರುದ್ಧ ಪ್ರತಿಭಟಸಿ, 17 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದನು. ಆತನ ಶೌರ್ಯದಿಂದಾಗಿ ಅಲ್ಲಿಯ ಜನರಿಂದ ಬೀರಾ ಎಂಬ ಹೆಸರಿನಿಂದ ಕರೆಯಲ್ಪಟ್ಟನು.
1862ರಲ್ಲಿ ಪ್ರತಿಭಟನೆ ಮುಂದುವರಿದ್ದರಿಂದ ಮತ್ತೆ 20 ವರ್ಷ ಜೈಲು ಪಾಲಾದನು.
10.ಪೊತ್ತಿ ಶ್ರೀರಾಮುಲು: ಮಹಾತ್ಮಾ ಗಾಂಧಿಯವರ ಅನುಯಾಯಿ ಆಗಿರುವ ಶ್ರೀರಾಮುಲು ಅವರನ್ನು ಸಾಮಾನ್ಯವಾಗಿ ಅಮರಜೀವಿ ಎಂದು ಕರೆಯಲಾಗುತ್ತದೆ. ದಲಿತರ ಏಳಿಗೆಗಾಗಿ ಶ್ರಮಿಸಿದ್ದ ಇವರು ಹಲವು ಬಾರಿ ಉಪವಾಸ ಸತ್ಯಾಗ್ರಹವನ್ನೂ ಮಾಡಿದ್ದಾರೆ. ಮದ್ರಾಸ್ನ ಅಧಿಪತ್ಯದಿಂದ ಆಂಧ್ರವನ್ನು ಬಿಡುಗಡೆಗೊಳಿಸಿ ಪ್ರತ್ಯೇಕ ರಾಜ್ಯವನ್ನಾಗಿಸಲು ಉಪವಾಸ ಸತ್ಯಾಗ್ರಹ ನಡೆಸುತ್ತ್ತಿದ್ದ ವೇಳೆ ಸಾವನ್ನಪ್ಪಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.