ಬಿಗ್ ಬಾಸ್ ಎಂಬ ಅಪ್ರಯೋಜಕ ಕಾರ್ಯಕ್ರಮ ಮುಗಿದು ಹೆಚ್ಚು ದಿನಗಳಾಗಿಲ್ಲ. ಬಿಗ್ ಬಾಸ್ ಓಟಿಟಿ ಎಂಬ ಬದಲಾದ ಹೆಸರಿನೊಂದಿಗೆ ಪುನಃ ಪ್ರಾರಂಭವಾಗಿದೆ. ಇಂದಿನ ಯುವ ಜನತೆ ಮೊದಲೇ ಯಾರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು,ಯಾರನ್ನು ಅನುಸರಿಸಬೇಕು ಎಂಬ ವಿಚಾರದಲ್ಲಿ ತಪ್ಪು ಹೆಜ್ಜೆಯನ್ನು ಇರಿಸುತ್ತಿದ್ದಾರೆ. ಇಂತಹಾ ಸಂದರ್ಭದಲ್ಲಿ ಬಿಗ್ ಬಾಸ್ ನಂತಹ ಕಾರ್ಯಕ್ರಮದ ಅವಶ್ಯಕತೆ ಏನು ಎಂಬುದು ಯೋಚಿಸಬೇಕಾದ ವಿಚಾರವಲ್ಲವೇ?. ಅತಿಯಾದ ಭಾವುಕತೆಯ ಪ್ರದರ್ಶನದ, ಭಾವನೆಗಳನ್ನೇ ಬಂಡವಾಳವಾಗಿರಿಸಿಕೊಂಡಿರುವ ಕಾರ್ಯಕ್ರಮವಿದು.
ಮನೋರಂಜನಾ ಕಾರ್ಯಕ್ರಮದ ಅವಶ್ಯಕತೆ ಖಂಡಿತಾ ಇದೆ. ಆದರೆ ಈ ಕಾರ್ಯಕ್ರದಲ್ಲಿ ಸಂಚಿಕೆಗಳಲ್ಲಿ ಕಾಣಿಸುವುದೆಲ್ಲವನ್ನೂ ಸತ್ಯವೆಂದು ನಂಬಿ ಭಾವನಾತ್ಮಕವಾಗಿ ಅದರೊಂದಿಗೆ ಬೆಸೆದುಕೊಳ್ಳುವುದು ಎಷ್ಟು ಸರಿ? ಶಿಷ್ಟ ಸಭ್ಯ ಸಮಾಜದಲ್ಲಿ ಯಾವುದೆಲ್ಲ ನಿಷಿದ್ಧವೋ ಅದೆಲ್ಲ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ದಲ್ಲಿ ನೋಡಲು ಲಭ್ಯ. ಬಿಗ್ ಬಾಸ್ ಎಂಬ ಕಾರ್ಯಕ್ರಮಕ್ಕೆ ನಾವು ನೀಡುವ ಪ್ರಾಮುಖ್ಯತೆಯ 25% ಪ್ರಾಮುಖ್ಯತೆಯನ್ನಾದರೂ ನಾವು ನಮ್ಮ ರಕ್ಷಣೆಯ ಹೊಣೆಯನ್ನು ಹೊತ್ತಿರುವ ಯೋಧರ ವಿಚಾರಗಳಿಗೆ ನೀಡುತ್ತೇವೆಯೇ?
ನನ್ನ ಈ ಹೋಲಿಕೆ ಬಹಳಷ್ಟು ಜನರಿಗೆ ತಪ್ಪಾಗಿಯೂ, ಅತೀ ಎಂಬಂತೆಯೂ ಅನ್ನಿಸಬಹುದು. ಆದರೆ ಇಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಸಮುದಾಯದಲ್ಲಿ ನಡೆಯುತ್ತಿರುವ ಘಟನೆಗಳನ್ನು ಸರಿಯಾಗಿ ಗಮನಿಸಿದಲ್ಲಿ ನಾನೇನು ಹೇಳಹೊರಟಿದ್ದೇನೆ ಎಂಬುದು ನಿಮ್ಮ ಅರಿವಿಗೆ ಬರಬಹುದು. ಅತ್ಯಾಧುನಿಕ ಅಮೆರಿಕಾದ ಶಸ್ತ್ರಾಸ್ತ್ರಗಳು, ಅಮೆರಿಕಾದ ತರಬೇತಿ ಇತ್ಯಾದಿಗಳಿದ್ದೂ ಅಫಘಾನಿಸ್ತಾನವೇಕೆ ತಾಲಿಬಾನಿಗೆ ಸುಲಭದ ತುತ್ತಾಯಿತು? ಪಾಕಿಸ್ತಾನದ ಆಡಳಿತದಲ್ಲಿ ಅಲ್ಲಿನ ಸೇನೆಯ ಹಸ್ತಕ್ಷೇಪ ಅಷ್ಟೇಕೆ ಹೆಚ್ಚಿದೆ? ಪಾಕಿಸ್ತಾನ ಮತ್ತು ಚೀನಾದ ಅದೆಷ್ಟೋ ಕುತಂತ್ರಗಳ ಹೊರತಾಗಿಯೂ ಕಾಶ್ಮೀರ ಮಾತ್ರವಲ್ಲದೆ ಭಾರತದ ಇತರ ಪ್ರದೇಶಗಳಲ್ಲಿ ನಾವು ನೆಮ್ಮದಿಯಾಗಿ ನಿದ್ರಿಸುತ್ತಿರುವುದು ಹೇಗೆ?
ಕಣ್ಣು ಮುಚ್ಚಿ ಒಂದು ಕ್ಷಣ ಯೋಧರ ಜೀವನದ ಕುರಿತು ಆಲೋಚಿಸಿ. ನಮ್ಮಂತೆ ಸೆಖೆಯಾದಾಗ ಹವಾನಿಯಂತ್ರಕ, ಚಳಿಯಾದಾಗ ಹೀಟರ್, ಅಡುಗೆ ಮಾಡಲು ಸೋಂಬೇರಿತನವಾದರೆ ಸ್ವಿಗ್ಗಿ ಝೊಮ್ಯಾಟೋ, ವಾರಕ್ಕೊಂದು ಸಿನೆಮಾ, ತಿಂಗಳಿಗೊಂದು ಔಟಿಂಗ್ ಯೋಧರ ಬದುಕಲ್ಲಿ ಸಾಧ್ಯವಿದೆಯೆ?. ಕುಟುಂಬವನ್ನು ತೊರೆದು ಕೆಲವಷ್ಟು ದಿನ ಅಲ್ಲಿರಲು ಬಂದ ಸ್ಪರ್ಧಿಗಳನ್ನು ಭೇಟಿಯಾಗಲು ಅವರ ಕುಟುಂಬದವರು ಬಂದಾಗ ಸ್ಪರ್ಧಿಗಳ ಭಾವನೆಗಳು ಹೇಳಲಾಗದಂತೆ ಹೊರಬರುತ್ತವೆ. ಅಲ್ಲಿನ ಸ್ಪರ್ಧಿಗಳೂ ಅವರಿಗೂ ಭಾವನೆಗಳಿವೆ ಎಂಬುದು ಸತ್ಯವಾದರೂ, ಅವರಿಗಿಂತ ಜಾಸ್ತಿ ಸಮಯಗಳ ಕಾಲ ಕುಟುಂಬದವರಿಂದ ದೂರವಿರಬೇಕಾದ ವೀರ ಸೈನಿಕರ ಬಗ್ಗೆ ಒಮ್ಮೆ ಯೋಚಿಸಿ ನೋಡಿ. ಬಿಗ್ ಬಾಸ್ ಮನೆಯೊಳಗೇ ಹೋದವರು ಕ್ಷೇಮವಾಗಿ ಹಿಂತಿರುಗುತ್ತಾರೆಂಬುದು ಕುಟುಂಬ ಸದಸ್ಯರಿಗೂ ಸ್ಪರ್ಧಿಗಳಿಗೂ ಖಂಡಿತವಾಗಿಯೂ ತಿಳಿದಿರುವ ಅಂಶ. ಆದರೆ ಸರಹದ್ದಿನಲ್ಲಿ ನಿಂತ ಯೋಧನ ಕುಟುಂಬಕ್ಕೆ ಆ ಭರವಸೆ ಇರಲು ಸಾಧ್ಯವೇ?
ಖಾಸಗಿಯಾಗಿ ಇರಬೇಕಾದ ಮತ್ತು ಸಮಾಜದ ಸ್ವಾಸ್ಥ್ಯಕ್ಕಾಗಿ ಜನರಿಗೆ ಯಾವುದನ್ನೆಲ್ಲಾ ತೋರಿಸಬಾರದೋ ಅವೆಲ್ಲವನ್ನೂ ಈ ಕಾರ್ಯಕ್ರಮದಲ್ಲಿ ತೋರಿಸಲಾಗುತ್ತದೆ. ಸಮಾಜದಲ್ಲಿ ಪ್ರಸಿದ್ಧರಾಗಿದ್ದು ನೇಪಥ್ಯಕ್ಕೆ ಸರಿದು ಮತ್ತೆ ಪ್ರಸಿದ್ಧರಾಗಲು ಹಪಾಹಪಿ ಹೊಂದಿರುವ ಗುಂಪಿನ ಜನರನ್ನೇ ಹೆಚ್ಚಾಗಿ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳನ್ನಾಗಿ ಆರಿಸಲಾಗುತ್ತದೆ. ತಮಗೆ ದೊರಕಿರುವ ಈ ಅವಕಾಶದಲ್ಲಿ ಮತ್ತೆ ಮುನ್ನೆಲೆಗೆ ಬರುವ ಆತುರದಲ್ಲಿ ಸ್ಪರ್ಧಿಗಳು ಅತ್ಯಂತ ಕೃತ್ರಿಮವಾಗಿಯೂ, ನಾಟಕೀಯವಾಗಿಯೂ ವರ್ತಿಸುತ್ತಾರೆ. ಜಗಳ ಇತ್ಯಾದಿಗಳಿಂದ ಲಭಿಸುವ “ನೆಗೆಟಿವ್ ಪಬ್ಲಿಸಿಟಿ” ಆದರೂ ಕೂಡ ತಾವು ಮುನ್ನಲೆಯಲ್ಲಿ ಇರುವುದೇ ಈ ವ್ಯಕ್ತಿಗಳಿಗೆ ಮುಖ್ಯವಾಗಿರುತ್ತದೆ. ಅತಿರೇಕದ ಸ್ನೇಹ, ವಿಚಿತ್ರ ಉಡುಗೆ ತೊಡುಗೆಗಳು, ಕೊಳಕು ಭಾಷಾ ಪ್ರಯೋಗಗಳು ಸಮಾಜಕ್ಕೆ ನೀಡಬಹುದಾದ ಸಂದೇಶವಾದರೂ ಏನು? ಕಾರ್ಯಕ್ರಮದ ಸ್ಪರ್ಧಿಗಳು ಒಂದು ತೂಕವಾದರೆ, ಕಾರ್ಯಕ್ರಮವನ್ನು ನಿರ್ವಹಿಸುವ ವ್ಯಕ್ತಿ ಯಾ ಅಹಂಕಾರ ಭರಿತ ಮಾತುಗಳು ಮತ್ತು ನಡವಳಿಕೆ!
ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳನ್ನು ದಿನವೂ ಟಿವಿಯಲ್ಲಿ ನೋಡಿ ಸಮಾಧಾನ ಪಟ್ಟುಕೊಳ್ಳುವ ಅವಕಾಶವೂ ಕುಟುಂಬದವರಿಗಿದ್ದರೆ, ಹಲವಾರು ಸೈನಿಕರು ಗಡಿಕಾಯುವಾಗ ದೂರವಾಣಿ ಸಂಭಾಷಣೆಗೆ ಸಿಕ್ಕಲೂ ಹಲವಾರು ವಾರಗಳು ಅವಕಾಶ ಸಿಗದೇ ಕಾಯುವ ಕುಟುಂಬಗಳಿರುತ್ತವೆ. ಜನಿಸಿದ ಮಗುವಿನ ಮುಖವನ್ನು ತಿಂಗಳುಗಟ್ಟಲೆ ನೋಡದೆ ಇರಲು ಕೇವಲ ಸೈನಿಕನಿಗೆ ಮಾತ್ರ ಸಾಧ್ಯ. ಪುಟ್ಟ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬಂದ ಸ್ಪರ್ಧಿಗಳ ಸಂಕಟವನ್ನು ನೋಡಿ ಟಿವಿ ಮುಂದೆ ಕುಳಿತ ಹೆಂಗಸರೂ ಅಳುತ್ತಾರೆ. ಆದರೆ ಅನೇಕ ಸೈನಿಕರು ತಮ್ಮ ಮಗುವನ್ನು ಒಂದು ಬಾರಿ ನೋಡುವ ಮೊದಲೇ ಹುತಾತ್ಮರಾಗಿರುತ್ತಾರೆ. ನನ್ನ ಮಗು ತಂದೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೆ ಎಂದು ಕಣ್ಣೀರು ಹಾಕುವ ಸ್ಪರ್ಧಿಯ ಪತ್ನಿಗೆ ಇನ್ನೂ ತಿಂಗಳಾಗದ ಕೂಸನ್ನು ಕೈಯಲ್ಲಿ ಹಿಡಿದು, ತ್ರಿವರ್ಣ ದ್ವಜವನ್ನು ಹೊದ್ದು ಬಂದ ಗಂಡನ ಮುಂದೆಯೂ ಕಣ್ಣೀರು ಹಾಕದೆ ಗರ್ವದಿಂದ ನಿಂತ ಹೆಣ್ಣು ಮಗಳ ಭಾವನೆ ಎಂದಿಗೂ ಅರ್ಥವಾಗದು. ತನ್ನ ಮಗಳನ್ನು ದೂಷಿಸುತ್ತಾರೆ, ಅಳಿಸುತ್ತಾರೆ. ಅಲ್ಲಿರುವ ಗಂಡು ಮಕ್ಕಳು ಅವಳನ್ನು ನಿಷ್ಕ್ರಷ್ಟವಾಗಿ ನಡೆಸಿಕೊಳ್ಳುತ್ತಾರೆ ಎಂದು ಅಲವತ್ತುಕೊಳ್ಳುವ ಸ್ಪರ್ಧಿಯ ತಾಯಿ ಅಥವಾ ತಂದೆಗೆ, ಮದುವೆಯಾಗಿ ಗಂಡ ಮಕ್ಕಳೊಂದಿಗೆ ಸುಖವಾಗಿರಬೇಕಿದ್ದ ಮಗಳು ಗಂಡಸರದ್ದೇ ಸಾಮ್ರಾಜ್ಯವಾಗಿರುವ ಸೈನ್ಯದಲ್ಲಿ ಯೋಧೆಯಾಗಿ, ಪ್ರಪ್ರಥಮ ಮಹಿಳಾ ಯುದ್ಧ ವಿಮಾನ ಚಾಲಕಿಯಾಗಿ ಪ್ರತಿನಿತ್ಯ ನೂರಾರು ಗಂಡಸರ ನಡುವೆ ವೃತ್ತಿ ನಿರ್ವಹಿಸುವ ಮಗಳ ಬಗ್ಗೆ ಹೆಮ್ಮೆಯಿಂದ ಹೇಳುತ್ತಾ ಇತರರನ್ನೂ ಪ್ರೋತ್ಸಾಹಿಸುವ ಪಾಲಕರ ಹೆಮ್ಮೆ ಅರ್ಥವಾಗದು.
ಬಿಗ್ ಬಾಸ್ ನ ಮನೆಗೆ ಕಳುಹಿಸುವ ಸಂದರ್ಭದಲ್ಲೇ ಕಣ್ಣೀರು ಸುರಿಸುವ ಕುಟುಂಬದವರಿಗೆ, ವಾಪಸು ಹಿಂತಿರುಗಿ ಬರುವ ಬಗ್ಗೆ ಯಾವುದೇ ಭರವಸೆ ಇಲ್ಲದೆ ಹೋದರೂ ನಗುತ್ತ ಬೆನ್ನು ತಟ್ಟಿ ಯುದ್ಧಕ್ಕೆ ಕಲಿಸುವ ಸೈನಿಕನ ಕುಟುಂಬದ ಭಾವನೆಗಳು ಅರ್ಥವಾಗುವುದು ಹೇಗೆ ಸಾಧ್ಯ. ರಿಯಾಲಿಟಿ ಷೋ ಗಳು ನಡೆಸುವುದು ನೋಡುವುದು ತಪ್ಪು ಎಂದು ನಾನು ಹೇಳುತ್ತಿಲ್ಲ, ಅವರವರ ಸ್ಥಾನದಲ್ಲಿ ಅವರವರ ನೋವುಗಳು ಖಂಡಿತಾ ದೊಡ್ಡದೇ. ಆದರೆ ಸ್ಪರ್ಧಿಗಳ, ಅವರ ಕುಟುಂಬದವರ ಭಾವನೆಗಳನ್ನು ತ್ಯಾಗ, ನೋವು ಇತ್ಯಾದಿಗಳನ್ನಾಗಿಸಿ ವೈಭವೀಕರಿಸುವುದು ಖಂಡಿತಾ ತಪ್ಪು. ಒಬ್ಬ ಅಶೋಕ ಚಕ್ರ ಪಡೆದ ವೀರ ಯೋಧನ ಬಗ್ಗೆ ಅವನ ಕುಟುಂಬದ ಬಗ್ಗೆ 30 ನಿಮಿಷಗಳ ಕಾಲ ಕಾರ್ಯಕ್ರಮವನ್ನು ಪ್ರಸಾರ ಮಾಡದ ಮಾಧ್ಯಮಗಳು, ಕಚ್ಚಾಡಿ, ರಾಜಕೀಯ ಮಾಡಿ ಜನರನ್ನು ಭಾವನಾತ್ಮಕ ಮರುಳು ಮಾಡಿ ಬಿಗ್ ಬಾಸ್ ಎಂಬ ಕಾರ್ಯಕ್ರಮದ ವಿಜೇತನನ್ನು ನಾ ಮುಂದು ತಾ ಮುಂದು ಎಂದು ಕರೆಸಿಕೊಂಡು ದಿನಗಟ್ಟಲೆ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತದೆ. ಇದರ ಅತಿರೇಕ ಎಷ್ಟರ ಮಟ್ಟಿಗಿದೆ ಎಂದರೆ 1೦೦ ದಿನಗಳ ಕಾಲ ಬಿಟ್ಟಿದ್ದ ಮಾಲೀಕನನ್ನು ನೋಡಿ ಸಂತೋಷವನ್ನು ವ್ಯಕ್ತ ಪಡಿಸುತ್ತಿರುವ ಅವರ ಸಾಕು ನಾಯಿ ಎಂದು, ಗೆದ್ದವನ ಮನೆಯ ನಾಯಿಯ ಕುರಿತಾಗಿ ಗಂಟೆಗಟ್ಟಲೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಆದರೆ, ಯುದ್ಧದಲ್ಲಿ ಹುತಾತ್ಮನಾಗಿ ಮರಣೋತ್ತರ ವೀರ ಚಕ್ರ ಪಡೆದ ಸೈನಿಕನ ಪತ್ನಿ, ತಂದೆ ತಾಯಿಯರ ಬಗ್ಗೆ 10 ನಿಮಿಷಗಳ ಕಾರ್ಯಕ್ರಮವೂ ಬರುವುದಿಲ್ಲ.
ನಮ್ಮ ಸಮಾಜ, ಮಾಧ್ಯಮಗಳು ಎತ್ತ ಸಾಗುತ್ತಿದೆ? ಕೆಲವು ದಿನಗಳ ಕಾಲ ಪರಸ್ಪರ ಕಾಲೆಳೆದುಕೊಂಡು, ಒಬ್ಬರಿಗೊಬ್ಬರು ವಂಚಿಸಿ, ಜಗಳವಾಡಿ ಪ್ರಶಸ್ತಿಯನ್ನು ಗೆದ್ದವರನ್ನು ನಾವು ಬಿಗ್ ಬಾಸ್ ಎಂದು ಕರೆಯುವುದಾದರೆ, ವಿಜೇತರು ಎಂದು ವೈಭವೀಕರಿಸುವುದಾದರೆ, ಹಗಲಿರುಳು ದೇಶಕ್ಕಾಗಿ ಸೇವೆ ಸಲ್ಲಿಸಿ, ಹುತಾತ್ಮರಾಗಿ ಮರಣೋತ್ತರ ಪ್ರಶಸ್ತಿ ಪಡೆದವರು, ತಮ್ಮ ಅಂಗಾಂಗಗಳನ್ನು ಕಳೆದುಕೊಂಡೂ ಸೇವೆ ಸಲ್ಲಿಸಲು ತುಡಿಯುವವರನ್ನು ನಾವು ಏನೆಂದು ಕರೆಯಬೇಕು?? ನಮಗೆ ಮಾದರಿಯಾಗಬೇಕಾದದ್ದು ರಿಯಾಲಿಟಿ ಷೋ ದಲ್ಲಿ ಬರುವ ಹೀರೊಗಳೋ ಅಥವಾ ದೇಶ ರಕ್ಷಿಸುವ ನೈಜ ಹೀರೋಗಳೋ ನೀವೇ ನಿರ್ಧರಿಸಿ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.