ಉಡುಪಿ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಸರಕಾರದ ಸ್ವಸಹಾಯ ಗುಂಪುಗಳ ಪರಿಶಿಷ್ಟ ಪಂಗಡದ ಸದಸ್ಯರಿಗೆ ನೀಡಲಾಗುವ “ಮೈಕ್ರೋ ಕ್ರೆಡಿಟ್ ಯೋಜನೆ’ಗೆ ಉಡುಪಿ, ದ.ಕ. ಜಿಲ್ಲೆಗಳಲ್ಲಿ ತೀವ್ರ ಹಿನ್ನಡೆಯಾಗಿದೆ. ಇದನ್ನು ಯಶಸ್ವಿಯಾಗಿ ಅನುಷ್ಠಾನಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ನಿಗಮದ ಅಧ್ಯಕ್ಷ ಎಸ್.ಸಿ. ಬಸವರಾಜು ಸೂಚನೆ ನೀಡಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಶಿಷ್ಟ ಪಂಗಡದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅನಂತರ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಸ್ವಸಹಾಯ ಗುಂಪುಗಳಲ್ಲಿ ಸದಸ್ಯರಾಗಿರುವ ಪರಿಶಿಷ್ಟ ಪಂಗಡದ ಫಲಾಪೇಕ್ಷಿಗಳಿಗೆ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು 15,000 ರೂ. ನೀಡಲಾಗುತ್ತದೆ. ಇದರಲ್ಲಿ 10,000 ರೂ. ಸಹಾಯಧನವಿದೆ. ಆದರೆ ಕರಾವಳಿ ಭಾಗದಲ್ಲಿ ಇದಕ್ಕೆ ಹೆಚ್ಚು ಆದ್ಯತೆ ನೀಡಿ ಯಶಸ್ವಿ ಗೊಳಿಸುವ ಅಗತ್ಯವಿದೆ ಎಂದರು.
175 ಕೋ. ರೂ. ಅನುದಾನ ಈ ಹಿಂದಿನ ಸರಕಾರಕ್ಕೆ ಹೋಲಿಸಿದರೆ ಈಗಿನ ಸರಕಾರ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಿದೆ. 2014-15ರಲ್ಲಿ 114 ಕೋ. ರೂ.ಗಳನ್ನು, 2015-16ನೇ ಸಾಲಿನಲ್ಲಿ 120 ಮತ್ತು ಹೆಚ್ಚುವರಿಯಾಗಿ 55 ಕೋ.ರೂ. ನೀಡಿದೆ. ಫಲಾಪೇಕ್ಷಿಗಳ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸ ಲಾಗುತ್ತಿದೆ. ಸಾಲಸೌಲಭ್ಯ ಮತ್ತು ವಿವಿಧ ಯೋಜನೆಗಳ ಸದುಪಯೋ ಗವಾಗುವಂತೆ ಮಾಡಲು ವಿವಿಧ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ ರಾಷ್ಟ್ರೀಯ ಪ. ಪಂಗಡ ಅಭಿವೃದ್ಧಿ ನಿಗಮ 2 ಕೋ. ರೂ. ನೀಡುವ ಭರವಸೆ ನೀಡಿದೆ ಎಂದು ಹೇಳಿದರು.
42 ಲಕ್ಷ ಜನಸಂಖ್ಯೆ : ರಾಜ್ಯದಲ್ಲಿ ಪ.ಪಂಗಡಕ್ಕೆ ಸೇರಿದ 50 ಜನಾಂಗಗಳಿವೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 42 ಲಕ್ಷ ಜನಸಂಖ್ಯೆ ಇದೆ. ಉಡುಪಿ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಶೇ. 50, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿ ಶೇ. 75ರಷ್ಟು ಸಾಧನೆಯಾಗಿದೆ. ರಾಜ್ಯದಲ್ಲಿ ಪ. ಪಂಗಡದವರ ಒಟ್ಟು 68.62 ಕೋ. ರೂ. ಸಾಲ ಮನ್ನಾ ಮಾಡಲಾಗಿದೆ. ಅದರಂತೆ ಉಡುಪಿ ಯಲ್ಲಿ 560 ಫಲಾನುಭವಿಗಳ ಒಟ್ಟು 1.32 ಕೋ.ರೂ. ಮನ್ನಾ ಮಾಡಲಾಗಿದೆ. ಜಿಲ್ಲೆಯಲ್ಲಿ ಭೂ ಒಡೆತನ ಯೋಜನೆಯಡಿ 2000-01ರಿಂದ ಇದುವರೆಗೆ 92 ಫಲಾನುಭವಿಗಳಿಗೆ 113.15 ಎಕರೆ ಖುಷ್ಕಿ, 2.26 ಎಕರೆ ತರಿ ಜಮೀನನ್ನು 97.71 ಲಕ್ಷ ರೂಪಾಯಿಗಳಿಗೆ ಖರೀದಿಸಿ ನೀಡಲಾಗಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಡಾ| ಆರ್. ವಿಶಾಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಕನಗವಲ್ಲಿ, ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.
ಎಲ್ಲ ಜಿಲ್ಲೆಗಳಲ್ಲೂ ಸ್ವಂತ ಕಟ್ಟಡ : ಪ್ರಸ್ತುತ ಪ. ಪಂಗಡ ನಿಗಮದ ಕಾರ್ಯಚಟುವಟಿಕೆಗಳು ಅಂಬೇಡ್ಕರ್ ನಿಗಮದ ಜತೆಯಲ್ಲೇ ನಡೆಯುತ್ತಿವೆ. ಆದರೆ ಇದರಿಂದ ಶೇ. 100ರಷ್ಟು ಗುರಿಸಾಧನೆ ಕಷ್ಟವಾಗುತ್ತಿದೆ. ಹಾಗಾಗಿ ಪ್ರತಿಯೊಂದು ಜಿಲ್ಲೆಯಲ್ಲಿಯೂ ವಾಲ್ಮೀಕಿ ಪ.ಪಂ. ಅಭಿವೃದ್ಧಿ ನಿಗಮದ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈಗಾಗಲೇ 16 ಜಿಲ್ಲೆಗಳಿಗೆ ಮಂಜೂರಾತಿ ದೊರೆತಿದೆ. 4 ಜಿಲ್ಲೆಗಳಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ ಎಂದು ಬಸವರಾಜು ತಿಳಿಸಿದರು.
ಆಸರೆ – ಹೊಸ ಯೋಜನೆ : ಪರಿಶಿಷ್ಟ ಪಂಗಡದ ವಿಧವೆಯರು ಮತ್ತು ಅಂಗವಿಕಲರಿಗಾಗಿ “ಆಸರೆ’ ಸಾಲ ಯೋಜನೆ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಮುಂದಿನ ವಾಲ್ಮೀಕಿ ಜಯಂತಿಯ ಸಂದರ್ಭ ಇದಕ್ಕೆ ಚಾಲನೆ ನೀಡಲಾಗುವುದು. ಈ ಯೋಜನೆಯಡಿ ಫಲಾಪೇಕ್ಷಿಗೆ 25,000 ರೂ. ಮಂಜೂರು ಮಾಡಲಾಗುವುದು. ಇದರಲ್ಲಿ 10,000 ರೂ. ಸಹಾಯಧನವಾಗಿರುತ್ತದೆ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಇಬ್ಬರು ವಿಧವೆಯರು ಮತ್ತು ಇಬ್ಬರು ಅಂಗವಿಕಲರನ್ನು ಆಯ್ಕೆ ಮಾಡಲಾಗುವುದು ಎಂದು ಬಸವರಾಜು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.