ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯನ್ನು ಭಾರತೀಯ ಹಿಂದೂ ಪರಂಪರೆಯವರು ನಾಗರ ಪಂಚಮಿ ಎಂದು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸುವರು. ಇಡೀ ದೇಶವೇ ನಾಗ ಪೂಜೆಯನ್ನು ಮಾಡುತ್ತದೆ ಎಂದರೆ ಇದರ ಮಹತ್ವವೇನಿರಬಹುದು, ಇದರ ಹಿಂದಿನ ಇತಿಹಾಸವೇನಿರಬಹುದು? ಸರ್ಪಗಳ ಆರಾಧನೆ ಅದೆಷ್ಟು ಪುರಾತನವಾದದ್ದು? ಕೇವಲ ಭಾರತೀಯ ನಾಗರೀಕತೆಯಲ್ಲಿ ಮಾತ್ರವೇ ಇವುಗಳ ಉಲ್ಲೇಖಗಳಿವೆಯೋ ಅಥವಾ ಇತರೆ ರಾಷ್ಟ್ರಗಳ ಇತಿಹಾಸದಲ್ಲೂ ಇದೆಯೆ? ಇಂತಹ ಹಲವಾರು ಪ್ರಶ್ನೆಗಳಿಗೆ ಕಾಲಾನುಕಾಲದಲ್ಲಾದ ಸಂಶೋಧನೆಗಳಿಂದ ಉತ್ತರ ದೊರಕಿದೆ. ಹಾಗೆಯೆ ಕಾಲಚಕ್ರದಲ್ಲಿ ಕೆಲ ಅಜ್ಞಾನಿಗಳ, ಅಂಧ ಧರ್ಮಾಚರಣೆಯ ಜನರ ಕಾರಣ ಭಾರತೀಯ ಪರಂಪರೆ ಹಾಗೂ ಪದ್ಧತಿಗಳಲ್ಲಿ ಸೇರಿಕೊಂಡ ಅನಾಚಾರ, ಅಪಚಾರಗಳ ನಿರ್ಮೂಲನೆಗೆ ವಿಷಯ ಜ್ಞಾನದ ಅವಶ್ಯಕತೆ ಇದೆ. ಆ ಜ್ಞಾನ ವೇದಗಳೆಂದು ಕರೆಯಲ್ಪಡುವ ವೈದಿಕ ಸಾಹಿತ್ಯದ ಅಧ್ಯಯನದ ಮೂಲಕ ಪಡೆಯುವ ಅವಕಾಶವುಂಟು. 108 ಉಪನಿಷತ್ಗಳು ಈ ವೇದದ ಒಂದು ಭಾಗವೇ ಆಗಿದ್ದು ನಮ್ಮ ಪರಂಪರಾಗತ ಜ್ಞಾನನಿಧಿಯ ಪರಿಚಯ ಮಾಡಿಕೊಡುತ್ತದೆ.
ನಾಗಗಳ ಪ್ರಸ್ತಾಪ ಭಾರತೀಯ ಪರಂಪರೆಯಲ್ಲಿ ಅತೀ ಪುರಾತನವಾದದ್ದಾಗಿದೆ. ಗಣೇಶನಿಗೆ ಹೊಟ್ಟೆಯ ಆಭರಣವಾಗಿ, ಪರಶಿವನ ಕೊರಳ ಮಾಲೆಯಾಗಿ, ಶ್ರೀಹರಿಯ ಶಯನ ತಲ್ಫವಾಗಿ, ಅಮೃತ ಮಂಥನದ ಕಡಗೋಲಾಗಿ, ಶಿವಪುತ್ರ ಸುಬ್ರಮಣ್ಯ ಅವತಾರವಾಗಿ ಹಲವು ದೇವಾನು ದೇವತೆಗಳ ಶಿರದ ಪ್ರಭಾವಳಿಯಾಗಿ, ಸಂಪತ್ತಿನ ರಕ್ಷಕನಾಗಿ ನಾರಾಯಣ ಅವತಾರದ ಭಾಗವಾಗಿ ಹತ್ತು ಹಲವು ಸ್ವರೂಪಗಳಲ್ಲಿ ನಾಗನನ್ನು ಕಾಣುವುದಿದೆ. ಇಂತಹ ಶಕ್ತಿಶಾಲಿ ಪ್ರಭಾವಿ ನಾಗಗಳ ಕುರಿತಾಗಿ ನಮ್ಮ ಪುರಾಣಗಳಲ್ಲಿ ಹಲವು ಕಥಾನಕಗಳುಂಟು. ಅದರಲ್ಲಿ ಕೆಲವು ಇಂತಿವೆ…
ಮಹರ್ಷಿ ಕಾಶ್ಯಪ ಎಂಬುವವರಿಗೆ ಅನೇಕ ಪತ್ನಿಯರಿದ್ದು ಅವರಲ್ಲಿ ಸಹೋದರಿಯಾದ ಕದ್ರು- ವಿನುತೆ ಎಂಬುವವರು ಒಬ್ಬರು. ಕದ್ರುವಿನ ಆಸೆಯಂತೆ ಮಹರ್ಷಿಕಶ್ಯಪರು ಅವಳಿಗೆ 1000 ಬಲಶಾಲಿ ನಾಗ ಸಂತಾನದ ವರಪ್ರಸಾದ ನೀಡಿದರು. ಅವರಲ್ಲಿ ವಾಸುಕಿ (ನಾಗರ ರಾಜ), ಶೇಷನಾಗ, ತಕ್ಷಕ, ಮಾನಸ (ನಾಗರಾಣಿ) ವಲಂ, ಪ್ರಮುಖರು. ವಿನುತೆಯಲ್ಲಿ ಅರುಣ ಹಾಗೂ ಗರುಡರೆಂಬ ಇಬ್ಬರು ಬಲಶಾಲಿ ಪುತ್ರತ್ರಯರು ಜನಿಸಿದರು. ಅರುಣ ಸೂರ್ಯ ದೇವನ ಸಾರಥಿಯಾದರೆ, ಗರುಡ ಶ್ರೀ ಮಹಾವಿಷ್ಣುವಿನ ವಾಹನವಾದನು.
ತಂದೆ-ಮಕ್ಕಳಾದ ಕಾಶ್ಯಪ, ನಾಗ, ಗರುಡನ ಜನ್ಮ ತಿಥಿ ಒಂದೇ ಆಗಿರುವ ಕಾರಣ ಶ್ರಾವಣದ ಪಂಚಮಿ ತಿಥಿಯಂದೇ ಈ ಮೂವರ ಪೂಜೆಯನ್ನ ಮಾಡುವುದು ಶ್ರೇಷ್ಠವೆನ್ನುವರು. ಈ ದಿನವನ್ನು ಗರುಡ ಪಂಚಮಿ, ನಾಗಪಂಚಮಿ, ಎಂತಲೂ ಕರೆವರು.
ತೇತ್ರಾಯುಗದ ಶ್ರೀ ರಾಮಾಯಣದಲ್ಲಿ ಗರುಡ ಹಾಗೂ ನಾಗಗಳ ಪ್ರಸ್ತಾಪವಿದೆ. ರಾವಣ ಪುತ್ರ ಇಂದ್ರಜಿತುವು ರಣರಂಗದಲ್ಲಿ ಸರ್ಪಾಸ್ತ್ರವನ್ನು ಪ್ರಯೋಗಿಸಿ ಎದುರಾಳಿಯಾದ ಶ್ರೀರಾಮ ಹಾಗೂ ಲಕ್ಷ್ಮಣನನ್ನು ಕಟ್ಟಿ ಹಾಕುತ್ತಾನೆ. ಆ ನಾಗಾಸ್ತ್ರದ ವಿಷದ ಪ್ರಭಾವದಿಂದ ಮೂರ್ಚಿತರಾದ ಸಹೋದರದ್ವಯರನ್ನು ಸ್ವತಃ ಗರುಡನೇ ಬಂದು ಆ ಬಂಧನದಿಂದ ಬಿಡಿಸಿ ಪ್ರಾಣಾಪಾಯದಿಂದ ಹೊರತರುತ್ತಾನೆ. ಇಲ್ಲಿ ಲಕ್ಷ್ಮಣನು ಆದಿಶೇಷನೆ ಅವತಾರವೆ ಆಗಿರುತ್ತಾನೆ. ದ್ವಾಪರದಲ್ಲಿ ಬಲರಾಮನಾಗಿ ಹರಿಯ ಕೃಷ್ಣಾವತಾರಕ್ಕೆ ಜೊತೆಗೂಡುತ್ತಾನೆ.
ವೈಕುಂಠದಲ್ಲಿ ಶ್ರೀ ಮಹಾವಿಷ್ಣುವಿನ ಸೇವೆಯಲ್ಲಿ ಆದಿಶೇಷ ಹಾಗೂ ಗರುಡ ಇಬ್ಬರೂ ಒಂದೆಡೆಯೆ ಇರುವರು. ಸಾಮಾನ್ಯವಾಗಿ ನಾಗ ಹಾಗೂ ಗರುಡನನ್ನು ಬದ್ಧವೈರಿಗಳೆಂದೆ ಬಿಂಬಿಸಲಾಗಿದೆ. ಆದರೆ ಶ್ರೀ ಹರಿಯ ಸನ್ನಿಧಾನದಲ್ಲಿ ರಾಗ-ದ್ವೇಷಗಳಿಗೆ ಯಾವುದೇ ಸ್ಥಾನಗಳಿರುವುದಿಲ್ಲ ಎಂಬುದನ್ನು ಸಹೋದರ ಜೋಡಿಯು ತೋರಿಸುತ್ತದೆ. ಜೀವನದಲ್ಲಿ ಎದುರಾಗುವ ಹಲವು ವಿರೋಧಾಭಾಸಗಳ ನಡುವೆ ಧರ್ಮದ ಹಾದಿಯಲ್ಲಿ ಕರ್ತವ್ಯ ನಿರ್ವಹಣೆ ಧ್ಯೇಯವಾಗಿರಬೇಕೆನ್ನುವುದನ್ನು ಇದು ತಿಳಿಸುತ್ತದೆ.
ದ್ವಾಪರ ಯುಗದಲ್ಲಿ ಪರೀಕ್ಷಿತ ಮಹಾರಾಜನು ಸರ್ಪದ ಕಾರಣ ಮರಣ ಹೊಂದುವನು. ಇದನ್ನು ಅರಿತು ಆತನ ಮಗನಾದ ಜನಮೇಜಯನು ಸರ್ಪ ಸಂಕುಲವನ್ನೇ ವಿನಾಶಗೈವ ಪ್ರತಿಶೋಧದ ಭಾವದಿಂದ ಮಹಾಯಜ್ಞವನ್ನು ಕೈಗೊಂಡಿರುತ್ತಾನೆ. ಆ ಯಜ್ಞದ ಫಲವಾಗಿ ಅರ್ಧ ನಾಗಸಂಕುಲವೇ ಯಜ್ಞದಗ್ನಿಗೆ ಆಹುತಿ ಯಾಗುತ್ತಿರುವಾಗ ಮಾನಸ (ನಾಗರಾಣಿ) ಹಾಗೂ ಜರಾತ್ಕಾರು (ಬ್ರಾಹ್ಮಣ) ಋಷಿ ದಂಪತಿಯ ಆಸ್ಥಿಕನೆಂಬ ಮಗನ ಕಾರಣದಿಂದಾದ ಮನಃ ಪರಿವರ್ತನೆ ಹೊಂದಿ ಜನಮೇಜಯನು ಆ ಮಹಾಯಜ್ಞವನ್ನು ನಿಲ್ಲಿಸಿ ಉಳಿದ ನಾಗಗಳಿಗೆ ಜೀವದಾನ ನೀಡುವನು. ಅಪಮಾನಿತ ತಕ್ಷಕನಾಗನು ಜನಮೇಜಯನ ವಂಶಜರಿಗೆತೊಂದರೆ ನೀಡುವ ಸಂಕಲ್ಪ ಮಾಡುವನು. ಖಾಂಡವವನದಲ್ಲಿ ನೆಲೆ ನಿಂತಿದ್ದ ತಕ್ಷಕನಿಗೆ ಜನಮೇಜಯನ ವಂಶಜನಾದ ಅರ್ಜುನ ಎದುರಾಳಿಯಾಗಿ ನಿಲ್ಲುತ್ತಾನೆ. ಅರ್ಜುನನಿಂದ ಸೋತು, ಗರ್ವಭಂಗ ಹೊಂದಿ ಪಾತಾಳ ಲೋಕವನ್ನು ಸೇರುತ್ತಾನೆ. ದ್ವಾಪರದಲ್ಲೇ ಸುಪ್ರಸಿದ್ಧ ನಾಗಲೋಕದ ಕಥಾನಕವೂ ಇದೆ. ಅರ್ಜುನ ಮಣಿಪುರದ ನಾಗಕನ್ಯೆ ಊಲೂಚಿಯನ್ನು ವಿವಾಹವಾಗಿ ಬಭ್ರುವಾಹನನೆಂಬ ವೀರಪುತ್ರ ಪಡೆದನೆಂಬ ಕಥೆಯಿದೆ. ಶ್ರೀ ಕೃಷ್ಣನ ಕಾಳಿಯ ಮರ್ದನವು ಅತ್ಯಂತ ಸ್ವಾರಸ್ಯಕರವೂ ಹಲವು ದೇವಾಲಯಗಳ ಕೆತ್ತನೆಯಲ್ಲಿ ಜೀವಂತವಾಗಿಯೂ ಉಳಿದಿದೆ.
ಭಾರತೀಯರಾದ ನಾವು ನಾಗರವನ್ನು ಸಾವು, ಪುನರ್ಜನ್ಮ, ಚಿರಂಜೀವತ್ವದ ಸ್ವರೂಪವಾಗಿ ಕಾಣುತ್ತೇವೆ. ಏಕಕಾಲದಲ್ಲೇ ಶುಭಕರನನ್ನಾಗಿಯೂ, ಅಶುಭಕಾರಕನಾಗಿಯೂ, ದೈವವಾಗಿಯೂ, ಆರೋಗ್ಯಪ್ರದಾಯಕನನ್ನಾಗಿಯೂ, ಸಂತಾನಕಾರಕನನ್ನಾಗಿಯೂ ಕಾಣುತ್ತೇವೆ.
ಭಾರತೀಯ ಶಿಲ್ಪಕಲೆಯಲ್ಲಿ ನಾಗರಶೈಲಿಯು ಅತ್ಯಂತ ಪ್ರಸಿದ್ಧವಾಗಿದೆ. ದೇಗುಲಗಳ ಶಿಲ್ಪರಚನೆಯಲ್ಲಿ ನಾಗಗಳ ಚಿತ್ರಣ. ಶಿಲ್ಪರಚನೆಯನ್ನು ಎಲ್ಲೆಲ್ಲೂ ಕಾಣಬಹುದು. ಎಲ್ಲೋರಾದ ಜೋಡಿ ನಾಗರಗಳ ಶಿಲಾಮೂರ್ತಿ, ಅನಂತ ಪದ್ಮನಾಭ ದೇಗುಲದ ಶೇಷಶಯನ ಹರಿಯ ಮೂರ್ತಿ ಅಲ್ಲಿನ ಸಂಪತ್ತಿನ ರಕ್ಷಣೆಗಾಗಿ ಸ್ವಯಂ ಆದಿಶೇಷನೆ ಇರುವನೆಂಬ ನಂಬಿಕೆಯೊಂದಿಗೆ ಕೆತ್ತಲ್ಪಟ್ಟ ಸರ್ಪಗಳನ್ನು ಕಾಣಬಹುದು. ಶೃಂಗೇರಿಯ ಶಾರದಾ ಪೀಠದ ತುಂಗಾತಟದಲ್ಲಿ ನಾಗ ರಕ್ಷಣೆಯಲ್ಲಿರುವ ಮಂಡೂಕದ ಶಿಲ್ಪದ ಹಿಂದೆಅಮ್ಯಾಯಪೀಠದ ಸ್ಥಳ ನಿರ್ಧರಿಸಲು ಶ್ರೀ ಶಂಕರಾಚಾರ್ಯರಿಗೆ ಕಾರಣವಾದ ಸತ್ಯ ಘಟನೆಯನ್ನು ಹೊಂದಿರುವ ಹಿನ್ನೆಲೆ ಇದೆ. ಹಾಗೆಯೆ ದೇಶದಲ್ಲಿ ನಾಗಗಳಿಗಾಗಿ ಪ್ರಸಿದ್ಧಿ ಹೊಂದಿರುವಂತಹ ಹಲವು ಸ್ಥಳ, ದೇವಾಲಯಗಳಿವೆ. ಅವು-ಮುನ್ನಾರ ಶಾಲಾ ದೇಗುಲ (ಕೇರಳ), ಕುಕ್ಕೆ ಸುಬ್ರಮಣ್ಯ(ಕರ್ನಾಟಕ), ಭುಜಂಗ ನಾಗ ದೇಗುಲ (ಗುಜರಾತ್), ತಿರುಗನಾಗೇಶ್ವರ ದೇವಸ್ಥಾನ (ತಿರುನಾಗೇಶ್ವರಂ), ನಾಗರಾಜದೇಗುಲ (ನಾಗರಕೊಯಿಲ್), ಘಾಟಿ ಸುಬ್ರಮಣ್ಯ (ಕರ್ನಾಟಕ) ಶೇಷನಾಗ ಸರೋವರ (ಕಾಶ್ಮೀರ) ಹೀಗೆ ಹಲವಾರು ಜಾಗೃತ ದೇವಸ್ಥಾನಗಳಿವೆ.
ಭಾರತೀಯ ಋಷಿ ಪರಂಪರೆಯವರು ಪ್ರಕೃತಿ ಹಾಗೂ ಮಾನವ ಎರಡೂ ಒಂದೇ ಯಥಾ ಬ್ರಹ್ಮಾಂಡೆ ತಥಾ ಪಿಂಡಾಂಡೆ ಎಂದು ಅತೀ ಮಹತ್ವದ ಸಂಗತಿಯನ್ನು ಸರಳೀಕೃತಗೊಳಿಸಿ ಜಗದ ಮುಂದಿಟ್ಟಿದ್ದಾರೆ. ಆ ದಿಶೆಯಲ್ಲಿ ಪಂತಜಲಿ ಮಹರ್ಷಿಯ ಯೋಗದರ್ಶನದಲ್ಲಿ ಉಲ್ಲೇಖಿಸಲಾಗಿರುವ ಕುಂಡಲಿನಿಯು ಒಂದು.
ಹೃದಯ ಪ್ರಜ್ಞೆಯ ಕೇಂದ್ರವಾಗಿದ್ದು ಅದು ದೇಹದ ಎಲ್ಲಾ ಅಂಗಕಾರ್ಯ ನಿರ್ವಹಿಸುತ್ತಿರುವ ಜೀವಾತ್ಮನ ನೆಲೆಯಾಗಿದೆ. ತಂತ್ರಗಳ ಕೂಟ ಅರಿವಿನ ಕೇಂದ್ರವನ್ನು ಚಕ್ರಗಳ ಮೂಲಕ ಬೆನ್ನೆಲುಬಿನ ದಾರಿಯಲ್ಲಿ ಸಾಗಿ ಹೃದಯದ ಮೂಲಕ ಶಿರದ ಊರ್ದ್ವ ಭಾಗವಾದ ಮೆದಳಿನ ಸಹಸ್ರಾರ ಚಕ್ರ ಕಂಡುಕೊಳ್ಳುತ್ತೆ. ಸುಶಮ್ನಾ ಆಂತರಿಕ ಶಕ್ತಿಯಾಗಿದ್ದು ಅದನ್ನು ಬಲಗೊಳಿಸುವ ಮುನ್ನ ಇಡಾ ಹಾಗೂ ಮಂಗಳಾ ನಾಡಿಯಲ್ಲಿ ಶಕ್ತಿ ತುಂಬಬೇಕಾಗುತ್ತದೆ. ಇದು ಬೆನ್ನು ಮೂಳೆಯ ಮಜ್ಜೆ ಮೂಕಾಂತರ ಶಕ್ತಿ ಸಂಚಯವಾಗಿ ಪ್ರವಹಿಸುತ್ತಾ ಸಹಸ್ರಾರು ಚಕ್ರದ ಮೂಲಕ ಬ್ರಹ್ಮರಂಧ್ರ ತಲುಪಿ ಕುಂಡಲಿಯನ್ನು ಜಾಗೃತಗೊಳಿಸುತ್ತೆ. ಈ ಆಂತರಿಕ ಶಕ್ತಿಯನ್ನ ಶಕ್ತಿಕೇಂದ್ರ ಅಥವಾ ಸರ್ಪಶಕ್ತಿ ಎಂದು ಕರೆಯುತ್ತಾರೆ. ಸುರಳಿಯಾಕಾರ ನಮ್ಮ ಶರೀರದ ಮಲಗಿರುವ ಸುಪ್ತ ಶಕ್ತಿಯನ್ನು ಎಚ್ಚರಿಸುವ (ಜಾಗೃತ) ಕ್ರಿಯೆಯೆ ಕುಂಡಲಿನಿ ಸೂಕ್ಷ್ಮ ಸರ್ಪದ ಕಣ್ಣಿನ ಭಾಗವು ಮಹತ್ತಾದ ಶಕ್ತಿಯನ್ನು ಹೊಂದಿದ್ದು ಅದನ್ನು ಅರಿತರೆ ಎಲ್ಲವನ್ನೂ ಗೆಲ್ಲಬಹುದೆಂದು ಭಾರತೀಯ ಪುರಾತನ ಗ್ರಂಥಗಳಲ್ಲಿ ಹೇಳಲಾಗಿದೆ.
ದೇಹದಲ್ಲಿ ಇಂದ್ರಿಯಗಳನ್ನು ಕುದುರೆ, ಮನಸ್ಸು-ಲಗಾಮು, ಬುದ್ಧ್ದಿ-ಸಾರಥಿ ಹಾಗೂ ಆತ್ಮರಥದಲ್ಲಿ ಕುಳಿತಿದ್ದು ಇಂದ್ರಿಯ, ಮನಸ್ಸು, ಬುದ್ಧಿಯನ್ನುಏಕಸೂತ್ರದಲ್ಲಿ ಬಂಧಿಸಿ ಆತ್ಮೋನ್ನತಿಯಾಗಲು ಯೋಗ ಅತ್ಯುತ್ತಮ ಸಾಧನವಾಗಿದೆ. ಯೋಗವೆಂದರೆ ಚಿತ್ತದ ವೃತ್ತಿಗಳನ್ನು ನಿರೋಧಿಸುವುದು ತನ್ಮೂಲಕ ಜೀವನದ ಅಭಿವೃದ್ಧಿಗೆ ಸಾಧನೆ.
ಪ್ರಪಂಚದ ಇತರೆ ಭಾಗಗಳಲ್ಲೂ ಕೂಡ ಸರ್ಪಗಳ ಕುರಿತಾದ ವಿವರಣೆಯನ್ನು ಕಾಣಬಹುದು. ಅತ್ಯಂತ ಪ್ರಾಚೀನ ಕ್ರಿ.ಪೂ. ಶ ಒಂದು ಮಿಲಿಯನ್ ವರ್ಷದ ಹಿಂದಿನ ಮಾಯನ್ನರ ನಾಗರೀಕತೆಯಲ್ಲಿ ಕುಕುಲಕನ್ ಅನ್ನುವುದು ನಾಗಗಳ ತಂದೆ (Father of serpents) ಎಂದು ಹೇಳಲಾಗಿದೆ. ಈ ಮಾಯನ್ನರ ಸಂತತಿಯು ನಾಲ್ಕು ಭಾಗಗಳಾಗಿ ವಿವದೆಡೆ ಹಂಚಿಹೋಗಿದ್ದು ಇವರ ಸಂತತಿಯು ಒಂದು ಸಂತತಿಯಾದ ಕೇಕಚಿ ಮಾಯಾ ಎನ್ನುವ ನಾಗ ಮೂಲದವರು ಭಾರತದ ಅಸ್ಸಾಮಿನ, ನಾಗಾಲ್ಯಾಂಡಿನ ಅಹೋಂ ಜನರೆಂದು ಹೇಳಲಾಗುತ್ತದೆ. ಸುಮೇರಿಯನ್ನರು ಕ್ರಿ.ಪೂ.ಶ ೨೧೦ರಲ್ಲೇ ಏಳು ತಲೆಯನ್ನು ಹೊಂದಿದ ನಾಗನನ್ನು ಪೂಜಿಸುತ್ತಿರುವುದು ಕಂಡುಬರುತ್ತದೆ.
ಕಂಚಿನ ಯುಗದಲ್ಲಿ ಗ್ರೀಕರು ಆಸ್ಕೆಲ್ಪಾಯಸ ಎಂಬ ಹೆಸರಿನ ದೇವತೆಯನ್ನು ಪೂಜಿಸುತ್ತಿದ್ದರು. ಜಪಾನೀಯರು, ರೈಯುಜಿನ್ ಎಂದು, ಈಜಿಪ್ಟ್ನಲ್ಲಿ ವಾಡ್ಜಿವದೇರ್ ಹಾಗೂ ಅಪಾಫೀಸ್ಎನ್ನುವ ಹೆಸರಿನಿಂದ ಪೂಜಿಸುತ್ತಿದ್ದರು. ಚೀನಿಯರು 8 ಮುಖದ ಬೃಹತ್ ಗಾತ್ರದ ಸರ್ಪಾಕೃತಿಯ ಡ್ರ್ಯಾಗನ್ ಎಂಬ ಜೀವಿಯನ್ನು ಆರಾಧಿಸುವರು. ಈ ಜೀವಿಯ ಕುರಿತಾಗಿ ಶಾಕ್ಯಮುನಿ ವಿರಚಿತ ಕಮಲ ಸೂತ್ರದಲ್ಲಿ ಮಾಹಿತಿ ಇದೆ. ಕೊರಿಯನ್ನರು ಎಬ್ಶಿನ್ ಎನ್ನುವ ಸಮೃದ್ಧಿಯ ದೇವತೆ ರೂಪದಲ್ಲಿ ನಾಗನನ್ನು ಆರಾಧಿಸುತ್ತಿದ್ದರು. ಬುದ್ಧನ ಚರಿತ್ರೆಯಲ್ಲಿ ಮುಚಲಿಂದಾ ಎನ್ನುವ ನಾಗರಾಜನು ಸತತ ಏಳು ದಿನಗಳ ಕಾಲ ಧ್ಯಾನಾವಸ್ಥೆಯಲ್ಲಿದ್ದ ಬುದ್ಧನನ್ನು ಮಳೆಯಿಂದ ರಕ್ಷಿಸಲು ತನ್ನ ಹೆಡೆಯನ್ನು ಬಿಚ್ಚಿ ನೆರಳಿನಂತೆ ನಿಂತು ಸೇವೆಗೈದನು ಎಂದಿದೆ. ಜೈನ, ಬೌದ್ಧ ಧರ್ಮದಲ್ಲಿ ಪಾರ್ಶ್ವನಾಥ ಹಾಗೂ ತೀರ್ಥಂಕರರ ಶಿರದ ಹಿಂಭಾಗ ಹೆಡೆ ಬಿಚ್ಚಿರುವ ನಾಗಗಳ ಪ್ರಭಾವಳಿ ಕಾಣಬಹುದು. ಥೈಲ್ಯಾಂಡ್, ಕಾಂಬೋಡಿಯಾ, ಇಂಡೋಚೀನಾ ಇಲ್ಲೆಲ್ಲಾ ನಾಗಗಳ ಆರಾಧನೆ ಕರುಹುಗಳಿವೆ. ಬೈಬಲ್ನಲ್ಲಿ ಕೂಡ ನಾಗನ ಕುರಿತಾಗಿ ಹಿಬ್ರೂ ಭಾಷೆಯಲ್ಲಿ ನಿಚಾಸ ಎನ್ನಲಾಗುವ ಹೆಸರಿನಿಂದ ಹೇಳಲಾಗಿದೆ. ಕೆಟ್ಟದರ ಸಂಕೇತವಾಗಿ ಬಳಸಲಾಗಿದೆ. ಹೀಗೆ ಹಲವಾರು ರಾಷ್ಟ್ರಗಳ ಇತಿಹಾಸ ಶೋಧಿಸಿದಾಗ ಪುರಾತನ ಜನಾಂಗದವರು ಜಾಗಗಳನ್ನು ಔಷಧಿಯ ದೇವತೆಯಾಗಿ ಸಮೃದ್ಧಿಯ, ಶಕ್ತಿಯ ಫಲವಂತಿಕೆಯ, ಸಾವಿನ, ಪುನರ್ಜನ್ಮದ, ಸಮಯ(ಕಾಲ)ವೆಂದೂ, ಹತ್ತು ಹಲವು ನಂಬಿಕೆಗಳನ್ನು ಹೊಂದಿ ಹಲವು ಸ್ವರೂಪಗಳಲ್ಲಿ (ಅರ್ಧನಾಗ ಅರ್ಧ ಮನುಷ್ಯ) ಪೂಜಿಸುತ್ತಿದ್ದರು.
ಕ್ರಿ.ಪೂ.ಶ 2 ಮಿಲಿಯನ್ ವರ್ಷಕ್ಕೂ ಹಿಂದಿನ ಜ್ಞಾನಭಂಡಾರದ ವೇದಗಳು ಪ್ರಕೃತಿಯೇ ಸರ್ವೋಚ್ಛ ಎಂದು ಹೇಳಿ ಆ ಪ್ರಕೃತಿಯಲ್ಲಿ ಇರುವ ಸರ್ವ ಜೀವಿಗಳಲ್ಲೂ ಅದರದೇ ಆದ ಶಕ್ತಿ ಇದ್ದು ಕೆಲವೊಮ್ಮೆ ಆ ಶಕ್ತಿಯನ್ನು ಉದ್ದೀಪ್ತಗೊಳಿಸಿಕೊಂಡು ಸರ್ವಶಕ್ತಿಗೊಳಿಸಿ ಸಮಾಜಮುಖಿಯಿಂದ ಆತ್ಮೋನ್ನತಿಯೇ ಅಂತಿಮ ಸಾಧನ ಎನ್ನುವುದನ್ನು ಕಲಿಸುತ್ತದೆ. ಭಾರತ ಕೇವಲ ಭೂಖಂಡವಲ್ಲಾ, ನೆಲವಲ್ಲಾ ಅದೊಂದು ಶಕ್ತಿ, ಪ್ರಪಂಚಕ್ಕೆ ಜ್ಞಾನ ಉಣಬಡಿಸಿದ ಜಗತ್ತಿನ ನಾಗರೀಕತೆಯ ಮೊದಲ ತೊಟ್ಟಿಲು ಭಾರತವೇ.
✍️ ಶ್ರೀಮತಿ ಸುನೀತಾ ಗಂಗಾಧರ್, ರಾಮನಗರ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.