ಹೊಸದಾಗಿ ಮದುವೆಯಾದ ಪ್ರತೀ ಮಹಿಳೆಗೂ ಶ್ರಾವಣ ಮಾಸ ಬಹಳ ವಿಶೇಷವಾದ ತಿಂಗಳು. ಶ್ರಾವಣ ಮಾಸವು ಸಾಮಾನ್ಯವಾಗಿ ಇಂಗ್ಲಿಷ್ ಕ್ಯಾಲೆಂಡರ್ನ ಆಗಸ್ಟ್ ತಿಂಗಳಲ್ಲಿ ಬರುತ್ತದೆ. ಶ್ರವಣ ನಕ್ಷತ್ರವು ಹುಣ್ಣಿಮೆಯಂದು ಬರುವ ತಿಂಗಳಾದ ಕಾರಣ ಈ ತಿಂಗಳನ್ನು ಶ್ರಾವಣ ಮಾಸ ಎಂದು ಕರೆಯಲಾಗುತ್ತದೆ. ಈ ಸಂಪೂರ್ಣ ಮಾಸವು ಶಿವನಿಗೆ ಅರ್ಪಿತವಾಗಿದೆ ಮತ್ತು ಈ ತಿಂಗಳಲ್ಲಿ ಶಿವನನ್ನು ಪೂಜಿಸುವುದರಿಂದ ಶಿವನಿಂದ ಹೆಚ್ಚಿನ ಆಶೀರ್ವಾದಗಳು ಲಭಿಸುತ್ತದೆ ಎಂಬ ನಂಬಿಕೆಯಿದೆ. ಶ್ರಾವಣಮಾಸವು ಹಿಂದೂ ಕ್ಯಾಲೆಂಡರ್ನ 5 ನೇ ಮಾಸವಾಗಿದೆ.
ವಿಷ್ಣುವು ಜನಿಸಿದ ನಕ್ಷತ್ರವಾದ ಶ್ರಾವಣ ನಕ್ಷತ್ರವನ್ನು ಅತ್ಯಂತ ಶುಭ ನಕ್ಷತ್ರ ಎಂದು ನಂಬಲಾಗುತ್ತದೆ. ಶ್ರಾವಣ ನಕ್ಷತ್ರದ ದಿನದಂದು ಬ್ರಹ್ಮನು ವಿಷ್ಣುವನ್ನು ಮೊದಲ ಬಾರಿಗೆ ನೋಡಿದ್ದನು ಎನ್ನಲಾಗಿದೆ. ಭಗವಾನ್ ಗೋವಿಂದನ ರೂಪಧಾರಣೆಯೂ ಇದೇ ದಿನದಂದು ನಡೆಯಿತು. ಶ್ರಾವಣ ನಕ್ಷತ್ರದ ದಿನದಂದು ಭಗವಾನ್ ಗೋವಿಂದರು ಮಹಾಲಕ್ಷ್ಮಿ ದೇವಿಯನ್ನು ಹುಡುಕಿಕೊಂಡು ತಿರುಮಲ ಬೆಟ್ಟಕ್ಕೆ ಕಾಲಿಟ್ಟಿದ್ದರು. ಹಿಂದೂ ಐತಿಹಾಸಿಕ ಗ್ರಂಥಗಳ ಉಲ್ಲೇಖಗಳ ಪ್ರಕಾರ ಶ್ರಾವಣ ಮಾಸವು ಶಿಕ್ಷಣವನ್ನು ಪ್ರಾರಂಭಿಸಲು ಶುಭ ತಿಂಗಳು ಎಂದು ಹೇಳಲಾಗುತ್ತದೆ. ಆದ್ದರಿಂದ ಬಾಲಕರಿಗೆ ವೇದಾಧ್ಯನ ಮಾಡಲು ಅನುಕೂಲವಾಗುವಂತೆ ಈ ತಿಂಗಳಲ್ಲಿ ಉಪಕರ್ಮಗಳು ನಡೆಯುತ್ತದೆ. ಲಕ್ಷ್ಮಿ ಮತ್ತು ಗೌರಿ ದೇವಿಯರಿಗೆ ಮತ್ತು ಅವರನ್ನು ಪೂಜಿಸುವ ಭಕ್ತರಿಗೆ ಶ್ರಾವಣ ಮಾಸವು ಬಹಳ ವಿಶೇಷವಾಗಿದೆ.
ಶ್ರಾವಣ ಮಾಸವು ಬರುವಾಗ ಹಬ್ಬಗಳ ಸಾಲಿನೊಂದಿಗೆ ಬರುತ್ತದೆ. ಶ್ರಾವಣ ಮಾಸವು ಮಹಿಳೆಯರಿಗೆ ಅತ್ಯಂತ ಪ್ರಮುಖವಾದ ಮಾಸವಾಗಿದೆ. ಈ ತಿಂಗಳಲ್ಲಿ ವ್ರತಗಳನ್ನು ಮಾಡುವ ಮಹಿಳೆಯರು ಎಲ್ಲಾ ರೀತಿಯ ಸುಖ, ಸಂತೋಷ ಮತ್ತು ಸಮೃದ್ಧಿಯನ್ನು ಹೊಂದುತ್ತಾರೆ ಎಂಬ ಅಚಲವಾದ ನಂಬಿಕೆಯು ಸನಾತನ ಧರ್ಮದ ಸ್ತ್ರೀಯರಲ್ಲಿದೆ.
ವರಮಹಾಲಕ್ಷ್ಮಿ ವ್ರತ
ಶ್ರಾವಣ ಮಾಸದಲ್ಲಿ ಮೊದಲ ಮತ್ತು ಪ್ರಮುಖ ಹಬ್ಬವೆಂದರೆ ಗರುಡ ಪಂಚಮಿ. ತನ್ನ ತಾಯಿಗೆ ಸೇವಕಿಯ ಕರ್ತವ್ಯದಿಂದ ಬಿಡುಗಡೆ ಕೊಡಿಸಲು ಶ್ರಮಿಸುತ್ತಿದ್ದ ಭಗವಾನ್ ಗರುಡನು ವಿಷ್ಣುವಿಗೆ ವಾಹನವಾಗಿ ಮಾರ್ಪಟ್ಟನು. ಮತ್ತು ಅವನ ಕುರಿತಾದ ಕಥೆಗೆ ಗರುಡ ಪುರಾಣ ಎಂದು ಹೆಸರಿಡಲಾಗಿದೆ. ಈ ದಿನ [ಶ್ರಾವಣ ಪಂಚಮಿ] ಗರುಡನನ್ನು ಪೂಜಿಸಿದರೆ ಗೆಲುವು ಶಕ್ತಿ ಮತ್ತು ಧೈರ್ಯಗಳು ಜೀವನದಲ್ಲಿ ಸಮೃದ್ಧವಾಗಿರುತ್ತದೆ ಎಂಬ ನಂಬಿಕೆಯಿದೆ. ಯಾಕೆಂದರೆ ಗರುಡ ಗೆಲುವು, ಧೈರ್ಯ ಮತ್ತು ಶಕ್ತಿಗಳ ಸಂಗಮ.
ಶ್ರಾವಣ ಸಪ್ತಮಿಯಂದು ಸೂರ್ಯನ ಪೂಜೆಯನ್ನು ಮಾಡಲಾಗುತ್ತದೆ. ಶ್ರಾವಣ ಏಕಾದಶಿಯನ್ನು ಪುತ್ರಾಧಿ ಏಕಾದಶಿ ಎಂಬುದಾಗಿಯೂ ಕರೆಯಲಾಗುತ್ತದೆ. ಸಂತಾನ ಭಾಗ್ಯವಿಲ್ಲದ ದಂಪತಿಗಳು ಸಂತಾನ ಪ್ರಾಪ್ತಿಯಾಗಲು ಈ ಏಕಾದಶಿ ವೃತವನ್ನು ಆಚರಿಸುತ್ತಾರೆ. ಶ್ರಾವಣ ದ್ವಾದಶಿಯನ್ನು ದಾಮೋದರ ದ್ವಾದಶಿ ಎಂಬುದಾಗಿಯೂ ಕರೆಯುತ್ತಾರೆ ಮತ್ತು ಶ್ರಾವಣ ಭಗವಾನನ ಪೂಜೆಯನ್ನು ಮಾಡುತ್ತಾರೆ.
ಶ್ರಾವಣ ಮಾಸನ ಮೊದಲ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು ಮಾಡಲಾಗುತ್ತದೆ. ಈ ವ್ರತವು ಶಿವನಿಂದ ಪಾರ್ವತಿಗೆ ಬೋಧಿಸಲ್ಪಟಿತು ಎಂಬ ನಂಬಿಕೆಯಿದೆ. ಈ ವ್ರತವನ್ನು ಮಾಡುವ ಎಲ್ಲಾ ಮಹಿಳೆಯರು ಪತಿ, ಮಕ್ಕಳೊಂದಿಗೆ ಉತ್ತಮ ಹಾಗು ಸಮೃದ್ಧ ಜೀವನವನ್ನು ಹೊಂದುತ್ತಾರೆ ಎಂಬ ಭರವಸೆಯು ಭಕ್ತರಿಗಿದೆ.
ಮಂಗಳ ಗೌರಿ
ನವ ವಿವಾಹಿತರಾದ ಸ್ತ್ರೀಯರು ತಮ್ಮ ಪತಿಯ ಕಲ್ಯಾಣ ಹಾಗೂ ದೀರ್ಘಾಯುಶ್ಯಕ್ಕಾಗಿ ಮಂಗಳಗೌರಿ ವೃತವನ್ನು ಮಾಡುತ್ತಾರೆ. ಈ ವೃತವನ್ನು ಹೆಚ್ಚಾಗಿ ಶ್ರಾವಣ ಮಾಸದ ಪ್ರತೀ ಮಂಗಳವಾರದಂದು ಪಾಲಿಸಲಾಗುತ್ತದೆ.ಸಮುದ್ರ ಮಥನದ ಸಂದರ್ಭದಲ್ಲಿ ವಿಷವನ್ನು ತೆಗೆದುಕೊಂಡ ಶಿವನಿಗಾಗಿ ಪಾರ್ವತಿ[ಗೌರಿ]ತನ್ನ ಗೌರವರ್ಣವನ್ನು ಹಿಂದಿರುಗಿಸಿದ್ದಳು. ಆದ್ದರಿಂದ ಶ್ರಾವಣ ಮಾಸದಲ್ಲಿ ಪ್ರತೀ ಮಂಗಳವಾರ ಗೌರಿಯನ್ನು ಪೂಜಿಸುವ ಭಕ್ತರಿಗೆ ಸಂತೋಷ ಸಮೃದ್ಧಿ ಪ್ರಾಪ್ತಿಯಾಗುವಂತೆ ಪರಮ ಶಿವನು ವರವನ್ನು ನೀಡಿದ್ದನು.
ಶ್ರಾವಣ ಮಾಸದ ಪಂಚಮಿಯನ್ನು ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ ಮತ್ತು ವಿಶೇಷವಾಗಿ ನಾಗದೇವತೆಗೆ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಶ್ರಾವಣ ಮಾಸದ ಹುಣ್ಣಿಮೆಯನ್ನು ರಕ್ಷಾಬಂಧನವಾಗಿ ಆಚರಿಸಲ್ಪಡುತ್ತದೆ. ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ರಕ್ಷೆಯನ್ನು ಕಟ್ಟಿ, ತಮ್ಮ ಸಂರಕ್ಷಣೆಯ ಹೊಣೆಯನ್ನು ಸೋದರರಿಗೆ ನೀಡುತ್ತಾರೆ.
ಈ ಪೌರ್ಣಮಿಯನ್ನು ಜಂಧ್ಯಾಲ ಪೌರ್ಣಮಿ ಎಂದೂ ಕರೆಯಲಾಗುತ್ತದೆ. ಬ್ರಹ್ಮೋಪದೇಶ ಹೊಂದಿದ ಪುರುಷರು ಈ ಶುಭದಿನದಂದು ಯಜನೋಪವೀತವನ್ನು ಬದಲಾಯಿಸಿ ಗಾಯತ್ರೀ ಮಂತ್ರವನ್ನು ಜಪಿಸುತ್ತಾರೆ, ಇದನ್ನು ಉಪಕರ್ಮ ಎಂದೂ ಕರೆಯಲಾಗುತ್ತದೆ.
ಪಶ್ಚಿಮ ಭಾರತ,ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ನಾರಾಲಿ ಪೂರ್ಣಿಮಾವನ್ನು ಆಚರಿಸುತ್ತಾರೆ. ಈ ದಿನ ವರುಣ ದೇವರನ್ನು ಗೌರವಿಸುವ ಸಂಕೇತವಾಗಿ ತೆಂಗಿನಕಾಯಿಯನ್ನು ಸಮುದ್ರಕ್ಕೆ ಅರ್ಪಿಸಲಾಗುತ್ತದೆ. ಈ ಪೂಜೆಯ ಬಳಿಕ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆಯನ್ನು ಆರಂಭಿಸುತ್ತಾರೆ.
ಶ್ರಾವಣ ಪೂರ್ಣಿಮಾ ದಿನದಂದು ಭಗವಾನ್ ಶ್ರೀಕೃಷ್ಣನ ಹಿರಿಯ ಸಹೋದರರಾದ ಪ್ರಭು ಬಲರಾಮರ ಜನ್ಮದಿನವನ್ನು ಆಚರಿಸಲಾಗುತ್ತದೆ. ಒಡಿಶಾದಲ್ಲಿ ಈ ದಿನವನ್ನು ಗಮ ಪೂರ್ಣಿಮಾ ಎಂಬುದಾಗಿ ಆಚರಿಸುತ್ತಾರೆ ಈ ದಿನದಂದು ಎಲ್ಲ ಸಾಕು ಜಾನುವಾರುಗಳನ್ನು ಅಲಂಕರಿಸಿ ಪೂಜಿಸಲಾಗುತ್ತದೆ. ಮತ್ತು ಜಗನ್ನಾಥ ದೇವಾಲಯದಲ್ಲಿ ಜುಲಾನ್ ಯಾತ್ರೆ ಎಂಬ ಹಬ್ಬವನ್ನೂ ಆಚರಿಸುತ್ತಾರೆ. ಶ್ರಾವಣ ಹುಣ್ಣಿಮೆಯ ಬಳಿಕ ಎಂಟನೇ ದಿನದಂದು ಕೃಷ್ಣಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ಶ್ರಾವಣ ಶುಕ್ಲ ಅಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಕರೆಯಲಾಗುತ್ತದೆ. ದಿನ ಪೂರ್ತಿ ಉಪವಾಸವಿದ್ದು ಕೃಷ್ಣನಿಗೆ ಪ್ರಿಯವಾದ ಹಾಲು ಹಣ್ಣು ಬೆಣ್ಣೆ, ಚಕ್ಕುಲಿ ,ಕಡುಬು ಹೀಗೆ ನಾನಾ ಬಗೆಯ ಭಕ್ಷ್ಯಗಳನ್ನು ಮಾಡಿ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಮತ್ತು ದಹಿ ಹಂಡಿ, ಮೊಸರು ಕುಡಿಕೆ ಉತ್ಸವಗಳನ್ನು ಆಯೋಜಿಸಲಾಗುತ್ತದೆ.
ಕನ್ವರ್ ಯಾತ್ರೆಯು ಉತ್ತರ ಭಾರತದಲ್ಲಿ ಪ್ರಸಿದ್ಧವಾಗಿದ್ದು , ಗಂಗೆಯ ನೀರನ್ನು ತರಲು ಬಂ ಬಂ ಬೋಲೇ ಎಂದು ಶಿವ ನಾಮ ಜಪಿಸುತ್ತ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡಲಾಗುತ್ತದೆ. ಈ ಯಾತ್ರೆಯನ್ನು ಸಂಪನ್ನಗೊಳಿಸಿ ಶಿವಾಭಿಷೇಕ ನಡೆಸಿದರೆ ಅಶ್ವಮೇಧ ಯಾಗದ ಫಲ ಸಿಗುವುದಾಗಿ ನಂಬಿಕೆಯಿದೆ.
ಶ್ರಾವಣ ಮಾಸದ ಹಲವು ಆಚರಣೆಗಳಿಗೆ ವೈಜ್ಞಾನಿಕ ದೃಷ್ಟಿಕೋನಗಳೂ ಇವೆ
🔷 ಶ್ರಾವಣ ಮಾಸ ಮಳೆಗಾಲದಲ್ಲಿ ಬರುತ್ತದೆ. ಈ ಸಮಯದಲ್ಲಿ ಸೂರ್ಯನ ಬೆಳಕು ಕಡಿಮೆ ಇರುವುದರಿಂದ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿರುವುದು. ಆದ್ದರಿಂದ ಉಪವಾಸದ ಹೆಸರಿನಿಂದ ಆಹಾರ ಸೇವನೆಯನ್ನು ಕಡಿಮೆಗೊಳಿಸಲಾಗುತ್ತದೆ.
🔷 ಈ ತಿಂಗಳಲ್ಲಿ ನೀರಿನಿಂದ ಹರಡುವ ರೋಗಗಳು ವೇಗವಾಗಿ ಹರಡುತ್ತವೆ. ಉಪವಾಸವು ರೋಗಗಳನ್ನು ತಡೆಗಟ್ಟಲು ರೋಗ ನಿಯಂತ್ರಣ ಶಕ್ತಿಯನ್ನು ಹೆಚ್ಚಿಸುತ್ತದೆ.
🔷 ಶ್ರಾವಣ ಮಾಸದಲ್ಲಿ ಮಾಂಸಾಹಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ . ಏಕೆಂದರೆ ಮಳೆಗಾಲದಲ್ಲಿ ಕೀಟಾಣುಗಳು ವೇಗವಾಗಿ ಹರಡುತ್ತವೆ.
🔷 ಆಯುರ್ವೇದ ಶಾಸ್ತ್ರದ ಪ್ರಕಾರ ದೇಹದಲ್ಲಿನ ವಾತದ ಅಸಮತೋಲನದಿಂದಾಗಿ ಮನಸ್ಸು ಹೆಚ್ಚು ಅಸ್ಥಿರವಾಗಿರುತ್ತದೆ. ಆದ್ದರಿಂದ ಮನಸ್ಸನ್ನು ಸಮತೋಲನದಲ್ಲಿರಿಸಲು ಹೆಚ್ಚು ಹಬ್ಬಗಳು ಅಸ್ತಿತ್ವಕ್ಕೆ ಬಂದವು.
🔷 ಶ್ರಾವಣ ಮಾಸವನ್ನು ಪ್ರೀತಿಯ ಮಾಸ ಎಂದು ಕರೆಯಲಾಗುತ್ತದೆ. ಹೆಚ್ಚಿನ ಸಸ್ತನಿಗಳು ಈ ಸಮಯದಲ್ಲಿ ಸಂತಾನೋತ್ಪತ್ತಿ ಮಾಡುವುದರಿಂದ ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗುತ್ತದೆ. ಈ ಸಮಯದಲ್ಲಿ ಅವುಗಳ ಬೇಟೆಯಾಡಿದರೆ ಪ್ರಾಕೃತಿಕ ಅಸಮತೋಲನ ಉಂಟಾಗಬಹುದೆಂಬ ಕಾರಣದಿಂದ ಮಾಂಸಾಹಾರ ವರ್ಜಿಸಲಾಗಿದೆ.
ಸಮೃದ್ಧಿ ಮತ್ತು ಪ್ರೀತಿಯ ಸಂಕೇತವಾದ ಶ್ರಾವಣ ಮಾಸವು ಎಲ್ಲರಿಗೂ ಶುಭತರಲಿ.
✍️ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.