ಜಾರ್ಖಂಡ್ನ ಧನಾಬಾದ್ ಜಿಲ್ಲಾಡಳಿತ ಪರಿಸರ ಸಂರಕ್ಷಣೆ, ನೀರಿನ ಸಂರಕ್ಷಣೆಗಾಗಿ ಹೊಸ ರೀತಿಯ ಉಪಕ್ರಮ ಒಂದನ್ನು ಜಾರಿಗೊಳಿಸಿದೆ. ಜಿಲ್ಲೆಯ ಸ್ವಸಹಾಯ ಗುಂಪುಗಳ ಸದಸ್ಯರನ್ನು ಬಳಸಿಕೊಂಡು 2.5 ಲಕ್ಷ ಬೀಜದುಂಡೆಗಳನ್ನು ತಯಾರಿಸಿ, ಅದನ್ನು ತೆರೆದ ಪ್ರದೇಶಗಳಲ್ಲಿ ಬಿತ್ತಿ, ಸಸಿಯಾಗುವಂತೆ ಮಾಡುವ ನಿಟ್ಟಿನಲ್ಲಿ, ಆ ಮೂಲಕ ಹಸಿರು ಪರಿಸರ ನಿರ್ಮಾಣ ಮಆಡಲು, ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.
ಜೇಡಿ ಮಣ್ಣು , ಹಸುವಿನ ಸೆಗಣಿ, ಬೀಜಗಳನ್ನು ಸೇರಿಸಿ ಅದನ್ನು ಸುಮಾರು ಒಂದು ಇಂಚುಗಳಷ್ಟು ದೊಡ್ಡ ಉಂಡೆಗಳನ್ನಾಗಿ ಮಾಡಲಾಗುತ್ತದೆ. ಈ ಉಂಡೆಗಳನ್ನು ಸುಮಾರು 24 – 48 ಗಂಟೆಗಳ ಕಾಲ ನೆರಳಿರುವ ಪ್ರದೇಶದಲ್ಲಿ ಒಣಗಿಸಲು ಬಿಡಲಾಗುತ್ತದೆ. ಆ ಬಳಿಕ ಈ ಬೀಜದುಂಡೆಗಳನ್ನು ಬಿತ್ತನೆಗೆ ಅಥವಾ ಶೇಖರಿಸಿಡಲು ಬಳಕೆ ಮಾಡಲಾಗುತ್ತದೆ.
ಈ ಬೀಜದುಂಡೆಗಳನ್ನು ತಯಾರಿಸಲು ಬಳಕೆ ಮಾಡುವ ಬೀಜಗಳನ್ನು ಫಲವತ್ತಾದ ಬೆಟ್ಟ, ಗುಡ್ಡಗಳಂತಹ ಪ್ರದೇಶದಿಂದ ಸಂಗ್ರಹ ಮಾಡಲಾಗುತ್ತದೆ. ಈ ಬೀಜಗಳು ಕಡಿಮೆ ನೀರಿನ ಸಾಂಧ್ರತೆಯ ಪ್ರದೇಶದಲ್ಲಿಯೂ ಮೊಳಕೆ ಬರುತ್ತವೆ. ಈ ಬೀಜದುಂಡೆಗಳ ತಯಾರಿಕೆಗೆ ಹೆಚ್ಚು ಖರ್ಚು ಸಹ ತಗುಲುವುದಿಲ್ಲ. ಬೇವು, ಚಂದನ, ಪಪ್ಪಾಯ, ಬಿದಿರು, ಇಮಿಲಿ, ಅಶೋಕ ಸೇರಿದಂತೆ ಇನ್ನೂ ಹಲವು ಬಗೆಯ ವೃಕ್ಷಗಳ ಬೀಜಗಳನ್ನು ಬಿತ್ತನೆ ಮಾಡುವ ಬೀಜದುಂಡೆಗಳ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತಿದೆ.
ಈ ಕಾಯಕದಲ್ಲಿ ಧನಾಬಾದ್ನ 41 ಸ್ವಸಹಾಯ ಗುಂಪುಗಳ 190 ಮಹಿಳೆಯರು, ಬಘ್ಮಾರ ಬ್ಲಾಕ್ನ 22 ಸ್ವಸಹಾಯ ಸಂಘಗಳ 70 ಮಹಿಳೆಯರು ಬೀಜದುಂಡೆಗಳನ್ನು ತಯಾರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಬೀಜದುಂಡೆಗೆ 2 ರೂ. ಗಳಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಎರಡೂ ಬ್ಲಾಕ್ಗಳಿಂದ ಸುಮಾರು 1000 ಕ್ಕೂ ಅಧಿಕ ಬೀಜದುಂಡೆಗಳನ್ನು ಸ್ವಸಹಾಯ ಸಂಘಗಳ ಮೂಲಕ ಜಿಲ್ಲಾಡಳಿತ ಈಗಾಗಲೇ ವಿತರಣೆ ಮಾಡಿದೆ.
ಈ ಬಿತ್ತನೆ ಕಾರ್ಯಕ್ಕೃ ಬಿಜಿಸಿಎಲ್, ಕಲ್ಲಿದ್ದಲು ಗಣಿ ತ್ಯಾಜ್ಯಗಳ ದಿಬ್ಬಗಳನ್ನು ಬಳಕೆ ಮಾಡಲಾಗುತ್ತಿದ್ದು, ಜಿಲ್ಲಾಡಳಿತದ ಸಹಯೋಗದಲ್ಲಿಯೇ ಸ್ವಸಹಾಯ ಸಂಘಗಳ ಸದಸ್ಯರು ಬಿತ್ತನೆ ಕೆಲಸಗಳನ್ನು ನಡೆಸುತ್ತಿದ್ದಾರೆ. ಮಳೆಗಾಲದಲ್ಲಿ ಈ ಬೀಜದುಂಡೆಗಳನ್ನು ಆಯ್ಕೆ ಮಾಡಲಾದ ಪ್ರದೇಶಗಳಲ್ಲಿ ಬಿತ್ತಲಾಗುತ್ತಿದ್ದು, ಮಳೆಯ ಕಾರಣದಿಂದ ಅವುಗಳು ಚಿಗುರೊಡೆಯುತ್ತಿವೆ. ನೆಟ್ಟ ಒಟ್ಟಾರೆ ಬೀಜದುಂಡೆಗಳ ಪೈಕಿ 60% – 70% ವರೆಗಿನ ಸಸ್ಯಗಳು ಬದುಕುಳಿಯುವುದಾಗಿಯೂ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಹಾಗೆಯೇ ಈ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ ಕ್ಯಾಂಪಾರ್ ಗಿಡಗಳನ್ನು ನೆಟ್ಟಿರುವುದು. ಸುಮಾರು 50 ಸಾವಿರ ಕ್ಯಾಂಪಾರ್ ಗಿಡಗಳನ್ನು ಗಣಿಗಾರಿಕೆಗೆ ಮೀಸಲಿಟ್ಟ ಪ್ರದೇಶಗಳಲ್ಲಿ ನೆಡಲಾಗಿದ್ದು, ಇದು ಸಲ್ಫರ್ ಡೈಆಕ್ಸೈಡ್ ಮತ್ತು ತ್ಯಾಜ್ಯ ಯುಕ್ತ ಮಣ್ಣಿನ ಸುಧಾರಣೆಗೆ ಅನುಕೂಲ ಒದಗಿಸುತ್ತಿದೆ. ಹಾಗೆಯೇ ಜಿಲ್ಲೆಯಲ್ಲಿ ಹರಿಯುವ ಮೂರು ನದಿಗಳಾದ ದಾಮೋದರ್, ಬಾರಕರ್, ಜಮುನಿಯಾಗಳ ತೀರಗಳಲ್ಲಿಯೂ ಸಸ್ಯಕಾಶಿ ನಿರ್ಮಾಣ ಮಾಡಲು ಈ ಬೀಜದುಂಡೆಗಳನ್ನು ಜಿಲ್ಲಾಡಳಿತ ಬಳಕೆ ಮಾಡುತ್ತಿದೆ.
ಇನ್ನು ಈ ಪ್ರಕ್ರಿಯೆಯ ಮಾಹಿ, ದಾಖಲೀಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು.ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿ ಮಾಡಿದೆ. ಇದರ ಮೂಲಕ ಬಿತ್ತಲಾದ ಬೀಜದುಂಡೆಗಳು, ಸಸ್ಯಗಳ ಫೋಟೋಗಳನ್ನು ಅಪ್ಲೋಡ್ ಮಾಡುವಂತೆಯೂ ಸೂಚಿಸಿದೆ. ಈ ಯೋಜನೆಯ ಮೂಲಕ ಸಾರ್ವಜನಿಕರ ತೊಡಗಿಸಿಕೊಳ್ಳುವಿಕೆಯೂ ಹೆಚ್ಚಾಗಿದ್ದು, ಅವರು ಸಹ ಸಸಿಗಳ ನೆಡುವಿಕೆ, ನೀರಿನ ಉಳಿಕೆಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸಲು ಉತ್ಸಾಹ ತೋರುತ್ತಿರುವುದಾಗಿ ಜಿಲ್ಲಾಡಳಿತ ಹೇಳಿದೆ.
ಹಾಗೆಯೇ ಈ ಅಪ್ಲಿಕೇಶನ್ ಮೂಲಕ ಹಸಿರು ನಿಧಿಗೆ ದೇಣಿಗೆ ನೀಡುವಂತೆಯೂ ಸಾರ್ವಜನಿಕರನ್ನು ಪ್ರೋತ್ಸಾಹಿಸಲಾಗಿದೆ. ನಗರ ಪ್ರದೇಶಗಳಲ್ಲಿ ಈ ಚಟುವಟಿಕೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಸರ್ಕಾರಿ ನೌಕರರು, ಕಾರ್ಪೊರೇಟ್ ವಲಯದ ಸ್ವಯಂಸೇವಕರು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಈ ಹಸಿರು ಅಭಿಯಾನಕ್ಕೆ ದೊಡ್ಡ ಯಶಸ್ಸು ತಂದುಕೊಟ್ಟಿದ್ದಾರೆ. ವಿವಿಧ ರೀತಿಯ ಶ್ರಮದಾನಗಳ ಮೂಲಕ ಟಿಸಿಬಿ ನಿರ್ಮಾಣ, ಜಲಮೂಲಗಳ ಪುನರುಜ್ಜೀವನ ಮೊದಲಾದ ಚಟುವಟಿಕೆಗಳನ್ನು ನಡೆಸುವ ಮೂಲಕ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮಾದರಿ ಕಾರ್ಯವನ್ನು ಧನಾಬಾದ್ನ ಜಿಲ್ಲಾಡಳಿತ ಮಾಡಿದೆ.
ಹಸಿರು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಜಲಮೂಲಗಳ ಸಂರಕ್ಷಣೆ ಪುನರುಜ್ಜೀವನದ ದೃಷ್ಟಿಯಿಂದ ಧನಾಬಾದ್ ಜಿಲ್ಲಾಡಳಿತದ ಈ ಚಟುವಟಿಕೆ ಮಹತ್ವ ಪಡೆದಿದೆ. ಹಾಗೆಯೇ, ಇದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸ್ವಸಹಾಯ ಗುಂಪುಗಳ ಸದಸ್ಯರ ಈ ಕಾರ್ಯಕ್ಕೆ ನಮ್ಮದೊಂದು ಅಭಿನಂದನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.