ಬೆಂಗಳೂರು: ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಆಗಸ್ಟ್ 1ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ಮಾದಿಗರ ಸಂಘಟನೆಗಳು ತೀರ್ಮಾನ ಮಾಡಿವೆ ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ನಗರದ ಹೋಟೆಲ್ ತಾಮರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 1ಕ್ಕೆ ನ್ಯಾಯಮೂರ್ತಿ ಚಂದ್ರಚೂಡ ಅವರು ತೀರ್ಪು ಕೊಟ್ಟು ಒಂದು ವರ್ಷ ಆಗಲಿದೆ ಎಂದ ಅವರು, 10ರಂದು ಕ್ಯಾಬಿನೆಟ್ ತೀರ್ಮಾನ ಮಾಡಿ ಸದನದಲ್ಲಿ ಮಂಡಿಸದೆ ಇದ್ದಲ್ಲಿ ರಾಜ್ಯದ ಮಾದಿಗರು ಕರ್ನಾಟಕ ಬಂದ್ಗೆ ತೀರ್ಮಾನ ಮಾಡಲಿದ್ದೇವೆ. 4-5 ಸಾವಿರ ಜನರ ಸಭೆ ನಡೆಸಿ ಈ ಕುರಿತು ತೀರ್ಮಾನಿಸಲಿದ್ದೇವೆ ಎಂದು ಪ್ರಕಟಿಸಿದರು.
ಅಸಹಕಾರ ಚಳವಳಿ ಸಂಘಟಿಸುತ್ತೇವೆ. ರಾಜ್ಯ ಸರಕಾರ ನಡೆಸಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು. ಒಳ ಮೀಸಲಾತಿ ಜಾರಿ ಮಾಡದೆ ಇರುವುದರಿಂದ ಕಾಂಗ್ರೆಸ್ ಸೋತಿದ್ದಾಗಿ ಮುಖ್ಯಮಂತ್ರಿಗಳು ಹಿಂದೆ ಹೇಳಿದ್ದರು. ಅದು ಮತ್ತೊಮ್ಮೆ ಮರುಕಳಿಸುವ ನಿಟ್ಟಿನಲ್ಲಿ ಮಾದಿಗ ಸಮುದಾಯ ಹೆಜ್ಜೆ ಇಡಲಿದೆ ಎಂದು ಅವರು ನುಡಿದರು.
ಒಳ ಮೀಸಲಾತಿಗಾಗಿ ಮಾದಿಗ ಸಮಿತಿಯು ಮೂರೂವರೆ ದಶಕಗಳಿಂದ ಹೋರಾಟ ಮಾಡುತ್ತಿದೆ. ತೆಲಂಗಾಣದಲ್ಲಿ ಮಾದಿಗರ ಮೀಸಲಾತಿಗೆ ಆದ ಅನ್ಯಾಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅಲ್ಲಿ ಮೀಸಲಾತಿ ನೀಡಿ 1999ರಲ್ಲಿ ಒಳ ಮೀಸಲಾತಿ ಜಾರಿ ಮಾಡಿದ್ದರು. ನಂತರ 2004ರಲ್ಲಿ ಅಲ್ಲಿನ ಹೈಕೋರ್ಟ್ ಒಳ ಮೀಸಲಾತಿ ಅವಶ್ಯಕತೆ ಇದೆ ಎಂದಿತ್ತು ಎಂದು ಗಮನ ಸೆಳೆದರು.
ಕಾಂಗ್ರೆಸ್ ಪಕ್ಷವು ಒಳ ಮೀಸಲಾತಿ ಅವಶ್ಯಕತೆ ಇಲ್ಲವೆಂದು ಅವಕಾಶ ನಿರಾಕರಿಸಿತ್ತು ಎಂದು ಆಕ್ಷೇಪಿಸಿದ ಅವರು, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವೂ ಶೋಷಿತರಲ್ಲಿ ಶೋಷಿತರು, ವಂಚಿತರಲ್ಲಿ ವಂಚಿತರು, ಅಸ್ಪøಶ್ಯರಲ್ಲಿ ಅಸ್ಪøಶ್ಯರಿಗೆ ಮೀಸಲಾತಿ ನೀಡಿಲ್ಲ. ಬದ್ಧತೆ ಪ್ರದರ್ಶಿಸಲಿಲ್ಲ ಎಂದು ಟೀಕಿಸಿದರು. ರಾಜ್ಯದಲ್ಲಿ ಅನೇಕ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಹಾಗೂ ಇತರ ಪಕ್ಷಗಳು ಮಾದಿಗರನ್ನು ಮರೆತಿದ್ದವು ಎಂದು ದೂರಿದರು.
ಒಳ ಮೀಸಲಾತಿ ಬಗ್ಗೆ ಆತುರ ಪಡಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರಿಗೆ ಸೂಚಿಸಿದ್ದನ್ನು ಗಮನಕ್ಕೆ ತಂದರು. ಆದರೂ ರೇವಂತ್ ರೆಡ್ಡಿ ಅವರು ಒಳ ಮೀಸಲಾತಿ ಜಾರಿಗೊಳಿಸಿದ್ದಾರೆ ಎಂದರು. ಆಂಧ್ರದಲ್ಲಿ ಚಂದ್ರಬಾಬು ನಾಯ್ಡು, ಪಂಜಾಬ್ನಲ್ಲೂ ಇದು ಜಾರಿಯಾಗಿದೆ. ಆದರೆ, ಕರ್ನಾಟಕ ಸರಕಾರ ಮೀನಮೇಷ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಬೆಳಗಾವಿಯಲ್ಲಿ 5 ತಿಂಗಳ ಹಿಂದೆ ಮಾದಿಗರು ಹೋರಾಟ ಮಾಡಿದಾಗ ಕೇವಲ 3 ತಿಂಗಳಲ್ಲಿ ಒಳ ಮೀಸಲಾತಿ ಜಾರಿ ಕುರಿತು ಸಚಿವರು ಆಶ್ವಾಸನೆ ಕೊಟ್ಟಿದ್ದಾರೆ. ಬಳಿಕ ನಾಗಮೋಹನ್ದಾಸ್ ಆಯೋಗ ರಚಿಸಿ 40 ದಿನಗಳ ಗಡುವು ಕೊಟ್ಟಿದ್ದರು. ಮತ್ತೆ ಅವರು ಸಮಯ ಕೇಳಿದರು. ನಾಗಮೋಹನ್ದಾಸ್ ಅವರಿಗೆ ಈ ಸರಕಾರ ಸಹಕಾರ ಕೊಟ್ಟಿಲ್ಲ ಎಂಬುದಕ್ಕೆ ಅನೇಕ ದಾಖಲೆಗಳಿವೆ ಎಂದು ವಿವರಿಸಿದರು. ರಾಜಕೀಯ, ಔದ್ಯೋಗಿಕ ಕ್ಷೇತ್ರದಲ್ಲಿ ಅವಕಾಶ ಕುರಿತಂತೆ ಮಾಹಿತಿಯನ್ನೇ ಕೊಡಲಿಲ್ಲ. ನಾಗಮೋಹನ್ದಾಸ್ ಅವರಿಗೆ ಸ್ಪಷ್ಟತೆ ಇಲ್ಲ; ಆರೇಳು ತಿಂಗಳು ಕಳೆದರೂ ಒಳ ಮೀಸಲಾತಿ ಜಾರಿ ಆಗುತ್ತಿಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳ ನಡವಳಿಕೆ, ಆಡಳಿತದ ಬಗ್ಗೆ ಸಂಶಯವಿದೆ. ಪ್ರತಿ ಸಾರಿ ಹಿಂದುಳಿದ ವರ್ಗದ ನಾಯಕ, ಹಿಂದುಳಿದ ವರ್ಗದ ರಕ್ಷಕ ಎನ್ನುತ್ತಾರೆ. ಕಾಂತರಾಜು ವರದಿ ಜಾರಿ ಬಗ್ಗೆ ಹೇಳುತ್ತಿದ್ದರು. ನಾವು ಮುಖ್ಯಮಂತ್ರಿಗಳನ್ನು ನಂಬಿದ್ದೆವು. ಅವರು ಹೈಕಮಾಂಡ್ ಸೂಚನೆಗೆ ತಲೆ ತಗ್ಗಿಸಿದರು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆದು 4 ವರ್ಷ 10 ತಿಂಗಳಾಗಿದೆ. ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಲು ನಿಮ್ಮಿಂದ ಆಗಿಲ್ಲ ಎಂದು ಟೀಕಿಸಿದರು.
ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿ, ಸರಕಾರವು ಆ. 16ರಿಂದ ಒಳ ಮೀಸಲಾತಿ ಜಾರಿ ಮಾಡಲು ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು. ಅಸಹಕಾರ ಚಳವಳಿಗೆ ಅವಕಾಶ ಮಾಡಿ ಕೊಡಬಾರದು ಎಂದು ಅವರು ತಿಳಿಸಿದರು.
ಕಾಂಗ್ರೆಸ್ ನಾಯಕರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ರಾಷ್ಟ್ರೀಯ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ದಲಿತರಿಗೆ ಮೋಸ ಮಾಡಿಲ್ಲ ಎಂದು ಹೇಳುತ್ತಾರೆ. 2023ರ ಚುನಾವಣೆಯಲ್ಲಿ ಕರ್ನಾಟಕ ವಿಧಾನಸಭೆ ಪ್ರಚಾರದ ವೇಳೆ ಪ್ರಣಾಳಿಕೆಯಲ್ಲಿ ಇದನ್ನು ತಿಳಿಸಿದ್ದರು. ಮೊದಲನೇ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಟ್ಟು ಜಾರಿ ಮಾಡುವುದಾಗಿ ಹೇಳಿದ್ದರು. ಕುಂಟು ನೆಪ ಹೇಳಿ ನಾಗಮೋಹನದಾಸ್ ಸಮಿತಿ ರಚಿಸಿದರು. 40 ದಿನಗಳಲ್ಲಿ ವರದಿ ತರಿಸುವುದಾಗಿ ಹೇಳಿದ್ದರು. 6 ತಿಂಗಳಾಗಿದೆ. ಇದು ಸರಕಾರ ಮಾಡುತ್ತಿರುವ ದ್ರೋಹ, ಮೋಸ ಎಂದು ಟೀಕಿಸಿದರು.
ನಾಗಮೋಹನದಾಸ್ ಅವರು ಕೆಲವು ಮಾಹಿತಿ ಕೇಳಿ ಸರಕಾರಕ್ಕೆ ಪತ್ರ ಬರೆದರೂ ಉತ್ತರ ಲಭಿಸಿಲ್ಲ. ಸರಕಾರವೇ ಇದೆಲ್ಲವನ್ನೂ ಮುಚ್ಚಿಡುತ್ತಿದೆ ಎಂದು ಆರೋಪಿಸಿದರು. 16ರಿಂದ ಮಾಡು ಇಲ್ಲವೇ ಮಡಿ ಹೋರಾಟ ಎಂಬ ಎಚ್ಚರಿಕೆ ಗಂಟೆ ಎಂದು ತಿಳಿಸಿದರು.
ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಮತ್ತು ಮುಖಂಡ ಸಂತೋಷ್ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.