2028 ರ ಒಲಿಂಪಿಕ್ಸ್ನಲ್ಲಿ ಟಾಪ್ 10 ರಲ್ಲಿ ದೇಶ ಬರಬೇಕು ಎಂದು ಕ್ರೀಡೆಯನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸಲು ಮುಂದಾದ ದೇಶದ ಮೊದಲ ಕ್ರೀಡಾ ಸಚಿವ ಕಿರಣ್ ರಿಜಿಜು ಎನ್ನಬಹುದು. ಅದರ ಆರಂಭಿಕ ಫಲಿತಾಂಶ ಈ ಬಾರಿ ಸಿಕ್ಕಿದ್ದು, ಜಪಾನ್ನ ಟೊಕಿಯೋದಲ್ಲಿ ನಡೆದ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಮೊದಲ ಬಾರಿ ದೇಶ ಅತ್ಯಧಿಕ ಪದಕ ಗೆದ್ದಿದೆ.
ಒಲಿಂಪಿಕ್ಸ್ನ ವಿವಿಧ ಕ್ರೀಡಾ ಪ್ರಕಾರಗಳಲ್ಲಿ ಕನಿಷ್ಠ ಒಂದು ಪದಕ ಗೆದ್ದ ದೇಶಗಳ ಪಟ್ಟಿಯಲ್ಲಿ ಇಂದು ಭಾರತ ಟಾಪ್ 15 ರಲ್ಲಿದೆ. ಭಾರತೀಯ ಕ್ರೀಡಾಪಟುಗಳು ಸುಲಭದಲ್ಲಿ ಈ ಬಾರಿ ಸೋಲು ಒಪ್ಪಲೇ ಇಲ್ಲ. ಹೆಚ್ಚಿನ ಪ್ರಕಾರಗಳಲ್ಲಿ ಕ್ವಾರ್ಟರ್, ಸೆಮಿಫೈನಲ್ಸ್ ತಲುಪಿದ್ದೆವು. ಮೊದಲ ಬಾರಿ ಮಹಿಳಾ ಹಾಕಿ ತಂಡ ಸೆಮಿಫೈನಲ್ಸ್ ಪ್ರವೇಶಿಸಿತ್ತು, 41 ವರ್ಷದ ಬಳಿಕ ಹಾಕಿಯಲ್ಲಿ ಪುರುಷರು ತಂಡ ಪದಕ ಗೆದ್ದಿತ್ತು. ಇವರೆಲ್ಲರಿಗೂ ಬೆಂಗಾವಲಾಗಿ ನಿಂತಿದ್ದು ಕಿರಣ್ ರಿಜಿಜು ಎಂಬ ಅರುಣಾಚಲ ಪ್ರದೇಶದಿಂದ ಆಯ್ಕೆಯಾದ ಕಾನೂನು ಪದವೀಧರ ಸಂಸದ. ಕ್ರೀಡಾ ಸಚಿವರಾಗಿ ಇವರ ಕಾರ್ಯವೈಖರಿ ಮೆಚ್ಚಿ ಪ್ರಧಾನಿ ಮೋದಿ ಸರ್ಕಾರ ಕಾನೂನು ಮಂತ್ರಿಯಾಗಿ ನೇಮಕ ಮಾಡಿದಾಗ ದೇಶದ ಮೂಲೆ ಮೂಲೆಯಿಂದ ಕ್ರೀಡಾಪಟುಗಳಿಂದ ಶುಭಾಶಯಗಳ ಮಹಾಪೂರ ಬಂದಿತ್ತು. ಇದು ಆ ಸಚಿವಾಲಯದಲ್ಲಿ ಇವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ.
ನೀರಜ್ ಪದಕ ಗೆದ್ದ ನಂತರ ಕಿರಣ್ ರಿಜಿಜು ಸಂಭ್ರಮಿಸಿದ ವಿಡಿಯೋ ಹಂಚಿಕೊಂಡಾಗ ಇದನ್ನು ಬರೆಯಬೇಕಿನಿಸಿತು. ಈ ಬಾರಿ ಅತಿ ಹೆಚ್ಚು ಭಾರತೀಯ ಕ್ರೀಡಾಪಟುಗಳು ಒಲಿಂಪಿಕ್ಸ್ಗೆ ಆಯ್ಕೆಯಾಗಿದ್ದರು. ಆಯ್ಕೆಯಾದ ಕ್ರೀಡಾಪಟುಗಳ ಜೊತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಸೋತಾಗ ಸಮಾಧಾನಿಸಿದವರು, ಗೆದ್ದಾಗ ಸಂಭ್ರಮಿಸಿದವರು ಕಿರಣ್ ರಿಜಿಜು. ಅವರಿಗೆ ತೊಂದರೆಯಾದ ಎಲ್ಲಾ ಸಂದರ್ಭದಲ್ಲಿ ತಕ್ಷಣದಲ್ಲಿ ಸ್ಪಂದಿಸಿದವರು. ಅವರನ್ನು ಪ್ರೋತ್ಸಾಹಿಸುವ ಸಲುವಾಗಿ #Cheer4India ಅಭಿಯಾನ ಆರಂಭಿಸಿದರು. ದೇಶದ 6000 ಜಾಗದಲ್ಲಿ Selfie Points ತೆರೆದು ಭಾರತೀಯ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಿದವರು.
ಕಿರಣ್ ರಿಜಿಜು ಕ್ರೀಡಾ ಸಚಿವರಾದ ನಂತರ ಇಲಾಖೆಯಲ್ಲಿ ಅಮೂಲಾಗ್ರವಾದ ಬದಲಾವಣೆ ತಂದರು. ಫಿಟ್ ಇಂಡಿಯಾ ಎಂಬ ಚಾಲೆಂಜ್ ಅಭಿಯಾನದ ಮೂಲಕ ನಾಗರೀಕರಲ್ಲಿ ಶಾರೀರಿಕ ಸಮತೋಲನದ ಕುರಿತು ಜಾಗೃತಿ ಮೂಡಿಸಿದರು. ಇದಕ್ಕೆ ಹಲವಾರು ಸಂಘ ಸಂಸ್ಥೆಗಳು, ಸೆಲೆಬ್ರಿಟಿಗಳು ಜೊತೆಯಾದರು. ಕ್ರೀಡಾ ಬಜೆಟ್ ಮೊತ್ತವನ್ನು ಏರಿಸಿದರು. ಈ ಬಾರಿ ಸುಮಾರು ರೂ. 2596 ಕೋಟಿ ಕ್ರೀಡೆಗೆ ಬಜೆಟ್ ಮೀಸಲಿರಿಸಿದರು. ಯುಪಿಎ ಸರ್ಕಾರದ 2013-14 ರ ಅವಧಿಯಲ್ಲಿ ಕ್ರೀಡೆಗೆ ರೂ. 1219 ಕೋಟಿ ಮೀಸಲಿರಿಸಿದ್ದರು. ಕ್ರೀಡೆಗಳನ್ನು, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ವಿವಿಧ ಪ್ರಶಸ್ತಿಗಳ ಮೊತ್ತವನ್ನು ಏರಿಸಿದರು. ಖೇಲ್ ರತ್ನ ಪ್ರಶಸ್ತಿ ಮೊತ್ತವನ್ನು 7.5 ಲಕ್ಷದಿಂದ 25 ಏರಿಸಿದರು. ಹಾಗೇ ದ್ರೋಣಾಚಾರ್ಯ ಜೀವಮಾನ ಸಾಧನೆ ಪ್ರಶಸ್ತಿ, ಅರ್ಜುನ ಅವಾರ್ಡ್ ಮೊತ್ತವನ್ನು 5 ಲಕ್ಷದಿಂದ ರೂ. 15 ಲಕ್ಷಕ್ಕೆ ಏರಿಕೆ ಮಾಡಿದರು. ಅಂತರಾಷ್ಟ್ರೀಯಮಟ್ಟದಲ್ಲಿ ಬಹುಸಾಧನೆಗೈದವರಿಗೆ ಮೊದಲ ಬಾರಿ ಜೀವನ ಪರ್ಯಂತ ಪಿಂಚಣಿ ಯೋಜನೆ ಘೋಷಿಸಿದರು. ಪ್ಯಾರ ಅಥ್ಲೆಟಿಕ್ಸ್ ಗುರುತಿಸುವ, ಪ್ರೋತ್ಸಾಹಿಸುವ ಕೆಲಸ ಇವರ ಅವಧಿಯಲ್ಲಿ ನಡೆದವು. ಪ್ರಶಸ್ತಿ ಮೊತ್ತಗಳು ವಿಜೇತರಿಗೆ ಶೀಘ್ರವಾಗಿ ಕೈ ಸೇರುವಂತೆ ಇಲಾಖೆಯಲ್ಲಿ ಸುಧಾರಣೆ ತಂದರು.
ಖೇಲೋ ಇಂಡಿಯಾ ಅಭಿಯಾನದ ಮೂಲಕ ಕ್ರಾಂತಿಯ ಅಲೆ ಸೃಷ್ಟಿಸಿದರು. ಅಭಿಯಾನದಲ್ಲಿ ಆಯ್ಕೆಯಾದ ಕ್ರೀಡಾಳುಗಳಿಗೆ ವಾರ್ಷಿಕ 6.8 ಲಕ್ಷ ಸ್ಕಾಲರ್ಶಿಪ್ ಘೋಷಿಸಿದರು. 1000 ಖೇಲೋ ಇಂಡಿಯಾ ಕೇಂದ್ರ ಸ್ಥಾಪಿಸಿಲು ಮುಂದಾದರು. 236 ಕ್ರೀಡಾ ಅಕಾಡೆಮಿ ಮಾನ್ಯಗೊಳಿಸಲಾಯಿತು. ದೇಶದ ವಿವಿಧ ಭಾಗದ 20 ಕೇಂದ್ರಗಳ ಮೂಲಕ 8-14 ವಯಸ್ಸಿನ ಪ್ರತಿಭೆಗಳನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಎಂಬ ಪ್ರಯೋಗವನ್ನು ಲೇಹ್, ಜಮ್ಮು & ಕಾಶ್ಮೀರದಲ್ಲಿ ನಡೆಸಿದರು. ಈಶಾನ್ಯ ರಾಜ್ಯಗಳ ಪ್ರತಿಭೆಗಳ ಗುರುತಿಸುವ ಸಲುವಾಗಿ ಸಾಹಸಮಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದರು. ಖೇಲೋ ಇಂಡಿಯಾ ಅಡಿಯಲ್ಲಿ ಕರ್ನಾಟಕದ ಮಲ್ಲಕಂಬ ಸೇರಿದಂತೆ ವಿವಿಧ ದೇಶಿಯ ಕ್ರೀಡೆಗಳನ್ನು ಸೇರ್ಪಡೆಗೊಳಿಸಿದರು.
ಕ್ರೀಡಾ ಸಚಿವರಾಗಿ ಹೊಸ ಕ್ರಾಂತಿಯ ಭಾಷ್ಯ ಬರೆದವರು ಕಿರಣ್ ರಿಜಿಜು. ಈಗ ದೇಶದ ಕಾನೂನು ಮಂತ್ರಿಯಾಗಿರುವ ರಿಜಿಜು ಕಣ್ಮುಂದೆ ಹಲವು ಸವಾಲಿನ ಕೆಲಸಗಳಿವೆ. ಸಮಾನ ನಾಗರಿಕ ಸಂಹಿತೆ, ಜನಸಂಖ್ಯಾ ನಿಯಂತ್ರಣ ಕಾನೂನು, ಅಪ್ರಸ್ತುತ ಕಾನೂನುಗಳ ರದ್ಧತಿ, ತ್ವರಿತ ನ್ಯಾಯ ಪ್ರಕ್ರಿಯೆ ಮುಂತಾದ ಮಹತ್ತರ ಜವಾಬ್ದಾರಿ ಇವರ ಹೆಗಲ ಮೇಲಿದೆ. ಕ್ರೀಡಾ ಕ್ಷೇತ್ರದ ಮಹತ್ತರ ಬದಲಾವಣೆಗೆ ಕಾರಣರಾದ ರಿಜಿಜು, ದೇಶದ ಕಾನೂನು, ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ವಿವಿಧ ಸುಧಾರಣೆ ತರುತ್ತಾರೆ ಎಂಬ ಭರವಸೆ ನಮ್ಮೆಲ್ಲರದ್ದು.
ಶುಭವಾಗಲಿ.
✍️ ಪ್ರಶಾಂತ್ ಎಂ. ಉಪ್ಪಿನಂಗಡಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.