ಅಂದು ಯಾವ ಪಂದ್ಯಾವಳಿಯೂ ನಡೆದಿರಲಿಲ್ಲ, ಹೊಸ ತಂಡದ ಪ್ರಕಟವೂ ಆಗಿರಲಿಲ್ಲ. ಆದರೂ ಭಾರತದ ಹಾಕಿ ಪ್ರೇಮಿಗಳು ವಿಪರೀತ ಸಂತೋಷಪಡುತ್ತಿದ್ದರು. ಹಾಗೆ ನೋಡಿದರೆ ಅದೊಂದು ವಿಕ್ಷಿಪ್ತ ಸಂತೋಷ ಮತ್ತು ಅಲ್ಪ ತೃಪ್ತಿಯ ಹೊತ್ತಾಗಿತ್ತು. ಏಕೆಂದರೆ ಅಂದು ಪುರುಷರ ಹಾಕಿ ತಂಡ 2012 ರ ಲಂಡನ್ ಒಲಿಂಪಿಕ್ಸ್ಗೆ ಕ್ವಾಲಿಫೈ ಆಗಿತ್ತು ಅಷ್ಟೆ.
2008ರ ಬೀಜಿಂಗ್ ಒಲಿಂಪಿಕ್ಸ್ಗೆ ಭಾರತ ಪುರುಷರ ಹಾಕಿ ತಂಡ ಆಯ್ಕೆಯಾಗಿರದ ನೋವು ಹಾಕಿ ಪ್ರೇಮಿಗಳಿಗೆ ಅದೆಷ್ಟು ಕಾಡಿತ್ತೆಂದರೆ ಹಾಕಿಯ ಬಗೆಗೆ ಜನರಿಗೆ ವೈರಾಗ್ಯ ಬಂದುಬಿಟ್ಟಿತ್ತು. ಕಣ್ಣೆದುರೇ ಪಾಕಿಸ್ಥಾನ ರಿಯೋಕ್ಕೆ ತೆರಳಿ ಎಂಟನೆ ಸ್ಥಾನ ಪಡೆದಿತ್ತು. ಅದನ್ನೇ ಪಾಕಿಸ್ಥಾನಿ ಮಾಧ್ಯಮಗಳು “ಆಡಲು ಯೋಗ್ಯತೆ ಇಲ್ಲದ ದೇಶಗಳ ಎದುರಲ್ಲಿ ಪಾಕಿಸ್ಥಾನದ ಸಾಧನೆ ಮಹತ್ವದ್ದು” ಎಂದು ಹಂಗಿಸಿತ್ತು. ಇವೆಲ್ಲವನ್ನೂ ನೋಡುತ್ತಾ ಭಾರತೀಯ ಹಾಕಿ ಪ್ರೇಮಿ ಹಾಕಿ ಸಂಸ್ಥೆಯನ್ನು, ರಾಜಕಾರಣಿಗಳನ್ನು, ಆಟಗಾರರನ್ನು ಕೊನೆಗೆ ಭಾರತವನ್ನೂ ಬಯ್ದು ತನ್ನ ಹತಾಶೆಯನ್ನು ಹೊರಹಾಕಿಕೊಳ್ಳುತ್ತಿದ್ದ. ಹಾಗಾಗಿ ಆತ ಹಾಕಿ ತಂಡ ಲಂಡನಿಗೆ ಪ್ರವೇಶ ಪಡೆದಾಗ ಖುಷಿಯಾಗಿದ್ದ.
ಅದೇ ಸಮಯದಲ್ಲಿ ಬೆಂಗಳೂರು ಶಾಂತಿನಗರದ “ಫಿ.ಮಾ.ಕಾರ್ಯಪ್ಪ ಅರೆನಾ” ಹಾಕಿ ಮೈದಾನದಲ್ಲಿ ಭಾರತೀಯ ತಂಡದ ಮಾಜಿ ಆಟಗಾರ ಮತ್ತು ಹಾಕಿ ಇಂಡಿಯಾದ ಹೈ ಫರ್ಮಾಮೆನ್ಸ್ ವಿಭಾಗದ ಅಧಿಕಾರಿಯಾಗಿದ್ದ ಕೊಡಗು ಮೂಲದ ವ್ಯಕ್ತಿಯೊಬ್ಬರು ಮಾತಿಗೆ ಸಿಕ್ಕಿದ್ದರು. ಎಂದಿನಂತೆ ಮಾತು ಲಂಡನಿಗೆ ಹೋಗುವ ಹಾಕಿ ತಂಡದತ್ತ ತಿರುಗಿತು. ಆದರೂ ಯಾಕೋ ಆ ಅಧಿಕಾರಿ ಹಾಕಿಯ ಗತವೈಭವಗಳನ್ನು ಹೇಳತೊಡಗಿದರೇ ಹೊರತು ಹೊಸ ತಂಡದ ಬಗ್ಗೆ ಏನೂ ಹೇಳದೆ ಮಾತು ಬದಲಿಸತೊಡಗಿದರು. ಕೆದಕಿ ಕೇಳಿದಾಗ ರೇಗಿದರು. ಒತ್ತಾಯಿಸಿದಾಗ ಮೌನ ತಾಳಿದರು. ಕೊನೆಗೆ ಕಿವಿಯ ಸಮಪ ಬಂದು, “ಔಟ್ ಆ ರೆಕಾರ್ಡ್ ಹೇಳುತ್ತೇನೆ. ಬೇಕಾದರೆ ಬರೆದಿಟ್ಟುಕೋ. ಇನ್ನು ಇಪ್ಪತ್ತು ವರ್ಷ ಹಾಕಿಯಲ್ಲಿ ಒಲಂಪಿಕ್ ಪದಕದ ಆಸೆಯನ್ನು ಕನಸಲ್ಲೂ ಇಟ್ಟುಕೊಳ್ಳಬೇಡ’ ಎಂದು ಪಿಸುಗುಟ್ಟಿ ಎದ್ದುಹೋದರು. ಭಾರತೀಯ ಹಾಕಿಯ ಅತ್ಯಂತ ಕರಾಳ ದಿನಗಳಾಗಿದ್ದ ಆ ಹೊತ್ತಲ್ಲಿ ಅದೇನೂ ಆಶ್ಚರ್ಯವೆನಿಸುತ್ತಿರಲಿಲ್ಲ.ಅವರು ಹಾಗಂದು 20 ವರ್ಷ ಕಳೆದಿಲ್ಲ. ಪುರುಷರ ತಂಡ 41 ವರ್ಷಗಳ ನಂತರ ಕಂಚಿನ ಪದಕವನ್ನು ಪಡೆದಿದೆ! ಮಹಿಳಾ ತಂಡ ಮೊದಲ ಬಾರಿಗೆ ಸೆಮಿಗೆ ಮುಟ್ಟಿದೆ.
ಹಾಗಾದರೆ ಭಾರತೀಯ ಹಾಕಿಯಲ್ಲಿ ಹಿಂದೆ ಏನು ಇರಲಿಲ್ಲ? ಯಾವುದರ ಕೊರತೆಯಿತ್ತು? ಏಕಾಏಕಿ ಈಗ ಹಾಕಿ ಇಂಡಿಯಾದ ಬಳಿ ಇರುವ ಮಾಯಾ ಮಂತ್ರದಂಡವಾದರೂ ಏನು? ರಾಜಕೀಯ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಆಟಗಾರದ ಸ್ವಾರ್ಥ ಇವೆಲ್ಲವೂ ಈಗಿಲ್ಲ ಎಂಬುದೊಂದೇ ಟೊಕಿಯೋ ಒಲಂಪಿಕ್ಸ್ ವಿಜಯಕ್ಕೆ ಕಾರಣ ಎನಿಸುವುದಿಲ್ಲ. ಏಕೆಂದರೆ ತಂಡದಲ್ಲಿ ಪ್ರತಿಭೆಗಳು ಆಗಲೂ ಇದ್ದವು. ಈಗಿರುವುದಕ್ಕಿಂತಲೂ ಹೆಚ್ಚಿನ ಸ್ಟಾರ್ ಆಟಗಾರರೇ ಇದ್ದರು. ಲಿಯೋ ಪಿಂಟೋ, ಸುಬ್ಬಯ್ಯ, ಜೋಕಿಮ್ ಕಾರ್ವಾಲೋ ಮುಂತಾದ ದಿಗ್ಗಜ ಕೋಚ್ಗಳಿದ್ದರು. ಆಗಲೂ ಹಾಕಿ ಉದ್ಧಾರವಾಗದಿದ್ದಾಗ ವಿದೇಶಿ ಕೋಚ್ಗಳು ಮಾತ್ರ ಕಾಯಕಲ್ಪ ನೀಡಬಲ್ಲರು ಎಂಬ ಕೂಗೆದ್ದಿತು. ವಿದೇಶಿ ಕೋಚ್ಗಳೂ ಬಂದುಹೋದರು. ಆಗಲೂ ಸುವರ್ಣಯುಗ ನಿರ್ಮಾಣವಾಗಲಿಲ್ಲ. ಮಹಿಳಾ ಹಾಕಿಯಂತೂ ಈ ಜನ್ಮದಲ್ಲಿ ವಿಶ್ವದರ್ಜೆಗೇರದು ಎಂಬ ಅಭಿಪ್ರಾಯಗಳೇ ಇತ್ತು. ಹಾಗಾದರೆ ಅಂದು ಕಾಣದ ಗೆಲುವು ಈಗ ಹೇಗಾಯಿತು?
ಕೇವಲ ಹತ್ತು ವರ್ಷದ ಹಿಂದೆ ಭಾರತೀಯ ಹಾಕಿಯ ಯಾವುದೇ ಪಂದ್ಯವನ್ನು ನೀವು ನೋಡಿದ್ದಿರಾದರೆ ಅದರ ಅರಿವಾಗುತ್ತದೆ. ಪಂದ್ಯ ಆರಂಭವಾಗುತ್ತಿದ್ದಂತೆ ಆತಂಕ, ಅಳುಕು ಪ್ರಾರಂಭವಾಗುತ್ತಿತ್ತು. ಹೆಚ್ಚಿನ ಬಾರಿ ಆಟಗಾರರು ಸೋಲೊಪ್ಪಿಕೊಂಡೇ ಮೈದಾನಕ್ಕಿಳಿಯುತ್ತಿದ್ದಾರೇನೋ ಎನ್ನುವಂತಿರುತ್ತಿದ್ದರು. ಹಾಗಾಗಿ ನೋಡುಗರೂ ಸೋಲಿನ ಮನಃಸ್ಥಿತಿಯಲ್ಲೇ ಪಂದ್ಯವನ್ನು ನೋಡುತ್ತಿದ್ದರು. ಯಾವ ಕೋನದಿಂದ ನೋಡಿದರೂ ಯುರೋಪಿನ ಹಾಕಿಗೆ ಭಾರತ ಸಾಟಿಯಾಗಿಲ್ಲ ಎಂಬುದು ನಿಮಿಷ ನಿಮಿಷಕ್ಕೂ ಕಾಣಿಸುತ್ತಿತ್ತು. ಆದರೆ ಟೊಕಿಯೋದಲ್ಲಿ ಮೊಟ್ಟಮೊದಲ ಬಾರಿಗೆ ಜನ ಭರವಸೆಯ ಹಾಕಿಯನ್ನು ವೀಕ್ಷಿಸಿದರು. ಹಾಗಾದರೆ ವಾಸ್ತವವಾಗಿ ಬದಲಾಗಿದ್ದೇನು?
ಟೋಕಿಯೋ ವಿಜಯ ಹಲವು ಸಂದೇಶಗಳನ್ನು ಹೇಳುವಂತಿದೆ. ಭಾರತ ಬದಲಾಗಿದೆ ಎನ್ನುವುದನ್ನು ತೋರಿಸಿಕೊಟ್ಟಂತಿದೆ. ವಿದೇಶಿ ಪ್ರಬಲ ತಂಡಗಳನ್ನೂ ಭಾರತ ಗೆಲ್ಲಬಹುದು ಎಂಬುದನ್ನು ನಿರೂಪಿಸಿದೆ. ಅದರಲ್ಲೂ ಮುಖ್ಯವಾಗಿ ಹಾಕಿ ಪ್ರೀಯರಿಗೆ ಈ ಬಾರಿಯ ಹಾಕಿಯಲ್ಲಿ ಕಂಡಿದ್ದು ಭಾರತದ ಕೊನೆಯುಸಿರಿನವರೆಗೆ ಹೋರಾಡುವ ಗುಣ. ತನ್ನ ಬಳಿಯ ಕಟ್ಟಕಡೆಯ ಗುಂಡೂ ಖಾಲಿಯಾಗಿದೆ, ಶತ್ರುಗಳು ಸುತ್ತುವರಿದ್ದಾರೆ, ಆದರೂ ಹೋರಾಡಬೇಕು, ಗೆಲ್ಲಲೇಬೇಕು ಎನ್ನುವ ಆನಿವಾರ್ಯತೆಯಲ್ಲಿ ಹುಟ್ಟುವ ಯೋ‘ತನವನ್ನು ಆಟಗಾರರಲ್ಲಿ ಕಂಡರು. ಎಲ್ಲೂ ಎದೆಗುಂದದ, ಕಾರ್ಡ್ಗಳ ಮೇಲೆ ಕಾರ್ಡ್ಗಳು ಬಿದ್ದರೂ ಬಗ್ಗದ, ಪಟ್ಟುಬಿಡದ, ಸತ್ತರೂ ಸೋಲೊಪ್ಪಲಾರೆ ಎನ್ನುವ ಭಯಂಕರ ಹಠವನ್ನು ಟೋಕಿಯೋ ಸರಣಿಗಳುದ್ದಕ್ಕೂ ನೋಡಬಹುದಿತ್ತು. ಟೋಕಿಯೋದಲ್ಲಾಡಿದ ಯಾವ ಆಟಗಾರನ ಮುಖದಲ್ಲೂ ಇದು ತನ್ನ ಭವಿಷ್ಯಕ್ಕೊಂದು ಮೆಟ್ಟಿಲಾಯಿತು ಎಂಬ ಭಾವವಿರಲಿಲ್ಲ. ದೇಶ ಗೆಲ್ಲಲು, ನಾವು ಗೆಲ್ಲಬೇಕು ಎಂಬ ತುಡಿತ ಪ್ರತೀ ಪಂದ್ಯಗಳಲ್ಲೂ ಎದ್ದು ಕಾಣುತ್ತಿದ್ದವು.
ಇವೆಲ್ಲವೂ ಭಾರತೀಯ ಹಾಕಿಯಲ್ಲಿ ಹೇಗೆ ಸಾಧ್ಯವಾಯಿತು ಎಂಬುದಕ್ಕೆ ಒಂದೇ ಉತ್ತರ 2014 ರಿಂದ ಭಾರತದ ’ಸೋಚ್’ ಬದಲಾಗಿದೆ ಎಂಬುದು. ಭಾರತ ಬದಲಾಗುತ್ತಿದೆ ಎಂದಾಗ ಪೆಟ್ರೋಲ್ ಬೆಲೆಯ ಕೋಷ್ಟಕವನ್ನು ತೋರಿಸುವ ಕಾಂಗ್ರೆಸ್-ಕಮ್ಯುನಿಸ್ಟರಿಗೆ ಇವು ಅರ್ಥವಾಗದಿದ್ದರೂ ಆಟವನ್ನು ಸವಿಯುವ ಸಂವೇದನಾಶೀಲರಿಗಂತೂ ಇದು ಅರ್ಥವಾಗಿದೆ. ಹಾಕಿಯ ಮೂಲಕ ಬದಲಾದ ಭಾರತದ ಮಾನಸಿಕತೆಯನ್ನು ಜನ ಗುರುತಿಸಿದ್ದಾರೆ. ಆಳುವವನು ಸಮಾಜದ ಚಿಂತನೆಯನ್ನೇ ಬದಲಿಸಬಲ್ಲ ಎಂಬುದಕ್ಕೆ ವಿಶ್ವಾದ್ಯಂತ ಅನೇಕ ಉದಾಹರಣೆಗಳಿವೆ. ಜಗತ್ತಿನಲ್ಲೇ ಶ್ರೇಷ್ಠರೆಂಬ ‘ವನೆಯನ್ನು ಹುಟ್ಟಿಸಿದ್ದ ಹಿಟ್ಲರ್, 128 ದೇಶಗಳಲ್ಲಿ ಚದುರಿದ್ದ ತನ್ನ ಜನರಲ್ಲಿ ಐಕ್ಯದ ಮಂತ್ರವನ್ನು ಬಿತ್ತಿ ಕರೆತಂದ ಬೆನ್ ಗುರಿಯನ್. ಕಲೆ-ಸಾಹಿತ್ಯದ ಕಸುವನ್ನು ಹುಟ್ಟಿಸಿದ ಗ್ರೀಕ್, ರೋಮನ್ ಆಳರಸರು… ಹೀಗೆ ಭಾರತದಲ್ಲಿ ಆಳುವವನೊಬ್ಬನ ಭಾರತ ಬದಲಾಗುತ್ತಿದೆ ಎಂಬ ಮಂತ್ರ ಹಾಕಿಯ ಅಂಗಳದಲ್ಲೂ ಪರಿವರ್ತನೆಯನ್ನು ತಂದಿದೆ ಮತ್ತು ಹಾಕಿಯ ಮೂಲಕ ಬದಲಾಗುತ್ತಿರುವ ಭಾರತವನ್ನು ವಿಶ್ವಕ್ಕೆ ತೋರಿಸುತ್ತಿದೆ. ಇಷ್ಟೇ ಅಲ್ಲ ಆಳುವವರ ’ಸೋಚ್’ ಬದಲಾದರೆ ಕ್ರೀಡೆಯ ಅಂಗಳವೂ ಬದಲಾಗುತ್ತದೆ ಎಂಬುದಕ್ಕೆ ಈ ಒಲಂಪಿಕ್ಸ್ ಹಲವು ಉದಾಹರಣೆಗಳನ್ನು ನಮ್ಮ ಮುಂದಿಡುತ್ತದೆ.
ಅರ್ಜೈಂಟೈನಾ ವಿರುದ್ಧದ ಪಂದ್ಯ. ಹಿಂದಿನ ಒಲಂಪಿಕ್ಸ್ ಸ್ವರ್ಣಪದಕ ವಿಜೇತ ಅರ್ಜೈಂಟೈನಾ ಜಿದ್ದಿನ ಹೋರಾಟಕ್ಕೆ ಹೆಸರಾದ ತಂಡ. ಅಂಥಾ ಅರ್ಜೈಂಟೈನಾದ ವಿರುದ್ಧ ಕಣಕ್ಕಿಳಿದಿದ್ದ ಭಾರತ ಅಮೋಘ ಆಟವಾಡಿತು. ಎರಡೂ ತಂಡಗಳು ಸಿಡಿಲು ಸಿಗುರೆದ್ದಂತೆ ಆಡಿ ಎರಡು ಕ್ವಾರ್ಟರ್ ಸಮಯ ಮುಗಿದರೂ ಇತ್ತಂಡಗಳಲ್ಲಿ ಗೋಲುಗಳು ದಾಖಲಾಗಿರಲಿಲ್ಲ. ಭಾರತಕ್ಕೆ ಪದೇಪದೇ ಪೆನಾಲ್ಟಿ ಕಾರ್ನರ್ಗಳು ಸಿಕ್ಕರೂ ವಿಫಲವಾಗುತ್ತಿದ್ದವು. ರೂಪಿಂಧರ್ ಪಾಲ್ ಸಿಂಗ್ ಮತ್ತು ಹರ್ಮನ್ ಪ್ರೀತ್ ಸಿಂಗ್ ಅವರಂಥ ಪೆನಾಲ್ಟಿ ಕಾರ್ನರ್ ತಜ್ಞರೂ ಗೋಲು ದಾಖಲಿಸಲು ವಿಲರಾಗತೊಡಗಿದರು. ಆಗ ಕೋಚ್ ಗ್ರಾಹಂ ರೀಡ್ ಕಳಿಸಿದ್ದು ಅದುವರೆಗೆ ಒಂದು ಪಂದ್ಯವನ್ನೂ ಆಡದೆ ಬೆಂಚ್ನಲ್ಲಿ ಕುಳಿತಿದ್ದ, ಬಾಲಕನಂತಿದ್ದ ವರುಣ್ ಕುಮಾರ್ನನ್ನು. ಅದೂ ಒಂದು ಪೆನಾಲ್ಟಿ ಕಾರ್ನರಿಗೆ! ಆತನ ಎದೆಯಲ್ಲಿ ಅದ್ಯಾವ ಬೆಂಕಿಯಿತ್ತೋ ಚೆಂಡು ವರುಣಾಸದಂತೆ ಅರ್ಜೈಂಟೈನಾದ ಗೋಲು ಪೆಟ್ಟಿಗೆಯೊಳಗೆ ಸೇರಿತು. ಹಾಗಾದರೆ ವರುಣ ಕುಮಾರನಲ್ಲಿದ್ದ ಆ ಬೆಂಕಿ ಹುಟ್ಟಿದ್ದೆಲ್ಲಿಂದ? ಆತನನ್ನು ಇಳಿಸಿ ಯಶಸ್ವಿಯಾಗಬಹುದೆಂದು ಕೋಚ್ಗೆ ಅನಿಸಿದ್ದು ಹೇಗೆ?
ಇದೊಂದೇ ಅಲ್ಲ. ಭಾರತ ತನ್ನ ಹಾಕಿ ತಂಡವನ್ನು ಜಪಾನಿಗೆ ಕಳಿಸಿದ್ದೂ ಹಾಗೆಯೇ. ಅದರಲ್ಲಿ ಅ‘ಕ್ಕಿಂತಲೂ ಹೆಚ್ಚಿನ ಹುಡುಗರು ತೀರಾ ಅನನುಭವಿಗಳಾಗಿದ್ದರು. ಅದಕ್ಕೆ ಸಾಕಷ್ಟು ಟೀಕೆಯೂ ವ್ಯಕ್ತವಾಯಿತು. ನಾಯಕ ಸೇರಿದಂತೆ ಎಂಟು ಮಂದಿ ಮಾತ್ರ 100 ಕ್ಕಿಂತ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನು‘ವಿಗಳಾಗಿದ್ದರು. ಕೆಲವರಿಗೆ ಕೆಲವೇ ದೇಶಗಳ ಜೊತೆ ಆಡಿದ ಅನುಭವ ಮಾತ್ರವಿತ್ತು. ಉಳಿದವರಿಗೆ ಅಂಡರ್ 19 ರ ಬಳಗದಲ್ಲಿ ಆಡಿದ್ದ ಅಷ್ಟಿಷ್ಟು ಅನು‘ವ ಬಿಟ್ಟರೆ ಬೇರೇನೂ ಇರಲಿಲ್ಲ. ಅದರಲ್ಲೂ ವರುಣ್ ಕುಮಾರ್, ಹಾರ್ದಿಕ್ ಸಿಂಗ್, ನೀಲಕಂಠ ಶರ್ಮ, ವಿವೇಕ್ ಸಾಗರ್ ಪ್ರಸಾದ್ ಮತ್ತು ಅಮಿತ್ ರೋಹಿದಾಸ್ ಅವರುಗಳಿಗೆ ಗಡ್ಡಮೀಸೆಯೇ ಸರಿಯಾಗಿ ಮೂಡಿರಲಿಲ್ಲ. ಅಮಿತ್ ರೋಹಿದಾಸನಂತೂ ನಾಲ್ಕು ವರ್ಷಗಳ ಅಜ್ಞಾತವಾಸದಿಂದ ನೇರ ಟೋಕಿಯೋಕ್ಕೆ ಹೊರಟಿದ್ದರು. ಅವರ ಆಯ್ಕೆಯಾದಾಗ ಕೆಲವರು ಸಂಶಯವನ್ನೂ ಪಟ್ಟಿದ್ದರು. ಆದರೆ ತಂಡ ಕಂಚಿನ ಪದಕ ಗಳಿಸುವ ಹೊತ್ತಿಗೆ ಅಮಿತ್ ರೋಹಿದಾಸ್ ವಿಶ್ವ ಹಾಕಿಯ ಅತ್ಯದ್ಭುತ ’ಸ್ಟ್ ರಶ್ಶರ್ ಇನ್ ಪೆನಾಲ್ಟಿ ಡಿಂಡರ್’ ಎಂದು ಹೆಸರಾಗಿದ್ದ!
ಕೆಲವರಿಗೆ ಹಾಕಿ ತಂಡಗಳ ಯಶಸ್ಸನ್ನೂ ಮೋದಿಗೆ ಕಟ್ಟಬೇಕೇ ಎನಿಸಬಹುದು. ಆದರೆ ನಿಸ್ಸಂಶಯವಾಗಿ ಅದರ ಕ್ರೆಡಿಟನ್ನು ಮೋದಿ ಸರ್ಕಾರಕ್ಕೇ ಕೊಡಬೇಕು. ಎಲ್ಲೋ ಹಳಿತಪ್ಪುವ ರೈಲು ಬೋಗಿಗಳಿಗೂ ಮೋದಿಯನ್ನು ಹೊಣೆ ಮಾಡಬಹುದಾದರೆ, ಯಾವನೋ ಕ್ರಿಮಿನಲ್ ಪಾದ್ರಿ ಜೈಲಿನಲ್ಲಿ ಸತ್ತರೂ ಮೋದಿಯನ್ನು ಹೊಣೆ ಮಾಡಬಹುದಾದರೆ,ಅಂತರ್ಜಲ ಬತ್ತುವುದಕ್ಕೂ ಮೋದಿಯೇ ಕಾರಣ ಎನ್ನುವುದಾದರೆ ಹಾಕಿಯಲ್ಲಿ ಸೆಮಿ ನಲ್ ತಲುಪಿದ್ದಕ್ಕೂ ಮೋದಿಯೇ ಕಾರಣ ಎಂದು ಯಾಕನ್ನಬಾರದು? ಅಲ್ಲದೆ ದೇಶಾದ್ಯಂತ ಟರ್ಪ್ ಮೈದಾನಗಳ ಸಂಖ್ಯೆ ಹೆಚ್ಚು ಮಾಡಿದ್ದು, ಸಾಯಿ ಕೇಂದ್ರಗಳನ್ನು ಜೀರ್ಣೋದ್ಧಾರ ಮಾಡಿಸಿದ್ದು, ಖೇಲೋ ಇಂಡಿಯಾ ಮೂಲಕ ಯೂರೋಪ್ ಮಾದರಿಯನ್ನು ಅನುಸರಿಸಿದ್ದು, ಪಾರದರ್ಶಕ ನೇಮಕಾತಿಗಳು ನಡೆಯಲಾರಂಭಿಸಿದ್ದು, ಪ್ರಾದೇಶಿಕ ಅಸಮಾನತೆಗಳನ್ನು ನಿವಾರಿಸಿದ್ದು, ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಂದ ದೇಶದಲ್ಲಿ ಯಾವ ಪ್ರತಿಭೆಯೂ ಕಮರಬಾರದೆಂದು ಹೊಸ ಕ್ರೀಡಾನೀತಿಯನ್ನು ರೂಪಿಸಿದ್ದೆಲ್ಲವೂ ಮೋದಿ ಸರ್ಕಾರದ ಹೆಜ್ಜೆಗಳೇ. ಇವ್ಯಾವವೂ ಕಾಂಗ್ರೆಸ್ ಸರ್ಕಾರಗಳಿದ್ದಾಗ ಇರಲಿಲ್ಲವೆಂಬ ಕಾರಣಕ್ಕೆ ಇದರ ಕ್ರೆಡಿಟನ್ನು ಮೋದಿಯವರಿಗೆ ನೀಡಬೇಕು. ಅಷ್ಟು ಮಾತ್ರವಲ್ಲ. ಇದುವರೆಗೆ ಸರ್ಕಾರಗಳು ಒಲಂಪಿಕ್ಸ್ಗೆ ತೆರಳುವವರಿಗೂ ತನಗೂ ಏನೇನೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದವು. ಆದರೆ ಮೋದಿ ಒಲಂಪಿಕ್ಸ್ಗೆ ತೆರಳುವ ಪ್ರತೀ ಕ್ರೀಡಾಪಟು/ತಂಡದ ಜೊತೆ ಮಾತುಕತೆ ನಡೆಸಿದರು. ತಾನು ಆಡುತ್ತಿರುವುದು ದೇಶಕ್ಕಾಗಿ, ವಿಶ್ವದಲ್ಲಿ ತನ್ನ ದೇಶ ಎದ್ದುಕಾಣುವಂತೆ ಮಾಡಲು ತನ್ನ ಕೊಡುಗೆಯೂ ಇದೆ ಎಂಬ ಸಂವೇದನೆ ಕ್ರೀಡಾಪಟುವಿಗೆ ಹುಟ್ಟಲು ಮತ್ತೇನು ಬೇಕು? ಆಟಗಾರರಲ್ಲಿ ಅಂಥಾ ಸಂವೇದನೆಯೊಂದು ಹುಟ್ಟಿದ ಲವೇ ಹಾಕಿ ತಂಡಗಳ ಫಲಿತಾಂಶ ಮತ್ತು ಪುರುಷರ ಹಾಕಿಯಲ್ಲಿ ಪದಕ.
ಕಂಚಿನ ಪದಕ ಪಡೆದ ತಂಡ ಇನ್ನೂ ಮೈದಾನ ಬಿಟ್ಟಿರಲಿಲ್ಲ. ಆಟಗಾರರೆಲ್ಲರೂ ಬೆಂಚಿನಲ್ಲಿ ಕುಳಿತಿದ್ದಾಗಲೇ ಅವರಿಗೆ ಪ್ರಧಾನ ಮಂತ್ರಿಗಳು ಕರೆ ಮಾಡಿದರು. ಶುಭ ಹಾರೈಸಿದ ಪ್ರಧಾನಿಗೆ ಆಟಗಾರರು “ನಿಮ್ಮ ಪ್ರೇರಣೆಯೇ ಗೆಲುವಿನ ಗುಟ್ಟು’ ಎಂದರು. ಅತ್ತ ಪ್ರಧಾನಿಗಳೂ “ನಿಮ್ಮ ಪರಿಶ್ರಮವೇ ಗೆಲುವಿಗೆ ಕಾರಣ’ ಎಂದರು. ಇಬ್ಬರೂ ಗೆಲುವಿಗೆ ತಾವು ಕಾರಣರಲ್ಲ ಎನ್ನುತ್ತಿದ್ದರು! ಇಬ್ಬರ ಪ್ರಕಾರ ಗೆಲುವು ಸಂದಿದ್ದು ದೇಶಕ್ಕೆ, ಅರ್ಪಿಸಿದ್ದು ದೇಶಕ್ಕೆ, ಆಡಿದ್ದೂ ದೇಶಕ್ಕೆ! ಹಾಗಾದರೆ ಹಾಕಿಯ ಗೆಲುವು ಭಾರತ ಗೆಲ್ಲಲಾರಂಭಿಸಿದೆ ಎನ್ನುವುದರ ಅರ್ಥವಲ್ಲದೆ ಮತ್ತೇನು?
✍️ ಸಂತೋಷ್ ತಮ್ಮಯ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.