ನವದೆಹಲಿ: ಹಿಂಸಾಚಾರ ಮತ್ತು ಲೈಂಗಿಕ ಕಿರುಕುಳಗಳಿಂದ ತೊಂದರೆ ಅನುಭವಿಸುತ್ತಿರುವ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಮಹಿಳಾ ಆಯೋಗವು 24/7 ಸಹಾಯವಾಣಿಯೊಂದನ್ನು ರೂಪಿಸಿದೆ.
ಈ ಡಿಜಿಟಲ್ ಹೆಲ್ಪ್ಲೈನ್ ಸಂಖ್ಯೆಯನ್ನು ಇಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಲೋಕಾರ್ಪಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಯೋಗದ ಅಧ್ಯಕ್ಷೆ ಎಂ. ಎಸ್. ರೇಖಾ ಶರ್ಮಾ, ಆಯೋಗದ ಸದಸ್ಯರು, ಮಹಿಳಾ ಸಚಿವಾಲಯದ ಕಾರ್ಯದರ್ಶಿ ಇವೇಂದರ್ ಪಾಂಡೆ, ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ನ ಎಂಡಿ, ಸಿಇಒ ಅಭಿಷೇಕ ಸಿಂಗ್ ಅವರು ಉಪಸ್ಥಿತರಿದ್ದರು.
ಮಹಿಳಾ ದೌರ್ಜನ್ಯ, ಲೈಂಗಿಕ ಕಿರುಕುಳ ಮೊದಲಾದ ಸಮಸ್ಯೆಗಳಿಗೆ ಸಿಲುಕಿ ನಲುಗುತ್ತಿರುವ ಮಹಿಳೆಯರಿಗೆ ತುರ್ತು ಸೇವೆ ಒದಗಿಸುವ ನಿಟ್ಟಿನಲ್ಲಿ ಇದನ್ನು ಜಾರಿಗೆ ತರಲಾಗಿದೆ. ಈ ಹೆಲ್ಪ್ಲೈನ್ ಸಂಖ್ಯೆ ಪೊಲೀಸ್, ಆಸ್ಪತ್ರೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಾನಸಿಕ ಸೇವೆಗಳು ಮೊದಲಾದ ಅಧಿಕಾರಿಗಳ ಜೊತೆಗೂ ಸಂಪರ್ಕಿಸಲು ಅನುಕೂಲ ಮಾಡಿಕೊಡುತ್ತದೆ. ಜೊತೆಗೆ ಈ ಹೆಲ್ಪ್ಲೈನ್ ಮೂಲಕ ಮಹಿಳೆಯರಿಗೆ ಸರ್ಕಾರದ ಹಲವು ಕಾರ್ಯಕ್ರಮಗಳ ಮಾಹಿತಿ ಸಹ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈ ಹೆಲ್ಪ್ಲೈನ್ ಅನ್ನು ಡಿಜಿಟಲ್ ಇಂಡಿಯಾ ಕಾರ್ಪೊರೇಷನ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಹಯೋಗದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಸಹಾಯವಾಣಿ ಸಂಖ್ಯೆ 7827170170 ಗೆ ಕರೆ ಮಾಡುವ ಮೂಲಕ ಸಂತ್ರಸ್ತ ಮಹಿಳೆಯರು ನೆರವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಆಯೋಗ ತಿಳಿಸಿದೆ. ಮಹಿಳಾ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ ಅವರಿಂದ ಪ್ರೇರಿತರಾಗಿ ಈ ಸಹಾಯವಾಣಿ ಆರಂಭಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ಈ ಸಹಾಯವಾಣಿ ಮೂಲಕ ತರಬೇತಿ ಪಡೆದ ತಜ್ಞರ ತಂಡ ಸಂತ್ರಸ್ತರ ಜೊತೆಗೆ ಸಮಾಲೋಚನೆ ನಡೆಸಲಿದೆ. ನವದೆಹಲಿಯ ಮಹಿಳಾ ಆಯೋಗದಿಂದ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. 18 ವರ್ಷ ಮೇಲ್ಪಟ್ಟ ಯಾವುದೇ ಹೆಣ್ಣು ಅಥವಾ ಮಹಿಳೆ ಈ ಸಹಾಯವಾಣಿ ಮೂಲಕ ನೆರವು ಪಡೆಯಬಹುದು ಎಂದು ಆಯೋಗ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.