ಇಂದು ವೀರ ಸ್ವಾತಂತ್ರ್ಯ ಸೇನಾನಿ ಮಂಗಲ್ ಪಾಂಡೆ ಜನ್ಮದಿನ. ಸಂಪೂರ್ಣ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮರೆಯಲಾಗದ, ಪ್ರತಿ ಬಾರಿ ಸ್ಮರಿಸಿದಾಗಲೂ ರೋಮಾಂಚನಗೊಳಿಸುವ ಹೆಸರು ಮಂಗಲ್ ಪಾಂಡೆ. 1857 ರಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಈ ಸಂಗ್ರಾಮದ ಪ್ರಥಮ ಹುತಾತ್ಮ ಮಂಗಲ್ ಪಾಂಡೆ. ಅವನ ಸ್ವಾತಂತ್ರ್ಯ ಹೋರಾಟದ ಕಿಚ್ಚು, ಭಾರತಮಾತೆಯ ಬಲಿಪೀಠದ ಮೇಲೆ ಬಲಿದಾನದ ಅಚ್ಚು ಸದಾ ಸ್ಮರಣೀಯ.
ಮಂಗಲ್ ಪಾಂಡೆ 19 ಜುಲೈ 1827 ರಂದು ಉತ್ತರಪ್ರದೇಶದ ಫೈಜಾಬಾದ ಜಿಲ್ಲೆಯ ಸುರಹರಪುರ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ದಿವಾಕರ, ತಾಯಿ ಶ್ರೀಮತಿ ಅಭಯರಾಣಿ. ಮಂಗಲ್ ಪಾಂಡೆ ಬಾಲ್ಯದಿಂದಲೂ ದಷ್ಟಪುಷ್ಟ, ಶಕ್ತಿಶಾಲಿ, ಸಾಹಸಿ ಹಾಗೂ ನಿರ್ಭಯ ಸ್ವಭಾವದವರಾಗಿದ್ದರು. ತಾನು ಸೈನ್ಯಕ್ಕೆ ಸೇರಿ ಒಬ್ಬ ವೀರಯೋಧನಾಗಬೇಕೆಂಬ ಹೆಬ್ಬಯಕೆ ಅವರಲ್ಲಿ ಎಳವೆಯಲ್ಲೇ ಮನೆ ಮಾಡಿತ್ತು.
ಒಮ್ಮೆ ಮಂಗಲ್ ಪಾಂಡೆ ಅವರು ತಮ್ಮ ಗ್ರಾಮದಲ್ಲಿ ಬ್ರಿಟಿಷರ ಸೈನ್ಯವು ಪಥಸಂಚಲನ ಮಾಡುತ್ತಾ ಸಾಗಿದ್ದನ್ನು ನೋಡಿ, ಸೈನಿಕರ ಅಚ್ಚುಕಟ್ಟಾದ ಹಾಗೂ ಶಿಸ್ತಿನ ಪಥ ಸಂಚಲನ ಕಂಡು ಪ್ರಭಾವಿತನಾಗಿ, ತಾನೂ ಸೈನ್ಯಕ್ಕೆ ಸೇರಬೇಕೆಂದು ನಿರ್ಧರಿಸಿದನು. ಕೊನೆಗೂ ತನ್ನ ಆಸೆಯಂತೆ ಮಂಗಲ್ ಪಾಂಡೆ ಸೈನ್ಯಕ್ಕೆ ಸೇರಿದ ನಂತರ 19 ನಂಬರಿನ ಪ್ಲಟೂನಿನಲ್ಲಿ ಸೈನಿಕನಾದನು. ಮಂಗಲ್ ಅಂದ ಹಾಗೆ ಪಾಂಡೆ ಮೊದಲಿನಿಂದಲೂ ಮಹಾ ದೇಶಭಕ್ತ, ಸ್ವಾಭಿಮಾನಿ ಹಾಗೂ ಧರ್ಮಾಭಿಮಾನಿ ಯುವಕ.
20 ಮಾರ್ಚ್ 1857 ರಂದು ಸೈನಿಕರಿಗೆ ಹೊಸ ರೀತಿಯ ಕಾಡತೂಸುಗಳನ್ನು ಕೊಡಲಾಯಿತು. ಆ ಕಾಡತೂಸುಗಳಿಗೆ ಹಸು ಹಾಗೂ ಹಂದಿಯ ನೆಣವನ್ನು ಸವರಲಾಗಿತ್ತು. ಭಾರತೀಯ ಸೈನಿಕರನ್ನು ಧರ್ಮಭ್ರಷ್ಟರನ್ನಾಗಿ ಮಾಡಲು ಬ್ರಿಟಿಷರು ಮಾಡಿದ ಕುತಂತ್ರ ಇದಾಗಿತ್ತು. ಹಸು ಹಾಗೂ ಹಂದಿಗಳ ನೆಣವನ್ನು ಸವರಿದ ಕಾಡತೂಸುಗಳನ್ನು ಸೈನಿಕರು ಬಾಯಿಂದ ಎಳೆದು ತೆಗೆಯಬೇಕಿತ್ತು. ಇದರಿಂದ ಅವರು ಧರ್ಮ ಭ್ರಷ್ಟರಾದರೆಂದು ಪರಿಗಣಿಸಿ ಅವರನ್ನು ಸಮಾಜದಿಂದ ಹೊರಗೆ ಹಾಕಲಾಗುವುದು. ಆಗ ಭಾರತೀಯರ ಮನೋಬಲ ಕುಸಿದು ಅವರು ಮಾನಸಿಕ ಆಘಾತಕ್ಕೆ ಒಳಗಾಗುವರು ಎಂಬುದು ಬಿಟಿಷರ ಲೆಕ್ಕಾಚಾರ.
ಆದರೆ ಬ್ರಿಟಿಷರ ಈ ಷಡ್ಯಂತ್ರ ಮಂಗಲ್ ಪಾಂಡೆಗೆ ತಿಳಿದ ತಕ್ಷಣ ಕೋಪೋದ್ರಿಕ್ತನಾಗಿ ಕಾಡತೂಸು ತುಂಬಿದ ಬಂದೂಕು ಎತ್ತಿಕೊಂಡು ಎಲ್ಲಾ ಸೈನಿಕರೆದರು ಆವೇಶಭರಿತನಾಗಿ ನಿಂತು ಭಾರತೀಯ ಸೈನಿಕರನ್ನು ಹತ್ತಿರ ಕರೆದು “ಈ ಕಾಡತೂಸುಗಳಿಗೆ ಹಸು ಹಾಗೂ ಹಂದಿಗಳ ನೆಣವನ್ನು ಸವರಲಾಗಿದೆ. ನಮ್ಮನ್ನು
ಧರ್ಮಭ್ರಷ್ಟರನ್ನಾಗಿ ಮಾಡಲು ಈ ಪ್ರಯೋಗ ಮಾಡಲಾಗಿದೆ. ನಾವು ಸ್ವಾಭಿಮಾನಿ ಭಾರತೀಯ ವೀರರು. ನಾವು ನಮ್ಮ ಧರ್ಮ ಹಾಗೂ ರಾಷ್ಟ್ರಾಭಿಮಾನವನ್ನು ಮರೆಯಬಾರದು” ಎಂದು ಸಿಂಹದಂತೆ ಗಂಭೀರ ಧ್ವನಿಯಲ್ಲಿ ಗರ್ಜಿಸಿದನು.
ಮಂಗಲ್ ಪಾಂಡೆಯ ಸಿಂಹವಾಣಿಯು ಸೈನಿಕರ ಮೇಲೆ ಗಾಢ ಪ್ರಭಾವ ಬೀರಿ ಎಲ್ಲರೂ ಏಕೋಭಾವದಿಂದ ಈ ಹೊಸ ಕಾಡತೂಸುಗಳನ್ನು ಉಪಯೋಗಿಸಲು ಖಡಾಖಂಡಿತವಾಗಿ ನಿರಾಕರಿಸಿದರು. ಆಗ ಇದನ್ನು ತಿಳಿದು ಈ ಪ್ಲಟೂನಿನ ಸಾರ್ಜಂಟ ಆಂಗ್ಲ ಅಧಿಕಾರಿ ಹಡಸನ್ ಸೈನಿಕರಿಗೆ ಮಂಗಲ್ ಪಾಂಡೆ ಬಂಧಿಸಲು ಆದೇಶ ನೀಡಿದನು. ಸಾರ್ಜಂಟನ ಈ ಆಜ್ಞೆಯನ್ನು ಸೈನಿಕರು ಪಾಲಿಸಲಿಲ್ಲ. ಸಿಟ್ಟುಗೊಂಡ ಸಾರ್ಜೆಂಟನು ತಾನೇ ಸ್ವತಃ ಮಂಗಲ್ ಪಾಂಡೆ ಬಂಧಿಸಲು ಮುಂದಾದನು ಆಗ ಮಂಗಲ್ ಪಾಂಡೆ ನೇರವಾಗಿ ಸಾರ್ಜಂಟನ ಮೇಲೆ ಗುಂಡು ಹಾರಿಸಿದನು. ಹಡಸನ್ ಹತ್ಯೆಯ ನಂತರ ಲೆಫ್ಟಿನೆಂಟ್ ಬಲನು ಮಂಗಲ್ ಪಾಂಡೆ ಬಂಧಿಸಲು ಮತ್ತೆ ಪ್ರಯತ್ನಿಸಿದನು. ಪುನಃ ಪಾಂಡೆ ಗುಂಡು ಹಾರಿಸಿ ಆತನನ್ನು ಕೊಂದನು. ಇನ್ನಷ್ಟು ಭಯದಿಂದ ಮತ್ತೊಂದು ಕಡೆ ಕೋಪದಿಂದ ಎಲ್ಲಾ ಬ್ರಿಟಿಷ್ ಸೈನಿಕರು ಮಂಗಲ್ ಪಾಂಡೆಯನ್ನು ಸುತ್ತುವರಿದು ಗುಂಡಿನ ಮಳೆಗರೆಯುವಾಗ ಒಂದು ಗುಂಡು ಮಂಗಲ್ ಪಾಂಡೆಗೆ ತಗುಲಿ ಆತ ಗಾಯಗೊಂಡು ಬಂಧಿಸಲ್ಪಟ್ಟನು.
8 ಏಪ್ರಿಲ್ 1857 ರಂದು ಮಂಗಲ್ ಪಾಂಡೆಯನ್ನು ಗಲ್ಲಿಗೇರಿಸಲಾಯಿತು. ಬಲಿವೇದಿಕೆಯತ್ತ ಸಾಗುತ್ತಿರುವಾಗ ಆತನ ಮುಖದಲ್ಲಿ ಮಾತ್ರ ಒಂದು ಹನಿಯೂ ಭಯವಾಗಲಿ, ದುಃಖವಾಗಲಿ ಕಾಣದೆ ಮಂದಹಾಸವೇ ಮುಖದಲ್ಲಿ ಗೋಚರಿಸುತ್ತಿತ್ತು. ತನ್ನ ಕೊನೆಯ ಇಚ್ಛೆ ಏನೆಂದು ಆಂಗ್ಲ ನ್ಯಾಯಾಧೀಶರು ಕೇಳಿದಾಗ ಮಂಗಲ್ ಪಾಂಡೆ ಗಂಭೀರ ಧ್ವನಿಯಲ್ಲಿ “ದೇಶಕ್ಕೆ ನನ್ನ ರಕ್ತವನ್ನು ನೀಡಬೇಕು. ಆಂಗ್ಲರೇ, ನಾನು ಶಪಥ….” ಎಂದು ಮಂಗಲ್ ಪಾಂಡೆ ತಮ್ಮ ಹೇಳಿಕೆಯನ್ನು ಇನ್ನೂ ಮುಗಿಸಿರದ ವೇಳೆಗೆ ನೇಣು ಬಿಗಿಯುವ ಸೇವಕನು ಕಾಲು ಕೆಳಗಿನ ಹಲಗೆಯನ್ನು ಧಡ್ಡನೆ ತಳ್ಳಿಬಿಟ್ಟನು. ಮಂಗಲ್ ಪಾಂಡೆ ಕೊನೆ ಉಸಿರೆಳೆದನು.
ಇಂತಹ ಭಾರತ ಮಾತೆಯ ಶ್ರೇಷ್ಠ ಸುಪುತ್ರ ಸ್ವಾತಂತ್ರ್ಯದ ಬಲಿಪೀಠ ಏರಿ ಹುತಾತ್ಮನಾದನು. ಆದರೆ ಮಂಗಲ್ ಪಾಂಡೆ ಇನ್ನೂ ಸಾವಿರ ವರ್ಷಗಳಾದರೂ ನಮ್ಮ ಹೃದಯದಲ್ಲಿ, ಈ ದೇಶದ ಚರಿತ್ರೆಯಲ್ಲಿ ಚಿರಂಜೀವಿ. ಇಂತಹ ನೂರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವೇ ನಮ್ಮ ಸ್ವಾತಂತ್ರ್ಯದ ಹಿಂದಿರುವ ಶಕ್ತಿ ಎಂಬುದನ್ನು ಮರೆಯುವಂತಿಲ್ಲ.
✍️ ಪ್ರಣವ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.