ಆತನ ಹೆಸರು ವಿಶಾಲ್ ವೇಣುಗೋಪಾಲ್. ಹಣೆಯಲ್ಲೊಂದು ಕುಂಕುಮ, ಕಣ್ಣಿಗೊಂದು ಕನ್ನಡಕ, ಕೋಲು ಮುಖದ ಹುಡುಗ. ಹುಟ್ಟಿದ್ದು ಸೌದಿ ಅರೇಬಿಯಾದಲ್ಲಿ. ಪ್ರಾಥಮಿಕ ಶಿಕ್ಷಣ ಲಂಡನ್ನಿನಲ್ಲಿ. ತನ್ನ ಬಿಡುವಿನ ವೇಳೆಯಲ್ಲಿ, ಇಂಟರ್ನೆಟ್ಟಿನಲ್ಲಿ ಭಾರತದ ಬಗ್ಗೆ, ಅದರ ಹಿರಿ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿ,ಇತಿಹಾಸಗಳ ಬಗ್ಗೆ ಓದುವುದು, ಅದರ ಬಗ್ಗೆ ಸಂಶೋಧನೆ ಮಾಡುವುದು ಆತನ ಅಚ್ಚುಮೆಚ್ಚಿನ ವಿಷಯ. ವಿದೇಶಿ ಸಂಸ್ಕೃತಿಗೆ ತಲೆದೂಗುವ ಯುವಕರ ಮಧ್ಯೆ ಲಂಡನ್ನಿನಲ್ಲಿ ಇದ್ದು, ಸನಾತನ ಸಂಸ್ಕೃತಿಯ ಬಗ್ಗೆ ಚಿಂತಿಸುವ ಮನಸ್ಥಿತಿ ಹೊಂದಿದ ಯುವಕ ವಿಶಾಲ.
ಭಾರತೀಯ ಸಂಸ್ಕೃತಿಗೆ ಆಕರ್ಷಿತನಾದ ವಿಶಾಲನಿಗೆ ಭಾರತದಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದಿರಿಸುವ ಹಂಬಲ. ತಂದೆ ತಾಯಿ ಇಬ್ಬರೂ ಸಹ ಎಷ್ಟು ಹೇಳಿದರೂ ಆತನ ಉತ್ಕಟ ಆಕಾಂಕ್ಷೆಗೆ, ಕೊನೆಗೆ ಅವರು ‘ಅಸ್ತು’ ಎನ್ನಲೇಬೇಕಾಯಿತು. ತನ್ನ ವಿಚಾರ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ವೈಚಾರಿಕತೆ ತಾಳಿ ಹೊಂದುವುದನ್ನು ಮನಗಂಡ ವಿಶಾಲ, ಈ ಸಂಘಟನೆಯೇ ಶ್ರೇಷ್ಠ ಎಂದು ತಿಳಿದು, ಪದವಿಪೂರ್ವ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಕಾರ್ಯಕರ್ತನಾಗಿ ಸೇರಿದ. ಆತನಲ್ಲಿ,ಪೂರ್ಣಾವಧಿ ಕಾರ್ಯಕರ್ತ ಆಗಬೇಕೆಂಬ ತುಡಿತ ದಿನೇ ದಿನೇ ಹೆಚ್ಚಾದಂತೆ, ಅದನ್ನು ಎದುರುಗೊಳ್ಳಲು ಹವಣಿಸುತ್ತಿತ್ತು ಆತನ ಮನಸ್ಸು. ಆತನಿಗೆ ಆತುರ ಎಷ್ಟಿತ್ತೆಂದರೆ, ತನ್ನ +2 ವಿದ್ಯಾಭ್ಯಾಸವನ್ನು ಮೊಟಕುಗೊಳಿಸಲು ನಿರ್ಧರಿಸಿಯೇ ಬಿಟ್ಟನು. ನಂತರ, ಸಂಘದ ಹಿರಿಯರು ತಿಳಿಹೇಳಿ, ಕನಿಷ್ಠ ಪದವಿಯನ್ನು ನೀನು ಪೂರೈಸಬೇಕು ಎಂದಾಗ, ಕೇವಲ 45ದಿನಗಳ ನಿರಂತರ ಅಭ್ಯಾಸದಿಂದ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದನು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಕ್ರಿಯ ಕಾರ್ಯಕರ್ತನಾಗಿ, ನಗರ ಸಮಿತಿ ಸದಸ್ಯನಾಗಿ, ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಚಿಂತನೆಯಲ್ಲಿ ತೊಡಗಿಸುವಂತೆ ಮಾಡುವಲ್ಲಿ ನಿರಂತರ ಶ್ರಮ ವಹಿಸಿದನು. ಸಂಘದ ನಗರ ಶಾರೀರಿಕ ಶಿಕ್ಷಣ ಪ್ರಮುಖನಾಗಿ ಜವಾಬ್ದಾರಿ ವಹಿಸಿಕೊಂಡು, ಶಾಖಾ ವಿಸ್ತರಣೆ,ಜನರೊಂದಿಗೆ ಒಡನಾಟ, ಅವರೊಂದಿಗೆ ಆತ್ಮೀಯ ಸಂಪರ್ಕ ಸಾಧಿಸಿದನು. ಇದರಿಂದಾಗಿ ನಿಷೇಧಿತ ಸಿಮಿ ಉಗ್ರ ಸಂಘಟನೆಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ವಿದ್ಯಾರ್ಥಿ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೆಂಗಣ್ಣಿಗೆ ಗುರಿಯಾದನು. ಲವ್ ಜಿಹಾದ್ ಪ್ರಕರಣಗಳನ್ನು ಬೆಳಕಿಗೆ ತರುವುದು, ಮತಾಂಧ ಇಸ್ಲಾಮಿಕ್ ಮೂಲಭೂತವಾದಿಗಳ ಉಗ್ರ ನಂಟು, ಡ್ರಗ್ಸ್ ದಂದೆ, ಜಿಹಾದಿ ಚಟುವಟಿಕೆಗಳ ವಿರುದ್ಧ ಸೆಟೆದು ನಿಂತ ಯುವಕನಿಗೆ ರಾಷ್ಟ್ರೀಯವಾದ,’ದೇವರ ನಾಡು’ ಎಂದು ಕರೆಸಿಕೊಳ್ಳುವ ಕೇರಳದಲ್ಲೇ ಮುಳುವಾಯಿತು.
ಜುಲೈ 16 2012ರಂದು ಚೆಂಗನ್ನೂರಿನೂ ಕ್ರೈಸ್ಟ್ ಕಾಲೇಜಿನಲ್ಲಿ, ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಹಾಗೂ ತಾಯಿ ಸರಸ್ವತಿಯ ಆರಾಧನೆಯ ಉದ್ದೇಶದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿದ ಸಂದರ್ಭದಲ್ಲಿ, ಅಲ್ಲಿಗೆ ಬಂದಿದ್ದ ಪಿ ಎಫ್ ಐ ಮತ್ತು ಸಿ ಎಫ್ ಐ ಗೂಂಡಾಗಳು, ಮಚ್ಚು, ಚೂರಿ, ಮಾರಕಾಯುಧಗಳಿಂದ ಸ್ವಯಂಸೇವಕರಾದ ವಿಶಾಲ್, ವಿಷ್ಣು,.ಶ್ರೀಜಿತ್ ಎಂಬ 19ರ ಆಸುಪಾಸಿನ ಯುವಕರ ಮೇಲೆ ಮಾರಣಾಂತಿಕ ಹಲ್ಲೆಗೈದರು. ತೀವ್ರವಾಗಿ ಗಾಯಗೊಂಡಿದ್ದ ವಿಶಾಲ್ ವೇಣುಗೋಪಾಲ್ 17ರಂದು ತಾಯಿ ಭಾರತೀಯ ಪಾದಗಳಿಗೆ ಅರ್ಪಿತರಾದರು.
ಲಂಡನ್ನಿನಿಂದ ಬಂದ ತಂದೆ-ತಾಯಿಗೆ ಒಂದೆಡೆ ಪುತ್ರ ವಿಯೋಗದ ಶೋಕವಾದರೆ, ಮಗದೊಂದು ಕಡೆ,ಮಗನಾಡಿದ ಮಾತುಗಳು ಕಿವಿಯೊಳಗೆ ಗುನುಗುನುತ್ತಿತ್ತು. ದುಖಿತ ತಂದೆ, ಮಗನಾಡಿನ ಮಾತುಗಳನ್ನು ಉಲ್ಲೇಖಿಸುತ್ತಾ,” ನನ್ನ ಮಗ ಅವನ ತಾಯಿ ಬಳಿ ಯಾವತ್ತೂ ಹೇಳುತ್ತಿದ್ದ.. ‘ಅಮ್ಮ ನಿಮ್ಮಿಬ್ಬರ ಸಂಧ್ಯಾಕಾಲದಲ್ಲಿ ನಿಮ್ಮ ಸೇವೆ ಮಾಡಲು ನನಗೆ ಸಾಧ್ಯವಾಗದೆ ಬರಬಹುದು’ ಅವನ ತಾಯಿ ಅದಕ್ಕೆ ಕಾರಣವನ್ನು ಕೇಳುವಾಗಲೆಲ್ಲ,’ ಅಮ್ಮ …ಸ್ವಾಮಿ ವಿವೇಕಾನಂದರು, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಇವರೆಲ್ಲರೂ ತಮ್ಮ ಕುಟುಂಬಕ್ಕಾಗಿ ಜೀವಿಸುತ್ತಿದ್ದರೆ, ನಾವು ಇಂದು ಸ್ವಾತಂತ್ರ್ಯದ ಬೆಳಕನ್ನು ಕಾಣುತ್ತಿರಲು ಸಾಧ್ಯವಾಗುತ್ತಿತ್ತೆ….!!?'” ಎಂದು ಹೇಳಿದ್ದನ್ನು ನೆನಪಿಸಿಕೊಳ್ಳುತ್ತಾರೆ.
ವಿಶಾಲರ ಅಂತಿಮ ಯಾತ್ರೆಗೆ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು. ಜುಲೈ 15ರಂದು ನಡೆದ ಗುರುಪೂಜೆಯಲ್ಲಿ,’ ತ್ಯಾಗ ಎಂಬುದು ಭಾರತದ ಸ್ವಾಭಾವಿಕ ಗುಣ. ತಾಯ್ನಾಡಿಗಾಗಿ ಸರ್ವಸ್ವವನ್ನು ಅರ್ಪಿಸಿದವನನ್ನು ಮಾತ್ರ ಹಿಂದು ನೆನಪಿಸಿಕೊಳ್ಳುತ್ತಾನೆ, ಆತನೇ ಭಾರತದ ಸ್ಮೃತಿಪಟಲದಲ್ಲಿ ಅನಂತವಾಗಿ ಇರುತ್ತಾನೆ’ಎಂಬ ಪ್ರೇರಣಾದಾಯಿ ಬೌದ್ಧಿಕ್ ಅನ್ನು ಸ್ವಯಂಸೇವಕರಿಗೆ ಇತ್ತಿದ್ದರು ಎಂಬುದನ್ನು, ಅಲ್ಲಿಗೆ ಬಂದ ನೂರಾರು ಜನರು ನೆನಪಿಸಿಕೊಳ್ಳುತ್ತಿದ್ದರಂತೆ ಆ ದಿನ. ಚಿತೆಯ ಬಳಿ ಆತನ ಅಣ್ಣ ವಿಪಿನ್, ಹಾಡನ್ನು ಹಾಡುತ್ತಿದ್ದುದನ್ನು ನೋಡಿದ ಶೋಕಗ್ರಸ್ತ ತಂದೆ-ತಾಯಿ, “ವಿಪಿನ್, ಈ ದುಃಖದ ಸಂದರ್ಭದಲ್ಲೂ ಹಾಡನ್ನು ತೊದಲುತ್ತಿರುವೆಯಾ…..!!?? ಬೂದಿಯಾಗಲಿರುವ ಈತ ನಿನ್ನ ಸಹೋದರ ಎಂಬುದನ್ನೂ ಮರೆತೆಯಾ…!!?” ಎಂದಾಗ, “ಜೀವಿತಮ್ ಅಂಬೆ ನಿನ್ ಪೂಜೆಕ್ಯಾಯಿ, ಮರಣಂ ದೇವೀ ನಿನ್ ಮಹಿಮಕ್ಯಾಯಿ…( ಓ ತಾಯಿ, ಈ ಬದುಕು ನಿನ್ನ ಸೇವೆಗಾಗಿ ಮತ್ತು ಎಲೈ ದೇವತೆ, ಈ ಮರಣ ನಿನ್ನ ಮಹಿಮೆಗಾಗಿ) ಎಂಬ ಹಾಡನ್ನ ಹಾಡುತ್ತಿದ್ದೆ… ಅಮ್ಮಾ, ಈ ಪದ್ಯದ ಸಾಲನ್ನು ನನ್ನ ತಮ್ಮ ನನಗೆ ಕಲಿಸಿಕೊಟ್ಟಿದ್ದು, ಆ ಸಾಲಿಗೆ ನ್ಯಾಯ ಒದಗಿಸಿ ಕೊಟ್ಟಿದ್ದಾನೆ ಅವನಿಂದು….. ಮತ್ತು ಅದರಂತೆ ನಾನು ಮುಂದೆ ನಡೆಯಲಿದ್ದೇನೆ” ಎಂದನಂತೆ. ವಿಶಾಲರ ತಂದೆ ವೇಣುಗೋಪಾಲರು ಸೈದ್ಧಾಂತಿಕವಾಗಿ ಅಪ್ಪಟ ಕಮ್ಮಿನಿಸ್ಟರು… ಆದರೆ ಮಗನ ವೈಚಾರಿಕತೆ, ಬದುಕು, ತ್ಯಾಗ, ಬಲಿದಾನವು ಅವರನ್ನು ನಂತರ, ಸಂಘದ ಕಾರ್ಯಕರ್ತರನ್ನಾಗಿ ಬದಲಾಯಿಸಿತು.
ತಮ್ಮ ವಿಕಲ ಸಿದ್ಧಾಂತವನ್ನು ಒಪ್ಪದೇ ಇರುವ ಸಂಘಟನೆಯನ್ನು, ಮತ್ತದರ ಕಾರ್ಯಕರ್ತರನ್ನು, ನೇರಾನೇರ ಚರ್ಚೆಯ ಮೂಲಕ ಗೆಲ್ಲಲು ಸಾಧ್ಯವಿಲ್ಲ ಎಂಬ ಕಾರಣದಿಂದ ಹಿಂದಿನಿಂದ ಬಂದು ಬೆನ್ನಿಗೆ ಚೂರಿ ಹಾಕುವ ಕುತ್ಸಿತ ಮನೋಭಾವದ ಹೇಡಿಗಳು ಇಂದಿಗೂ ನಮ್ಮ ನಡುವಿದ್ದಾರೆ. ಪಾಕಿಸ್ತಾನ, ಬಾಂಗ್ಲಾ, ಅಫ್ಘಾನಿಸ್ತಾನದಲ್ಲಿ ಆಗುತ್ತಿರುವ ಇಸ್ಲಾಮಿಕ್ ಕ್ರೌರ್ಯದ ರೀತಿಯಲ್ಲೇ ದೇಶದೊಳಗೆ ಇಂದಿಗೂ ಸಹ ಮತೀಯವಾದಿಗಳು, ಹಲ್ಲೆ, ಅತ್ಯಾಚಾರ, ಕೊಲೆ ಇತ್ಯಾದಿಗಳನ್ನು ಮಾಡಿ, ಜನರಲ್ಲಿ ಭಯದ ವಾತಾವರಣವನ್ನು ಹುಟ್ಟಿಸುವ, ಆ ಮೂಲಕ ತಮ್ಮ ಮತಪ್ರಚಾರ, ಪ್ರಸಾರ, ವಿಸ್ತರಣೆಯನ್ನು ಮಾಡುವ ಉದ್ದೇಶವನ್ನು ಹೊಂದಿದ್ದಾರೆ. 1965 ರಿಂದ ಇಂದಿನವರೆಗೆ ಸುಮಾರು 280 ಕ್ಕೂ ಅಧಿಕ ಸಂಘದ ಕಾರ್ಯಕರ್ತರು, ಕಮ್ಯುನಿಸ್ಟ್ ಮತ್ತು ಇಸ್ಲಾಮಿಕ್ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ಕೇರಳದ ಮುಖ್ಯಮಂತ್ರಿಗಳ ಊರಾದ ಕಣ್ಣೂರು ಒಂದರಲ್ಲೇ ನೂರಕ್ಕೂ ಅಧಿಕ ಕಾರ್ಯಕರ್ತರು ಜೀವಕಳೆದುಕೊಂಡಿದ್ದಾರೆ.
ರಾಷ್ಟ್ರೀಯವಾದಿ ವಿಚಾರಗಳನ್ನು ಸಹಿಸದ ದೇಶದ್ರೋಹಿಗಳು ಎಷ್ಟೇ ಶೋಷಣೆಯನ್ನು ಮಾಡಿದರೂ, ಕ್ರೌರ್ಯವನ್ನು ಮೆರೆದರೂ, ಅವನ್ನೆಲ್ಲ ಮೆಟ್ಟಿ ನಿಂತು, ಬಲಿದಾನಗೈದವರ ಜೀವನ ಸಂದೇಶದೊಂದಿಗೆ, ಸಂಘದ ಕಾರ್ಯಚಟುವಟಿಕೆಗೆ ವೇಗವನ್ನು ನೀಡಲು ಸಹಸ್ರಾರು ಕಾರ್ಯಕರ್ತರು ಹುಟ್ಟಿ ಬರುತ್ತಿದ್ದಾರೆ. ಒಬ್ಬ ವಿಶಾಲ್ ನನ್ನು ಕೊಂದರೂ, ಆತನ ವಿಚಾರವನ್ನು ಎತ್ತಿಹಿಡಿಯುವ 100 ಜನ ವಿಶಾಲರು ವಿಶಾಲ ಕೇರಳದಲ್ಲಿ, ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲದೆ ಇಡೀ ಭಾರತದಲ್ಲಿ ಮತ್ತು ಇಡೀ ವಿಶ್ವದಲ್ಲಿ ಹುಟ್ಟುತ್ತಿದ್ದಾರೆ. ವ್ಯಕ್ತಿಯನ್ನು ಕೊಂದರೂ, ಆತನ ವಿಚಾರಗಳನ್ನು ಕೊಲ್ಲಲಾಗದು ಎಂಬಂತೆ, ಇಂದಿಗೂ ಭದ್ರವಾಗಿ, ಸಜೀವವಾಗಿ ನಿಂತಿವೆ ನಮ್ಮ ವಿಚಾರಗಳು…. ಭಾರತವನ್ನು ವಿಶ್ವಗುರುವಾಗಿಸುವಲ್ಲಿ ಶ್ರಮವಹಿಸುತ್ತಿರುವ, ಭಾರತಾಂಬೆಯ ಸೇವೆಯನ್ನು ಮಾಡುತ್ತಿರುವ ಕೋಟಿ ಕೋಟಿ ಕಾರ್ಯಕರ್ತ ಬಂಧುಗಳಿಗೆ ಶಿರಬಾಗಿ ವಂದಿಸಿ, 19ರ ಚಿರ ತರುಣ ವಿಶಾಲರಿಗೆ ಈ ಬರಹದ ಮೂಲಕ ಭಾಷ್ಪಾಂಜಲಿ.
ಶ್ರೀಲಕ್ಷ್ಮೀ ಮಠದಮೂಲೆ
ಮಂಗಳೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.