ಭಾರತೀಯ ವೀರ ಯೋಧರ ಸಾಹಸದ ಕಥೆಗಳನ್ನು ಹೇಳ ಹೊರಡುವುದೆಂದರೆ ಆಗಸದಲ್ಲಿನ ನಕ್ಷತ್ರಗಳನ್ನು ಎಣಿಸಿದಂತೆ. ಹಲವಾರು ಕಥೆಗಳು ಊಹಿಸಲೂ ಸಾಧ್ಯವಿಲ್ಲದ ಸಾಹಸಗಳನ್ನೂ, ತ್ಯಾಗಗಳನ್ನೂ ಸಾರಿ ಸಾರಿ ಹೇಳುತ್ತವೆ. ಅದೆಷ್ಟೇ ಕಷ್ಟಗಳು ಬಂದರೂ ಎದುರಿಸುವ ಛಲವುಳ್ಳ ಯೋಧರ ಕುರಿತು ಮಾತ್ರವಲ್ಲದೆ, ನಾವು ಅವರ ಕುಟುಂಬದ ಆತ್ಮ ಸ್ಥೈರ್ಯವನ್ನೂ ಮೆಚ್ಚಬೇಕಾದ ವಿಷಯವೇ ಹೌದು. ನಮ್ಮಲ್ಲಿ ಬಹುತೇಕರು ಅರಿಯದ ವಿಚಾರವೆಂದರೆ ಹೇಗೆ ವೈದ್ಯರ ಮಕ್ಕಳು ವೈದ್ಯರು, ರಾಜಕೀಯದವರ ಮಕ್ಕಳು ರಾಜಕಾರಣಿಗಳಾಗುತ್ತಾರೋ, ಹಾಗೆಯೇ ಯೋಧರ ಮಕ್ಕಳು ಯೋಧರೂ ಆಗುತ್ತಾರೆ. ತಲೆತಲಾಂತರಗಳಿಂದ ಸೈನ್ಯದಲ್ಲಿ ಸೇವೆ ಸಲ್ಲಿಸುವ ಹಲವಾರು ಕುಟುಂಬಗಳು ನಮ್ಮಲ್ಲಿವೆ. ಹೀಗೆಯೇ ತಂದೆಯ ಹಾದಿಯಲ್ಲಿ ನಡೆದು ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿ ಮರಣೋತ್ತರ ಪರಮವೀರಚಕ್ರ ಪಡೆದ ಪ್ರಪ್ರಥಮ ಭಾರತೀಯ ವಾಯುಸೇನೆಯ ಸದಸ್ಯ ಎಂಬ ಇತಿಹಾಸವನ್ನು ನಿರ್ಮಿಸಿದ ಫ್ಲೈಂಗ್ ಆಫೀಸರ್ ನಿರ್ಮಲ್ ಜೀತ್ ಸಿಂಗ್ ಶೇಖತ್ ಪ್ರಮುಖರು.
೧೯೪೩ ಜುಲೈ ೧೭ ರಂದು ಪಂಜಾಬ್ ನ ಲುಧಿಯಾನದ ಇಸೇವಾಲ್ ಗ್ರಾಮದಲ್ಲಿ ನಿರ್ಮಲ್ ಜೀತ್ ಸಿಂಗ್ ಸೇಖಾನ್ ಅವರ ಜನನವಾಯಿತು. ಪ್ಲಾಯ್ಟ್ ಲೆಫ್ಟಿನೆಂಟ್ ತರ್ಲೊಕ್ ಸಿಂಗ್ ಸೇಖಾನ್ ಅವರು ನಿರ್ಮಲ್ ಜೀತ್ ಅವರ ತಂದೆ. ನಿರ್ಮಲ್ ಜೀತ್ ಜೂನ್ 4 ೧೯೬೭ ರಂದು ಪೈಲೆಟ್ ಅಧಿಕಾರಿಯಾಗಿ ಭಾರತೀಯ ವಾಯುಸೇನೆಯಲ್ಲಿ ನಿಯೋಜಿತರಾದರು. ೧೯೭೧ ರ ಬಾಂಗ್ಲಾ ವಿಮೋಚನೆಯ ಭಾರತ ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ನಿರ್ಮಲ್ ಜೀತ್ ಅವರು ಐಏಎಫ್ ನ “ದಿ ಪ್ಲಾಯಿಂಗ್ ಬುಲೆಟ್ಸ್” ನಂ. ೧೮ ಸ್ಕ್ವಾಡ್ರನ್ ನೊಂದಿಗೆ ಸೇವೆಯನ್ನು ಸಲ್ಲಿಸುತ್ತಿದ್ದರು. ಶ್ರೀನಗರದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ನಿರ್ಮಲ್ ಜೀತ್ ಫಾಲ್ಯಾಂಡ್ Gnat ಯುದ್ಧ ವಿಮಾನವನ್ನು ಹರಿಸುವುದರಲ್ಲಿ ನಿಪುಣರಾಗಿದ್ದರು. ೧೯೭೧ ರ ಡಿಸೆಂಬರ್ ೧೪ ರಂದು೬ ಪೇಶಾವರ ವಾಯುನೆಲೆಯ ಪಾಕಿಸ್ತಾನೀ ವಾಯುಪಡೆಯ ೬ ಫ್ ೮೬ ಜೆಟ್ ಗಳು ಶ್ರೀನಗರದ ಮೇಲೆ ದಾಳಿಯನ್ನು ಪ್ರಾರಂಭಿಸಿದವು. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಪ್ಲಾಯಿಂಗ್ ಆಫೀಸರ್ ಸೇಖಾನ್ ತಕ್ಷಣವೇ ಕಾರ್ಯೋನ್ಮುಖರಾದರು. ಮೊದಲನೇ ದಾಳಿಯು ಸಂಭವಿಸಿದ ತಕ್ಷಣ ಅವರು ವಿಮಾನವನ್ನು ಹಾರಿಸಲು ಸಿದ್ದರಾದರು. ವಿಮಾನವನ್ನು ಹಾರಿಸುತ್ತಿದ್ದ ಫ್ಲೈಟ್ ಲೆಫ್ಟಿನಂಟ್ ಗುಮ್ನಾಮ್ ಅವರು ಯಶಸ್ವಿಯಾಗಿ ವಿಮಾನವನ್ನು ಹರಿಸುತ್ತಿದ್ದಂತೆಯೇ ರನ್ವೇಯ ಮೇಲೆ ಶತ್ರುಗಳು ಬಾಂಬುಗಳನ್ನೆಸದರು. ಮೊದಲ ಬಾರಿ ಬಾಂಬುಗಳ ಸುರಿಮಳೆಗೈದ ಬಳಿಕ ಪುನರ್ ರಚನೆಯಲ್ಲಿ ತೊಡಗಿದ್ದ ಶತ್ರುಗನ್ನು ಹಿಂಬಾಲಿಸಲು, ಬಾಂಬ್ ದಾಳಿಯಿಂದೆದ್ದ ಧೂಳು ನಿರ್ಮಲ್ ಜೀತ್ ರಿಗೆ ಸಣ್ಣಅಡ್ಡಿಯನ್ನುಂಟು ಮಾಡಿತು. ಆದರೆ ದಾಳಿಯ ಪರಿಣಾಮವಾಗಿ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡ ಗುಮ್ನಾಮ್ ಅವರು ಹೋರಾಟದಿಂದ ಹೊರಗುಳಿದರು. ನಂತರ ನಡೆದ ಯುದ್ಧದಲ್ಲಿ ಸೇಖಾನ್ ಅವರೇ ಯುದ್ಧದ ಕಾರ್ಯತಂತ್ರಗಳನ್ನು ಚಿಂತಿಸಿ ಯುದ್ಧವನ್ನು ಮುನ್ನಡೆಸಿದರು. ಈ ಸಮಯದಲ್ಲಿ ಅವರು ನೇರಾ ನೇರ ಯುದ್ಧವನ್ನು ನಡೆಸಿ ಶತ್ರುಸೇನೆಯ ಒಂದು ಯುದ್ಧವಿಮಾನವನ್ನು ಹೊಡೆದುರುಳಿಸಿದರು ಮತ್ತು ಇನ್ನೊಂದು ವಿಮಾನದತ್ತವೂ ದಾಳಿಯನ್ನು ನಡೆಸಿದರು.
ಇತ್ತ ನಿರ್ಮಲ್ ಜೀತ್ ರ ಯುದ್ಧ ವಿಮಾನವೂ ಕೂಡ ದಾಳಿಗೊಳಗಾಗಿ ವಿಮಾನದ ರೆಕ್ಕೆಗಳಿಂದ ಹೊಗೆ ಹೊರಬರಲು ಪ್ರಾರಂಭವಾಯಿತು. ಈ ಕಾರಣಕ್ಕಾಗಿ ಅವರಿಗೆ ಹಿಂತುರುಗಿ ಸೇನಾ ನೆಲೆಗೆ ಬರುವಂತೆ ಆದೇಶ ದೊರಕಿತು. ಆದರೆ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ವೈಫಲ್ಯದ ಕಾರಣದಿಂದ ಕೆಲಹೊತ್ತು ನೇರವಾಗಿ ಹಾರಾಡುತ್ತಿದ್ದ ವಿಮಾನವು, ನಿಧಾನವಾಗಿ ತಲೆಕೆಳಗಾಗಿ ಹರಳು ಪ್ರಾರಂಭಿಸಿತು. ಕೊನೆಯ ನಿಮಿಷಗಳಲ್ಲಿ ನಿರ್ಮಲ್ ಜೀತ್, ವಿಮಾನವನ್ನು ತೊರೆದು ಹೊರಬರಲು ಪ್ರಯತ್ನಿಸಿದರೂ ವಿಮಾನದ ಮೇಲ್ಚಾವಣಿಯು ಹಾರಿಹೋಗಿ ಇವರ ಪ್ರಯತ್ನವು ಫಲಪ್ರದವಾಗಲಿಲ್ಲ. ಬಳಿಕ ಶ್ರೀನಗರದಿಂದ ವಾಯುಸೇನಾನೆಲೆಗೆ ಬರುವ ರಸ್ತೆಯ ಬಳಿಯ ಕಣಿವೆಯಲ್ಲಿ ಅವರ ಯುದ್ಧವಿಮಾನದ ಭಗ್ನಾವಶೇಷಗಳು ಪತ್ತೆಯಾದವು. ವಿಮಾನವು ದಾಳಿಯಲ್ಲಿ ಹಾನಿಗೀಡಾದ ಸ್ಥಳವು ಪರ್ವತ ಪ್ರದೇಶವಾದ್ದರಿಂದ, ಸೇನೆ ಮತ್ತು ವಾಯುಸೇನೆಗಳೆರಡೂ ಸೇರಿ ಹಲವು ಬಾರಿ ಹುಡುಕಿದರೂ ನಿರ್ಮಲ್ ಜೀತ್ ರ ದೇಹವಾಗಲೀ ಅವಶೇಷಗಳಾಗಲೀ ಲಭ್ಯವಾಗಲಿಲ್ಲ. ಅವರ ಮರಣದ ಬಳಿಕ ಪಾಕಿಸ್ತಾನದ ಯುದ್ಧ ವಿಮಾನ ಚಾಲಕರಾದ ಪೈಲಟ್ ಸಲೀಂ ಬೇಗ್ ಮಿರ್ಜಾ ಅವರು ತಮ್ಮ ಹಲವಾರು ಲೇಖನಗಳಲ್ಲಿ ನಿರ್ಮಲ್ ಜೀತ್ ಅವರ ಕುರಿತಾಗಿ ಪ್ರಶಂಸೆಯನ್ನು ಮಾಡಿದ್ದಾರೆ.
ನಿರ್ಮಲ್ ಜೀತ್ ರ ಅಪ್ರತಿಮ ಸಾಹಸವನ್ನು ನೆನಪಿನಲ್ಲಿರಿಸಲು ಪಂಜಾಬ್ ನ ಅನೇಕ ನಗರಗಳಲ್ಲಿ ಅವರ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ೧೯೮೫ ರಲ್ಲಿ ನಿರ್ಮಿಸಲಾದ ಸಾಗರ ಟ್ಯಾಂಕರ್ ಗೆ ‘ಪ್ಲಾಯಿಂಗ್ ಆಫೀಸರ್ ನಿರ್ಮಲ್ ಜೀತ್ ಸಿಂಗ್ ಸೇಖಾನ್’ ಎಂದು ಹೆಸರಿರಿಸಲಾಯಿತು. ನಿರ್ಮಲ್ ಜೀತರ ಪ್ರತಿಮೆ ಹಾಗು ಅವರು ಚಲಾಯಿಸುತ್ತಿದ್ದ ಯುದ್ಧ ವಿಮಾನದ ಅವಶೇಷವನ್ನು ಪಾಲಂನ ಭಾರತೀಯ ವಾಯುಪಡೆಯ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಲುಧಿಯಾನದ ಜಿಲ್ಲಾ ನ್ಯಾಯಾಲಯದಲ್ಲಿ ಧ್ವಜ ಚೌಕದ ಪಕಿಯಾದಲ್ಲಿ ನಿರ್ಮಲ್ ಜೀತ್ ರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಭಾರತೀಯ ವಾಯುಸೇನಿಯಲ್ಲಿ ೪ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ಹುತಾತ್ಮರಾದಾಗ ನಿರ್ಮಲ್ ಜೀತ್ ರ ವಯಸ್ಸು ಕೇವಲ ೨೮ ವರ್ಷಗಳು. ದೇಶಕ್ಕಾಗಿ ಪ್ರಾಣತ್ಯಾಗ ಮಡಿದ ನಿರ್ಮಲ್ ಜೀತ್ ರಿಗೆ ಮರಣೋತ್ತರವಾಗಿ “ ಪರಮವೀರ ಚಕ್ರ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ದೇಶದೆಡೆಗಿನ ಬದ್ಧತೆ,ಪ್ರೀತಿಯನ್ನು ತನ್ನ ಕೊನೆಯ ಉಸಿರಿನ ವರೆಗೂ ಕಾಪಾಡಿ ,ದೇಶದ ಸಾರ್ವಭೌಮತೆಯ ರಕ್ಷಣೆಗಾಗಿ ತನ್ನ ಸರ್ವಸ್ವವನ್ನೂ ನೀಡಿ ಹುತಾತ್ಮರಾದ ವೀರ ಪರಮ ವೀರ ಚಕ್ರ ಪುರಸ್ಕೃತ ನಿರ್ಮಲ್ ಜೀತ್ ಸಿಂಗ್ ಶೇಖೋನ್ ಅವರ ಜನ್ಮ ದಿನದಂದು ಗೌರವ ಪೂರ್ವಕವಾಗಿ ಸ್ಮರಿಸೋಣ.
ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.