ಕಾಸರಗೋಡು: ಮನುಷ್ಯನ ಜೀವನಕ್ಕೆ ಸಂಸ್ಕಾರ ಬೇಕು. ನಮಸ್ಕಾರದಿಂದ ಸಂಸ್ಕಾರ ಆರಂಭ ಎಂದು ಮುಳ್ಳೇರಿಯ ಹವ್ಯಕ ಮಂಡಲಾಧ್ಯಕ್ಷ ಬಿ.ಜಿ. ರಾಮ ಭಟ್ ನುಡಿದರು.
ಅವರು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮುಳ್ಳೇರಿಯ ಮಂಡಲದ ವತಿಯಿಂದ ನಡೆಯುತ್ತಿರುವ ‘ಸಂಸ್ಕಾರೋದಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜಡೆಯ ನೇಯ್ಗೆಯಲ್ಲಿರುವ ಮೂರು ವಿಭಾಗಗಳು ಗಂಗಾ ಯಮುನಾ ಸರಸ್ವತಿ ನದಿಗಳ ಕಲ್ಪನೆ. ಅದರಲ್ಲಿ ಸರಸ್ವತಿಯು ಅಗೋಚರ, ಹಾಗಾಗಿ ಎರಡು ನೇಯ್ಗೆಗಳೇ ಕಾಣಸಿಗುತ್ತವೆ. ಹೂ ಮುಡಿಯುವುದು ಜಡೆಯ ಬುಡಕ್ಕೆ ಅದು ದೇವರಿಗೆ ಪುಷ್ಪಾರ್ಚನೆ ಮಾಡಿದ ಫಲ ಎಂದು ಹೇಳಿದರು.
ಬೇಸಿಗೆ ರಜೆಯಲ್ಲಿ ಸಂಸ್ಕಾರೋದಯ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 3 ದಿನಗಳ ಕಾಲ ನಡೆಯುವ ಶಿಬಿರದಲ್ಲಿ 200ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಶ್ಲೋಕ ಪಠನ, ಸಂಸ್ಕಾರ, ಹೊರಾಂಗಣ ಆಟಗಳು, ವ್ಯಕ್ತಿತ್ವ ವಿಕಸನ ಎಂಬ ವಿಷಯಗಳನ್ನೊಳಗೊಂಡ ಕಾರ್ಯಕ್ರಮವಾಗಿತ್ತು. ಕರಕುಶಲ, ಜಾದೂಮೂಲಕ ಕಲಿಕೆ, ಆರೋಗ್ಯ ಆಹಾರ, ಸುಂದರ ಬದುಕಿಗೆ ಸೋಪಾನ ಮುಂತಾದ ವಿಷಯಗಳನ್ನು ಮಕ್ಕಳಿಗೆ ಕಲಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ವೇದಮೂರ್ತಿ ಕೂಟೇಲು ಕೇಶವ ಪ್ರಸಾದ ಭಟ್ ಅವರು ಸರಿಯಾದ ಸಂಸ್ಕಾರವನ್ನು ರೂಢಿಸಿಕೊಂಡ ವ್ಯಕ್ತಿ ತನ್ನ ಜೀವನವನ್ನು ತಾನೇ ಕಂಡುಕೊಳ್ಳಲು ಸಮರ್ಥನಾಗುತ್ತಾನೆ. ತಂದೆ ತಾಯಿ ತಮ್ಮ ಮಕ್ಕಳಿಗೆ ಮನೆಯಲ್ಲಿಯೇ ಸಂಸ್ಕಾರವನ್ನು ಕಲಿಸಬೇಕು. ಮಗುವಾಗಿರುವಾಗಲೇ ಮನೆಯಲ್ಲಿ ಸಂಸ್ಕಾರಯುತ ಜೀವನಕ್ಕೆ ಮಗು ಹೊಂದಿಕೊಳ್ಳುವಂತೆ ಮಾತಾಪಿತೃಗಳು ಜಾಗ್ರತೆವಹಿಸಿಕೊಳ್ಳಬೇಕು ಎಂದರು.
ನಿವೃತ್ತ ಅಧ್ಯಾಪಕ ಪ್ರಸಾರ ವಿಭಾಗದ ಗೋವಿಂದ ಬಳ್ಳಮೂಲೆ ಅವರು ತಮ್ಮ ಮಾತಿನ ಕೌಶಲ್ಯದ ಮೂಲಕ ಮಕ್ಕಳನ್ನು ನಕ್ಕು ನಗಿಸಿದರು. ನಗುವುದು ಆರೋಗ್ಯಕ್ಕೆ ಉತ್ತಮ, ಸದಾ ನಗುನಗುತ್ತಾ ಇರಿ ಎಂದು ಮಕ್ಕಳಿಗೆ ತಿಳಿಹೇಳಿದರು.
ಗೋಕರ್ಣಮಂಡಲ ಮಹಿಳಾ ಅಧ್ಯಕ್ಷೆ ಈಶ್ವರಿ ಬೇರ್ಕಡವು ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ಯಾವಿಭಾಗದ ಬಾಲಕೃಷ್ಣ ಶರ್ಮ, ಮುಳ್ಳೇರಿಯ ಮಂಡಲದ ಮಹಿಳಾ ಅಧ್ಯಕ್ಷೆ ದೇವಕಿ ಪನ್ನೆ, ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಮುಂತಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.