ನವದೆಹಲಿ: ಕೊರೋನಾ ವೈರಸ್ ಎಂಬ ಮಾರಕ ರೋಗ ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು, ಒಗ್ಗಟ್ಟಿನಿಂದ ಮುಂದುವರೆಯುವುದನ್ನು, ಮಾನವೀಯತೆಯ ಸಂದೇಶವನ್ನು ತಿಳಿಸಿ ಕೊಟ್ಟಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೋವಿನ್ ಜಾಗತಿಕ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಒಬ್ಬರಿಂದೊಬ್ಬರು ಉತ್ತಮ ವಿಚಾರಗಳನ್ನು ಕಲಿಯಬೇಕು. ಒಬ್ಬರಿಗೊಬ್ಬರು ಮಾರ್ಗದರ್ಶನ ನೀಡಬೇಕು ಎಂದು ಹೇಳಿರುವ ಅವರು, ಭಾರತ ಈ ಕೊರೋನಾ ಸಂಕಷ್ಟದಲ್ಲಿ ತನ್ನ ಪರಿಣಿತಿ, ಸಂಪನ್ಮೂಲಗಳನ್ನು ಜಾಗತಿಕ ಸಮುದಾಯಗಳ ಜೊತೆಗೆ ಹಂಚಿಕೊಳ್ಳಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ಇಂತಹ ಸೋಂಕು ಕಳೆದ 100 ವರ್ಷಗಳಿಂದ ಕಂಡಿರಲಿಲ್ಲ. ಇದರಿಂದಾಗಿ ಹಲವರು ಪ್ರಾಣ ಕಳೆದುಕೊಂಡಿರುವುದಾಗಿ ಅವರು ಹೇಳಿದ್ದು, ಇಂತಹ ಸವಾಲನ್ನು ಯಾವುದೇ ಪ್ರಬಲ ರಾಷ್ಟ್ರವೂ ಏಕಾಂಗಿಯಾಗಿ ನಿಭಾಯಿಸಲು ಅಸಾಧ್ಯ ಎಂಬುದನ್ನು ಅನುಭವದ ಮೂಲಕವೇ ಈ ಸಂಕಷ್ಟದ ಸಂದರ್ಭದಲ್ಲಿ ಅರಿವಾಗಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊರೋನಾ ಸೋಂಕಿನಿಂದ ಯಶಸ್ವಿಯಾಗಿ ಮುಕ್ತವಾಗಲು ಲಸಿಕೆಯೇ ಪೂರಕ ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಹಾಗೆಯೇ ಈ ಕೊರೋನಾ ಸಂದರ್ಭದಲ್ಲಿ ತಂತ್ರಜ್ಞಾನ ಸಹ ನಮ್ಮ ಕರ್ತವ್ಯದ ಅವಿಭಾಜ್ಯ ಅಂಗವಾಗಿ ಪರಿಗಣಿತವಾಗಿದೆ. ಇದರಿಂದ ತಾಂತ್ರಿಕವಾಗಿ ಕೊರೋನಾ ಪತ್ತೆಹಚ್ಚುವಿಕೆ, ಟ್ರ್ಯಾಕಿಂಗ್ ಮೊದಲಾದವುಗಳ ಮೇಲೆ ನಿಗಾ ವಹಿಸುವುದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಹಾಗೆಯೇ ದೇಶದ ಜನರಿಗೆ ಲಸಿಕೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೋವಿನ್ ಎಂಬ ಲಸಿಕಾ ನೋಂದಣಿಯ ಡಿಜಿಟಲ್ ಸೌಲಭ್ಯವನ್ನು ಕಲ್ಪಿಸಿತು. ಇದರಲ್ಲಿ ಸಾರ್ವಜನಿಕರಿಗೆ ಡಿಜಿಟಲ್ ರೂಪದಲ್ಲೇ ಎಲ್ಲಾ ವಿವರಗಳು ಲಭ್ಯವಿರುವುದರಿಂದ ವ್ಯಾಕ್ಸಿನ್ ಹಾಕಿಸಿಕೊಳ್ಳುವುದು ಹೆಚ್ಚು ಸರಳ ಮತ್ತು ಅನುಕೂಲಕರವಾಯಿತು. ಈ ಅಪ್ಲಿಕೇಶನ್ ಮುಖೇನ ದೇಶಕ್ಕೆ, ಅದರ ಸ್ಥಳೀಯ ಅಗತ್ಯತಗೆ ಅನುಸಾರವಾಗಿ ಕಸ್ಟಮೈಸ್ಡ್ ಮಾಡಿಕೊಳ್ಳುವುದು ಸಾಧ್ಯವಾಯಿತು. ಈ ಸಾರ್ವತ್ರಿಕ ಲಸಿಕೀಕರಣದ ಬಗೆಗಿನ ಭಾರತದ ಅನುಭವವನ್ನು ತಿಳಿಸಲು ಈ ಸಮಾವೇಶ ವೇದಿಕೆಯಾಗಿದೆ. ವಿಶ್ವದ ಇತರ ರಾಷ್ಟ್ರಗಳ ಜೊತೆಗೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಲು ಭಾರತ ಸದಾ ಸಿದ್ಧವಾಗಿದೆ ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.