ಬದಲಾದ ಜೀವನ ಶೈಲಿಯಲ್ಲಿ ನಿದ್ದೆಯೂ ಅತ್ಯಮೂಲ್ಯ. ಸಾಮಾನ್ಯವಾಗಿ ಹಿಂದೆ ಎಂಟು ಗಂಟೆ ನಿದ್ದೆ, ಹದಿನಾರು ಗಂಟೆ ಕೆಲಸ ಎಂಬಂತೆ ದಿನವನ್ನು ವಿಭಜಿಸಿದ್ದರು. ಆದರೆ ಈಗ ಪಾಳಿಯಲ್ಲಿ ಕೆಲಸ ಮಾಡಬೇಕಾದ ಸಂದರ್ಭ ಬಂದಿರುವುದರಿಂದ ಸೂಕ್ತ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಪ್ರತಿಯೊಂದು ದಿನದ ನಮ್ಮ ಸಕಾರಾತ್ಮಕ ಮನಸ್ಥಿತಿಗೆ ಸರಿಯಾದ ನಿದ್ದೆಯೂ ಅತಿಮುಖ್ಯವಾಗಿದೆ.
ಜಗತ್ತಿನಲ್ಲಿ ಹೆಚ್ಚಿನವರಿಗೆ ಮಲಗಿದ ತಕ್ಷಣ ನಿದ್ದೆ ಬರುವುದಾದರೂ, ಪ್ರಪಂಚದಾದ್ಯಂತ ಇರುವ ಜನಸಂಖ್ಯೆಯಲ್ಲಿ 20%ರಷ್ಟು ಜನರು ಸರಿಯಾದ ನಿದ್ದೆಗಾಗಿ ನಿದ್ದೆಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ.
ವೈದ್ಯಕೀಯ ಭಾಷೆಯಲ್ಲಿ ಅತೀ ಕಡಿಮೆ ನಿದ್ದೆ ಮಾಡುವ ಸ್ಥಿತಿಯನ್ನು ಇನ್ಸೋಮ್ನಿಯಾ(insomnia)ಎಂದೂ ಮತ್ತು ಅತೀ ಹೆಚ್ಚು ನಿದ್ದೆಮಾಡುವ ರೋಗವನ್ನು ನಾರ್ಕೊಲೆಪ್ಸಿ(Narcolepsy)ಎಂದು ಕರೆಯುತ್ತಾರೆ.
ಸಾಮಾನ್ಯವಾಗಿ ಶಿಶುಗಳು ಹದಿನಾಲ್ಕರಿಂದ ಹದಿನೈದು ಗಂಟೆ ನಿದ್ದೆ ಮಾಡಬೇಕು, ಹತ್ತು ವರುಷದ ಒಳಗಿನ ಮಕ್ಕಳು ಹತ್ತು ಗಂಟೆ ನಿದ್ದೆ ಮಾಡಬೇಕು. ಹಾಗೆಯೇ ಹದಿಹರೆಯದ ಮಕ್ಕಳು ಕನಿಷ್ಠ ಎಂಟು ಗಂಟೆ ನಿದ್ದೆ ಮಾಡಬೇಕು. ಇನ್ನೂ ವಯಸ್ಕರು ಕನಿಷ್ಠ ಎಂದರು ಏಳರಿಂದ ಎಂಟು ಗಂಟೆ ನಿದ್ದೆ ಮಾಡಬೇಕು. ವಯಸ್ಸಾದಂತೆ ನಿದ್ದೆಮಾಡುವ ಸಮಯ ಕಡಿಮೆಯಾಗುವುದು ಗಮನಿಸಬಹುದು.
ನಿದ್ದೆ ಬರುವುದಕ್ಕೆ ನಿದ್ದೆ ಬಂದಾಗ ನಮ್ಮ ದೇಹದಲ್ಲಿರುವ ಪೀನಿಯಲ್(penial)ಎಂಬ ಗ್ರಂಥಿ ಮೆಲಟೊನಿನ್(melatonin)ಎಂಬ ಹಾರ್ಮೋನನ್ನು ಉತ್ಪಾದಿಸುತ್ತದೆ. ಅದು ನಮ್ಮ ಕಣ್ಣಿನ ಮೂಲಕ ಮೆದುಳಿಗೆ ಕತ್ತಲು ಬೆಳಕಿನ ಸಿಗ್ನಲ್ ಅನ್ನು ನೀಡುತ್ತದೆ. ಈ ಮೆಲಟೊನಿನ್(melatonin)ಕಡಿಮೆ ಬಂದಾಗ ನಾವು ಎಚ್ಚರದಲ್ಲಿದ್ದೇವೆ ಎಂದರ್ಥ. ಪ್ರಸ್ತುತ ನಮ್ಮ ಅತಿಯಾದ ಸ್ಕ್ರೀನ್ ವೀಕ್ಷಣೆ , ಕಣ್ಣು ಕುಕ್ಕುವ ಬೆಳಕಿನ ಕಿರಣಗಳು ಮತ್ತು ದೋಷ ಪೂರಿತ ಜೀವನಶೈಲಿ ಇವು ನಮ್ಮ ದೇಹದ ಸರ್ಕಾಡಿಯನ್ ರಿದಮ್(circadian rhythm)ನ್ನು ಅಲ್ಲೋಲಕಲ್ಲೋಲ ಮಾಡುತ್ತದೆ. ನಂತರ ನಮ್ಮ ದೇಹದಲ್ಲಿ ಒತ್ತಡ ಪ್ರತಿಕ್ರಿಯೆ ( stress response)ನ್ನು ಜಾರಿಗೊಳಿಸುತ್ತದೆ.ಇದು ಕಿಡ್ನಿಯ ಮೇಲ್ಬಾಗದಲ್ಲಿರುವ ಅಡ್ರಿನಲ್ ಗ್ರಂಥಿಯು ಅಡ್ರಿನಾಲಿನ್(adrenalin) ಎಂಬ ಹಾರ್ಮೋನನ್ನು ಉತ್ಪಾದಿಸುತ್ತದೆ.ಈ ಹಾರ್ಮೋನ್ ನಮ್ಮ ದೇಹವು ಯಾವುದೋ ಒತ್ತಡದಲ್ಲಿದ್ದಾಗ ನಿಭಾಯಿಸಬೇಕಾದ ಕಾರ್ಯವನ್ನು ನಿದ್ದೆಗೆಟ್ಟು ಎಚ್ಚರದಲ್ಲಿದ್ದಾಗಲೂ ಮಾಡುತ್ತದೆ. ಇದರ ಪರಿಣಾಮವಾಗಿ ಅನಿಯಂತ್ರಿತ ಹೃದಯಬಡಿತ(arrythamia),ತಲೆಸುತ್ತು, ಕಣ್ಣಿನ ನಿಶ್ಯಕ್ತಿ, ಹೊಟ್ಟೆ ತೊಳಸುವಿಕೆ, ಅಸಿಡಿಟಿ, ಸುಸ್ತು ಮತ್ತು ಇಡೀ ದಿನ ಮಂಕು ಕವಿದ ಮನಸ್ಥಿತಿಯನ್ನು ಉಂಟುಮಾಡುತ್ತದೆ.ನಮ್ಮ ಕಣ್ಣು ನಿದ್ದೆ ಮಾಡುವಂತಹ ಸಮಯದಲ್ಲಿ ಅಥವಾ ವಿಶ್ರಾಂತಿಯ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಕಣ್ಣೀರನ್ನು ಉತ್ಪತಿಗೊಳಿಸಿ ಕಣ್ಣಿನ ಹಸಿತನವನ್ನು ಕಾಯ್ದುಕೊಂಡಿರುತ್ತದೆ. ನಾವು ನಿದ್ರಾಹೀನರಾದಗ ಕಣ್ಣು ತನ್ನ ಹಸಿತನವನ್ನು ಕಳೆದುಕೊಳ್ಳುವ ಪರಿಸ್ಥಿತಿಯನ್ನು ತಂದೊಡ್ಡಬಹುದು.
ಇವುಗಳನ್ನು ತಡೆಯಲು ಪರಿಹಾರವೇನಂದರೆ ನಿದ್ದೆ ಮಾಡುವುದಕ್ಕಿಂತ ಎರಡು ಮೂರು ಗಂಟೆಗಳ ಮೊದಲೇ ಕಾಫಿ, ಟೀ, ನೀರು, ಅಹಾರ ಸೇವಿಸುವುದನ್ನು ನಿಲ್ಲಿಸಬೇಕು. ಯಾಕೆ ಅಂದರೆ ನಾವು ನಿದ್ದೆ ಮಾಡುವುದರ ಮುಖ್ಯ ಉದ್ದೇಶ ದಿನಪೂರ್ತಿ ದನಿದ ದೇಹಕ್ಕೆ ಉತ್ತಮ ವಿಶ್ರಾಂತಿ ಸಿಗಲಿ ಎಂದು. ಇದರ ಅರ್ಥ ದೇಹದ ಹೃದಯ ಮತ್ತು ಶ್ವಾಸ ಕೋಶ ಎಂಬ ಎರಡು ಅಂಗಗಳು ಹೊರತು ಪಡಿಸಿ ಉಳಿದ ಎಲ್ಲಾ ಅಂಗಾಂಗಳು ವಿಶ್ರಾಂತಿ ಪಡೆಯಬೇಕು. ಆದರೆ ಮಲಗುವ ಸ್ವಲ್ಪ ಮೊದಲು ನಾವು ಆಹಾರ, ನೀರು ಸೇವಿಸಿದರೆ ದೇಹದ ಜಠರ ಮತ್ತು ಕಿಡ್ನಿ ಕಾರ್ಯನಿರ್ವಹಿಸಬೇಕಾಗುತ್ತದೆ ಇದರಿಂದ ಇವೆರಡು ಅಂಗಾಂಗಗಳು ವಿಶ್ರಾಂತಿ ಪಡೆಯುವ ಅವಕಾಶವನ್ನು ಕಳೆದುಕೊಳ್ಳುತ್ತದೆ.ಇದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆಯೂ ಹೆಚ್ಚು.
ಹಾಗೆಯೇ ಒಳ್ಳೆಯ ನಿದ್ದೆಗಾಗಿ ದುಶ್ಚಟಗಳಿಂದ ದೂರವಿರಬೇಕು. ಪ್ರತಿದಿನದ ವ್ಯಾಯಾಮ, ಪ್ರಾಣಯಾಮ,ಯೋಗ, ಶಾಂತಚಿತ್ತತೆ, ನಿದ್ದೆ ಮಾಡುವ ಸ್ಥಳದಲ್ಲಿ ಶಾಂತ ವಾತಾವರಣ,ಮಲಗುವ ಕೊಠಡಿಯಲ್ಲಿ ಗಡಿಯಾರ ಬಳಸದಿರುವುದು ಯಾಕಂದರೆ ಸಮಯ ಓಡುವುದನ್ನು ನೋಡಿಯೆ ನಮ್ಮ ನಿದ್ದೆಯೂ ಓಡುವ ಸಾಧ್ಯತೆ ಇರುತ್ತದೆ.ಇವೆಲ್ಲವೂ ನಮಗೆ ಸರಿಯಾದ ನಿದ್ದೆ ಬರುವಂತೆ ಮಾಡುತ್ತದೆ.
ಇದಲ್ಲದೆ ನಿದ್ದೆಗೆ ಜಾರುವ ಮೊದಲು ಕನಿಷ್ಠ ಅರ್ಧ ಅಥವಾ ಕಾಲು ಗಂಟೆ ಮೊದಲು ನಾವು ಮೊಬೈಲ್, ಟೀವಿ,ಲ್ಯಾಪ್ಟಾಪ್ ಅಥವಾ ಇತರ ಯಾವುದೇ ಸ್ಕ್ರೀನ್ಗಳನ್ನು ಬಳಸುವುದು ನಿಲ್ಲಿಸಬೇಕು. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಸ್ಕ್ರೀನ್ ಲೆಸ್ ಡೇ, ಡಿಜಿಟಲ್ ಡಯೆಟೆಂಗ್ ಎಂಬ ಟ್ರೆಂಡ್ ಆರಂಭವಾಗಿದೆ.ಡಿಜಿಟಲ್ ಡಯೆಟೆಂಗ್ ಅಂದರೆ ತಾನು ಅತಿಯಾಗಿ ಬಳಸುವ ಡಿಜಿಟಲ್ ಉಪಕರಣಗಳು ಉದಾಹರಣೆಗೆ ಮೊಬೈಲ್ ಲ್ಯಾಪ್ಟಾಪ್ ಇವುಗಳನ್ನು ಸಾಮಾನ್ಯವಾಗಿ ದಿನಕ್ಕೆ ಎಂಟರಿಂದ ಹತ್ತು ಗಂಟೆ ಬಳಸಿದರೆ ಒಂದು ನಿರ್ದಿಷ್ಟ ದಿನ ಅಥವಾ ವಾರ, ದಿನಕ್ಕೆ ಒಂದು ಅಥವಾ ಎರಡು ಗಂಟೆಗಳ ಕಾಲ ಮಾತ್ರ ಬಳಸುವುದು. ಇನ್ನೂ ಸ್ಕ್ರೀನ್ ಲೆಸ್ ಡೇ ಎಂದರೆ ನಮ್ಮ ಮನಸ್ಸಿಗೆ ನಾವೇ ಇಡೀ ದಿನ ಮೊಬೈಲ್ ಅಥವಾ ಯಾವುದೇ ರೀತಿಯ ಸ್ಕ್ರೀನ್ಗಳನ್ನು ನೋಡದಂತೆ ನಿರ್ಬಂದಿಸಿಕೊಳ್ಳುವುದು. ಇವುಗಳು ಮುಂದೆ ಅಭ್ಯಾಸವಾದಂತೆ ನಿರ್ದಿಷ್ಟ ದಿನ, ವಾರವಾಗಿಯೂ, ತಿಂಗಳಾಗಿಯೂ ಬದಲಾಗಬಹುದು. ಇವು ಖಂಡಿತವಾಗಿಯೂ ನಮ್ಮ ದೇಹದ ಮೇಲೆ ಸಕಾರಾತ್ಮಕ ಪರಿಣಾಮಬೀರುತ್ತದೆ.
ಅಭಿವೃದ್ಧಿಯ ಹೆಸರಿನಲ್ಲಿ ಜಗತ್ತು ಡಿಜಿಟಲ್ ಆಗಿ ಬದಲಾಗುತ್ತಿದ್ದ.ಅಂಗೈಯಲ್ಲಿ ಪ್ರಪಂಚದ ಮೂಲೆಮೂಲೆಯ ಸಂಗತಿಗಳನ್ನು ಅರಿಯುವ, ಮನಸ್ಸನ್ನು ರಂಜಿಸುವ ಹಲವು ವಿಧದ ಉಪಕರಣಗಳು ನಮ್ಮ ಬಳಿ ಇವೆ. ಆದರೆ ಇವುಗಳು ಯಾವ ರೀತಿ ನಮ್ಮ ಅರೋಗ್ಯದ ಪರಿಣಾಮ ಬೀರುತ್ತಿದೆ ಎಂಬುದನ್ನು ಅರಿಯುವಲ್ಲಿ ನಾವು ಎಡವಿರುವುದು ದುರಂತ. ಜೀವನದಲ್ಲಿ ನೆಮ್ಮದಿಯಿರಬೇಕಾದರೆ ಸರಿಯಾದ ನಿದ್ದೆಯೂ ಅತ್ಯಗತ್ಯ. ಡಿಜಿಟಲ್ ಉಪಕರಣಗಳನ್ನು ಮಿತವಾದ ಬಳಸೋಣ. ಒಳ್ಳೆಯ ನಿದ್ದೆಯನ್ನು ಮಾಡುವುದರೊಂದಿಗೆ ಉತ್ತಮ ಜೀವನ ನಮ್ಮದಾಗಿಸೋಣ.
ಸಿದ್ದೀಕ್ ಬೇಂಗಿಲ
ದ್ವಿತೀಯ ಎಂ.ಸಿ.ಜೆ ಸ್ನಾತಕೋತ್ತರ ವಿಭಾಗ. ಎಸ್ ಡಿ ಎಂ ಕಾಲೇಜು ಉಜಿರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.