ಕರ್ನಾಟಕ ರಣಜಿ ಕ್ರಿಕೆಟ್ ತಂಡದಲ್ಲಿ 70 – 80 ರ ದಶಕದಲ್ಲಿ ಅತ್ಯುತ್ತಮ ಆಲ್ ರೌಂಡರ್ ಎನಿಸಿದ್ದ ಬಿ ವಿಜಯಕೃಷ್ಣ ಅವರು ತಮ್ಮ 71 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಿಜಯಕೃಷ್ಣ ಆ ದಿನಗಳಲ್ಲಿ ಚೈನಾಮನ್ ಸ್ಪಿನ್ನರಾಗಿ, ಮಧ್ಯಮ ಕ್ರಮಾಂಕದ ಬಿರುಸಿನ ಬ್ಯಾಟ್ಸ್ಮನ್ ಆಗಿ, ಶಾರ್ಟ್ ಫೈನ್ ಲೆಗ್ ನಲ್ಲಿ ಚುರುಕಿನ ಫೀಲ್ಡರ್ ಆಗಿ ಕ್ರಿಕೆಟ್ ಪ್ರಿಯರ ಮನಸಿನಲ್ಲಿ ಹಸಿರಾಗಿ ಉಳಿದವರು. ಅಂತರಾಷ್ಟ್ರೀಯ ಕ್ರಿಕೆಟ್ ರಂಗದಲ್ಲಿ ಆಗ ನಂಬರ್ ಒನ್ ಸ್ಥಾನದಲ್ಲಿದ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ರಣಜಿ ಟ್ರೋಫಿ ಚಾಂಪಿಯನ್ನರಾಗಿದ್ದ ಕರ್ನಾಟಕ ರಾಜ್ಯ ತಂಡ ಗೆದ್ದಿದ್ದು ಅದೊಂದು ಅವಿಸ್ಮರಣೀಯ ಘಟನೆ. ಆ ಪಂದ್ಯದಲ್ಲಿ 9 ವಿಕೆಟ್ ಉರುಳಿಸಿ ಐತಿಹಾಸಿಕ ಸಾಧನೆ ಮಾಡಿದವರು ವಿಜಯಕೃಷ್ಣ.
ವಿಜಯಕೃಷ್ಣ ಕರ್ನಾಟಕದ ದಲಿತ ಸಮುದಾಯದ ಮೊದಲ ಐ ಎ ಎಸ್ ಅಧಿಕಾರಿ ಆರ್ ಭರಣಯ್ಯನವರ ಮಗ. ಭರಣಯ್ಯ ಆನಂತರ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿಯೂ ನಿಸ್ಪೃಹರಾಗಿ ಕೆಲಸ ಮಾಡಿದವರು. ಸಂಪತಕುಮಾರ್, ಗುರುಪ್ರಸಾದ್, ವಿಜಯಕೃಷ್ಣ – ಭರಣಯ್ಯನವರ ಮೂವರು ಪುತ್ರರು . ಭರಣಯ್ಯನವರ ಏಳು ಪುತ್ರಿಯರಲ್ಲಿ ನಾಲ್ಕನೇಯವರು ನಿವೃತ್ತ ಐ ಎ ಎಸ್ ಅಧಿಕಾರಿ ಸಿದ್ಧಯ್ಯನವರ ಮಡದಿ. ಐ ಪಿ ಎಸ್ ಅಧಿಕಾರಿಯಾಗಿದ್ದ ಡಾ ಸುಭಾಷ್ ಭರಣಿ ಅವರಿಗೆ ಭರಣಯ್ಯ ದೊಡ್ಡಪ್ಪ ಆಗಬೇಕು. ಹೀಗೆ ಅಸಂಖ್ಯ ಪ್ರತಿಭಾಶಾಲಿಗಳನ್ನು ಕೊಟ್ಟ ತುಂಬು ಕುಟುಂಬ ಭರಣಯ್ಯನವರದು.
ಭರಣಯ್ಯನವರಿಗೂ ಆರ್ಎಸ್ಎಸ್ಗೂ ಅವಿನಾಭಾವ ಸಂಬಂಧ. ಕನ್ನಡ, ಇಂಗ್ಲಿಷ್ ಜೊತೆಗೆ ಸಂಸ್ಕೃತದಲ್ಲೂ ಮಾತನಾಡುವ ಅಸಾಧಾರಣ ದಲಿತ ಪ್ರತಿಭೆ ಭರಣಯ್ಯ . 1969 ರಲ್ಲಿ ಅಸ್ಪೃಶ್ಯತೆಯ ಒಳ – ಹೊರಗನ್ನು ಚರ್ಚಿಸಲು ಉಡುಪಿಯಲ್ಲಿ ನಡೆದ ಮೂರು ದಿನಗಳ ಐತಿಹಾಸಿಕ ಧರ್ಮಸಂಸದ್ ನ ಅಧ್ಯಕ್ಷತೆ ವಹಿಸಿದವರು ಆರ್ ಭರಣಯ್ಯ. ಕರ್ನಾಟಕದ ಅಂದಿನ ಸಿದ್ದಗಂಗಾ ಸ್ವಾಮೀಜಿ, ಸುತ್ತೂರಿನ ಹಿರಿಯ ಸ್ವಾಮೀಜಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸೇರಿದಂತೆ ದೇಶದ ಅನೇಕ ಮತ, ಸಂಪ್ರದಾಯಗಳ ಐನೂರಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದ ಸಮಾವೇಶವದು. ಉಡುಪಿಯ ಪೇಜಾವರ ಸ್ವಾಮೀಜಿಯವರ ಆಥಿತ್ಯ. ಆರ್ಎಸ್ಎಸ್ ನ ಗುರೂಜಿ ಗೊಳ್ವಾಳ್ಕರ್ ಸಮಾವೇಶದ ಚಾಲಕ ಶಕ್ತಿ. ಸಮಾವೇಶ ಅಸ್ಪೃಶ್ಯತೆಗೆ ಯಾವುದೇ ಧಾರ್ಮಿಕ ಮಾನ್ಯತೆ ಇಲ್ಲ. ಅಸ್ಪೃಶ್ಯತೆಯನ್ನು ತೊಲಗಿಸಿ ಹಿಂದುಗಳೆಲ್ಲರು ಸೋದರರಂತೆ ನಡೆದುಕೊಳ್ಳಬೇಕೆಂದು ಘೋಷಿಸಿತು.
ಇಂತಹದೊಂದು ನಿರ್ಣಯ ತಮ್ಮ ಅಧ್ಯಕ್ಷತೆಯ ಸಮಾವೇಶದಲ್ಲಿ ಘೋಷಣೆಯಾದಾಗ ಭರಣಯ್ಯ ಹೃದಯತುಂಬಿ ಆನಂದಾಶ್ರು ಸುರಿಸಿದ್ದರು. ಕೊನೆಗೆ
ವೇದಿಕೆಯಿಂದ ಕೆಳಗೆ ಇಳಿಯುವಾಗ ಆರ್ಎಸ್ಎಸ್ನ ಗುರೂಜಿ ಅವರನ್ನು ತಬ್ಬಿ ಭರಣಯ್ಯನವರು ‘So at last you came to our rescue’ ಎಂದು ಉದ್ಗರಿಸಿದ್ದರು. ಆಗ ಗುರೂಜಿ ‘ Not me alone , the entire Hindu society is with you’ ಎಂದಿದ್ದರು.
ಇದೆಲ್ಲವನ್ನು ಓದಿ, ಚರ್ಚಿಸಿ ತಿಳಿದಿದ್ದ ನಾನು ಹತ್ತು ವರ್ಷಗಳ ಹಿಂದೆ ಬೆಂಗಳೂರಿನ ಶೇಷಾದ್ರಿಪುರದ ಕುಮಾರ ಪಾರ್ಕ್ ಬಡಾವಣೆಯಲ್ಲಿ ಕಾರ್ಯನಿಮಿತ್ತ ಹಾದು ಹೋಗುವಾಗ ಸಾಮಾನ್ಯ ಮನೆಯೊಂದರ ಕಾಂಪೌಂಡ್ ಮೇಲೆ ‘ಆರ್ ಭರಣಯ್ಯ’ ಎಂಬ ಪುಟ್ಟ ಫಲಕ ಕಂಡು ಚಕಿತನಾದೆ. ಇದು ನಮ್ಮ ಭರಣಯ್ಯನವರ ಮನೆಯೇ ಎಂಬ ಸಂಶಯ ಸುಳಿಯಿತು . ಭರಣಯ್ಯನವರ ಕುಟುಂಬಸ್ಥರು ಇದ್ದಾರು, ಇದ್ದರೆ ಪರಿಚಯವಾದರೂ ಮಾಡಿಕೊಳ್ಳೋಣ ಎಂದು ಬಾಗಿಲು ತಟ್ಟಿದ್ದೆ. ಬಾಗಿಲು ತೆರೆದವರು ವಿಜಯಕೃಷ್ಣ!
ನನಗೆ ಭರಣಯ್ಯನವರ ಬಗ್ಗೆಯೂ ಗೊತ್ತಿತ್ತು, ಕ್ರಿಕೆಟರ್ ವಿಜಯಕೃಷ್ಣ ಬಗ್ಗೆಯೂ ಗೊತ್ತಿತ್ತು. ಆದರೆ ಇವರಿಬ್ಬರು ‘ಅಪ್ಪ – ಮಗ’ ಎಂದು ಗೊತ್ತಾದದ್ದು ವಿಜಯಕೃಷ್ಣ ದಾರಿಹೋಕನನ್ನು ಒಳಗೆ ಕರೆದಾಗಲೇ. ಗಟ್ಟಿ ಕುಟುಂಬದ ಹಿನ್ನೆಲೆ, ಅಧಿಕಾರ, ಪ್ರಸಿದ್ಧಿ ಎಲ್ಲವೂ ಸನಿಹದಲ್ಲೇ ಇದ್ದರೂ ಯಾವುದರ ಗೊಡವೆಯೂ ಇಲ್ಲದೆ ಸರಳವಾಗಿ ಇದ್ದವರು ಬಿ ವಿಜಯಕೃಷ್ಣ.
ವಾದಿರಾಜ್ ಸಾಮರಸ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.