ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಮಾನವೀಯತೆಯನ್ನು ರೂಢಿಸಿಕೊಳ್ಳುವುದು ಅವಶ್ಯಕ. ಮಾನವೀಯತೆ ಇಲ್ಲದಿದ್ದರೆ ಆತನನ್ನು ಈ ಸಮಾಜ ನೋಡುವ ದೃಷ್ಟಿಯೇ ಬೇರೆ. ಆದ್ದರಿಂದ ಹಿರಿಯರು ಮಕ್ಕಳಿಗೆ ಚಿಕ್ಕಂದಿನಿಂದಲೇ ಮಾನವೀಯತೆಯ ಪಾಠ ತಿಳಿಸಬೇಕು. ಮಾನವೀಯತೆ ಇಲ್ಲದೆ ಕೆಲವು ಜನರು ಕೆಲ ಸಂದರ್ಭದಲ್ಲಿ ಕಲ್ಲುಗಳಂತೆ ವರ್ತಿಸಿದಾಗ ಉಂಟಾಗುವ ಆಪತ್ತುಗಳನ್ನು ದಿನ ನಿತ್ಯ ನಾವು ಗಮನಿಸಬಹುದು. ಅದಕ್ಕೆ ಸಾಕ್ಷಿ ಎಂಬಂತೆ ಉದಾಹರಣೆಗಳೂ ನಮಗೆ ಯಥೇಚ್ಛವಾಗಿ ದೊರೆಯುತ್ತದೆ ಎಂಬುದು ನೋವಿನ ಸಂಗತಿ.
ಅಪಘಾತವಾದಾಗ ಒಂದು ಜೀವ ನಡು ರಸ್ತೆಯಲ್ಲಿ ನರಳಾಡಿ ಸಾವನ್ನಪ್ಪಿದ್ದು ನೋಡಿದ್ದೇವೆ. ಆ ಸಮಯದಲ್ಲಿ ಜನರು ಮೊಬೈಲ್ನಲ್ಲಿ ಆ ದೃಶ್ಯವನ್ನು ಸೆರೆಹಿಡಿಯುತ್ತಿರುತ್ತಾರೆ. ಅದೇ ಆ ಸಮಯದಲ್ಲಿ ಹೋಗಿ ಸಹಾಯ ಮಾಡುತ್ತಿದ್ದರೆ ಒಂದು ಜೀವ ಉಳಿಯುತ್ತಿತ್ತು. ಆದರೆ ಆ ಸಮಯದಲ್ಲಿ ಕೆಲ ಜನರಿಗೆ ಸ್ಟೇಟಸ್, ಶೇರ್, ಲೈಕ್ ಮುಖ್ಯವಾಗುತ್ತದೆಯೇ ಹೊರತು ಬೇರೊಂದು ಜೀವ ಮುಖ್ಯವಲ್ಲ ಎಂಬುದು ದುಃಖಕರ. ಮಾನವೀಯತೆಗಾಗಿ ಒಂದರೆಕ್ಷಣ ನಮ್ಮ ಚಿಂತನೆಯನ್ನು ಬದಲಾಯಿಸಿದ್ದರೆ, ಉಳಿಯುತ್ತಿದ್ದದ್ದು ಒಂದು ಜೀವ.
ಹಾಗೆ ಒಬ್ಬ ಒಬ್ಬ ಕಡುಬಡವ ಕೂಡ ತನ್ನ ಜೀವನದಲ್ಲಿ ಕಷ್ಟಪಡುತ್ತಿದ್ದರೆ ಯಾರೂ ಆತನ ಸಹಾಯಕ್ಕೆ ಹೋಗುವುದಿಲ್ಲ. ಹಿರಿಯರು, ಹೆಣ್ಣುಮಕ್ಕಳು ಭಿಕ್ಷೆ ಬೇಡಿದರೆ ಕೆಲವರು ಅವರನ್ನು ನೋಡುವ ರೀತಿಯೇ ಬೇರೆಯಾಗಿರುತ್ತದೆ. ಮನೆಯಲ್ಲಿ ಮಿಕ್ಕ ಆಹಾರ ನೀಡುವ ಬದಲು ಹಳಸಿದ ಆಹಾರ ನೀಡುತ್ತಾರೆ. ಯಾಕೆಂದರೆ ಅವರು ಭಿಕ್ಷುಕರು ಹಾಗಾಗೀ ಏನು ಕೊಟ್ಟರು ತಿನ್ನುತ್ತಾರೆ ಎಂಬ ಭಾವ. ನಮಗಿರುವ ಹಾಗೆಯೇ ಅವರಿಗೂ ದೇಹವಿರುವುದು. ಹಸಿವು ಎಲ್ಲರಿಗೂ ಒಂದೇ. ಆದರೆ ಹಸಿವು ಮತ್ತು ಪರಿಸ್ಥಿತಿಯಲ್ಲಿ ವ್ಯತ್ಯಾಸವಷ್ಟೇ. ನಮ್ಮ ಮಾನವೀಯತೆಯ ಒಂದಂಶ ಇಲ್ಲಿ ಕೆಲಸ ಮಾಡಿದ್ದರೂ ಅವರು ನಮ್ಮಂತೆಯೇ ಅಲ್ಲವೇ? ಎಂಬ ಒಂದು ವಾಸ್ತವ ಪ್ರಜ್ಞೆ ನಮ್ಮಲ್ಲಿ ಮೂಡುತ್ತಿತ್ತು ಅಲ್ಲವೇ.
ಹೊರಗಿನ ಜಗತ್ತು ಬಿಡಿ, ಒಂದು ಕುಟುಂಬದಲ್ಲಿ ಮನುಷ್ಯ ಮಾನವೀಯತೆಯನ್ನು ಮರೆಯುತ್ತಾನೆ. ಹೊತ್ತು ಹೆತ್ತು ಸಾಕಿದ ತಂದೆತಾಯಿಯನ್ನು ತಾವು ಬೆಳೆದು, ಒಂದು ಸ್ಥಾನಕ್ಕೇರಿದ ಬಳಿಕ, ತಮಗೆ ಹೊರೆ ಎಂದು ವೃದ್ಧಾಶ್ರಮಕ್ಕೆ ಸೇರಿಸಿದ ಉದಾಹರಣೆಗಳು ಒಂದಾ ಎರಡಾ? ಎಲ್ಲಿ ಹೋಯಿತು ಮಾನವೀಯತೆ? ತಮ್ಮನ್ನ ಬೆಳೆಸಿ ಕಲಿಸಿ ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯನ್ನಾಗಿ ಮಾಡಿದ ತಂದೆ-ತಾಯಿಯರನ್ನು ಕೊನೆಗೆ ಹೊರೆಯೆಂದು ವೃದ್ಧಾಶ್ರಮಕ್ಕೆ ಬಿಟ್ಟ ಮಕ್ಕಳಿಗೆ ಒಂದಲ್ಲ ಒಂದು ದಿನ ಅವರ ತಪ್ಪು ಅರಿವಾಗಿಯೇ ಆಗುತ್ತದೆ.
ಪ್ರಾಣಿಗಳ ವಿಷಯದಲ್ಲೂ ಕೆಲವು ಜನರು ಮಾನವೀಯತೆಯ ವಿರುದ್ಧ ಇರುತ್ತಾರೆ. ಪ್ರಮುಖವಾಗಿ ಬೀದಿನಾಯಿಗಳ ವಿಷಯದಲ್ಲಿ. ನಾಯಿ ಏನು ತೊಂದರೆ ಮಾಡದಿದ್ದರೂ ಕಲ್ಲು ಎಸೆಯುವುದು, ವೇಗವಾಗಿ ವಾಹನಗಳನ್ನು ಚಲಾಯಿಸುವಾಗ ಮುಂದೆ ನಾಯಿ-ಬೆಕ್ಕು ಇದ್ದರೂ ವೇಗವಾಗಿ ಚಲಾಯಿಸುವುದು, ಅವುಗಳಿಗೆ ಪೆಟ್ಟಾಗಿ ದಾರಿಮಧ್ಯೆ ನರಳಾಡುತ್ತಿದ್ದರೂ ಅವುಗಳನ್ನು ನೋಡದೆ ಹೋಗಿಬಿಡುತ್ತಾರೆ.
ಸ್ವಲ್ಪ ಮಾನವೀಯತೆ ಇದ್ದ ವ್ಯಕ್ತಿಯಾಗಿದ್ದರೆ ವಾಹನದ ವೇಗ ಕಡಿಮೆ ಮಾಡಿದ್ದರೆ ಸಾಕಿತ್ತು. ಒಂದು ಜೀವ ಉಸಿರು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಅಲ್ಲವೇ?
ಕೊರೋನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಶವವನ್ನು ಜನ ಯಾವ ರೀತಿ ನೋಡುತ್ತಿದ್ದಾರೆ? ತಮ್ಮ ಕುಟುಂಬದವರ ಶವವನ್ನೇ ದಾರಿ ಬದಿಯಲ್ಲಿ ಇಟ್ಟುಹೋಗುವಂತಹ ಹೀನ ಕೃತ್ಯಗಳು ಘಟಿಸುತ್ತಿವೆ. ಶವಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನೂ ನಾವು ನೋಡಿದ್ದೇವೆ. ಇಂದು ಕೊರೋನಾದ ಭಯದಿಂದ ಜನ ಮಾನವೀಯತೆಯನ್ನು ಮರೆತೇ ಬಿಟ್ಟಿದ್ದಾರೇನೋ ಎಂಬಂತೆ ವಸ್ತುಸ್ಥಿತಿ ನಮ್ಮ ಮನಸ್ಸನ್ನು ಒಂದು ಬಾರಿ ವಿಚಲಿತಗೊಳಿಸುತ್ತದೆ.
ಪ್ರತಿಯೊಬ್ಬರೂ ಜೀವನದಲ್ಲಿ ಗೌರವ, ಮಾನವೀಯತೆ, ಪ್ರೀತಿ, ಕರುಣೆ, ಶಿಸ್ತು ಎಲ್ಲಾ ರೀತಿಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಒಬ್ಬ ವ್ಯಕ್ತಿ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ. ಇಲ್ಲದೇ ಹೋದಲ್ಲಿ ಮನುಷ್ಯ ಎಂಬ ಶಬ್ದ ಅರ್ಥಹೀನ ಎಂದೆನಿಸಿಬಿಡುತ್ತದೆ. ನಾನು, ನನ್ನದು, ನನ್ನವರು ಎಂಬಲ್ಲಿ ಅವರೂ ನಮ್ಮಂತೆಯೇ ಅಲ್ಲವೇ? ಎಂಬ ಒಂದು ಭಾವನೆಯೇ ನಮ್ಮೊಳಗಿನ ಮಾನವತೆಯ ಅಂಶವನ್ನು ಜಾಗೃತಗೊಳಿಸುತ್ತದೆ. ಯೋಚಿಸಿ ನೋಡಿ…
✍️ ಚೈತ್ರಾ ರಾವ್
ದ್ವಿತೀಯ ಎಂ.ಸಿ.ಜೆ ಸ್ನಾತಕೋತ್ತರ ವಿಭಾಗ
ಎಸ್.ಡಿ.ಎಂ ಕಾಲೇಜು ಉಜಿರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.