ಭಾರತೀಯ ಚಿತ್ರಕಲೆಯ ಇತಿಹಾಸದಲ್ಲಿ ತಾಂಜಾವೂರು ವರ್ಣಚಿತ್ರ ಕಲೆಗೆ ಒಂದು ಅನನ್ಯ ಸ್ಥಾನವಿದೆ. 11 ನೇ ಶತಮಾನದಲ್ಲಿ ಚೋಳ ಅರಸರಿಂದ ನಿರ್ಮಿಸಲ್ಪಟ್ಟ ಬೃಹದೀಶ್ವರ ದೇವಾಲಯಗಳಲ್ಲಿಯೂ ಕಾಣಸಿಗಬಹುದಾದ ಈ ಕಲೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮುಂದೆ 15 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ಕಲೆ, ಸಾಹಿತ್ಯ, ನೃತ್ಯ , ಸಂಗೀತ ಮತ್ತು ಚಿತ್ರಕಲೆಗೆ ನೀಡಿದ ಪ್ರೋತ್ಸಾಹವು ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗಿದೆ. ಕೃಷ್ಣದೇವರಾಯರ ಆಳ್ವಿಕೆಯ ಕಾಲದಲ್ಲಿ ರಾಜಾಶ್ರಯ ಪಡೆದಿದ್ದ ಸಾವಿರಾರು ಕಲಾವಿದರು, ವಿಜಯನಗರ ಸಾಮ್ರಾಜ್ಯದ ಪತನದ ಬಳಿಕ ನಿರಾಶ್ರಿತರಾದರು. ಹೀಗೆ ನಿರಾಶ್ರಿತಗೊಂಡ ಕೆಲವರು ತಾಂಜಾವೂರಿನ ‘ನಾಯಕ’ರ ಬಳಿಯಲ್ಲಿ ಆಶ್ರಯ ಪಡೆದರು. ಆದರೆ ನಾಯಕರನ್ನೂ ಸೋಲಿಸಿ ಸಾಮ್ರಾಜ್ಯ ಸ್ಥಾಪಿಸಿದ ‘ಮರಾಠರು’ ತಾಂಜಾವೂರಿನ ಕಲಾವಿದರಿಗೆ ಬಹಳಷ್ಟು ಪ್ರೋತ್ಸಾಹವನ್ನು ನೀಡಿದರು.
ತಾಂಜಾವೂರಿನ ವರ್ಣಚಿತ್ರಗಳು ಅಂತಿಂಥಾ ಸಾಮಾನ್ಯ ವರ್ಣಚಿತ್ರಗಳಲ್ಲ, ಈ ವರ್ಣಚಿತ್ರಗಳು ಮುತ್ತು, ರತ್ನ, ಬಂಗಾರದಿಂದ ಸಿಂಗರಿಸಲ್ಪಟ್ಟ ವರ್ಣಚಿತ್ರಗಳಾಗಿವೆ. ತಾಂಜಾವೂರು ವರ್ಣಚಿತ್ರಗಳು ಗಾಢ ಮತ್ತು ಶ್ರೀಮಂತ ಬಣ್ಣಗಳಿಂದ ರಚಿಸಲ್ಪಡುತ್ತವೆ. ಚಿತ್ರಗಳ ಸಂಯೋಜನೆಯು ಸರಳವಾಗಿ ಆದರೆ ಸೂಕ್ಷ್ಮವಾಗಿರುತ್ತವೆ. ಚಿತ್ರಗಳು ಗಾಜಿನ ಮಣಿ, ಗಾಜಿನ ತುಂಡುಗಳು, ಅಮೂಲ್ಯ ರತ್ನಗಳನ್ನು ಜೋಡಿಸಿರುವ ಚಿನ್ನದ ತಗಡನ್ನೂ ಹೊಂದಿರುತ್ತದೆ. ತಾಂಜಾವೂರ್ ವರ್ಣಚಿತ್ರಗಳಲ್ಲಿ ವಿಜಯನಗರ, ಮರಾಠ ಮತ್ತು ಯುರೋಪಿಯನ್ ಶೈಲಿಗಳ ಪ್ರಭಾವವೂ ಎದ್ದು ಕಾಣಿಸುತ್ತದೆ. ವರ್ಣಚಿತ್ರಗಳಲ್ಲಿ ಹಿಂದೂ ದೇವ ದೇವತೆಗಳು, ಹಿಂದೂ ಸಂತರು, ಹಿಂದೂ ಪುರಾಣಗಳು ಮತ್ತು ಧಾರ್ಮಿಕ ಗ್ರಂಥಗಳ ಕಥೆ ಮತ್ತು ಕಥಾನಕಗಳನ್ನು ಚಿತ್ರಿಸಲಾಗಿದೆ.
ತಾಂಜಾವೂರು ಚಿತ್ರಗಳನ್ನು ಸ್ಥಳೀಯ ಭಾಷೆಯಲ್ಲಿ “ಪಾಲಗೈ ಪದಂ” ಎಂದು ಕರೆಯುತ್ತಾರೆ. (ಪಾಲಗೈ- ಮರದ ಹಲಗೆ, ಪದಂ- ಚಿತ್ರ) ಏಕೆಂದರೆ ಈ ವರ್ಣಚಿತ್ರಗಳನ್ನು ಮರದ ಹಲಗೆಯ ಮೇಲೆ ಬಿಡಿಸಲಾಗುತ್ತದೆ. ವಿಷಯ ಮತ್ತು ಉದ್ದೇಶಗಳಿಗನುಗುಣವಾಗಿ ವಿವಿಧ ಗಾತ್ರಗಳಲ್ಲಿ ವರ್ಣಚಿತ್ರಗಳನ್ನು ನಿರ್ಮಿಸಲಾಗುತ್ತಿತ್ತು. ಉದಾಹರಣೆಗೆ ಮರಾಠ ಸಾಮ್ರಾಜ್ಯದ ಆಳ್ವಿಕೆಯ ಸಂದರ್ಭದಲ್ಲಿ ದೇವತೆಗಳ ದೊಡ್ಡ ದೊಡ್ಡ ವರ್ಣಚಿತ್ರಗಳನ್ನು ನಿರ್ಮಿಸಲಾಗುತ್ತಿತ್ತು. ಈ ವರ್ಣಚಿತ್ರಗಳನ್ನು ಅರಮನೆ, ಆಸ್ಥಾನ, ನೂತನವಾಗಿ ನಿರ್ಮಿಸಲ್ಪಟ್ಟ ಕಟ್ಟಡಗಳಲ್ಲಿ ಬಳಸಲಾಗುತ್ತಿತ್ತು. ಯುರೋಪಿಯನ್ ಆಡಳಿತಕಾಲದಲ್ಲಿ ಸಣ್ಣ ಸಣ್ಣ ವರ್ಣಚಿತ್ರಗಳನ್ನುರಚಿಸಲಾಗುತ್ತಿದ್ದು, ಅವುಗಳು ದೇವರ ಪೂಜಾ ಕೊಠಡಿ, ಭಜನಾ ಮಂದಿರ ಮತ್ತು ಗ್ರಂಥಗಳಲ್ಲಿ ಬಳಸಲ್ಪಡುತ್ತಿದ್ದವು.
ಮರದ ಹಲಗೆಯ ಜೊತೆಗೆ ಗೋಡೆಗಳು, ಗಾಜು, ಕಾಗದ ಮತ್ತು ದಂತದಂತಹ ಮಾಧ್ಯಮಗಳಲ್ಲಿ ಕೂಡ ವರ್ಣಚಿತ್ರಗಳು ರಚಿಸಲ್ಪಡುತ್ತಿದ್ದವು. ದಂತಗಳಲ್ಲಿ ರಚಿಸಲ್ಪಟ್ಟ ಸಣ್ಣ ಭಾವಚಿತ್ರಗಳನ್ನು ‘ರಾಜಹರಂ’ ಎಂದು ಕರೆಯಲಾಗುತ್ತಿತ್ತು. ಆಸ್ಥಾನಗಳಿಗೆ ಆಗಮಿಸಿದ ಅತಿಥಿಗಳಿಗೆ ಇವುಗಳನ್ನು ಪದಕಗಳ ರೂಪದಲ್ಲಿ ನೀಡಿ ಗೌರವಿಸಲಾಗುತ್ತಿತ್ತು. ಮರಾಠ ಸಾಮ್ರಾಜ್ಯದ ಎರಡನೇ ಸರ್ಫಾಜಿಯ ಯ ಆಡಳಿತ ಕಾಲದಲ್ಲಿ ಚೀನಾದ ರಿಸರ್ವ್ ಗ್ಲಾಸ್ ತಂತ್ರವನ್ನು ಅಳವಡಿಸಿ ಚಿತ್ರಕಲೆಗೆ ಹೊಸ ರೂಪವನ್ನು ನೀಡಲಾಯಿತು. ಅಗ್ಗದ ಗಾಜಿನ ಹಾಳೆಯ ಹಿಮ್ಮುಖದಲ್ಲಿ ಚಿತ್ರಗಳನ್ನು ರಚಿಸುವ ತಂತ್ರಗಾರಿಕೆಯು ಇದಾಗಿತ್ತು. ಹಿಂದೆ ಕಲಾವಿದರು ತರಕಾರಿ ಮತ್ತು ಖನಿಜ ವರ್ಣಗಳಂತಹಾ ನೈಸರ್ಗಿಕ ಬಣ್ಣಗಳನ್ನೇ ಬಳಸುತ್ತಿದ್ದರು. ಚಿತ್ರದ ಹೊರಭಾಗದ ಗೆರೆಗಳಲ್ಲಿ ಬಹಳವಾಗಿ ಗಾಢ ಕಂದು ಅಥವಾ ಕೆಂಪು ಬಣ್ಣಗಳನ್ನು ಬಳಸಲಾಗುತ್ತಿತ್ತು. ಒಳಗಿನ ಭಾಗದಲ್ಲಿ ಕೆಂಪು, ನೀಲಿ, ಹಸಿರು ಬಣ್ಣಗಳನ್ನು ಬಳಸಲಾಗುತ್ತಿತ್ತು. ವಿಷ್ಣುವಿಗೆ ನೀಲಿ, ನಟರಾಜನಿಗೆ ಬಿಳಿ ಮತ್ತು ದೇವಿಯನ್ನು ಹಸಿರು ಬಣ್ಣದಲ್ಲಿ ಚಿತ್ರಿಸುತ್ತಾರೆ. ವರ್ಣಚಿತ್ರಗಳಲ್ಲಿ ಬಹುತೇಕ ಎಲ್ಲಾ ವ್ಯಕ್ತಿಗಳನ್ನು ಧೃಡ ಶರೀರದ ದೇಹದೊಂದಿಗೆ ನಯವಾದ ದುಂಡಾದ ಮುಖದಲ್ಲಿ ಬಾದಾಮಿಯಾಕಾರದ ಕಣ್ಣುಗಳೊಂದಿಗೆ ಚಿತ್ರಿಸಲಾಗುತ್ತಿತ್ತು. ಚಿತ್ರಗಳಲ್ಲಿ ಪರದೆಗಳು, ಬಾಗಿಲು, ಕಮಾನುಗಳನ್ನು ರಚಿಸಲಾಗುತ್ತಿದ್ದರೂ ಪ್ರಮುಖ ಪಾತ್ರವನ್ನು ಚಿತ್ರದ ಮಧ್ಯಭಾಗದಲ್ಲಿಯೇ ರಚಿಸಲಾಗುತ್ತಿತ್ತು. ಸಾಮಾನ್ಯವಾಗಿ ಪ್ರಮುಖ ವ್ಯಕ್ತಿಯ ಉಡುಪುಗಳನ್ನು ಗಾಢ ವರ್ಣಗಳಿಂದ ಚಿತ್ರಿಸಲ್ಪಡುತ್ತಿದ್ದವು.
2ನೇ ಸರ್ಪೋಜಿ ನಿರ್ಮಿಸಿದ ತಾಂಜಾವೂರಿನ ‘ಸರಸ್ವತಿ ಮಹಲ್’ ಗ್ರಂಥಾಲಯದಲ್ಲಿ ಈ ಕಲೆಯ ಉದಾಹರಣೆಯ ಹಲವು ಗ್ರಂಥಗಳಿವೆ. ಉದಾಹರಣೆಗೆ ಗ್ರಂಥಾಲಯದಲ್ಲಿರುವ ‘ಪ್ರಬೋಧ ಚಂದ್ರೋದಯಮ್’ ಎಂಬ ಸಂಸ್ಕೃತ ಕೃತಿಯಲ್ಲಿ ತಂಜಾವೂರಿನ ಕಲೆಯ ವರ್ಣಚಿತ್ರಗಳಿವೆ. ಕಾಶೀ ತೀರ್ಥಯಾತ್ರೆಯ ಬಳಿಕ ರಾಜನು ನಿರ್ಮಿಸಿದ ‘ತಿರುವಯ್ಯಾರು’ ಧರ್ಮಛತ್ರದ ಗೋಡೆಗಳಲ್ಲಿ ಗಾಜಿನ ಮುಚ್ಚಳದ ಒಳಗೆ ಮುಸುಕಾದ ವರ್ಣಚಿತ್ರಗಳು ಇಂದಿಗೂ ಇದೆ.
ತಾಂಜಾವೂರು ಚಿತ್ರಕಲೆಯನ್ನು “ಧಾರ್ಮಿಕ ಪರಿಶುದ್ಧತೆ ಮತ್ತು ವಿನಮ್ರತೆಯೊಂದಿಗೆ” ನಡೆಸಬೇಕಾದ ಪವಿತ್ರ ಕಾರ್ಯ ಎಂದು ಕಲಾವಿದರು ಭಾವಿಸುತ್ತಿದ್ದರು. ಈ ಕಾರಣದಿಂದಲೇ ಬಹುತೇಕ ಕಲಾಕೃತಿಗಳಲ್ಲಿ ಕಲಾಕಾರನ ಹಸ್ತಾಕ್ಷರ ಕೂಡಾ ಕಾಣಸಿಗುವುದಿಲ್ಲ. ಆಂಗ್ಲೋ ಮೈಸೂರು ಯುದ್ಧದ ಸಂದರ್ಭ ಮತ್ತು ಅದರ ನಂತರದ ಸಮಯದಲ್ಲಿ ಈ ವರ್ಣಚಿತ್ರಗಳ ಮೇಲೂ ಬ್ರಿಟೀಷರ ಪ್ರಭಾವವು ಕಾಣಿಸಲು ಪ್ರಾರಂಭವಾಯಿತು. ಇದರ ಪರಿಣಾಮವಾಗಿ ಇಂಗ್ಲೆಂಡ್ನ ಬ್ರಿಟಿಷ್ ಮತ್ತು ವಿಕ್ಟೋರಿಯಾ ಮತ್ತು ಆಲ್ಬರ್ಟ್ ವಸ್ತುಸಂಗ್ರಹಾಲಯಗಳು ಕಂಪನಿಯಲ್ಲಿ ಮತ್ತು ಸಾಂಪ್ರದಾಯಿಕ ಶೈಲಿಗಳಲ್ಲಿ ತಂಜಾವೂರು ವರ್ಣಚಿತ್ರಗಳ ದೊಡ್ಡ ಸಂಗ್ರಹವನ್ನು ಹೊಂದಿವೆ. ಕೋಪನ್ ಹ್ಯಾಗನ್ ನ ನ್ಯಾಷನಲ್ ಮ್ಯೂಸಿಯಂ 17 ನೇ ಶತಮಾನದ ತಂಜಾವೂರು ವರ್ಣಚಿತ್ರಗಳ ಉತ್ತಮ ಸಂಗ್ರಹವನ್ನು ಹೊಂದಿದೆ.
ಐತಿಹಾಸಿಕವಾದ ಸಂಪದ್ಭರಿತ ಭಾರತದ ಕಲೆಯಾದ ತಂಜಾವೂರು ವರ್ಣಚಿತ್ರ ಕಲೆಯು ಅಳಿವಿನಂಚಿನಲ್ಲಿದ್ದ ಕಲೆಯಾಗಿದ್ದು. ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಶ್ರೀಮತಿ ಜಯಲಲಿತಾ ಈ ಕಲೆಯ ಉಚಿತ ಕಾರ್ಯಾಗಾರವನ್ನು ಏರ್ಪಡಿಸಿದಾಗ ನೂರಾರು ಮಹಿಳೆಯರು ಆಸಕ್ತರಾಗಿ ಭಾಗವಹಿಸಿದ್ದರು. ಅಳಿವಿನಂಚಿನ ಈ ಅಭೂತಪೂರ್ವ ಕಲೆಯನ್ನು ತಮಿಳುನಾಡು ಸರ್ಕಾರ ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಹಿಂದೂ ಸಾಮ್ರಾಜ್ಯದ ಕೊಡುಗೆಯಾದ ಮತ್ತು ನಮ್ಮ ಹಿರಿಯರ ಕ್ರಿಯಾಶೀಲತೆಯ ಕನ್ನಡಿಯಾದ ಈ ಕಲೆಯನ್ನು ಬೆಳೆಸುವುದು ನಮ್ಮ ಕರ್ತವ್ಯವಲ್ಲವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.