ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಇಂದಿಗೆ ಏಳು ವರ್ಷಗಳನ್ನು ಪೂರೈಸಿದೆ. ಅತ್ಯಂತ ಜನಪ್ರಿಯ ಪ್ರಧಾನಿ ಎಂದು ಎನಿಸಿಕೊಂಡಿರುವ ಮೋದಿಯವರು ಅಧಿಕಾರಕ್ಕೆ ಬಂದು 7 ವರ್ಷಗಳು ಸಂದರೂ ಇಂದಿಗೂ ತಮ್ಮ ವರ್ಚಸ್ಸನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಮೊದಲ ಐದು ವರ್ಷಗಳ ಅವಧಿಯನ್ನು ಆಡಳಿತ ಸುಧಾರಣೆ, ವಿದೇಶಿ ಬಾಂಧವ್ಯ ವೃದ್ಧಿ ಮುಂತಾದ ವಿಷಯಗಳಿಗೆ ಮೋದಿ ಸರಕಾರ ಮೀಸಲಿಟ್ಟಿತ್ತು, ಭ್ರಷ್ಟಾಚಾರವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಹಲವು ಕ್ರಮಕೈಗೊಂಡಿತು. ಆಡಳಿತಶಾಹಿಯನ್ನು ಸ್ವಚ್ಛಗೊಳಿಸಿತು, ಶಿಸ್ತುಬದ್ಧಗೊಳಿಸಿತು, ಆಡಳಿತದಲ್ಲಿ ನಾಗರಿಕರನ್ನು ಒಳಪಡಿಸುವ ಕಾರ್ಯ ಮಾಡಿತು. ಎರಡನೆಯ ಅವಧಿಯನ್ನು ಬಿಜೆಪಿ ನೀಡಿದ್ದ ಹಲವು ಭರವಸೆಗಳ ಈಡೇರಿಕೆಗೆ ಮೀಸಲಿಡಲಾಗಿದೆ. ಕೇವಲ ಎರಡು ವರ್ಷಗಳಲ್ಲಿ ಮೋದಿ ಸರ್ಕಾರವು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿ ರದ್ದತಿ, ತ್ರಿವಳಿ ತಲಾಕ್ ರದ್ಧತಿ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ, ಕೃಷಿ ಸುಧಾರಣಾ ಕಾಯ್ದೆ ಜಾರಿ, ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮುಂತಾದ ಕಾರ್ಯಗಳನ್ನು ಮಾಡಿದೆ. ಈ ಮೂಲಕ ಕೊಟ್ಟ ಮಾತಿಗೆ ತಾನು ತಪ್ಪುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಮೊದಲ ಐದು ವರ್ಷಗಳನ್ನು ಮೋದಿ ಆಡಳಿತ ಅತ್ಯಂತ ಸುಲಲಿತವಾಗಿ ಪೂರೈಸಿತ್ತು. ಅತ್ಯುತ್ತಮ ಜನಪರ ಯೋಜನೆಗಳನ್ನು ತರುವ ಮೂಲಕ ಜನರ ಮನಸ್ಸನ್ನು ಗೆದ್ದಿತ್ತು. ಇದೇ ಕಾರಣಕ್ಕೆ ಅಭೂತಪೂರ್ವ ರೀತಿಯಲ್ಲಿ ಎರಡನೇ ಅವಧಿಗೂ ಆಯ್ಕೆಯಾಯಿತು. ಆದರೆ ಎರಡನೇ ಅವಧಿಯಲ್ಲಿ ಸರ್ಕಾರ ಹಲವು ಸವಾಲುಗಳನ್ನು ಆರಂಭದಲ್ಲೇ ಎದುರಿಸಬೇಕಾಯಿತು. ಸಿಎಎ ಅನುಮೋದನೆಗೊಂಡ ಬಳಿಕ ಕೆಲವರು ದೇಶವ್ಯಾಪಿ ಹಿಂಸಾಚಾರದ ಕಿಡಿ ಹೊತ್ತಿಸಿದರು. ಇದನ್ನು ನಿಭಾಯಿಸಬೇಕಾದ ಅನಿವಾರ್ಯತೆ ಸರ್ಕಾರದ ಮುಂದಿತ್ತು. ನಂತರ ಕೊರೋನಾವೈರಸ್ ಎಂಬ ಮಹಾಮಾರಿ ದೇಶವನ್ನು ತಲ್ಲಣಗೊಳಿಸಿತು. ಕಠಿಣ ಕ್ರಮಗಳು, ಕ್ಷಿಪ್ರ ಕಾರ್ಯಗಳ ಮೂಲಕ ಕೊರೋನಾದ ಮೊದಲ ಅಲೆಯನ್ನು ತಹಬದಿಗೆ ತರಲಾಯಿತು. ಆದರೆ ಲಾಕ್ಡೌನ್ ಕಾರಣ ಹದಗೆಟ್ಟ ಆರ್ಥಿಕತೆಯನ್ನು ಮತ್ತೆ ಹಳಿಗೆ ತರುವ ದೊಡ್ಡ ಜವಾಬ್ದಾರಿಯೂ ಮೋದಿ ಹೆಗಲ ಮೇಲಿತ್ತು. ನಿಧಾನಕ್ಕೆ ಆರ್ಥಿಕತೆಯನ್ನು ಚೇತರಿಕೆಯ ಹಾದಿಗೆ ತರಲಾಯಿತು. ನಂತರ ಸರ್ಕಾರ ಅನುಷ್ಠಾನಗೊಳಿಸಿದ ಕೃಷಿ ಕಾಯ್ದೆಯ ವಿರುದ್ಧ ಕೆಲವರು ದಂಗೆ ಏಳುವ ಪ್ರಯತ್ನ ನಡೆಸಿದರು. ಸರ್ಕಾರ ಜಗ್ಗದೆ, ಬಗ್ಗದೆ ಸುಧಾರಣಾ ಕಾರ್ಯವನ್ನು ಮುಂದುವರೆಸಿತು. ರೈತರ ಹೆಸರಲ್ಲಿ ನಡೆದ ದೊಂಬಿಯನ್ನೂ ಹತ್ತಿಕ್ಕಿತು. ಇಂದಿಗೂ ಕೆಲವರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅವರ ಪ್ರತಿಭಟನೆ ಈಗ ಮೌಲ್ಯ ಕಳೆದುಕೊಂಡಿದೆ.
ಎರಡನೇ ಅವಧಿಯಲ್ಲಿ ಸರ್ಕಾರ ಎದುರಿಸಿದ ಅತೀ ದೊಡ್ಡ ಸವಾಲು ಎಂದರೆ ಕೊರೋನಾವೈರಸ್ನ ಎರಡನೇ ಅಲೆ. ಅತ್ಯಂತ ಭೀಕರವಾಗಿ ಸುಳಿವೂ ಇಲ್ಲದಂತೆ ಅಪ್ಪಳಿಸಿದ ಈ ಎರಡನೇ ಅಲೆ ಇಡೀ ದೇಶವನ್ನೇ ಅಲ್ಲೋಲಕಲ್ಲೋಲಗೊಳಿಸಿತು. ಆಮ್ಲಜನಕದ ಕೊರತೆ, ವೈದ್ಯಕೀಯ ಪರಿಕರಗಳ ಕೊರತೆ ವೈದ್ಯಕೀಯ ಲೋಕವನ್ನೇ ತತ್ತರಿಸುವಂತೆ ಮಾಡಿತು. ಈ ಕೊರತೆಗಳನ್ನು ನೀಗಿಸುವುದು ಕೇಂದ್ರ ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು. ಕೈಗಾರಿಕೆಗಳಲ್ಲಿನ ನೈಟ್ರೋಜನ್ ಉತ್ಪಾದನಾ ಘಟಕಗಳಲ್ಲಿ ಆಮ್ಲಜನಕ ಉತ್ಪಾದನೆ ಮಾಡುವ ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡಲಾಯಿತು. ವಿದೇಶಗಳಿಂದ ನೆರವಿನ ಮಹಾಪೂರವೇ ಹರಿದು ಬಂತು. ಕೊರೋನಾ ಹತ್ತಿಕ್ಕಲು ಬೇಕಾದ ಔಷಧಿಗಳ ಉತ್ಪಾದನೆಯನ್ನು ದ್ವಿಗುಣಗೊಳಿಸಲಾಯಿತು, ಆಮದು ಮಾಡಿಕೊಳ್ಳಲಾಯಿತು. ಆಕ್ಸಿಜನ್ ಎಕ್ಸ್ಪ್ರೆಸ್ ಮೂಲಕ ದೇಶದ ಮೂಲೆ ಮೂಲೆ ಆಮ್ಲಜನಕ ಪೂರೈಕೆ ಕಾರ್ಯ ಮಾಡಲಾಯಿತು. ಈ ಅವಧಿಯಲ್ಲಿ ಅನೇಕ ಜೀವಗಳು ನಷ್ಟವಾದವು, ಸಾವುನೋವು ವಿಪರೀತಗೊಂಡಿತು. ಆದರೂ ಮೋದಿ ಸರ್ಕಾರ ಒಂದು ತಿಂಗಳೊಳಗೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಫಲವಾಯಿತು ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ಕೊರೋನಾ ವಿರುದ್ಧ ದೇಶೀಯ ಲಸಿಕೆ ಅಭಿವೃದ್ಧಿಪಡಿಸಿದ ಕೆಲವೇ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಕೊವ್ಯಾಕ್ಸಿನ್ ಭಾರತದ ಹೆಮ್ಮೆ ಎನಿಸಿಕೊಂಡಿದೆ. ಕೋವಿಶೀಲ್ಡ್ ಕೂಡ ದೊಡ್ಡ ಪ್ರಮಾಣದಲ್ಲಿ ಭಾರತದಲ್ಲಿ ಉತ್ಪಾದನೆಯಾಗುತ್ತಿದೆ. ಭಾರತವು ʼವ್ಯಾಕ್ಸಿನ್ ಮೈತ್ರಿʼ ಹೆಸರಿನಲ್ಲಿ ಅನೇಕ ರಾಷ್ಟ್ರಗಳಿಗೆ ಲಸಿಕೆ ಪೂರೈಸುವ ಕಾರ್ಯವನ್ನು ಮಾಡಿ ಮೆಚ್ಚುಗೆಗೆ ಪಾತ್ರವಾಗಿದೆ. ಮಾತ್ರವಲ್ಲ, ತನ್ನ ನಾಗರಿಕರಿಗೂ 20 ಕೋಟಿಗೂ ಅಧಿಕ ಲಸಿಕೆ ಡೋಸ್ ನೀಡಿದೆ. ಈ ವರ್ಷದ ಅಂತ್ಯದ ವೇಳೆಗೆ ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ಪೂರೈಸುವ ಗುರಿಯನ್ನು ಹೊಂದಿದೆ. ಮೋದಿ ಸರ್ಕಾರದ ʼವ್ಯಾಕ್ಸಿನ್ ಮೈತ್ರಿʼಯ ಫಲವಾಗಿಯೇ ಇಂದು ಅನೇಕ ರಾಷ್ಟ್ರಗಳು ಸಂಕಷ್ಟದ ಸಂದರ್ಭದಲ್ಲಿ ಭಾರತಕ್ಕೆ ನೆರವಿನ ಮಹಾಪೂರ ಹರಿಸಿದವು. ಈ ಮೂಲಕ ಭಾರತದ ಋಣ ತೀರಿಸುವ ಕೆಲಸ ಮಾಡಿದವು ಅಂದರೆ ತಪ್ಪಲ್ಲ.
ಕಳೆದ ಏಳು ವರ್ಷಗಳಲ್ಲಿ ಮೋದಿ ಸರಕಾರವು ವಿವಿಧ ಜನಪರ ಯೋಜನೆಗಳು ಕೊರೋನಾದ ಈ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಆಶಾಕಿರಣವಾಗಿದೆ ಎಂದರೂ ತಪ್ಪಾಗಲಾರದು. ಅದರಲ್ಲೂ ಮುಖ್ಯವಾಗಿ ಆಯುಷ್ಮಾನ್ ಯೋಜನೆ, ಜನಧನ್ ಯೋಜನೆ ಇಂದು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಗರೀಬ್ ಕಲ್ಯಾಣ್ ಅನ್ನ ಯೋಜನೆ ಲಾಕ್ಡೌನ್ ಅವಧಿಯಲ್ಲಿ ಜನರ ಹಸಿವನ್ನು ನೀಗಿಸುತ್ತಿದೆ.
ಮೋದಿ ಸರ್ಕಾರ ಪ್ರಮುಖ ಯೋಜನೆಗಳತ್ತ ಒಂದು ನೋಟ
1. ಪ್ರಧಾನಮಂತ್ರಿ ಜನಧನ ಯೋಜನೆ: ಅಗಸ್ಟ್ 28, 2014ರಲ್ಲಿಆರಂಭಗೊಂಡ ಈ ಯೋಜನೆಯ ಉದ್ದೇಶ ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದು. ಈ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆ, ವಿಮೆ ಮತ್ತು ಡೆಬಿಟ್ ಕಾರ್ಡ್ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮೂಲಭೂತವಾಗಿ ಅಪಘಾತ ವಿಮೆ, ಡೆಬಿಟ್ ಕಾರ್ಡ್, ಅಪಘಾತ ವಿಮೆ ಹೀಗೆ ಎಲ್ಲ ಬಗೆಯ ಬ್ಯಾಂಕಿಂಗ್ ಕ್ಷೇತ್ರದ ಸೌಲಭ್ಯಗಳನ್ನು ಯೋಜನೆ ಒಳಗೊಂಡಿದೆ.
2. ಸುಕನ್ಯಾ ಸಮೃದ್ಧಿ ಯೋಜನೆ ಯೋಜನೆ: ಜನವರಿ 22, 2015ರಂದು ಆರಂಭಗೊಂಡ ಈ ಯೋಜನೆಯ ಉದ್ದೇಶ ಹೆಣ್ಣು ಮಗುವಿನ ಭವಿಷ್ಯಕ್ಕೆ ಭದ್ರತೆ ಕಲ್ಪಿಸುವುದು. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ಸಂದರ್ಭದಲ್ಲಿ ಪಾಲಕರನ್ನು ಪ್ರೋತ್ಸಾಹಿಸುವುದು ಈ ಉಳಿತಾಯ ಖಾತೆಯ ಪ್ರಮುಖ ಉದ್ದೇಶವಾಗಿದೆ.
3. ಪ್ರಧಾನಮಂತ್ರಿ ಮುದ್ರಾ ಯೋಜನೆ: ಏಪ್ರಿಲ್ 8, 2015ರಂದು ಆರಂಭಗೊಂಡ ಈ ಯೋಜನೆಯ ಉದ್ದೇಶ ದೇಶದ ಯುವಜನತೆಯನ್ನು ಉದ್ಯಮಶೀಲತೆಯತ್ತ ಆಕರ್ಷಿಸುವುದು ಹಾಗೂ ಸಣ್ಣ ಹಾಗೂ ಅತಿಸಣ್ಣ ಉದ್ದಿಮೆಗಳನ್ನು ನಡೆಸುತ್ತಿರುವ ಉದ್ಯಮಶೀಲರಿಗೆ ಹಣಕಾಸಿನ ನೆರವು ನೀಡುವುದು.
4. ಪ್ರಧಾನಮಂತ್ರಿ ಅವಾಸ್ ಯೋಜನೆ: ಜೂನ್ 25, 2015ರಂದು ಆರಂಭಗೊಂಡ ಈ ಯೋಜನೆಯ ಪ್ರಮುಖ ಉದ್ದೇಶ 2022ರಲ್ಲಿ ದೇಶದ ಪ್ರತಿಯೊಬ್ಬರಿಗೂ ಮನೆ ಸಿಗುವಂತೆ ಮಾಡುವುದು. ನಗರ ಪ್ರದೇಶಗಳಲ್ಲಿ 2 ಕೋಟಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 3 ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.
5. ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ: 9 ಮೇ, 2015ರಂದು ಆರಂಭಗೊಂಡ ಈ ಯೋಜನೆಯ ಉದ್ದೇಶ ಪ್ರತಿಯೊಬ್ಬ ಭಾರತೀಯನಿಗೂ ಜೀವ ವಿಮೆಯನ್ನು ಒದಗಿಸುವುದು. ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯೂ ಭಾರತ ಸರ್ಕಾರ ಆಧಾರಿತ ಜೀವವಿಮೆಯಾಗಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಇದನ್ನು ನೀಡುವುದು ಸರ್ಕಾರದ ಉದ್ದೇಶ. 18-50ವರ್ಷದ ಒಳಗಿನವರು ಈ ಭೀಮಾ ಯೋಜನೆ ಮಾಡಿಸಬಹುದು.
6. ಅಟಲ್ ಪಿಂಚಣಿ ಯೋಜನೆ: 9 ಮೇ, 2015ರಂದು ಆರಂಭಗೊಂಡ ಈ ಯೋಜನೆಯ ಉದ್ದೇಶ ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ನಿವೃತ್ತಿ ಜೀವನದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು ಎಂಬುದು. ಅಸಂಘಟಿತ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರನ್ನು ಗುರಿಯಾಗಿರಿಸಿಕೊಂಡು ಯೋಜನೆಯನ್ನು ಸಿದ್ಧಮಾಡಲಾಗಿದೆ. ಸಾಮಾಜಿಕ ಭದ್ರತೆ ಯೋಜನೆಗಳು ಲಭ್ಯವಿಲ್ಲದರೂ ಇದರ ಲಾಭ ಪಡೆದುಕೊಳ್ಳಬಹುದು.
7. ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ: 9 ಮೇ, 2015ರಂದು ಆರಂಭಗೊಂಡ ಈ ಯೋಜನೆಯ ಉದ್ದೇಶ ದೇಶದ ಪ್ರತಿಯೊಬ್ಬ ಪ್ರಜೆಗೂ ಅಪಘಾತ ವಿಮಾ ಸೌಲಭ್ಯ ಒದಗಿಸುವುದು.ಈ ಯೋಜನೆ ಕೇಂದ್ರ ಸರ್ಕಾರ ಆಧಾರಿತ ಅಪಘಾತ ವಿಮೆಯಾಗಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಇದನ್ನು ನೀಡುವುದು ಸರ್ಕಾರದ ಉದ್ದೇಶ. 18-70ವರ್ಷದ ಒಳಗಿನವರು ಈ ಸುರಕ್ಷಾ ಭೀಮಾ ಯೋಜನೆ ಮಾಡಿಸಬಹುದು.
9. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ: 11 ಅಕ್ಟೋಬರ್, 2014ರಂದು ಆರಂಭಗೊಂಡ ಈ ಯೋಜನೆಯ ಉದ್ದೇಶ ದೇಶದ ಪ್ರತಿಯೊಬ್ಬ ರೈತನಿಗೂ ರಾಬಿ ಮತ್ತು ಖಾರಿಪ್ ಬೆಳೆಗೆ ವಿಮೆ ಮತ್ತು ಬೆಳೆ ಹಾನಿಯಾದರೆ ಹಣಕಾಸು ಭದ್ರತೆ ಒದಗಿಸುವುದು.
10. ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಯೋಜನೆ: ಏಪ್ರಿಲ್ 2015ರಂದು ಆರಂಭಗೊಂಡ ಈ ಯೋಜನೆಯ ಉದ್ದೇಶ ಗರಿಬ್ ಕಲ್ಯಾಣ ಯೋಜನೆ ಬಡತನ ನಿವಾರಣೆ ಯೋಜನೆಯಾಗಿದೆ.
10. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ: ಜನವರಿ 22, 2015ರಂದು ಆರಂಭಗೊಂಡ ಈ ಯೋಜನೆಯ ಉದ್ದೇಶ ಮಕ್ಕಳ ಲಿಂಗಾನುಪಾತ ಹಾಗೂ ಮಹಿಳಾ ಸಬಲೀಕರಣದ ಸಮಸ್ಯೆಗಳ ನಿವಾರಣೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಗಳ ಜಂಟಿ ಚಿಂತನೆಯ ಫಲವಾಗಿ ಈ ಯೋಜನೆ ರೂಪಿತವಾಗಿದೆ.
ಹೆಣ್ಣುಮಕ್ಕಳ ವಿಧ್ಯಾಭ್ಯಾಸ ಮತ್ತು ಸಾಮಾಜಿಕ ಭದ್ರೆತೆಗಳನ್ನು ಉ್ತ್ಏಜಿಸುವ ಸಲುವಾಗಿ ಬೇಟಿ ಬಚಾವೋ, ಬೇಟಿ ಪಡಾವೋ(ಹೆಣ್ಣು ಮಗು ಉಳಿಸಿ- ಹೆಣ್ಣು ಓದಿಸಿ) ಯೋಜನೆ ಆರಂಭಿಸಿದೆ.
11. ಡಿಜಿಟಲ್ ಇಂಡಿಯಾ : ಜುಲೈ 1, 2015ರಂದು ಆರಂಭಗೊಂಡ ಈ ಯೋಜನೆಯ ಉದ್ದೇಶ ದೇಶದಲ್ಲಿ ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವುದು. ಆನ್ಲೈನ್ ಸೌಕರ್ಯ ಮತ್ತು ಅಂತರ್ಜಾಲ ಸಂಪರ್ಕ ಉತ್ತಮ ಪಡಿಸುವುದು.
13. ಮೇಕ್ ಇನ್ ಇಂಡಿಯಾ : ಸೆಪ್ಟಂಬರ್ 25, 2014ರಂದು ಆರಂಭಗೊಂಡ ಈ ಯೋಜನೆಯ ಉದ್ದೇಶ ದೇಶೀಯ ಕಂಪನಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳನ್ನು ಉತ್ತೇಜಿಸಿ ಹೆಚ್ಚೆಚ್ಚು ಉದ್ಯೋಗವನ್ನು ಸೃಷ್ಟಿ ಮಾಡುವುದು. ಮೇಕ್ ಇನ್ ಇಂಡಿಯಾ ಭಾರತದ ತಮ್ಮ ಉತ್ಪನ್ನಗಳನ್ನು ತಯಾರಿಸಲು ಕಂಪನಿಗಳು ಪ್ರೋತ್ಸಾಹಿಸಲು ಭಾರತ ಸರ್ಕಾರ ಚಾಲನೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.