ಕೂಡಿಯಾಟ್ಟಮ್ ಅಥವಾ ಕೂಟಿಯಾಟ್ಟಂ ಎಂದು ಕರೆಯಲ್ಪಡುವ ಕೇರಳದ ಒಂದು ಪಾರಂಪರಿಕ ಕಲಾ ಶೈಲಿಯು ಪುರಾತನ ಸಂಸ್ಕೃತ ನಾಟಕ ಮತ್ತು ಕೂತ್ತು ಎಂಬ ತಮಿಳು ಕಲೆಯ ಸಂಯೋಜಿತ ರೂಪವಾಗಿದೆ. ಈ ಕಲೆಯು ಸಾಂಪ್ರದಾಯಕವಾಗಿ ಕೇರಳದ ದೇವಾಲಯದ ಕೊತ್ತಮ್ಬಅಲಮ್ ಎಂಬ ರಂಗಭೂಮಿಯಲ್ಲಿ ಪ್ರದರ್ಶಿಸಲ್ಪಡುತ್ತಿತ್ತು .
ಪ್ರಾಚೀನ ಸಂಸ್ಕೃತ ಕಲಾಕ್ಷೇತ್ರದ ಏಕೈಕ ಕೊಂಡಿಯಾಗಿ ಕೂಡಿಯಾಟ್ಟಮ್ ಈಗ ಉಳಿದುಕೊಂಡಿದೆ. ಸಾವಿರಾರು ವರ್ಷಗಳಿಂದ ಕೇರಳದಲ್ಲಿ ನಡೆದುಕೊಂಡು ಬಂದಿರುವ ಈ ಕಲೆಯು ಸಂಸ್ಕೃತ ನಾಟಕಗಳ ನೃತ್ಯ ರೂಪಗಳಾಗಿವೆ. ಕೂಡಿಯಾಟ್ಟಮ್ ಹಾಗೂ ಚೆಕ್ಕಾರ್ ಕೊಟ್ಟು ಪಲ್ಲವ, ಚೇರ, ಚೋಳರ ಕಾಲದಿಂದಲೂ ದಕ್ಷಿಣ ಭಾರತದಲ್ಲಿ ನೆಲೆಗೊಂಡಿರುವ ಕಲೆಯಾಗಿದೆ. ನಾಟ್ಯಗಳ ನಾಟಕ ರೂಪವಾದ ಕೊಟ್ಟು ಒಂದು ಹಿಂದೂ ಆರಾಧನಾ ಕಲಾ ಪ್ರಕಾರವಾಗಿದೆ. ಈ ಕಲಾ ಪ್ರಕಾರವು ತಂಜಾವೂರ್, ಊಮಂಪುಯೂರ್, ತಿರುವಾರೂರ್, ವೇದಾರಣ್ಯಂ ದೇವಾಲಯಗಳಲ್ಲಿ ಕಾಣಸಿಗುತ್ತದೆ. ಈ ಕಲೆಯು ದೇವರ ಪೂಜೆಯ ಒಂದು ಭಾಗವಾಗಿದೆ. ತಮಿಳನ್ನು ಹೊರತುಪಡಿಸಿ ಸಂಸ್ಕೃತ , ಪಾಲಿ, ಪ್ರಾಕೃತ್ ಭಾಷೆಯಲ್ಲಿ ನಡೆಯುವ ಕೂತ್ತ್ ನಾಟ್ಯವನ್ನು ಆರಿಯಮ್ ಎಂದು ಕರೆಯಲಾಗುತ್ತದೆ.
ಪಲ್ಲವರ ರಾಜ ‘ರಾಜಸಿಂಹ ‘, ಶಿವನ ಕೋಪಕ್ಕೊಳಗಾಗಿ ಶಿಕ್ಷಿಸಲ್ಪಟ್ಟ ರಾವಣನ ಕಥೆಯನ್ನು ಒಳಗೊಂಡ “ಕೈಲಾಸಾಧ್ಹರಣಂ“ ಹಾಗೂ ಈ ಕೃತಿಯನ್ನು ಬರ್ಮಾ ದೇಶದಲ್ಲಿದ್ದ ಒಂದು ಶಿವ ದೇವಾಲಯದಲ್ಲಿ ಪ್ರದರ್ಶಿಸಲಾಗುತ್ತಿತ್ತು. ನಂಬಿಕೆಗಳ ಪ್ರಕಾರ ಚೇರ ರಾಜ ‘ ಕುಲಶೇಖರ ವರ್ಮನ್ ಚೇರಮಾನ್ ಪೆರುಮಾಳ್ ‘ ಮಹೋದಯಪುರಂ ( ಇಂದಿನ ಕೊಡುಂಗಲ್ಲೂರ್ ) ಆಳುತ್ತಿದ್ದ ಸಮಯದಲ್ಲಿ ಕೂಡಿಯಾಟ್ಟಮ್ ಕಲೆಗೆ ಹೊಸ ರೂಪು ನೀಡಿ, ವಿದೂಷಕ ಎಂಬ ಸ್ಥಳೀಯ ಸ್ಪರ್ಶವಿರುವ ಪಾತ್ರವನ್ನು ಸೃಷ್ಟಿಸಿದನು. ಕಲೆಯನ್ನು ಪ್ರೋತ್ಸಹಿಸುತ್ತಿದ್ದ ರಾಜನು ಸ್ವತಃ ‘ ಸುಭದ್ರಾ ಹರಣಂ‘ ಮತ್ತು ‘ತಾಪತಿಸಂವರಣ‘ ಎಂಬ ಎರಡು ನಾಟಕಗಳನ್ನು ರಚಿಸಿದನು. ಅಷ್ಟೇ ಅಲ್ಲದೆ ತನ್ನ ಬ್ರಾಹ್ಮಣ ಮಿತ್ರನಾದ ತೋಲಾಂ ಎಂಬುವವನ ಸಹಾಯದಿಂದ ವೇದಿಕೆಯ ಮೇಲೆ ಅದರ ಪ್ರದರ್ಶನವನ್ನೂ ಏರ್ಪಡಿಸಿದ. ಈ ಎರಡು ನಾಟಕಗಳು ಇಂದಿಗೂ ಪ್ರದರ್ಶಿಸಲ್ಪಡುತ್ತಿವೆ. ಶಕ್ತಿ ಭದ್ರನ “ಆಶ್ಚರ್ಯಚೂಡಾಮಣಿ“, ನೀಲಕಾಂತನ “ಕಲ್ಯಾಣ ಸುಗಂಧಿ“, ಹರ್ಷನ “ನಾಗನಂಧ“ ಮತ್ತು ಬಾಣ ಭಟ್ಟನ ಹಲವಾರು ಕೃತಿಗಳು ಇಂದಿಗೂ ಪ್ರದರ್ಶಿಸಲ್ಪಡುತ್ತಿವೆ. ಕಲೆಯನ್ನು ಪ್ರೋತ್ಸಹಿಸಲು ರಾಜರು ದೇವಾಲಯಗಳನ್ನು ನಿರ್ಮಿಸುವಾಗ ವಿಶೇಷವಾಗಿ ಕೊತ್ತಂಬಲಂ ಎಂಬ ದೇವಾಲಯಗಳನ್ನೂ ನಿರ್ಮಿಸುತ್ತಿದ್ದರು. ಈ ದೇವಾಲಯಗಳಲ್ಲಿ ಕಲೆಗಳು ವಿಶೇಷವಾಗಿ ಪ್ರದರ್ಶಿಸಲ್ಪಡುತ್ತಿತ್ತು.
ಈ ಕಲಾ ಪ್ರಕಾರಕ್ಕೆ ವಿಶೇಷವಾದ ಮೀಜವು, ಕುಜಿತ್ತಾಳಂ, ಇಡಕ್ಕ, ಕುರುಮ್ಕುಜಲ್ ಮತ್ತು ಸಂಖ ಪಕ್ಕ ವಾದ್ಯಗಳು ಉಪಯೋಗಿಸಲ್ಪಡುತ್ತವೆ. ಮಿಜಾವು ಎಂಬ ( ಘಟ ದ ರೀತಿಯ ವಾದ್ಯ) ವಾದ್ಯವು ವಿಶೇಷವಾಗಿದ್ಧು ಈ ವಾದ್ಯವನ್ನು ಕೂಡಿಯಾಟ್ಟಮ್ ನೊಂದಿಗೆ ಅಲ್ಲದೆ ಬೇರೆ ಸಮಯ ದಲ್ಲಿ ನಡೆಸುವಂತಿಲ್ಲ !!!! ಪರಂಪರೆಯ ಅನುಸಾರವಾಗಿ ಈ ವಾದ್ಯವನ್ನು ನಾಯರ್ ಪಂಗಡದ ಜನರು ಮಾತ್ರವೇ ನುಡಿಸಬಹುದು. ಪಾರಂಪರಿಕವಾಗಿ ಕೂಡಿಯಾಟ್ಟಮ್ ಛಕ್ಸಾರ್ ಮತ್ತು ನಂಗ್ಯಾರಮ್ಮ ಎಂಬ ಎರಡು ಹಿಂದೂ ಪಂಗಡಗಳಿಂದ ಮಾತ್ರವೇ ನಡೆಸಲ್ಪಡುತ್ತದೆ. ಮಿಜಾವು ಎಂಬ ಪಕ್ಕವಾದ್ಯದ ತಾಳಕ್ಕೆ ತಕ್ಕಂತೆ ವೇದಿಕೆಯಲ್ಲಿರುವ ನಾಟ್ಯಗಾರರು ಜೊತೆಗೂಡಿ ನೃತ್ಯ ಪ್ರದರ್ಶಿಸುವುದರಿಂದ ಈ ಕಲೆಗೆ ಕೂಡಿಯಾಟ್ಟಮ್ ಎಂಬ ಹೆಸರು ಬಂದಿರಬಹುದೆನ್ನಲಾಗಿದ್ದರೂ, ಸಂಸ್ಕೃತದಲ್ಲಿ ಏಕವ್ಯಕ್ತಿ ನಾಟಕಗಳ ಪ್ರದರ್ಶನದಲ್ಲಿ ದೀರ್ಘ ನಾಟಕಗಳಲ್ಲಿ ಕೆಲವು ರಾತ್ರೆಗಳು ಕಳೆದ ಬಳಿಕ ಬೇರೆ ವ್ಯಕ್ತಿಗಳು ವೇದಿಕೆಯ ಮೇಲೇರಿ ಜೊತೆಗೂಡಿ ನಟಿಸುವ ಕ್ರಮಗಳಿಂದಲೂ ಕೂಡಿಯಾಟ್ಟಮ್ ಹೆಸರು ಬಂದಿರಬಹುದು.
ಈ ನಾಟ್ಯಪ್ರಕಾರದಲ್ಲಿ ಪುರುಷ ಪಾತ್ರವನ್ನು ಛಕ್ಸಾರ್ ಪಂಗಡದ ಪುರುಷರು ನಟಿಸಿದರೂ ಅದೇ ಪಂಗಡದ ಸ್ತ್ರೀಯರು ಇಲ್ಲಿ ಸ್ತ್ರೀ ವೇಷ ಮಾಡುವಂತಿಲ್ಲ. ಸ್ತ್ರೀ ವೇಷವನ್ನು ನಂಗ್ಯಾಲಮ್ಮ ಪಂಗಡದ ಸ್ತ್ರೀಯರೇ ನಟಿಸುವ ಪದ್ಧತಿ ಇದೆ. ಸಾಧಾರಣವಾಗಿ 12 ರಿಂದ 150 ಗಂಟೆಗಳಷ್ಟು ಕಾಲ ಸುಧೀರ್ಘವಿರುವ ಈ ನಾಟ್ಯವು ಹಲವು ರಾತ್ರೆಗಳಿಗೆ ವಿಸ್ತರಿಸಲ್ಪಡುತ್ತದೆ. ಈ ನೃತ್ಯ ಪ್ರಕಾರವು 3 ವಿಭಾಗಗಳನ್ನು ಹೊಂದಿದ್ದು ಪುರಪ್ಪಾಡು ಅದರಲ್ಲಿ ಪ್ರಥಮವಾಗಿದೆ. ಈ ವಿಭಾಗದಲ್ಲಿ ಕಲಾವಿದ ನೃತ್ಯದ ಭಂಗಿಗಳೊಂದಿಗೆ ನರ್ತಿಸುತ್ತಾನೆ. ಎರಡನೇಯದು ನಿರ್ವಹಣಮ್, ಇದರಲ್ಲಿ ಅಭಿನಯವು ಮುಖ್ಯವಾಗಿದ್ದು ಕಥೆಯ ಮುಖ್ಯ ಪಾತ್ರದ ಭಾವಲೋಕ್ಕಕ್ಕೆ ಪ್ರೇಕ್ಷಕರನ್ನು ಕರೆದೊಯ್ಯಲಾಗುತ್ತದೆ. ಈ ಘಟ್ಟದಿಂದ ನಿಜವಾದ ನಾಟ್ಯವು ಪ್ರಾರಂಭವಾಗುತದೆ. ಕೊನೆಯೇ ಭಾಗವೇ ಕೂಡಿಯಾಟ್ಟಮ್. ಮೊದಲೆರಡು ಭಾಗಗಳಲ್ಲಿ ಒಬ್ಬನೇ ಕಲಾವಿದನು ಏಕವ್ಯಕ್ತಿ ಪ್ರದರ್ಶನವನ್ನು ನೀಡುತ್ತಿದ್ದರೆ ಕೊನೆಯ ಭಾಗದಲ್ಲಿ ಕಥೆಯ ಎಲ್ಲ ಪಾತ್ರಗಳು ಸಂದರ್ಭಕ್ಕೆ ತಕ್ಕಂತೆ ವೇದಿಕೆಯ ಮೇಲೇರಿ ಪ್ರದರ್ಶನವನ್ನು ನೀಡುತ್ತಾರೆ.
1950 ನೇ ಇಸವಿಯ ವರೆಗೂ ಈ ಕಲೆಯನ್ನು ಛಕ್ಯಾರ್ ಪಂಗಡದ ಹಿರಿಯರು ಕಿರಿಯರಿಗೆ ಕಲಿಸುವ ಪರಂಪರೆಯನ್ನು ಹೊಂದಿತ್ತು. 1955 ರಲ್ಲಿ ಗುರು ಮಣಿ ಮಾಧವ ಛಕ್ಯಾರ್ ಮೊತ್ತ ಮೊದಲ ಬಾರಿಗೆ ದೇವಾಲಯದ ಹೊರಗೆ ಕಲೆಯನ್ನು ಪ್ರದರ್ಶಿಸಿದರು. 1960 ನೇ ಇಸವಿಯಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪೋಲಿಷ್ ವಿದ್ಯಾರ್ಥಿಯೊಬ್ಬ ಮಣಿ ಮಾಧವ ಗುರುಗಳ ಮನೆಯಲ್ಲಿ ಗುರುಕುಲ ಮಾದರಿಯಲ್ಲಿ ಈ ಕಲೆಯನ್ನು ಕಲಿತ ಪ್ರಥಮ ಹೊರ ಪಂಗಡದ ವಿದ್ಯಾರ್ಥಿಯಾದನು.
ಕೂಡಿಯಾಟ್ಟಮ್ ಕೇವಲ ಹಿಂದುಗಳಿಂದ ಹಿಂದೂಗಳಿಗಾಗಿ ದೇವಾಲಯಗಳಲ್ಲಿ ಕೊತ್ತಮ್ಬಅಲಮ್ ಎಂಬ ವಿಶೇಷ ಸಂಧರ್ಭಗಳಲ್ಲಿ ಮಾತ್ರ ಪ್ರದರ್ಶಿಸಲ್ಪಡುವ ಕಲೆಯಾಗಿದೆ. 19 ನೇ ಶತಮಾನದಲ್ಲಿ ಬೀಸಿದ ಬದಲಾವಣೆಯ ಗಾಳಿಯಿಂದ ದೇವಾಲಯಗಳಿಗೆ ಬರುವ ಆದಾಯಗಳು ಕಡಿಮೆಯಾಗಿ ಈ ಕಲಾವಿದರಿಗೆ ಆದಾಯವಿಲ್ಲದೆ ಆರ್ಥಿಕ ಸಂಕಷ್ಟವೆದುರಾಯಿತು. 40 ದಿನಗಳುದ್ದಕ್ಕೂ ನಡೆಯುವ ದೀರ್ಘ ಕಲೆಯಾದುದರಿಂದ ನೋಡಲು ಬರುವ ಕಲಾಸಕ್ತರ ಸಂಖ್ಯೆಯೂ ಕಡಿಮೆಯಾಯಿತು. 20 ನೇ ಶತಮಾನದಲ್ಲಿ ಯುನೆಸ್ಕೋ ಇದನ್ನು ಗುರುತಿಸಿ ಕೂಡಿಯಾಟ್ಟಮ್ ಗುರುಕುಲಗಳನ್ನು ಬೆಳೆಸುವ ಕೆಲಸವನ್ನು ನಡೆಸುತ್ತಿದೆ. ಕೇರಳ ಸರ್ಕಾರವೂ ಕೂಡ ತಿರುವನಂತಪುರಂ ಮತ್ತು ನೇಪಥ್ಯ ಸಂಸ್ಥೆಗಳ ಮೂಲಕ ಈ ಕಲೆಯನ್ನು ಜೀವಂತವಾಗಿಡಲು ಶ್ರಮಿಸುತ್ತಿದೆ.
ಹಿಂದೂ ಧರ್ಮದ ಅಪೂರ್ವ ಕಲೆಯೊಂದನ್ನು ನೇಪಥ್ಯಕ್ಕೆ ಸರಿಯದಂತೆ ಕಾಪಾಡುವ ಹೊಣೆ ಎಲ್ಲರ ಮೇಲೂ ಇದೆ.
✍️ ದೀಪಾ ಜಿ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.