“ಸರಕಾರಕ್ಕೆ ನೀನೊಂದು ಸಂಖ್ಯೆ ಆದರೆ ನಿನ್ನ ಕುಟುಂಬಕ್ಕೆ ನೀನೇ ಪ್ರಪಂಚ ” ಇದನ್ನು ಬಹುಷಃ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಓದಿರಬಹುದು. ನಾನು ಕೂಡಾ ಓದಿದ್ದೆ. ಸ್ವಲ್ಪ ಅನಾರೋಗ್ಯದ ಅಥವಾ ಕಡಿಮೆ ಆರೋಗ್ಯದ ಹಿನ್ನಲೆ ಇರುವ ನಾನು ಕೊರೋನಾದ ಬಗ್ಗೆ ಭಯವನ್ನೂ, ಜಾಗ್ರತೆಯನ್ನೂ ಹೊಂದಿದ್ದೆ. ಮಾಸ್ಕ್ ಧರಿಸುವುದು, ಅಂತರ ಪಾಲನೆ, ಖರೀದಿ ಮಾಡಿದ ಸಾಮಾಗ್ರಿಗಳನ್ನು ತೊಳೆಯುವುದು ಸೇರಿದಂತೆ ಕೊರೋನಾದ ವಿರುದ್ಧ ಹೋರಾಟವನ್ನು ನಾನು ಕಳೆದ ಒಂದು ವರ್ಷದಿಂದಲೂ ಜಾರಿಯಲ್ಲಿ ಇರಿಸಿದ್ದೆ. ಅಲ್ಯಾರಿಗೋ ಕೊರೊನ ಎಂಬುದಾಗಿ ಓದಿಯೇ ಭಯ ಬೀಳುತ್ತಿದ್ದ ನನಗೆ, ನನ್ನ ಆಪ್ತ ಸ್ನೇಹಿತರ ಪಟ್ಟಿಯಲ್ಲಿ ಇಬ್ಬರು ಕೊರೋನಾ ಸೊಂಕಿತರಾದ ವಿಚಾರ ತಿಳಿದಾಗ ಹೆಚ್ಚು ಭಯವಾಗಿತ್ತು. ಆದರೆ ಅವರ ಎರಡೂ ಕುಟುಂಬಗಳೂ ಹೆಚ್ಚಿನ ತೊಂದರೆ ಇಲ್ಲದೇ, ಸುಸ್ತು, ಜ್ವರ ಬಳಲಿಕೆ ಹೀಗೆ ಪ್ರಥಮ ಸುತ್ತಿನ ತೊಂದರೆಗಳನ್ನು ಅನುಭವಿಸಿ ಕೊರೊನ ಮುಕ್ತಾರಾದಾಗ ನೂರಾರು ಕಿಲೋಮೀಟರ್ ದೂರದಲ್ಲಿದ್ದ ನನಗೆ ಬಿಡುಗಡೆಯ ನಿಟ್ಟುಸಿರು ಬಂದಿತ್ತು.
ಆದರೆ ನಿಟ್ಟುಸಿರು ಕೆಲವೇ ದಿನಗಳಲ್ಲಿ ಮಾಯವಾಗಿತ್ತು. ಮೊದಲನೇಯದಾಗಿ ನನ್ನ ಭಾವ ಮತ್ತು ಅಕ್ಕ ಜ್ವರದಿಂದ ಬಾಧಿತರಾದರೆ, ಕೆಲವೇ ದಿನದಲ್ಲಿ ನಾನು ಮತ್ತು ನನ್ನ ಪತಿ ಕೂಡಾ ಜ್ವರಕ್ಕೆ ಬಳಲಿದೆವು. ಜ್ವರ, ಬಳಲಿಕೆ, ರುಚಿ ಮತ್ತು ವಾಸನೆ ಅರಿವಾಗದಿರುವುದು. ವೈದ್ಯರಲ್ಲಿ ಹೋಗುವುದು ಹೇಗೆ?? ಸಂಪೂರ್ಣ ಬೆಂಗಳೂರು ಕೊರೋನಾದ ತೆಕ್ಕೆಗೆ ಬಿದ್ದಾಗಿದೆ. ವೈದ್ಯನಾದ ನನ್ನ ಸ್ನೇಹಿತ ” ಇದು ಖಂಡಿತವಾಗಿಯೂ ಕೋವಿಡ್ 19 ಸಂಬಂಧ ಜ್ವರ, RTPCR ಪರೀಕ್ಷೆ ನಡೆಸಿ ಫಲಿತಾಂಶ ಬರುವ ವರೆಗೂ ಕಾಯಬೇಡ, ಈ ಮಾತ್ರೆಗಳನ್ನು ತೆಗೆದುಕೊಂಡು ಮನೆಯಲ್ಲೇ ಕ್ವಾರಂಟೈನ್ ಆಗಿ ” ಎಂದು ಸಲಹೆ ನೀಡಿದ. ಅವನ ಸಲಹೆಯಂತೆ ಮನೆಗೇ ಔಷಧಗಳನ್ನು ತರಿಸಿ ಸೇವಿಸಲು ಪ್ರಾರಂಭಿಸಿ ಮಾರನೇ ದಿನ RTPCR ಪರೀಕ್ಷೆ ನೀಡಿದೆವು. ಇತ್ತ ಇನ್ನೊಂದೆಡೆ ಭಾವ ಮತ್ತು ಅಕ್ಕನಿಗೆ ಬಳಲಿಕೆ ಅತಿಯಾಗಿ, ಮತ್ತು ರಕ್ತದಲ್ಲಿ ಆಮ್ಲಜನಕದ ಸಾಂದ್ರತೆ ಕಡಿಮೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಾನು ನನ್ನ ಕುಟುಂಬ ವೈದ್ಯರ ಸಲಹೆಯಂತೆ ಆಯುರ್ವೇದ ಔಷಧವನ್ನು ಜ್ವರ ಪ್ರಾರಂಭವಾಗುವ ಮುನ್ನ, ಸಣ್ಣದಾದ ಗಂಟಲು ಕೆರೆತ ಪ್ರಾರಂಭವಾದ ತಕ್ಷಣವೇ ಪ್ರಾರಂಭಿಸಿದ್ದೆ.
ದಿನಗಳು ಉರುಳಿದರೂ,6 ಗಂಟೆಗಳಿಗೊಮ್ಮೆ ಜ್ವರದ ಮಾತ್ರೆ ಸೇವಿಸಿಯೂ ನನ್ನ ಪತಿಯ ಜ್ವರ 102 ಡಿಗ್ರಿಯ ಆಸುಪಾಸಿನಲ್ಲೇ ಇತ್ತು. ತಣ್ಣೀರಿನ ಪಟ್ಟಿ swalpa ಪ್ರಯೋಜನ ನೀಡಿತ್ತೆ ಹೊರತು 100 ಡಿಗ್ರಿಗಿಂತ ಕಡಿಮೆಯಾಗಲಿಲ್ಲ. ಇವೆಲ್ಲದರ ಮಧ್ಯೆ ನಮ್ಮ ನಾಲ್ಕೂ ಜನರ ಸಿ ಟಿ ಸ್ಕ್ಯಾನಿಂಗ್ ಮಾಡಲಾಗಿ ಅದರಲ್ಲಿ, ನಾನು ಕಡಿಮೆ ಸೊಂಕಿತಳಾಗಿರುವುದು ಕಂಡು ಬಂದರೆ ಮತ್ತೆ ಮೂರೂ ಜನರೂ ಹೆಚ್ಚಾಗಿ ಸೋಂಕಿತರಾಗಿರುವುದು ಕಂಡು ಬಂದಿತ್ತು. ನನ್ನ ಭಾವ ಮತ್ತು ಅಕ್ಕ ದಾಖಲಾದ ಆಸ್ಪತ್ರೆಯಲ್ಲೇ ಹಾಸಿಗೆಗೆ ವ್ಯವಸ್ಥೆಯನ್ನೂ ಮಾಡಿ ನನ್ನ ಪತಿಯನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು. ಆದಾಗ ಬೆಂಗಳೂರು ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯನ್ನು ಕಾಣುತ್ತಿತ್ತು.
ಇವೆಲ್ಲದರ ಮಧ್ಯ ಆಸ್ಪತ್ರೆಯಲ್ಲಿ ದಾಖಲಾಗಲು ಸರಕಾರದಿಂದ ಲಭಿಸುವ ಸೊಂಕಿತರ ಸಂಖ್ಯೆ ಅತ್ಯಾವಶ್ಯ. ಆದರೆ ಪರೀಕ್ಷೆ ನಡೆಸಿದ 4 ದಿನಗಳಲ್ಲಿ ನಮ್ಮ ಪರೀಕ್ಷೆಯ ಫಲಿತಾಂಶ ಬಂದಿರಲಿಲ್ಲ. ಕೊನೆಗೂ ಫಲಿತಾಂಶ ಬಂದು ಆಸ್ಪತ್ರೆಯಲ್ಲಿ ಹಾಸಿಗೆ ದೊರಕಿದಾಗ ಒಂದು ಕ್ಷಣ “ಅಬ್ಬಾ” ಅನ್ನಿಸಿತ್ತು. ಆದರೆ ಕೊರೋನಾದೊಂದಿಗಿನ ನಿಜವಾದ ಹೋರಾಟ ಪ್ರಾರಂಭವಾಗುವುದೇ ಇಲ್ಲಿಂದ. ಆಸ್ಪತ್ರೆಯಲ್ಲಿ ಚಿಕಿತ್ಸೆಯ ಭಾಗವಾಗಿ ನೀಡಲಾಗುವ ಸ್ಟಿರೋಡ್ಸ್, ಮತ್ತು ಇತರ ಔಷಧಗಳ ಪರಿಣಾಮವಾಗಿ ಆಸ್ಪತ್ರೆ ಸೇರಿದ್ದ ಮೂವರಿಗೂ ಅತೀವ ನಿದ್ರೆ. ಉಳಿದ ಸಮಯದಲ್ಲಿ ಶಾಖ ತೆಗೆದುಕೊಳ್ಳುವ ಪ್ರಕ್ರಿಯೆ, ಮತ್ತು ಮಾತನಾಡಲೂ ಸಾಧ್ಯವಾಗದ ಆಯಾಸ. ಆದ್ದರಿಂದ ವಿಡಿಯೋ ಕಾಲ್ ಅಂತೂ ದೂರದ ಮಾತು ಸಾಮಾನ್ಯ ಫೋನ್ ಕರೆಯೂ ಸಾಧ್ಯವಾಗದ ಪರಿಸ್ಥಿತಿ. ಅತ್ತ ಆಸ್ಪತ್ರೆಯಲ್ಲಿ ಏನಾಗುತ್ತಿದೆ ಎಂದು ಅರಿಯದ ಪರಿಸ್ಥಿತಿ ಇರುವಾಗ, ಟಿವಿ ಹಾಕಿದರೆ ಭಯಾನಕ ಕೋವಿಡ್ ವಾರ್ತೆಗಳು. ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಭಯಾನಕ ಮತ್ತು ಕರುಣಾಜನಕ ವಾರ್ತೆಗಳು. ಮಾತ್ರವಲ್ಲ ಅಂತಹುದೇ ವಿಡಿಯೋಗಳು ಸಾಲದ್ದಕ್ಕೆ ದಿನದಲ್ಲಿ 15 ಬಾರಿ ಆಂಬುಲೆನ್ಸ್ ಸದ್ದು.
ಇವೆಲ್ಲದರ ಮಧ್ಯೆ ನನ್ನ ಭಾವನನ್ನು ಕಾರಣತರಗಳಿಂದ ಬೇರೊಂದು ಆಸ್ಪತ್ರೆಗೆ ದಾಖಲಿಸಲಾಯಿತು. ಅಕ್ಕನ ಆರೋಗ್ಯವು ಸುಧಾರಣೆ ಹೊಂದಿ ಅವರು ಮನೆಗೆ ಹಿಂದಿರುಗಿದರು. ಮೊದಲು ಮೂವರೂ ಒಂದೆಡೆ ಇದ್ದಾರೆ ಎಂಬ ಸಣ್ಣದೊಂದು ಸಮಾಧಾನ ಮನದಲ್ಲಿತ್ತು. ಈಗ ಪರಿಸ್ಥಿತಿ ಭಿನ್ನಾವಾಗಿತ್ತು. ಮನೆಯಲ್ಲಿ ಕೊರೊನ ಸೊಂಕಿತಾರಾದ ಅತ್ತೆ ಮಾವ ಮತ್ತು ನಾನು, ಭಾವನ ಪುಟ್ಟ ಮಗು. ಹೇಗೂ 10 ದಿನಗಳ ಬಳಿಕ ಅಕ್ಕ ಗುಣಮುಖರಾಗಿ ಮನೆಗೆ ಹಿಂದಿರುಗಿದರೆ ಮತ್ತೆರಡು ದಿನಗಳಲ್ಲಿ ಪತಿ ಮತ್ತು ಭಾವ ಕೂಡಾ ಹಿಂತಿರುಗಿದರು. ಅಲ್ಲಿಗೆ ಒಂದು ಹಂತ ಮುಗಿದ ನಿಟ್ಟುಸಿರು. ಇವೆಲ್ಲದರ ನಡುವೆ ನನ್ನ ಪತಿ ದಾಖಲಾಗಿದ್ದ ಆಸ್ಪತ್ರೆಯ ವೈದ್ಯರು ಮತ್ತವರ ಮಗಳೂ ಕೊರೋನಾ ಸೊಂಕಿತಾರಾಗಿದ್ದರು. ಆ ಸಂದರ್ಭದಲ್ಲಿ ಬೇರೆ ಆಸ್ಪತ್ರೆಯಲ್ಲಿ ಪತಿಯನ್ನು ದಾಖಲಿಸಲು ಹಾಸಿಗೆಗಾಗಿ ಬಹಳಷ್ಟು ಹುಡುಕಾಡಿದ್ದು ಸುಳ್ಳಲ್ ಲ.ನಾನು ಒಂದು ಕ್ಷಣ ಸ್ವಾರ್ಥಿಯಂತೆ ಆಲೋಚಿಸಿದ್ದೆ. ಯಾಕೆಂದರೆ ಅಲ್ಲಿ ಬೇರೆ ವೈದ್ಯರು ನೋಡಲು ಬರುತ್ತಿದ್ದರು, ಆದರೂ ನಾನು ಭಯಬಿದ್ದು ಬೇರೆ ಆಸ್ಪತ್ರೆಯ ಹಾಸಿಗೆಗಾಗಿ ಹುಡುಕಾದಿದ್ದೆ. ಬಳಿಕ ಅರೆಕ್ಷಣ ಆಲೋಚಿಸಿದಾಗ ಆ ಹಾಸಿಗೆ ಬೇರೆ ಅನಿವಾರ್ಯ ವಿರುವ ರೋಗಿಗೆ ಲಭ್ಯವಾಗಬಹುದಲ್ಲ ಎಂದು ಅರಿವು ಮೂಡಿ ನನ್ನ ಕುರಿತಾಗಿಯೇ ನನಗೆ ನಾಚಿಗೆಯಾಗಿತ್ತು.
ಆಸ್ಪತ್ರೆಯಿಂದ ಬಿಡುಗಡೆಗೊಂದು ಮನೆಗೆ ಬಂದ ಭಾವ ಮತ್ತು ಪತಿ ಹೇಳುತ್ತಿದ್ದ ಘಟನೆಗಳು ನಿಜವಾಗಿಯೂ ಭಯವನ್ನು ಹುಟ್ಟಿಸುವಂತಿತ್ತು. ಅನೇಕ ವೈದ್ಯರು ಸಂಜೆ 5 ಗಂಟೆಯವರೆಗೂ ಊಟ ಮಾಡದೇ ಆಹಾರವನ್ನು ಸೇವಿಸದೇ ರೋಗಿಗಳ ಸೇವೆಯಲ್ಲಿ ನಿರತರಾಗಿರುತ್ತಿದ್ದರು. ಮಧ್ಯಾರಾತ್ರಿ 3 ಗಂಟೆಯ ಸಮಯದಲ್ಲೂ ರೋಗಿಗಳಿಗಾಗಿ ಹಾಜರಾಗುತ್ತಿದ್ದರು. ಸ್ವತಃ ಕೋವಿಡ್ ಸೋಂಕು ತಗಲಿದ್ದಾರೂ ನನ್ನ ಪತಿಯಿದ್ದ ಆಸ್ಪತ್ರೆಯ ವೈದ್ಯರು, ಫೋನ್ ಮೂಲಕ ಮಾತನಾಡುತ್ತಾ ಸಂಪರ್ಕದಲ್ಲಿದ್ದರು. ನನ್ನ ಭಾವನ ಕಣ್ಣೆದುರೇ ಒಂದಿಬ್ಬರು ಆಮ್ಲಜನಕದ ಕೊರತೆಯಿಂದ ತೀರಿಹೋಗಿದ್ದರು. ವೈದ್ಯರೆಲ್ಲರನ್ನೂ ವ್ಯವಸ್ಥೆಯನ್ನೂ ದೂರುವ ಮೊದಲು ನಾವು ಅವರನ್ನೂ ನಮ್ಮಂತಯೇ ಮನುಷ್ಯರು ಎಂಬುದಾಗಿ ಆಲೋಚಿಸಬೇಕು. ಮಾಸ್ಕ್ ಧರಿಸಿದರೆ ಸೆಖೆ ಎಂದು ತಿರುಗಾಡುವ ನಾವು ಗಂಟೆಗಟ್ಟಲೆ PPE ಕಿಟ್ ಧರಿಸಿ ಸೋಂಕಿತರ ಆರೈಕೆಗೆ ನಿಲ್ಲುವ ವೈದ್ಯರ ಮತ್ತು ದಾದಿಯರ ಕಷ್ಟವನ್ನು ಮರೆಯುತ್ತೇವೆ.
ನೆನಪಿರಲಿ, ಯಾವುದೇ ವ್ಯವಸ್ಥೆಯು ತನ್ನ ಎಲ್ಲಾ ಪ್ರಜೆಗಳು ಅನಾರೋಗ್ಯ ಪೀಡಿತರಾದಾಗ ಲಭ್ಯವಿರಬೇಕಾದಷ್ಟು ಆಸ್ಪತ್ರೆ ಬೆಡ್ ಗಳನ್ನು, ICU ಗಳನ್ನು ಹೊಂದುವುದು ಸಾಧ್ಯವಿಲ್ಲ. ರಿಮಿಡಿಸಿವೆರ್ ಎಂಬ ಔಷಧಿ ಅಲಭ್ಯವಾಗಲೂ ಸ್ವಾರ್ಥಿ ಪ್ರಜೆಗಳ ಜವಾಬ್ದಾರಿ ಕೂಡಾ ಇದೆ. ಕೋವಿಡ್ ಪರೀಕ್ಷೆಯಲ್ಲಿ ಸೋಂಕು ಕಂಡು ಬಂದ ತಕ್ಷಣ ಎಲ್ಲರಿಗೂ ರಿಮಿಡಿಸಿವೆರ್ ಬೇಕಾಗುವುದಿಲ್ಲ. ಗಾಬರಿ ಬಿದ್ದು ಆಸ್ಪತ್ರೆಯ ಹಾಸಿಗೆ, ಔಷಧವನ್ನು ಸಂಗ್ರಹಿಸಿ ಇಡುವುದರಿಂದ ಅವಶ್ಯ ಇರುವ ಸಂದರ್ಭದಲ್ಲಿ ಔಷಧ ಕೊರತೆ ಉಂಟಾಗುತ್ತದೆ. ಇಂತಹಾ ಸಂಧರ್ಭದಲ್ಲಿ ಕೂಡಾ ಹಣದ ಕುರಿತಾಗಿ ಆಲೋಚಿಸುವವರನ್ನು ಏನೇನ್ನಬೇಕೋ ನನಗೆ ತಿಳಿಯುತ್ತಿಲ್ಲ. ಕೊರೋನಾ ಬಂದ ತಕ್ಷಣ ಗಾಬರಿಯಾಗಬೇಕಾದ ಅವಶ್ಯಕತೆ ಇಲ್ಲ. ಬಹಳಷ್ಟು ಜನರಿಗೆ ಮನೆಯಲ್ಲಿ ಔಷಧವನ್ನು ಸೇವಿಸುವುದರಿಂದಲೇ ಗುಣವಾಗುವುದು ಸಾಧ್ಯವಿದೆ. ನನ್ನ ಅತ್ತೆ ಮತ್ತು ಮಾವ ಒಂದು ಡೋಸ್ ಲಸಿಕೆ ಪಡೆದ ಕಾರಣ ಅವರಿಗೆ ಸೋಂಕಿನ ಪ್ರಭಾವ ಅತ್ಯಂತ ಕಡಿಮೆಯಾಗಿತ್ತು. ನಾನು ಸೋಂಕಿನ ಪ್ರಥಮ ಹಂತದಲ್ಲೇ ಎಚ್ಚೆತ್ತು ಔಷಧಿಯನ್ನು ಸೇವಿಸಿದ ಕಾರಣ ನನಗೂ ಹೆಚ್ಚಿನ ತೊಂದರೆಗಳು ಕಾಣಿಸಲಿಲ್ಲ. ಕೊರೋನಾ ನನಗೆ ಬಾರದು ಎಂಬ ಧೈರ್ಯದಿಂದ ಜ್ವರ ಬಂದಾಗ ನಿರ್ಲಕ್ಷ ಮಾಡುವ ಬದಲಾಗಿ ಎಚ್ಚೆತ್ತು ಪರೀಕ್ಷೆಗೆ ಒಳಪಟ್ಟು ಔಷಧಿಯನ್ನು ಪಡೆದರೆ ಅತ್ಯುತ್ತಮ. ನಮ್ಮ ಆರೋಗ್ಯ ನಮ್ಮ ಕಯ್ಯಲ್ಲಿ ಎಂಬುದು ನೆನಪಿರಲಿ.
ನನ್ನ ಸಂಕಷ್ಟದ ಸಂದರ್ಭದಲ್ಲಿ ಅನೇಕರು ಮಾನಸಿಕ ಸ್ಥೈರ್ಯ ತುಂಬಿದ್ದಾರೆ. ಅನೇಕರು ಶಕ್ತಿ ಮೀರಿ ಸಹಾಯವನ್ನೂ ಮಾಡಿದ್ದಾರೆ. ಹಾಸಿಗೆಗಾಗಿ ಕರೆ ಮಾಡಿದ ತಕ್ಷಣ, ತಮ್ಮ ಕೆಲಸವನ್ನು ಬದಿಗಿರಿಸಿ ಸ್ಪಂದಿಸಿ, ಭಯಪಡಬೇಡಿ ನಾವಿದ್ದೇವೆ ಎಂದಿದ್ದಾರೆ. ನನ್ನ ಕೊರೋನಾದ ಪ್ರಥಮ ದಿನದಿಂದಲೋ, ನನ್ನ ಪತಿ ಆಸ್ಪತ್ರೆಯಿಂದ ಮನೆಗೆ ಹಿಂತಿರುಗುವ ವರೆಗೂ ಕ್ಷೇಮ ವಿಚಾರಿಸಿದ ಸಹೃದಯಿ ಮಿತ್ರರು ಮತ್ತು ಕುಟುಂಬಸ್ಥರು ಎಲ್ಲರೂ ನನ್ನ ಮನೋಬಲ ಹೆಚ್ಚಿಸಿದ್ದಾರೆ. ನಿಮ್ಮ ಹತ್ತಿರದಲ್ಲೂ ಸೊಂಕಿತರಿರಬಹುದು ಅವರಿಗೆ ನಿಮ್ಮ ಕೈಲಾದ ಸಹಾಯ ಮಾಡಿ, ದೂರವಿದ್ದರೆ ಅವರಿಗೆ ಧೈರ್ಯ ತುಂಬಿ.
ನೆನಪಿರಲಿ.. “ಕೊರೊನ ಎಲ್ಲರಿಗೂ ಒಂದು ಸಂಖ್ಯೆ, ಅನಂತರ ಹೆಸರು, ಆದರೆ ಯಾವಾಗ ಆ ಹೆಸರು ಮುಖವಾಗಿ ನಿಮ್ಮೆದುರು ನಿಲ್ಲುತ್ತದೋ ಆಗ ಪರಿಸ್ಥಿತಿಯ ಗಂಭೀರತೆ ಅರ್ಥವಾಗುವುದು.” ಹಣ, ಪ್ರಭಾವ ಮತ್ತು ವಶೀಲಿ ಯಾವುದೂ ಈ ಸಂದರ್ಭದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ನಾನು ಆಯುರ್ವೇದ ಬಳಸಿ ಗುಣ ಹೊಂದಿದ್ದೇನೆ, ಏಕೆಂದರೆ ನನಗೆ ಅದರಲ್ಲಿ ನಂಬಿಕೆಯಿದೆ. ನಾನು ಯಾವ ವೈದ್ಯ ಪದ್ದತಿಯನ್ನೂ ಈ ಮೂಲಕ ಹೇರುತ್ತಿಲ್ಲ. ಆದರೆ ಲಕ್ಷಣಗಳು ಕಂಡು ಬಂದ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು, ಮತ್ತು ನಮ್ಮಿಂದ ಇತರರಿಗೆ ಹರಡದಂತೆ ಜಾಗ್ರತೆ ವಹಿಸುವುದು ಅತ್ಯಾವಶ್ಯ. ಇದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯೂ ಹೌದು.
✍️ ದೀಪಾ ಜಿ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.