ಶಂ ನೋ ವರುಣಃ – ವರುಣಾ, ದೇಶವನ್ನು ಸುಭೀಕ್ಷೆ ಮತ್ತು ಸಂಪತ್ಭರಿತವನ್ನಾಗಿಸು ಎಂಬುದು ಇದರ ಸಾರ. ಈ ಉಕ್ತಿ ಭಾರತೀಯ ನೌಕಾಪಡೆಯ ಉದಾತ್ತ ವಾಣಿ. ಜಂಬೂದ್ವೀಪವನ್ನು ಸುತ್ತುವರಿದ ಮೂರೆಡೆಯ ಸಮುದ್ರ ದೇಶದ ಸಾಗರೋತ್ತರ ವ್ಯಾಪಾರ, ವಹಿವಾಟು ಸಹಿತ ಅಭಿವೃದ್ಧಿಗೆ ಪ್ರಕೃತಿಯೇ ನೀಡಿದ ವರದಾನವಾಗಿದೆ. ಶತಮಾನಗಳಿಂದ ಭಾರತೀಯರು ಸಮುದ್ರಯಾನಕ್ಕೆ ಹೆಸರುವಾಸಿ.
ದೇಶದೊಳಗಿನ ಕೃಷಿ ಭೂಮಿ ವರುಣನ ಕೃಪೆಯ ಮೂಲಕ ಮಳೆಯಾಗಿ ಇಳೆ ಸುಪೋಷಣೆಗೊಂಡು ಸಮೃದ್ಧ ಬೆಳೆಗೆ ಕಾರಣವಾದರೆ, ಆತನ ಕೃಪೆಯಿಂದ ಸಮೃದ್ಧಗೊಂಡ ಸಾಗರ ಸಮುದ್ರಗಳು ಮತ್ಸ್ಯ ಸಮೃದ್ಧಿಗೂ ಕಾರಣ. ಹಿಂದೂಮಹಾಸಾಗರ ಸಹಿತ ಅರಬ್ಬಿ ಕಡಲಿನಲ್ಲಿ ಪಾರಮ್ಯ ಸಾಧಿಸಿದ ಭಾರತೀಯ ನೌಕಾಪಡೆ ದೇಶ ರಕ್ಷಣೆಯ ಹೊಣೆ ಹೊತ್ತಿದೆ. ಇದರ ಜೊತೆಯಲ್ಲಿ ವರ್ತಮಾನದಲ್ಲಿ ದೇಶವನ್ನು ಕಾಡುತ್ತಿರುವ ಸಾಂಕ್ರಾಮಿಕದಿಂದ ಪಾರು ಮಾಡುವ ಗುರುತರ ಹೊಣೆಗಾರಿಕೆಯನ್ನು ಹೆಗಲ ಮೇಲೆ ಹೊತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಐ.ಎನ್.ಎಸ್. ತಲ್ವಾರ್ ಮೂಲಕ ಮಂಗಳೂರು ಬಂದರಿಗೆ ಬಂದಿಳಿದ 40 ಟನ್ ದ್ರವರೂಪಿ ಪ್ರಾಣವಾಯು.
ದೇಶದ ಪ್ರತಿಯೊಂದು ಸಾಂಸ್ಥಿಕತೆಯು ಆಧುನಿಕ ತಾಂತ್ರಿಕತೆಯೊಂದಿಗೆ ಶಕ್ತಿಯುತವಾಗುತ್ತಿರುವುದು ಹೆಮ್ಮೆಯ ವಿಚಾರ. ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರು ಶಿಸ್ತು ಮತ್ತು ಬದ್ಧತೆಯಿಂದ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸುತ್ತಿರುವುದು ದೇಶದ ಘನತೆಯೊಂದಿಗೆ ನೌಕಾಪಡೆ, ವಾಯುಪಡೆ, ಸೈನಿಕ ಪಡೆಯ ಶಕ್ತಿ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ದೇಶದ ಮೂರು ಪಡೆಗಳು ತುರ್ತಿನ ಸಂದರ್ಭಗಳಲ್ಲಿ ನಾಗರಿಕರ ಸಂರಕ್ಷಣೆಯಲ್ಲೂ ತೊಡಗಿದ ಹತ್ತು ಹಲವು ಉದಾಹರಣೆಗಳು ನಮ್ಮ ಮುಂದಿವೆ. ದೇಶವನ್ನು ವ್ಯಾಪಿಸಿದ ಕೊರೋನಾ ಸಾಂಕ್ರಾಮಿಕ ಸಂದರ್ಭ ಭಾರತೀಯ ವಾಯುಪಡೆ ನೆರವಿನ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿದೆ, ಆಕ್ಸಿಜನ್, ಕ್ರಯೋಜೆನಿಕ್ಸ್, ಲಸಿಕೆಗಳನ್ನು ಹೊರದೇಶಗಳಿಂದ ತರುವ, ಹಂಚುವ, ತಲುಪಿಸುವ ಮೂಲಕ ವಾಯುಪಡೆ ಸಹಕಾರಿಯಾಗುತ್ತಿದೆ.
ಪ್ರಸ್ತುತ ದೇಶದಲ್ಲಿ ತಲೆದೋರಿರುವ ಸಾಂಕ್ರಾಮಿಕ ತಡೆಗೆ ಸೈನಿಕ ಶಕ್ತಿಯನ್ನು ಹೇಗೆ ಬಳಸಬಹುದೆಂಬ ಬಗ್ಗೆಯೂ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದೇ ಸಂದರ್ಭ ಸಾಂಕ್ರಾಮಿಕದಿಂದ ಕಂಗೆಟ್ಟಿರುವ ಬೆಂಗಳೂರು, ದೆಹಲಿ ನಗರಗಳಲ್ಲಿ ಆರ್ಮಿ ಮೂಲಕ ಕೊರೊನಾ ಕೇರ್ಸೆಂಟರ್ಗಳು ಆರಂಭಗೊಂಡಿರುವುದು ಒಂದು ದೊಡ್ಡ ಹೆಜ್ಜೆಯಾಗಿದ್ದು ಫಲಪ್ರದವಾಗಿವೆ. ಭಾರತೀಯ ಸೈನ್ಯದಲ್ಲಿ ಹಲವು ವರ್ಷಗಳ ಕಾಲ ವೈದ್ಯ ವೃತ್ತಿ ನಿರ್ವಹಿಸಿ ನಿವೃತ್ತರಾದ ಹಲವು ಮಂದಿ ತಜ್ಞ ವೈದ್ಯರು ಕರೆಯ ಮೇರೆಗೆ ನಾಗರಿಕರ ಸೇವೆಗೆ ಅಣಿಯಾಗಿದ್ದಾರೆ. ಹೀಗೆ ದೇಶದ ಆಂತರ್ಯದಲ್ಲಿ ಅಂತಃಶಕ್ತಿ ಕುಂದುವ ಮುನ್ನವೇ ನೆರವಿಗೆ ಧಾವಿಸಿ ಆಪ್ತವಾಗುವ ದೊಡ್ಡ ಗುಣ ಭಾರತೀಯ ಸೈನಿಕ ಶಕ್ತಿಯಲ್ಲಿದೆ. ವೈರಿ ರಾಷ್ಟ್ರಗಳ ಅತಿಕ್ರಮಣ, ಜಿಹಾದಿಗಳ ಅಟ್ಟಹಾಸ, ಉಗ್ರಗಾಮಿಗಳ ಕಿಡಿಗೇಡಿ ಕೃತ್ಯಗಳನ್ನು ದಿಟ್ಟವಾಗಿ ಎದುರಿಸಿ ಸದೆಬಡಿವ ಭಾರತೀಯ ರಕ್ಷಣಾ ಪಡೆ, ಸಾಂಕ್ರಾಮಿಕ ಸಂದರ್ಭ ನೆರವಿಗೆ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಜನಪರ ಸೇವೆಯಲ್ಲಿ ತೊಡಗಿದ ಸೈನ್ಯ ಮಾದರಿಯಾಗಿ ಪ್ರಶಂಸೆಗೆ ಒಳಗಾಗಿದೆ.
ಇಲ್ಲಿ ಪ್ರಸ್ತಾಪಿಸಲೇಬೇಕಿರುವುದು, ಮೇ 5 ರಂದು ಮಂಗಳೂರು ಬಂದರಿಗೆ ತಲುಪಿದ ಐ.ಎನ್.ಎಸ್. ತಲ್ವಾರ್ ನೌಕೆಯ ಅಭೂತಪೂರ್ವ ಸಾಗರಯಾನದ ನೈಜ ಕಥೆಯನ್ನು. ಭಾರತೀಯ ನೌಕಾಪಡೆಯ ಉದಾತ್ತ ವಾಣಿ ʼಶಂ ನೋ ವರುಣಾʼ ಎಂಬುದು. ಈ ವಾಣಿಯು ನೌಕಾಪಡೆಯ ಪ್ರತಿಯೋರ್ವ ನಾವಿಕರಲ್ಲಿಯೂ ದೊಡ್ಡ ಸಂಚಲನವನ್ನು ಮೂಡಿಸುತ್ತದೆ. ಪಂಚಭೂತಗಳಲ್ಲಿ ಒಂದಾದ ಜಲಕ್ಕೆ ಮೂಲ ವರುಣಾ. ದೇಶದ ಸುರಕ್ಷೆಯ ಕಾರ್ಯಕ್ಕೆ ಧುಮುಕುವ ನೌಕಾ ಸೈನಿಕರ ದಿನ ಆರಂಭಗೊಳ್ಳುವುದು ಇದೇ ವಾಣಿಯ ಉದ್ಗಾರದಿಂದ. ಓ ವರುಣಾ ನನ್ನ ಮಾತೃಭೂಮಿಯನ್ನು ಸುರಕ್ಷೆಯೊಂದಿಗೆ ಸಮೃದ್ಧಗೊಳಿಸು ಎಂಬುದು ಇದರ ಅರ್ಥ. ತೈತ್ತರೀಯ ಉಪನಿಷತ್ತಿನ ಪ್ರಾಚೀನ ನುಡಿಯು ಇಂದು ಭಾರತೀಯ ನೌಕಾಪಡೆಯ ಪ್ರತಿಯೋರ್ವನಲ್ಲೂ ಶಕ್ತಿಯ ಸಂಚಲನವನ್ನು ಮೂಡಿಸುತ್ತದೆ. ಸೇವೆಯಲ್ಲಿ ತೊಡಗಿಸಿಕೊಂಡ ಪ್ರತಿಯೋರ್ವ ನಾವಿಕನ ಮನಸ್ಸಿನಲ್ಲೂ- ಜಲದೇವನ ಕೃಪೆಯು ಮಾತೃಭೂಮಿಗೆ ದೊರಕಿ ಎಲ್ಲರಿಗೂ ಶಂ-ಶುಭವಾಗಲಿ ಎಂಬ ಹಾರೈಕೆಯಿರುತ್ತದೆ.
ಬಹರೈನ್ ಕರಾವಳಿಯಿಂದ ಆಕ್ಸಿಜನ್ ಕಂಟೈನರ್ ಹೊತ್ತ ಐ.ಎನ್.ಎಸ್ ತಲ್ವಾರ್ ನೌಕೆ ಭಾರತದ ಪಶ್ಚಿಮ ಕರಾವಳಿ ಬಂದರು ನಗರಿ ಮಂಗಳೂರಿಗೆ ಮೇ 5 ರಂದು ತಲುಪಿದೆ. ನೌಕೆ ಹೊತ್ತು ತಂದಿರುವ ಆಕ್ಸಿಜನ್ ಕಂಟೇನರ್ಗಳು ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಆಮ್ಲಜನಕದ ಕ್ಷಾಮ ಹೋಗಲಾಡಿಸಲು ಸಹಕಾರಿ. ಅದರಲ್ಲೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆಕ್ಸಿಜನ್ಪೂರೈಕೆಗೆ ಪ್ರಯೋಜನವಾಗಲಿದೆ. ದೇಶದಲ್ಲಿ ಏಕಾಏಕಿ ಆಮ್ಲಜನಕ ಕೊರತೆ ಕಂಡಾಗ ವಿಶ್ವದ ಹಲವು ರಾಷ್ಟ್ರಗಳು ಸಹಾಯಕ್ಕೆ ಮುಂದಾಗಿವೆ. ಇಂತಹ ರಾಷ್ಟ್ರಗಳಲ್ಲಿ ಒಂದು ಬಹರೈನ್. ವ್ಯಾಕ್ಸಿನ್ ಮೈತ್ರಿಯ ಮೂಲಕ ಪರೋಪಕಾರಿಯಾದ ಭಾರತಕ್ಕೆ ಪ್ರತ್ಯುಪಕಾರ ಮಾಡಲು ಹಲವು ವಿಶ್ವ ರಾಷ್ಟ್ರಗಳು ಸಾಲುಗಟ್ಟಿ ನಿಂತಿವೆ. ಪುಟ್ಟ ಕೊಲ್ಲಿ ರಾಷ್ಟ್ರವಾದ ಬಹರೈನ್ ಆರ್ಥಿಕವಾಗಿ ಸದೃಢ ಮತ್ತು ಶ್ರೀಮಂತ. ಹಲವು ದಶಕಗಳಿಂದ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು. ನರೇಂದ್ರ ಮೋದಿ ಆಡಳಿತದಲ್ಲಿ ಈ ಬಾಂಧವ್ಯ ಮತ್ತಷ್ಟೂ ವೃದ್ಧಿಯಾಗಿದೆ.
ಹಲವು ಮಂದಿ ಭಾರತೀಯ ಅನಿವಾಸಿಗಳಿರುವ ಬಹರೈನ್ಎಂಬ ರಾಷ್ಟ್ರವು ಮಧ್ಯಪ್ರಾಚ್ಯದಲ್ಲಿ ಶಾಂತಿ ಸೌಹಾರ್ದ ಬಯಸುವ ಮುಸ್ಲಿಂ ರಾಷ್ಟ್ರಗಳಲ್ಲೊಂದು. ಅಲ್ಲಿಂದ ನೀಡಲ್ಪಟ್ಟ ಆಕ್ಸಿಜನ್ಪ್ರಾಣವಾಯುವನ್ನು ಹೊತ್ತ ಐ.ಎನ್.ಎಸ್ ತಲ್ವಾರ್ ನೌಕೆಯ ಸಾರಥಿಯಾದವರು ಕಮಾಂಡಿಂಗ್ ಆಫೀಸರ್ ಪಾರ್ಥಾ ಭಟ್. ಪ್ರತಿಷ್ಠಿತ ಟಿವಿ ವಾಹಿನಿಯೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡ ಕ್ಯಾಪ್ಟನ್ ಭಟ್ – ʼದೇಶದ ನೌಕಾಪಡೆ ತನ್ನದೇ ಆದ ಘನತೆಯನ್ನು ಹೊಂದಿದೆ. ಬಹರೈನ್ನಲ್ಲಿ ಆಕ್ಸಿಜನ್ ಕಂಟೈನರ್ಗಳನ್ನು ತುಂಬಿಕೊಂಡ ನೌಕೆಯನ್ನು ಕ್ಲುಪ್ತ ಸಮಯಕ್ಕೆ ಭಾರತದ ತೀರಕ್ಕೆ ಸಾಗಿಸುವುದು ಮತ್ತು ಆಮ್ಲಜನಕ ಪೂರೈಸುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಪಡೆಯ ಸಮವಸ್ತ್ರ ಧರಿಸಿದ ಪ್ರತಿಯೋರ್ವನಿಗೂ ದೇಶಸೇವೆಯೇ ಮೊದಲ ಲಕ್ಷ್ಯ. ನೌಕೆಯಲ್ಲಿದ್ದ ಪ್ರತಿಯೋರ್ವರು ಬಹಳ ಹೆಮ್ಮೆಯಿಂದ ನಮ್ಮ ಕಾರ್ಯವನ್ನು ನಿರ್ವಹಿಸಿದ್ದೇವೆ ಎಂಬ ನಂಬಿಕೆಯಿದೆ. ದೇಶದ ನಾಗರಿಕರು ಸಾಂಕ್ರಾಮಿಕಕ್ಕೆ ತುತ್ತಾಗಿರುವ ಸಂದರ್ಭ ಅವರ ಸೇವೆ ನಮ್ಮ ಆದ್ಯತೆಯಾಗಿರುತ್ತದೆ. ಸಂದರ್ಭಕ್ಕೆ ಅನುಗುಣವಾಗಿ ದೇಶದ ಪ್ರತಿಷ್ಠಿತ ನೌಕಾಪಡೆಯು ದೇಶದ ರಕ್ಷಣೆ ಕಾರ್ಯದೊಂದಿಗೆ ನಾಗರಿಕ ಸೇವೆಯಲ್ಲೂ ತೊಡಗುವುದು ನಮ್ಮ ನೌಕಾಪಡೆಯ ವೈಶಿಷ್ಠ್ಯತೆ. ಅಪರೇಶನ್ಸಮುದ್ರ ಸೇತು -2 ನಾಗರಿಕ ಸೇವೆಯನ್ನು ಆದ್ಯತೆಯಾಗಿಸಿಕೊಂಡು ಈ ಹೆಜ್ಜೆ ಇರಿಸಿ ಸಫಲವಾಗಿದೆʼ ಎಂದಿದ್ದಾರೆ. ರಕ್ಷಣಾ ಕಾರ್ಯಾಚರಣೆಯಂತೆ, ಇಂತಹ ನಾಗರಿಕ ಸಹಾಯಕ ಕಾರ್ಯಚರಣೆಯಲ್ಲೂ ನೌಕಾಪಡೆ ಸಿಬ್ಬಂದಿಗಳಲ್ಲಿ ಹೆಚ್ಚಿನ ಜೋಶ್ ಇರುತ್ತದೆ. ನೈತಿಕ ಹೊಣೆಗಾರಿಕೆಯೊಂದಿಗೆ ನಮಗೆ ನೀಡಿದ ಜವಾಬ್ದಾರಿಯನ್ನು ದೇಶದ ಪ್ರಜೆಗಳ ಸ್ವಾಸ್ಥ್ಯಕ್ಕಾಗಿ ಕರ್ತವ್ಯ ನಿರ್ವಹಿಸಿದ್ದರ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.
ಅರಬ್ಬಿ ಕಡಲಿನಲ್ಲಿ ನಡೆಯುವ ಅಕ್ರಮ ಸಮುದ್ರ ಕಳ್ಳ ಸಾಗಾಣೆ, ಅತಿಕ್ರಮಗಳ ಮೇಲೆ ಹದ್ದಿನ ಕಣ್ಣಿಡುವ ಐ.ಎನ್.ಎಸ್ ತಲ್ವಾರ್ ಇಂತಹ ಕಾರ್ಯಾಚರಣೆ ಸಂದರ್ಭ ಇತರ ರಕ್ಷಣಾ ಕಾರ್ಯಚಟುವಟಿಕೆಗಳನ್ನು ಮರೆಯುವ ಹಾಗಿಲ್ಲ ಅಲ್ಲವೇ ಎಂದ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮಾಂಡಿಂಗ್ ಆಫೀಸರ್ ಪಾರ್ಥಾ ಭಟ್–ಹೌದು, ನಿಜ. ಯಾವತ್ತೂ ನಮ್ಮ ನೌಕಾಪಡೆ ಜಾಗರೂಕವಾಗಿರುತ್ತದೆ. ಮಾತ್ರವಲ್ಲ ನಮ್ಮ ನಾವಿಕಪಡೆ ಇಂತಹ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಎಲ್ಲವನ್ನು ಗಮನಿಸಿಕೊಂಡು ಮಿಶನ್- ಕಾರ್ಯಾಚರಣೆಯನ್ನುಯಶಸ್ವಿಯಾಗಿ ಪೂರ್ಣಗೊಳಿಸಲಾಗುತ್ತದೆ ಎಂದಿದ್ದಾರೆ.
ಐ.ಎನ್.ಎಸ್. ತಲ್ವಾರ್ ಮಂಗಳೂರಿಗೆ ಬಂದಿಳಿದ ನಂತರ ಕಮಾಂಡಿಂಗ್ ಆಫೀಸರ್ ಪಾರ್ಥಾ ಭಟ್ ಅವರೊಂದಿಗೆ ಇಂಡಿಯಾ ಟುಡೇ ಟಿವಿಯ ಕಾರ್ಯನಿರ್ವಾಹಕ ಸಂಪಾದಕರಾದ ಶಿವ್ ಅರೂರ್ ಅವರು ನಡೆಸಿದ ಸಂದರ್ಶನ
Right after docking his warship in Mangalore with a fresh cargo of Oxygen from abroad, Captain Partha Bhatt, Commanding Officer of frigate INS Talwar joined me live this evening: pic.twitter.com/nYxTifYs4t
— Shiv Aroor (@ShivAroor) May 5, 2021
ಭಾರತೀಯ ನೌಕಾಪಡೆಯು ಈ ಹಿಂದೆಯೂ ಇಂತಹ ಕಾರ್ಯಾಚರಣೆಗಳ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಯೆಮೆನ್ ನಾಗರಿಕ ಯುದ್ಧ ಸಂಘರ್ಷದ ಸಂದರ್ಭ ಹೆಚ್ಚಿನ ಅನಿವಾಸಿಗಳನ್ನು ಎಡೆನ್ಕೊಲ್ಲಿಯಿಂದ ಭಾರತಕ್ಕೆ ತಲುಪಿಸುವಲ್ಲಿಯೂ ನೌಕಾಪಡೆ ಪ್ರಮುಖ ಭೂಮಿಕೆ ವಹಿಸಿತ್ತು. ಐ.ಎನ್.ಎಸ್. ವಿರಾಟ್, ಅರಿಹಂತ್ ಮೊದಲಾದ ಜಲಾಂತರ್ಗಾಮಿ ಸಮರ ನೌಕೆಗಳನ್ನು ಹೊಂದಿರುವ ನೌಕಾಪಡೆಯು ದೇಶದ ಹೆಮ್ಮೆ. ಸಾಂಕ್ರಾಮಿಕದ ಸಂದಿಗ್ಧ ಕಾಲಘಟ್ಟದಲ್ಲಿ ದೇಶದ ನಾಗರಿಕರ ಸೇವೆಗಾಗಿ ಪ್ರಾಣವಾಯು ಪೂರೈಸಿದ ಐ.ಎನ್.ಎಸ್. ತಲ್ವಾರ್ ಸೇವೆಯನ್ನು ಸ್ಮರಿಸೋಣ. ಶಂ ನೋ ವರುಣಃ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.