News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಸ್ತ ನೈರ್ಮಲ್ಯ ದಿನ: ಸ್ವಚ್ಛ ಕೈಗಳು ಜೀವ ಉಳಿಸಬಲ್ಲವು

ಇಂದು ಹಸ್ತ ನೈರ್ಮಲ್ಯ ದಿನ. ಕೊರೋನಾವೈರಸ್‌ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಕೈಗಳ ಸ್ವಚ್ಛತೆ ಅತ್ಯಂತ ಪ್ರಮುಖವಾಗಿದೆ. ವೈರಸ್‌ ದೇಹವನ್ನು ಸೇರದಂತೆ ತಡೆಯಲು ಕೈಗಳ ನೈರ್ಮಲ್ಯ ಅತ್ಯಂತ ಅವಶ್ಯಕ ಎಂದು ತಜ್ಞರು ಹೇಳುತ್ತಾರೆ. “ದಾದಿಯರು, ಶುಶ್ರೂಷಕಿಯರು, ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರ ಕೈಗಳು  ರೋಗಿಗಳ ಸುರಕ್ಷಿತ ಆರೈಕೆಯಲ್ಲಿ  ವ್ಯತ್ಯಾಸ ತರುತ್ತದೆ” ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಇಂದು ತನ್ನ ಸಂದೇಶದಲ್ಲಿ ತಿಳಿಸಿದೆ.

ನಾವೆಲ್ಲ  ಹಲವು ಬಾರಿ ಕೈಗಳನ್ನು ತೊಳೆದುಕೊಳ್ಳುತ್ತೇವೆ ಆದರೆ  ನಾವು ಸಮರ್ಪವಾಗಿ ಕೈಗಳನ್ನು ತೊಳೆಯುತ್ತೇವೆಯೇ ಎಂಬುದು ಪ್ರಶ್ನೆ. ದುರದೃಷ್ಟವಶಾತ್, ಇಲ್ಲ ಎಂದು ತಜ್ಞರು ಹೇಳುತ್ತಾರೆ. ಕೈಗಳನ್ನು ಸರಿಯಾಗಿ ತೊಳೆಯುವುದು ಹೇಗೆ ಎಂಬುದರ ಬಗ್ಗೆ ಸಹ ಅನೇಕ ಜನರಿಗೆ ತಿಳಿದಿಲ್ಲ ಎನ್ನಲಾಗಿದೆ. ಈಗಾಗಲೇ ಹಲವು ವೇದಿಕೆಗಳಲ್ಲಿ ವಿಶ್ವಸಂಸ್ಥೆ ಆರೋಗ್ಯ ಸಂಸ್ಥೆ ಸೇರಿದಂತೆ ಸ್ಥಳಿಯ ವೈದ್ಯರವರೆಗೆ ಸಮರ್ಪಕ ರೀತಿಯಲ್ಲಿ ಕೈಗಳನ್ನು ತೊಳೆಯುವುದು ಹೇಗೆ ಎಂಬುದನ್ನು ಹೇಳಿಕೊಡುತ್ತಿದ್ದಾರೆ, ಹೇಳಿ ಕೊಡುತ್ತಲೇ ಇದ್ದಾರೆ.

ಹಸ್ತ ನೈರ್ಮಲ್ಯ ದಿನವನ್ನು ಈ ಬಾರಿ ಕೋವಿಡ್-19 ಸೋಂಕುಗಳ ಉಲ್ಬಣದ ಮಧ್ಯೆ‌ ನಾವು ಆಚರಿಸುತ್ತಿದ್ದೇವೆ, ನಾವು  ಕೈ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಅಗತ್ಯವಾಗಿ ಮಾಡಬೇಕು ಎಂಬುದನ್ನು ಈ ದಿನ ಹೇಳಿಕೊಡುತ್ತದೆ.

ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆ ‘ಕ್ಲೀನ್ ಹ್ಯಾಂಡ್ಸ್ ಸೇವ್ ಲೈವ್ಸ್’ ಎಂಬುದಾಗಿದೆ. ಸಾಂಕ್ರಾಮಿಕದ ಮಧ್ಯೆ ನಮ್ಮನ್ನು ಮತ್ತು ನಮ್ಮ ಸುತ್ತಲಿರುವ ಇತರರನ್ನು ಸುರಕ್ಷಿತವಾಗಿರಿಸುವುದರಲ್ಲಿ ಸರಿಯಾದ ಕೈ ತೊಳೆಯುವಿಕೆ ತಂತ್ರಗಳು ಬಹಳ ಸಹಕಾರಿಯಾಗಬಲ್ಲವು. ಕೈಗಳ ಸ್ವಚ್ಛತೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ಅನುಸರಿಸಲು ಸಮರ್ಥವಾಗಿರುವ ಆರು ಸರಳ ಮತ್ತು ಅಗತ್ಯ ಹಂತಗಳು ಇಲ್ಲಿವೆ:

ಹಂತ 1: ನಿಮ್ಮ ಕೈಗಳನ್ನು ಒದ್ದೆ ಮಾಡಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ಲಿಕ್ವಿಡ್ ಸಾಬೂನು ಲೇಪಿಸಿ.
ಹಂತ 2: ನಿಮ್ಮ ಅಂಗೈಯ ಮೂಲೆ ಮೂಲೆಯನ್ನು ಚೆನ್ನಾಗಿ ಉಜ್ಜಿ ತೊಳೆಯಿರಿ.
ಹಂತ 3: ಕೈಗಳ ಹಿಂಭಾಗ ಮತ್ತು ಬೆರಳುಗಳ ನಡುವನ್ನು ಉಜ್ಜಿಕೊಳ್ಳಿ.
ಹಂತ 4: ನಿಮ್ಮ ಬೆರಳುಗಳನ್ನು ಇಂಟರ್ಲಿಂಕ್ ಮಾಡಿ ಮತ್ತು ಚೆನ್ನಾಗಿ ಉಜ್ಜಿಕೊಳ್ಳಿ
ಹಂತ 5: ಹೆಬ್ಬೆರಳು ಮತ್ತು ಉಗುರುಗಳನ್ನು ಸ್ವಚ್ಛಗೊಳಿಸಿ
ಹಂತ 6: ಎಲ್ಲಕ್ಕಿಂತ ಮುಖ್ಯವಾಗಿ, ಕೈ ತೊಳೆಯುವ ಸಮಯ ಕನಿಷ್ಠ 20 ಸೆಕೆಂಡುಗಳಾಗಿರಬೇಕು

ಕೈಗಳ ನೈರ್ಮಲ್ಯವು ನಮ್ಮನ್ನು ಮತ್ತು ಇತರರನ್ನು ಕಾಯಿಲೆಗಳಿಗೀಡು ಮಾಡುವ ಸೂಕ್ಷ್ಮಜೀವಿಗಳ ಹರಡುವಿಕೆಯನ್ನು ತಡೆಯಲು ಸುಲಭವಾದ ಮತ್ತು ಉತ್ತಮ ಮಾರ್ಗವಾಗಿದೆ. ರೋಗಿಗಳ ಆರೈಕೆ ಅಥವಾ ಆತಿಥ್ಯ ಮತ್ತು ಅಡುಗೆ ವ್ಯವಹಾರದಲ್ಲಿ ನೇರವಾಗಿ ತೊಡಗಿರುವ ಜನರಿಗೆ ಮಾತ್ರವಲ್ಲದೆ ಕಡಿಮೆ ಅಪಾಯದ ವಾತಾವರಣದಲ್ಲಿರುವ ಕಚೇರಿಗಳು ಮತ್ತು ಮನೆಗಳಲ್ಲೂ ರೋಗಾಣುಗಳು ಇರುತ್ತವೆ. ವಿಶ್ವ ಹಸ್ತ ನೈರ್ಮಲ್ಯ ದಿನದಂದು ನಾವು ನಮ್ಮ ಕೈಗಳ ನೈರ್ಮಲ್ಯದ ಬಗ್ಗೆ ಹೆಚ್ಚು ಗಮನ ನೀಡುವ ಸಂಕಲ್ಪ ತೊಡೋಣ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top