ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಇಂತಹ ದುಃಸ್ಥಿತಿಯ ಸಮಯದಲ್ಲಿ ಅನೇಕ ಸಾಮಾಜಿಕ ಸಂಘಟನೆಗಳು ಸಮಾಜಕ್ಕೆ ಅಗತ್ಯವಿರುವ ಸಹಾಯ ಮಾಡಲು ಮುಂದೆ ಬಂದಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಕೂಡ ಅವುಗಳಲ್ಲಿ ಒಂದಾಗಿದ್ದು, ಗಂಭೀರ ಸ್ವರೂಪದ ಎರಡನೇ ಅಲೆಯ ಮಧ್ಯೆ ಸಮಾಜಕ್ಕೆ ಸಹಾಯ ಮಾಡಲು 12 ಉಪಕ್ರಮಗಳನ್ನು ಪ್ರಾರಂಭಿಸಿದೆ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್ಎಸ್ಎಸ್ನ ಅಖಿಲ ಭಾರತೀಯ ಪ್ರಚಾರ ಪ್ರಮುಖರಾದ ಸುನೀಲ್ ಅಂಬೇಕರ್ ಅವರು ಮಾತನಾಡಿ, ಸಂಘದ ಕಾರ್ಯಕರ್ತರು ಒಟ್ಟಾಗಿ ಪ್ರತ್ಯೇಕ ವಾಸದ ಶಿಬಿರಗಳನ್ನು, ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ, ಆಂಬುಲೆನ್ಸ್ ಸೇವೆಗಳು, ಆಹಾರ ಪೂರೈಕೆ, ಸಮಾಲೋಚನೆ ಮತ್ತು ಇತ್ಯಾದಿ ಉಪಕ್ರಮಗಳನ್ನು ಪ್ರಾರಂಭಿಸಿದ್ದಾರೆ ಎಂದಿದ್ದಾರೆ.
“ಕೋವಿಡ್-19ನಿಂದಾಗಿ ಪರಿಸ್ಥಿತಿ ಹದಗೆಡುತ್ತಿದೆ. ನಾವೆಲ್ಲರೂ ಒಟ್ಟಾಗಿ ಈ ಸಾಂಕ್ರಾಮಿಕ ರೋಗವನ್ನು ಗೆದ್ದೇ ಗೆಲ್ಲುತ್ತೇವೆ. ಸಮಾಜವಾಗಿ ನಾವೆಲ್ಲರೂ ಒಗ್ಗೂಡಿದರೆ ಮಾತ್ರ ಇದು ಸಾಧ್ಯ. ಆರ್ಎಸ್ಎಸ್ ಎಂದಿನಂತೆ ಕೋವಿಡ್ ಪೀಡಿತ ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ವಿವಿಧ ರೀತಿಯ ಸೇವೆಗಳನ್ನು ಒದಗಿಸುವ ಕಾರ್ಯ ಮಾಡುತ್ತಿದೆ. ಪ್ರತ್ಯೇಕ ವಾಸದ ಶಿಬಿರಗಳು, ಕೋವಿಡ್ ಆರೈಕೆ ಕೇಂದ್ರಗಳು, ಆಹಾರ ಸೇವೆ ಸೇರಿದಂತೆ ಅನೇಕ ಸೇವೆ ನೀಡುತ್ತಿದ್ದಾರೆ. ಈ ಬಾರಿ ಆರ್ಎಸ್ಎಸ್ ಸ್ವಯಂಸೇವಕರು ಕೆಲವು ಸಹಾಯವಾಣಿ ಸಂಖ್ಯೆಗಳನ್ನು ಆರಂಭಿಸಿದ್ದಾರೆ, ಇದರ ಮೂಲಕ ರೋಗಿಗಳು ಹಾಸಿಗೆಗಳ ಲಭ್ಯತೆ, ಆಂಬ್ಯುಲೆನ್ಸ್ಗಳು, ವೆಂಟಿಲೇಟರ್ಗಳು ಇತ್ಯಾದಿಗಳ ಬಗ್ಗೆ ವಿವರಗಳನ್ನು ಪಡೆಯಬಹುದು. ಯಾವುದೇ ರೋಗಿಯು ವೈದ್ಯರನ್ನು ಸಂಪರ್ಕಿಸಬೇಕು ಎಂದಾದರೂ ಅದಕ್ಕೂ ಆರ್ಎಸ್ಎಸ್ ಎಲ್ಲಾ ನಿವ್ಯವಸ್ಥೆ ಮಾಡಿದೆ ” ಎಂದು ಹೇಳಿದ್ದಾರೆ.
“ಪ್ಲಾಸ್ಮಾ ದಾನ ಮಾಡಲು ಆರ್ಎಸ್ಎಸ್ ಸೇವಕರು ಸ್ವಯಂಪ್ರೇರಣೆಯಿಂದ ಮುಂದೆ ಬಂದಿದ್ದಾರೆ. ಪ್ಲಾಸ್ಮಾ ಬ್ಯಾಂಕ್ ಸಹಾಯವಾಣಿಗಳನ್ನು ಆರಂಭಿಸಿದ್ದಾರೆ. ‘ಅಂತಿಮ ಸಂಸ್ಕಾರ ವಿಧಿ’ ಕಾರ್ಯವನ್ನು ಕೂಡ ಕೈಗೆತ್ತಿಕೊಂಡಿರುವ ಆರ್ಎಸ್ಎಸ್ ಸ್ವಯಂಸೇವಕರ ಕಾರ್ಯ ಶ್ಲಾಘನೀಯ. ಭಾರತದಲ್ಲಿ ಸಾವಿನ ಪ್ರಮಾಣ ತೀವ್ರವಾಗಿದೆ, ಇದರಿಂದ ಸ್ಮಶಾನಗಳಿಗೆ ಸಹಾಯದ ಅಗತ್ಯವಿದೆ. ಇದು ದುಃಖದ ಸಂಗತಿ, ಸೇವಕರು ಪಿಪಿಇ ಕಿಟ್ಗಳನ್ನು ಧರಿಸಿ ಶವಸಂಸ್ಕಾರ ಕೇಂದ್ರಗಳಲ್ಲಿಯೂ ಸಹ ಸೇವೆ ಸಲ್ಲಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಸೇವಾ ಕಾರ್ಯಕ್ಕಾಗಿ ಜನರು ಮುಂದೆ ಬರಬೇಕೆಂದು ಒತ್ತಾಯಿಸಿದ ಅವರು, ಆರ್ಎಸ್ಎಸ್ ಈಗಾಗಲೇ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಪ್ರಾರಂಭಿಸಿದೆ ಮತ್ತು ಲಸಿಕೆ ಬಗೆಗಿನ ಹರಡಿರುವ ವದಂತಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದಿದ್ದಾರೆ.
“18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೋಂದಣಿ ನಿನ್ನೆ ಪ್ರಾರಂಭವಾಗಿದೆ ಮತ್ತು ಪ್ರತಿಯೊಬ್ಬರೂ ಅಪಾಯಿಂಟ್ಮೆಂಟ್ ಕಾಯ್ದಿರಿಸುವುದು ಮುಖ್ಯ. ವ್ಯಾಕ್ಸಿನೇಷನ್ ನಂತರ ಆರೋಗ್ಯ ಸಚಿವಾಲಯ ಹೇಳಿದಂತೆ ಜನರು 45-60 ದಿನಗಳವರೆಗೆ ರಕ್ತದಾನ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಆರ್ಎಸ್ಎಸ್ ರಕ್ತದಾನ ಶಿಬಿರಗಳನ್ನು ನಡೆಸುತ್ತಿದೆ. ಯುವಕರು ಮುಂದೆ ಬಂದು ರಕ್ತದಾನ ಮಾಡಬೇಕೆಂದು ನಾನು ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.
“ರಾಷ್ಟ್ರದ ಸೇವೆಗಾಗಿ ದೃಢಇಚ್ಛಾ ಶಕ್ತಿಯೊಂದಿಗೆ ದಶಕಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ದುಡಿಯುತ್ತಿದೆ, ಯಾವತ್ತೂ ಪ್ರಚಾರವನ್ನು ಬಯಸಿಲ್ಲ. ಉದಾರವಾದಿಗಳು, ಹುಸಿ ಜಾತ್ಯತೀತವಾದಿಗಳು ಮತ್ತು ಎಡಪಂಥೀಯರು ತಮ್ಮ ಮನೆಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೆ, ಆರ್ಎಸ್ಎಸ್ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಮುಂದಾಗಿದೆ. ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಆರ್ಎಸ್ಎಸ್ ಸ್ವಯಂಸೇವಕರ ನಿಸ್ವಾರ್ಥ ಕೆಲಸ ಸರಿ ಸಾಟಿಯಿಲ್ಲದ್ದು, ಸ್ವಯಂಸೇವಕರು ಜಾತಿ, ಪಂಥ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.