News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶ್ರಾವಕಯಾನದ ಮೇರು ಶಿಖರ ತೀರ್ಥಂಕರ ವರ್ಧಮಾನ ಮಹಾವೀರ

ಮಾತೆ ಭಾರತಿಯ ಮಡಿಲಲ್ಲಿ ಹುಟ್ಟಿದ ಮತಧರ್ಮ ತತ್ವಗಳು ಅನೇಕ. ಸಮಾಜವನ್ನು ದಾರ್ಶನಿಕತೆ ಮತ್ತು ಆಧ್ಯಾತ್ಮಪಥದತ್ತ ಮುನ್ನಡೆಸಿದ ಮಹಾತ್ಮರು ಹಲವರಿದ್ದಾರೆ. ಇಂತಹ ಸಹಸ್ರ ಮಂದಿ ಮುನಿ ಪುಂಗವರು ಭರತಭುವಿಯಲ್ಲಿ ಹುಟ್ಟಿ ತಮ್ಮ ಮೇರು ಆದರ್ಶಗಳ ಮೂಲಕ ಅಜರಾಮರರಾಗಿದ್ದಾರೆ. ಇದೇ ರೀತಿ ಮಾನವತೆಯನ್ನು ಬೆಳಗಿದ ಬಹಳಷ್ಟು ತತ್ವ ಚಿಂತನೆಗಳು ಇದೇ ಭೂಮಿಯಲ್ಲಿ ಇಂದಿಗೂ ಜೀವಂತವಾಗಿವೆ ಎಂಬುದು ಅಷ್ಟೇ ಸತ್ಯ. ಧಾರ್ಮಿಕ ತತ್ವಬೋಧೆಗಳು ಸ್ವಾರಸ್ಯಕರ ಚಿಂತನ ಮಂಥನದ ಸಹಿತ ಜ್ಞಾನದ ವಿಷಯವೂ ಹೌದು. ಶ್ರಮಣಧಾರೆಯಲ್ಲಿ ಹುಟ್ಟಿ ಸತ್ಯ, ಅಹಿಂಸೆ, ಪರಮ ಕೈವಲ್ಯ ಜ್ಞಾನದ ಪಥಕ್ಕೆ ಕಾರಣವಾದ ತತ್ವ ಚಿಂತನೆಯೇ ಜೈನ ಮತ. ಹಲವು ಸಹಸ್ರ ಸಂವತ್ಸರಗಳ ಹಿಂದೆ ತೀರ್ಥಂಕರ ವೃಷಭನಾಥನಿಂದ ಆರಂಭಗೊಂಡ ಜ್ಞಾನ ಚಿಂತನೆಯು ಸಾವಿರಾರು ವರ್ಷಗಳ ತರುವಾಯ ತೀರ್ಥಂಕರ ಮಹಾವೀರನಿಂದ ಉತ್ತಮ ಚೌಕಟ್ಟು ಪ್ರಾಪ್ತಿಯಾಗಿಸಿ ಇಂದಿಗೂ ತನ್ನ ಪ್ರಭೆಯನ್ನು ಉಳಿಸಿಕೊಂಡಿದೆ, ಬೆಳೆಸಿಕೊಂಡಿದೆ ಮಾತ್ರವಲ್ಲ ಜನಮಾನಸವನ್ನು ಪ್ರಭಾವಿಸಿದೆ.

ಜೈನ ಮತ ಚಿಂತನೆಯನ್ನು ಇತಿಹಾಸದ ಆಧಾರದಲ್ಲಿ ವಿಶ್ಲೇಷಿಸುದಾದರೆ ಈ ಚಿಂತನೆಯು ಬಹಳ ಪುರಾತನ ಎಂಬುದು ನಿಖರ ಮತ್ತು ಸಾದೃಶವಾಗುತ್ತದೆ. ಪ್ರಕೃತಿ ಸಾಮೀಪ್ಯತೆಯೊಂದಿಗೆ ಲೌಕಿಕ ಅಲೌಕಿಕ ಭಾವ ಪರಿಧಿಯಲ್ಲಿ ಬದುಕಿನ ಆಳವನ್ನು ಅರ್ಥೈಸುವಂತೆ ಮಾಡಿದ ಚಿಂತನಾ ಲಹರಿಗಳಲ್ಲೊಂದು ಜೈನ ಮತ. ಆರಂಭಿಕ ನಾಗರಿಕತೆಯ ಕಾಲಘಟ್ಟದಲ್ಲಿ ಅಂದಿನ ಸಮಾಜಕ್ಕೆ ದುಡಿಮೆ ಮತ್ತು ಸ್ವಾವಲಂಬಿ ಬದುಕಿನ ಮಹತ್ವ ತಿಳಿಸಿದ ಮಹಾತ್ಮರು ಅನೇಕರಿದ್ದಾರೆ. ಜೀವನ ನಿರ್ವಹಣೆಗಾಗಿ ಒಂದು ಪ್ರದೇಶದಿಂದ ಮತ್ತೊಂದೆಡೆ ಸಾಗಿ ಬದುಕು ಸವೆಸುತ್ತಿದ್ದ ಸಮೂಹಕ್ಕೆ ಸ್ಥಿರ ಜಾಗದಲ್ಲಿ ಉಳುಮೆ, ಪೂರಕ ಕೃಷಿಯ ಪಾಠ ಹೇಳಿದ ಮೊದಲಿಗನೇ ವೃಷಭನಾಥ ಎಂದೆನ್ನಲಾಗುತ್ತದೆ. ಭೌತಿಕದ ಆಸೆ ಲಾಲಸೆಗಳನ್ನು ಬಿಟ್ಟಿದ್ದ ವೃಷಭನಾಥ ನಂತರದಲ್ಲಿ ತೀರ್ಥಂಕರನಾಗಿ ಮೆರೆದ. ಅಲೌಕಿಕ ಭಾವದಲ್ಲಿ ಹೆಚ್ಚು ಒಲವಿದ್ದ ಕಾರಣ, ತಪಶ್ಯಕ್ತಿಯ ಮೂಲಕ ಅಲೌಕಿಕ ಜ್ಞಾನ ಸಂಪಾದಿಸಿ ಅರ್ಹತೆ- ಅರಿಹಂತನ ಗೌರವ ಪ್ರಾಪ್ತಿಯಾಗಿಸಿ ಅಂದಿನ ಸಮಾಜಕ್ಕೆ ಮಾದರಿಯಾದ ಎಂಬುದು ವಿಶೇಷ.

ಬದುಕಿನ ಪಯಣದಲ್ಲಿ ಕಾಡುವ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತ ವಿರಾಗಿಯಾಗಿ ನಂತರ ಪರಮ ಜ್ಞಾನವನ್ನು ಪಡೆದು ಸಮಾಜಕ್ಕೆ ಮಾರ್ಗದರ್ಶನ ಮಾಡಿದ ಮಹಾತ್ಮರು ಹಲವರಿದ್ದಾರೆ. ಅನೇಕ ಮಂದಿ ಕ್ಷಾತ್ರರು ಸಮರವನ್ನು ಗೆದ್ದರೂ, ಧರ್ಮ ದರ್ಶನದ ಪ್ರಭೆಯಿಂದ ಶಸ್ತ್ರ ತ್ಯಾಗ ಮಾಡಿದ ಉದಾಹರಣೆಗಳು ನಮ್ಮಲ್ಲಿವೆ. ಇದು ಆ ಮತದ ಪ್ರಭಾವವನ್ನು ತಿಳಿಸುತ್ತದೆ. ಜೈನ ತತ್ವಾದರ್ಶಗಳಲ್ಲಿ ನಂಬಿಕೆ ಇಟ್ಟುಕೊಂಡು ಅದೇ ಪಥದಲ್ಲಿ ಮುನ್ನಡೆದು ಪೂರ್ಣ ಜ್ಞಾನವನ್ನು ಸಂಪಾದಿಸಿದವರನ್ನು ಅರಿಹಂತರು, ಕೈವಲ್ಯ ಪ್ರಾಪ್ತಿಯಾದವರು ತೀರ್ಥಂಕರು. ಜೈನ ದಾರ್ಶನಿಕೆಯಲ್ಲಿ ವೃಷಭನಾಥನಿಂದ ಹಿಡಿದು ಮಹಾವೀರನ ತನಕ ಒಟ್ಟು 24 ಮಂದಿ ತೀರ್ಥಂಕರಿದ್ದಾರೆ. ಕೊನೆಯ ತೀರ್ಥಂಕರನಾಗಿ ಬಂದಂತಹ ಪಾರ್ಶ್ವನಾಥ ಮತ್ತು ಮಹಾವೀರರು ತಮ್ಮ ಉದಾತ್ತ ಚಿಂತನೆಯ ಮೂಲಕ ಜಿನ ಕೈವಲ್ಯ ತತ್ವದತ್ತ ಹೆಚ್ಚಿನ ಜನಸಾಮಾನ್ಯರನ್ನು ಆಕರ್ಷಿಸುತ್ತಾರೆ. ಇದೇ ಸಂದರ್ಭ ಜೈನ ಮತಕ್ಕೆ ಸದೃಢ ಚೌಕಟ್ಟು ನೀಡಿದ ಮಹಾಮುನಿ ವರ್ಧಮಾನ ಮಹಾವೀರ.

ಶಾಕ್ಯಮುನಿ ಬುದ್ಧನ ಸಮಕಾಲೀನನಾಗಿದ್ದ ಮಹಾವೀರ ಉತ್ತರ ಭಾರತದ ಬಿಹಾರದಲ್ಲಿ ಜನಿಸಿದ. ಕ್ರಿಸ್ತ ಪೂರ್ವ ಆರನೇ ಶತಮಾನದಲ್ಲಿ ಸಿದ್ಧಾರ್ಥ ಮತ್ತು ತ್ರಿಶಲ ದಂಪತಿಯ ಮಗನಾಗಿ ಜನಿಸಿದ ಮಹಾವೀರ ತನ್ನ ಮೂವತ್ತನೇ ವಯಸ್ಸಿನಲ್ಲಿ ತನ್ನ ಎಲ್ಲಾ ಲೌಕಿಕ ವಾಂಛೆಗಳನ್ನು ತ್ಯಜಿಸಿ ತ್ಯಾಗಿಯಾಗಿ ಆಧ್ಯಾತ್ಮ ಪಥದತ್ತ ಮುನ್ನಡೆಯುತ್ತಾನೆ. ಸುಮಾರು ೧೨ ವರ್ಷಗಳ ಪರ್ಯಂತ ಯೋಗಿಯಾಗಿ ಕಠಿಣ ತಪಸ್ಸನ್ನು ಆಚರಿಸುತ್ತಾನೆ. ಸಸ್ಯ ಶ್ಯಾಮಲೆಯಾಗಿ, ಸುಂದರವಾಗಿದ್ದ ಪ್ರಕೃತಿಯ ಮಧ್ಯೆ ಕೈವಲ್ಯ ಜ್ಞಾನ ಸಂಪಾದಿಸಿ ನಂತರದ ಮೂವತ್ತು ವರ್ಷಗಳ ಕಾಲ ತಾನರಿತ ಕೈವಲ್ಯ ಜ್ಞಾನವನ್ನು ಬೋಧಿಸಿ ಮಾರ್ಗದರ್ಶಿಯಾದ. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬುವು ಮಹಾವೀರನ ಪ್ರಮುಖ ಧಾರ್ಮಿಕ ಪಾಠಗಳು. ಅಂದು ಉತ್ತರ ಭಾರತದಾದ್ಯಂತ ಹೆಚ್ಚು ಜನಜನಿತವಾಗಿದ್ದ ಈ ತತ್ವ ಚಿಂತನೆ ನಂತರದ ಶತಮಾನಗಳಲ್ಲಿ ಇನ್ನಷ್ಟು ಪ್ರಬಲವಾಗಿ ಬೆಳೆದು ದಕ್ಷಿಣಾಪಥಕ್ಕೂ ಕಾಲಿರಿಸಿತ್ತು. ದೇಶದ ಉದ್ದಗಲಕ್ಕೂ ಪಸರಿಸಲ್ಪಟ್ಟ ದಿಗಂಬರ, ಶ್ವೇತಾಂಬರ ಪಂಥಗಳು ಹೆಚ್ಚು ಪ್ರಚಾರವನ್ನು ಪಡೆದು ಜನಮಾನಸವನ್ನು ಪ್ರಭಾವಿಸಿ ಸಮಾಜದ ಮೇರು ಚಿಂತನೆಯಾಯಿತು. ಜೈನ ಮುನಿಗಳು ವೈಯಕ್ತಿಕ ನೆಲೆಯಲ್ಲಿ ಸಾಧನಪತ್ತದಲ್ಲಿ ಮುನ್ನಡೆದು ಆದ್ಯಾತ್ಮಿಕ ಸಾಧನೆಗಾಗಿ ಗವಿ ಗಿರಿಕಂದರಗಳನ್ನು ಆಯ್ಕೆಯಾಗಿಸಿ ತಪಶ್ಯರ್ಯೆಯಲ್ಲಿ ಮಗ್ನವಾಗುತ್ತಿದ್ದರು. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಗಳಿಸಿದ ಶ್ರವಣಬೆಳಗೊಳ ಎಂಬ ತಾಣವು ಶತಮಾನಗಳ ಹಿಂದೆಯೇ ಶ್ರಾವಕಯಾನಕ್ಕೆ ಹೆಸರುವಾಸಿ. ಗುಜರಾತಿನ ಗಿರಿನಾರ್‌ಪ್ರದೇಶದಲ್ಲೂ ಅತಿ ಹೆಚ್ಚು ಶ್ರಾವಕರ ಬಸದಿಗಳಿದ್ದವು. ಹಲವು ರಾಜವಂಶಜರ ರಾಜಾಶ್ರಯ ಸಿಕ್ಕಿದ ಪರಿಣಾಮ ಈ ಮತವು ಪ್ರವರ್ಧಮಾನಕ್ಕೆ ಬರುವಲ್ಲಿ ಸಫಲವಾಯಿತು. ಕರುನಾಡಿನಲ್ಲೂ ಈ ಮತಕ್ಕೆ ಹೆಚ್ಚಿನ ಬಲ ನೀಡಿದ್ದು ರಾಜಾಶ್ರಯ. ಗಂಗರು, ಹೊಯ್ಸಳರು, ರಾಷ್ಟ್ರಕೂಟರ ಕಾಲದಲ್ಲಿ ಹಲವು ಬಸದಿಗಳ ನಿರ್ಮಾಣದ ಬಗ್ಗೆ ಇತಿಹಾಸ ಬೆಳಕು ಚೆಲ್ಲುತ್ತದೆ. ಬನವಾಸಿಯ ಕದಂಬರು ಕೂಡಾ ಜೈನರಿಗೆ ರಾಜಾಶ್ರಯ ನೀಡಿದ್ದರು.

ಮೌರ್ಯ ವಂಶದ ಪ್ರಥಮ ರಾಯ ಚಂದ್ರಗುಪ್ತ ಮೌರ್ಯ ತನ್ನ ಜೀವನದ ಕೊನೆಯ ಕಾಲಘಟ್ಟವನ್ನುಶ್ರವಣಬೆಳಗೊಳದಲ್ಲಿ ಜೈನ ಮುನಿಯಾಗಿ ಕೆಳೆದಿದ್ದ ಮಾತ್ರವಲ್ಲ ಕಠಿಣ ವ್ರತದ ಮೂಲಕ ಕೈವಲ್ಯ ಪ್ರಾಪ್ತಿಯಾಗಿಸಿಕೊಂಡ ಎಂಬುದು ಇತಿಹಾಸದ ಪುಟಗಳಿಂದ ತಿಳಿಯುತ್ತದೆ. ಇದೇ ಕಾರಣಕ್ಕೆ ಶತಮಾನದುದ್ದಕ್ಕೂ ಶ್ರಾವಕಯಾನದಲ್ಲಿ ಶ್ರವಣಬೆಳಗೊಳಕ್ಕೆ ಹೆಚ್ಚಿನ ಪ್ರಾಮುಖ್ಯತೆಯೊಂದಿಗೆ ಪಾವಿತ್ರ್ಯತೆಯೂ ಇದೆ.

ಓಂ ಅರಿಹಂತಾಣಂ ಎಂಬ ಉಕ್ತಿಯು ಜನಜನಿತವಾದುದಾಗಿದ್ದು ತೀರ್ಥಂಕರರ ಮಹಿಮೆಯನ್ನು ಬಣ್ಣಿಸುತ್ತದೆ. ಲೌಕಿಕ ಜೀವನದಲ್ಲಿ ಕಾಡುವ ಅರಿ ಶಡ್ವೈರಿಗಳನ್ನು ತೊಡೆದು, ಮೇಲೆದ್ದು ಬಂದವನೇ ಅರಿಹಂತ. ಈತನೇ ಅದ್ಯಾತ್ಮದ ದಾರಿಗೆ ಅರ್ಹತೆ ಗಿಟ್ಟಿಸಿಕೊಂಡವ ಎಂಬುದಾಗಿ ಅರ್ಥೈಸಿಕೊಳ್ಳಬಹುದು. ಶ್ರಾವಕಯಾನದುದ್ದಕ್ಕೂ ಮಹತ್ತರ ಸಾಹಿತ್ಯ ಸೃಷ್ಠಿಯೂ ಆಗಿ ಜೈನ ದಾರ್ಶನೋಕ್ತಿಯ ಪ್ರಸಾರಕ್ಕೂ ಕಾರಣವಾಯಿತು. ಕನ್ನಡ ಸಾಹಿತ್ಯ ಪರಂಪರೆಯ ಆದಿಮ ಕವಿಗಳೆಲ್ಲರೂ ಜೈನ ಮತಾವಲಂಬಿಗಳಾಗಿದ್ದರೂ ಮಾತ್ರವಲ್ಲ ಹೆಚ್ಚಿನವರು ಜೈನ ದಾರ್ಶನಿಕೆಯ ಬಗ್ಗೆಯೂ ಬೆಳಕು ಚೆಲ್ಲಿದವರಾಗಿದ್ದಾರೆ. ಜಿನ ರಾಮಾಯಣವೂ ಇವುಗಳಲ್ಲೊಂದು. ಪ್ರಾಕೃತ, ಪಾಲಿ, ಸಂಸ್ಕೃತ ಸಹಿತ ಸ್ಥಳೀಯ ಭಾಷೆಗಳಲ್ಲಿ ಸಾಹಿತ್ಯ ಸೃಷ್ಠಿಯೂ ಜೈನರಿಂದಾಗಿತ್ತು.

                                                                                                                                                                                  ✍️ವಿವೇಕಾದಿತ್ಯ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top