ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ರಾತ್ರಿ 9 ರಿಂದ ತೊಡಗಿದಂತೆ ಸೋಮವಾರ ಮುಂಜಾನೆ 6 ಗಂಟೆಯ ವರೆಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂವನ್ನು ಯಶಸ್ವಿಗೊಳಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನೋಡಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೊರೋನಾ ಸಂಬಂಧ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಸಂಪುಟ ಸಭೆ ನಡೆಸಿದ ಅವರು ಸಚಿವರು, ಸಂಬಂಧಿಸಿದ ಅಧಿಕಾರಿಗಳಿಗೆ ಈ ಸೂಚನೆಯನ್ನು ನೀಡಿದ್ದಾರೆ. ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿಗೆ ಸ್ಥೈರ್ಯ ತುಂಬುವಂತೆ, ಕೊರೋನಾ ನಿಯಂತ್ರಣಕ್ಕೆ ಸ್ವಯಂಸೇವಕರ ನೆರವು ಪಡೆಯುವಂತೆ, ಹೋಮ್ ಐಸೋಲೇಷನ್ ನಲ್ಲಿ ಇರುವವರ ಚಿಕಿತ್ಸೆ, ಟೆಲಿ ಕನ್ಸಲ್ಟೇಷನ್ ಒದಗಿಸಲು ಹಾಗೂ ಅವರ ಮೇಲೆ ನಿಗಾ ವಹಿಸಲು ಆದ್ಯತೆ ನೀಡುವಂತೆ, ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಬೆಡ್ ಗಳನ್ನು ಒದಗಿಸುವುದನ್ನು ಖಾತರಿ ಪಡಿಸಬೇಕು. ಆಯಾ ವಲಯಗಳ ಡಿಸಿಪಿಗಳು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಅವರು ಸೂಚಿಸಿದ್ದಾರೆ.
ಚಿತಾಗಾರಗಳಿಗೆ ಶವ ಸಾಗಿಸುವ ಅಂಬ್ಯುಲೆನ್ಸ್ ಗಳು ತಾಸುಗಟ್ಟಲೆ ಸರದಿಯಲ್ಲಿ ನಿಲ್ಲುವುದರಿಂದ ಶವಗಳನ್ನು ಸಾಗಿಸಲು ಅಂಬ್ಯುಲೆನ್ಸ್ ಗಳ ಕೊರತೆ ಆಗಿರುವ ಹಿನ್ನೆಲೆಯಲ್ಲಿ ಶವಗಳನ್ನು ಇರಿಸಲು ಚಿತಾಗಾರಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸಿಎಂ ತಿಳಿಸಿದರು. ಸಹಾಯವಾಣಿಗಳನ್ನು ಇನ್ನಷ್ಟು ಬಲಪಡಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆಯೂ ಅಧಿಕಾರಿಗಳಿಗೆ ತಿಳಿಸಿದರು. ನಗರದಲ್ಲಿ ಈಗಾಗಲೇ ಆಕ್ಸಿಜನ್ ಪೂರೈಕೆ ಮತ್ತು ಔಷಧ ಕೊರತೆಯ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಲಸಿಕೆಗಳ ಕೊರತೆಯೂ ಇಲ್ಲ ಎಂದು ಅವರು ಹೇಳಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಕೊರೋನಾ ಕೈಮೀರಿ ಹೋಗಿದೆ. ಈ ಅನಿವಾರ್ಯ ಸಂದರ್ಭದಲ್ಲಿ ಅದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ, ಇಲಾಖೆಗಳು, ಎಲ್ಲಾ ಅಧಿಕಾರಿಗಳು ಸರ್ವ ಸನ್ನದ್ಧವಾಗಿರಬೇಕಾಗಿದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಪರಿಶೀಲನೆ ಮಾಡುವಂತೆಯೂ ಯಡಿಯೂರಪ್ಪ ಸಲಹೆ ನೀಡಿದ್ದಾರೆ.
ಮುಖ್ಯಮಂತ್ರಿ @BSYBJP ರವರು ಇಂದು ಬೆಂಗಳೂರು ನಗರದ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಚರ್ಚಿಸಿದರು.#KarnatakaFightsCorona pic.twitter.com/KktWIusvtn
— CM of Karnataka (@CMofKarnataka) April 22, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.