ಬೆಂಗಳೂರು: ಕೊರೋನಾ ಎರಡನೇ ಅಲೆಯಿಂದಾಗಿ ತತ್ತರಿಸಿರುವ ರಾಜ್ಯದಲ್ಲಿ ಸೋಂಕಿತರು ಮೃತಪಟ್ಟಲ್ಲಿ ಶವ ಸಂಸ್ಕಾರಕ್ಕೂ ಪರದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯ ಗಂಭೀರತೆ ಅರಿತ ರಾಜ್ಯ ಸರ್ಕಾರ ಮೃತಪಟ್ಟವರ ಶವಗಳನ್ನು ಅವರ ಕುಟುಂಬ ವರ್ಗದ ಒಡೆತನದ ಖಾಸಗಿ ಭೂಮಿಯಲ್ಲಿ ಸಂಸ್ಕಾರ ಕಾರ್ಯಗಳನ್ನು ನಡೆಸಲು ಅನುಮತಿ ಸೂಚಿಸಿದೆ.
ಈ ಸಂಬಂಧ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಈ ಆದೇಶದ ಪ್ರಕಾರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಮತ್ತಿತರ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆಯೂ ಸೂಚಿಸಲಾಗಿದೆ. ಹಾಗೆಯೇ ಶವಗಳನ್ನು ಸ್ಪರ್ಶಿಸುವವರು ಕಡ್ಡಾಯವಾಗಿ ಪಿಪಿಇ ಕಿಟ್ಗಳನ್ನು ಬಳಕೆ ಮಾಡುವಂತೆಯೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಹಾಗೆಯೇ ಕೊರೋನಾ ಮೃತ ದೇಹಗಳನ್ನು ರವಾನೆ ಮಾಡಿದ ವಾಹನಗಳನ್ನು ಶೇಕಡಾ ಒಂದು ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ಬಳಕೆ ಮಾಡಿ ಸೋಂಕುರಹಿತಗೊಳಿಸುವಂತೆಯೂ ಸೂಚಿಸಲಾಗಿದೆ. ರೋಗಿ ಸಾವನ್ನಪ್ಪಿದ ಸ್ಥಳವನ್ನು ಹೊರತುಪಡಿಸಿದಂತೆ ಶವ ಸಾಗಾಟ ಸಂದರ್ಭದಲ್ಲಿ ಸಹಿ ಹೊಂದಿರುವ ಪ್ರಮಾಣ ಪತ್ರವನ್ನು ಕೊಂಡೊಯ್ಯುವಂತಹ ಮುನ್ನೆಚ್ಚರಿಕೆ ಅನುಸರಿಸಬೇಕು. ಆರೋಗ್ಯ ಸಿಬ್ಬಂದಿ ಶವದ ಜೊತೆಗೆ ಸಂಸ್ಕಾರ ಸ್ಥಳಕ್ಕೆ ತೆರಳಬೇಕು ಎಂಬುದಾಗಿಯೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.