“ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ”
ಅಂದರೆ ತಾಯಿ ಮತ್ತು ಮಾತೃಭೂಮಿಯು ಸ್ವರ್ಗಕ್ಕಿಂತಲೂ ಮಿಗಿಲು ಎಂದು. ಹೆತ್ತ ತಾಯಿ, ವಿದ್ಯೆ ಕಲಿಸಿದ ಗುರು ಮತ್ತು ಹೊರುವ ಭೂಮಿಯ ಋಣವನ್ನು ತೀರಿಸುವುದು ಸಾಧ್ಯವಿಲ್ಲ ಎಂದು ಹಿರಿಯರು ಹೇಳಿದ್ದಾರೆ. ನಾವು ಮಾತು ಬಾರದ ಮಗುವೂ ಕೂಡ ಅದರ ತಾಯಿಯ ತಂಟೆಗೆ ಹೋದವರನ್ನು ತನ್ನ ಪುಟ್ಟ ಕೈಗಳಿಂದ ಹೊಡೆದು ದೂರತಳ್ಳುವುದನ್ನು ನೋಡಿದ್ದೇವೆ. ಅಂದರೆ ಪುಟ್ಟ ಮಗುವೂ ತಾಯಿಯ ರಕ್ಷಣೆಯನ್ನು ತನ್ನ ಕರ್ತವ್ಯವೆಂದೇ ಭಾವಿಸಿರುತ್ತದೆ. ಹಾಗೆಯೇ ಶಾಲೆಗೇ ಹೋಗುವಷ್ಟಾಗುವಾಗ ಅದೇ ಮಕ್ಕಳು ಹಿರಿಯರಿಗಿಂತ ಜಾಸ್ತಿ ರಾಷ್ಟ್ರ ಧ್ವಜವನ್ನು,vರಾಷ್ಟ್ರಗೀತೆಯನ್ನು ಗೌರವಿಸುತ್ತಾರೆ. ಆದರೆ ಬೆಳೆದು ದೊಡ್ಡವರಾದ ಮೇಲೆ ತಮ್ಮ ವೈಯ್ಯಕ್ತಿಕ ಜೀವನದಲ್ಲಿ ಕಳೆದು ಹೋಗುವವರ ಸಂಖ್ಯೆ ಜಾಸ್ತಿಯಾದರೆ, ಮೈಯ್ಯಲ್ಲಿ ಹರಿಯುವ ರಕ್ತದ ಕಣ ಕಣದಲ್ಲೂ ದೇಶಭಕ್ತಿ ತುಂಬಿರುವಂತಹವರೂ ಇರುತ್ತಾರೆ. ಅಂತಹವರೇ ಮುಂದೆ ಸೈನ್ಯವನ್ನು ಸೇರಿ ದೇಶಸೇವೆಗೆ ತನ್ನನ್ನು ತಾನೇ ಅರ್ಪಿಸಿಕೊಳ್ಳುತ್ತಾರೆ. ಸೈನ್ಯ ಸೇರುವುದೆಂದರೆ ಬಾಯಿಮಾತಿನಲ್ಲಿ ಹೇಳಿದಷ್ಟು ಸುಲಭದ ವಿಷಯವೇನಲ್ಲ. ಹಲವಾರು ಹಂತಗಳ ಕಠಿಣ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಸೈನ್ಯಕ್ಕೆ ಸೇರಿಕೊಂಡ ಬಳಿಕ ಅದಕ್ಕಿಂತಲೂ ಕಠಿಣವಾದ ತರಬೇತಿಯೂ ಇರುತ್ತದೆ. ಇವುಗಳೆಲ್ಲವನ್ನೂ ಯಶಸ್ವಿಯಾಗಿ ಎದುರಿಸಿ ಸಫಲರಾದ ಬಳಿಕವೇ ಸೈನ್ಯದಲ್ಲಿ ಪ್ರವೇಶ ಸಿಗುವುದು. ಸಾಮಾನ್ಯ ಜನರಿಗೆ ಸಾಧ್ಯವಿಲ್ಲದ ವಿಚಾರವಿದು, ಅದಕ್ಕೆಂದೇ ಸೈನಿಕರನ್ನು ಸೂಪರ್ ಹೀರೋಗಳೆಂದು ಗೌರವಿಸುವುದು. ಸೈನ್ಯಕ್ಕೆ ಸೇರಿದರೆ ಕಥೆ ಮುಗಿಯುವುದಿಲ್ಲ. ಕಥೆಯು ಅಲ್ಲಿಂದ ಪ್ರಾರಂಭವಾಗುತ್ತದೆ ಅಷ್ಟೇ.
ಹೀಗೆಯೇ ಸೈನ್ಯ ಸೇರಿ ಇತಿಹಾಸ ನಿರ್ಮಿಸಿದ ಸಾಹಸಿ ವ್ಯಕ್ತಿಯೊಬ್ಬರ ಜೀವನಗಾಥೆಯಿದು. 1951 ರ ಫೆಬ್ರವರಿ 17 ರಂದು ಕೇರಳದ ಎರ್ನಾಕುಲಂ ನಲ್ಲಿ ಜನಿಸಿದ ಕರ್ನಲ್ ನೀಲಕಂಠನ್ ಜಯಚಂದ್ರನ್, ತಮ್ಮ ಸಹೋದ್ಯೋಗಿಗಳ ಮಧ್ಯೆ “ಎನ್ ಜೆ”ಎಂದೇ ಜನಪ್ರಿಯರು. ಕೇರಳದ ಕಾಝಿಕೋಟಂನ ಸೈನಿಕ ಶಿಕ್ಷಣ ಶಾಲೆಯಲ್ಲಿ ಅಧ್ಯಯನ ಮಾಡಿದ ಬಳಿಕ ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡಮಿಗೆ ಪ್ರವೇಶವನ್ನು ಪಡೆದರು. ಬಳಿಕ 1971 ಜೂನ್ 18 ರಂದು 16 ನೇ ಮರಾಠ ಲೈಟ್ ಪಡೆಯಲ್ಲಿ ನಿಯೋಜಿಸಲ್ಪಟ್ಟರು. ತಮ್ಮ ವೃತ್ತಿ ಜೀವನದಲ್ಲಿ ವಿವಿಧ ಭೂಪ್ರದೇಶ ಮತ್ತು ವಿವಿಧ ವಾತಾವರಣಗಳೊಂದಿಗೆ, ವಿವಿಧ ಶೈಲಿಯ ಕಾರ್ಯಾಚರಣೆಯ ಪ್ರದೇಶಗಳಲ್ಲೂ ಕಾರ್ಯ ನಿರ್ವಹಿಸಿದ್ದ ನೀಲಕಂಠನ್ ಪುಣೆಯಲ್ಲಿನ ಸೇನೆಯ ಗುಪ್ತಚರ ಶಾಲೆಯಲ್ಲಿ ಬೋಧಕರಾಗಿಯೂ ಸೇವೆಯನ್ನು ಸಲ್ಲಿಸಿದ್ದರು. ವೆಲ್ಲಿಂಗ್ಸ್ಟನ್ನ ಡಿಫ್ಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ ಅವರು ಭೂತಾನ್ನಲ್ಲೂ ಅಧಿಕಾರಾವಧಿಯನ್ನು ಹೊಂದಿದ್ದರು. ಎರಡು ದಶಕಗಳ ಕಾಲ ಭಾರತೀಯ ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸಿದ್ದ ಅವರು ತಮ್ಮ ಕಾಲಾವಧಿಯಲ್ಲಿ ವಿವಿಧ ಉತ್ತಮ ಹುದ್ದೆಗಳನ್ನು ಅಲಂಕರಿಸಿದ್ದರು.
1983 ರ ಸಮಯದಲ್ಲಿ ಕಾಪ್ಟನ್ ನಾಯರ್ ಅವರ ಘಟಕವನ್ನು ಮಿಜೋರಾಂ ಪ್ರದೇಶದಲ್ಲಿ ನಿಯೋಜಿಸಲಾಯಿತು. 13 ಫೆಬ್ರವರಿ 1983 ರಂದು ಅಡಗುತಾಣದಲ್ಲಿ ಅಡಗಿರುವ ದಂಗೆಕೋರರನ್ನು ಹೊರದಬ್ಬುವ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.ಕಾರ್ಯಾಚರಣೆಯನ್ನು ಸ್ವತಃ ನೀಲಕಂಠನ್ ಅವರೇ ಮುನ್ನಡೆಸಿದರು. ದಂಗೆಕೋರರೊಂದಿಗೆ ಮುಖಾಮುಖಿ ಯುದ್ಧದಲ್ಲಿ ತೊಡಗಿಸಿಕೊಂಡಿದ್ದ ನೀಲಕಂಠನ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿಸಿದರು. ಶತ್ರುಗಳೆದುರು ಅಸಾಧಾರಣ ಸಾಹಸ ಮತ್ತು ನಾಯಕತ್ವವನ್ನು ಪ್ರದರ್ಶಿಸಿದ ನೀಲಕಂಠನ್ ಅವರಿಗೆ “ ಕೀರ್ತಿ ಚಕ್ರ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಆದರೆ ಪ್ರಶಸ್ತಿ ಬಂತೆಂದು ಸುಮ್ಮನಾಗುವ ಪ್ರವೃತ್ತಿ ಯೋಧರದಲ್ಲ.
ಕೀರ್ತಿಚಕ್ರ ಪಡೆದು ಸರಿಯಾಗಿ 10 ವರ್ಷಗಳ ಬಳಿಕ 1993 ರಲ್ಲಿ ನಾಯರ್ ಅವರ ಘಟಕವನ್ನು ನಾಗಾಲ್ಯಾಂಡ್ ನಲ್ಲಿ ನಿಯೋಜಿಸಲಾಯಿತು. ಆ ಸಮಯದಲ್ಲಿ ನಾಗಾಲ್ಯಾಂಡ್ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ದಂಗೆಕೋರರ ಹಾವಳಿಯಲ್ಲಿ ನಲುಗುತ್ತಿತ್ತು. ಡಿಸೆಂಬರ್ 20, 1993 ರಂದು ಕರ್ನಲ್ ನೀಲಕಂಠನ್ ಜಯಚಂದ್ರನ್ ನಾಯರ್ ಅವರು ನಾಗಾಲ್ಯಾಂಡ್ ನಲ್ಲಿ ರಕ್ಷಣೆಯನ್ನು ನಡೆಸುತ್ತಿದ್ದ ತಂಡವನ್ನು ಮುನ್ನಡೆಸುತ್ತಿದ್ದರು. ಇಂತಹ ಸಮಯದಲ್ಲಿ ಸುಮಾರು 100 ಜನ ದಂಗೆಕೋರರು ಇವರ ಘಟಕದ ಮೇಲೆ ದಾಳಿಯನ್ನು ನಡೆಸಿದರು. ಪೂರ್ವನಿಯೋಜಿತವಾದ ಈ ದಾಳಿಯಲ್ಲಿ ದಂಗೆಕೋರರ ಬಳಿಯಲ್ಲಿ ಹಲವಾರು ಆಧುನಿಕ ಶಸ್ತ್ರಾಸ್ತ್ರಗಳೂ ಇದ್ದವು. ಅನಿರೀಕ್ಷಿತ ದಾಳಿಯಿಂದ ಓರ್ವ ಅಧಿಕಾರಿ ಮತ್ತು ಹದಿಮೂರು ಜವಾನರು ಕ್ಷಣದಲ್ಲೇ ಹುತಾತ್ಮರಾದರು. ಕರ್ನಲ್ ನಾಯರ್ ಕೂಡ ದಾಳಿಯಲ್ಲಿ ಗಾಯಗೊಂಡರು ಆದರೆ ಧೈರ್ಯವನ್ನು ಕಳೆದುಕೊಳ್ಳದೆ ಪರಿಸ್ಥಿತಿಯ ಉಸ್ತುವಾರಿಯನ್ನು ಕೈಗೆತ್ತಿಕೊಂಡರು. ಗಂಭೀರವಾಗಿ ಗಾಯಗೊಂಡಿದ್ದ ನಾಯರ್, ಯುದ್ಧಕ್ಕೆ ಪ್ರತಿತಂತ್ರವೊಂದನ್ನು ರಚಿಸಿ ಮೊಣಕಾಲುಗಳ ಸಹಾಯದಿಂದ ತೆವಳುತ್ತಾ ಸಾಗಿ ರಸ್ತೆಯನ್ನು ದಾಟಿ, ಲಾಭದಾಯಕವಾಗಿರುವ ಸ್ಥಳವನ್ನು ಸೇರಿಕೊಂಡರು. ಬಳಿಕ ಗಾಯಗೊಂಡ ಇನ್ನೊಬ್ಬ ಸೈನಿಕನನ್ನು ಹೆಗಲ ಮೇಲೆ ಹೊತ್ತುಕೊಂಡು ಬಂಡುಕೋರರ ಮೇಲೆ ಗುಂಡುಹಾರಿಸುವಂತೆ ಆಜ್ಞಾಪಿಸಿದರು. ಇದರಿಂದಾಗಿ ಬಂಡುಕೋರರ ಅಡ್ಡಗುಂಡಿನ ದಾಳಿಯು ಸ್ಥಗಿತಗೊಂಡಿತು. ಈ ಸಂದರ್ಭವನ್ನು ಉಪಯೋಗಿಸಿ ಕರ್ನಲ್ ನಾಯರ್ ತನ್ನ ಸೈನಿಕರಿಗೆ ಆಕ್ರಮಣದ ದಾಳಿಯನ್ನು ಮಾಡಲು ಪ್ರೋತ್ಸಾಹಿಸಿದರು. ಮಾರಣಾಂತಿಕವಾಗಿ ಗಾಯಗೊಂಡಿದ್ದರೂ ಕರ್ನಲ್ ನಾಯರ್ ತನ್ನ ಸೈನಿಕರನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಲೇ ಇದ್ದರು ಮತ್ತು ಇದರಿಂದಾಗಿ ಕೊನೆಗೂ ಬಂಡುಕೋರರು ಹಿನ್ನಡೆಯನ್ನು ಅನುಭವಿಸಿದರು.
ಒಂದು ಘಟಕದ ನಾಯಕರಾಗಿ, ತಮ್ಮ ಕರ್ತವ್ಯವನ್ನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸಿದ ಕರ್ನಲ್ ನಾಯರ್ ತಮ್ಮ ಮಾರಣಾಂತಿಕ ಗಾಯಗಳ ಕಾರಣದಿಂದಾಗಿ ಕೊನೆಯುಸಿರನ್ನೆಳೆದರು. ಅಂತಹ ಕ್ಲಿಷ್ಣಕಾರವಾದ ಪರಿಸ್ಥಿತಿಯಲ್ಲೂ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಕರ್ನಲ್ ನಾಯರ್ ತಮ್ಮ ತಂಡದ ಅನೇಕರ ಪ್ರಾಣವನ್ನು ಕಾಪಾಡಿದ್ದರು. ತಮ್ಮ ಧೈರ್ಯ ಮತ್ತು ಸಾಹಸ ಹಾಗು ಬಲಿದಾನಗಳಿಗಾಗಿ ಭಾರತ ಸರಕಾರವು ಕರ್ನಲ್ ನೀಲಕಂಠನ್ ಜಯಚಂದ್ರನ್ರನ್ನು ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ಅಶೋಕ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಿತು. ಎರಡು ಅತ್ಯುತ್ತಮ ಪ್ರಶಸ್ತಿಗಳನ್ನು ಅಲಂಕರಿಸಿದ ಏಕೈಕ ಸೈನಿಕನೆಂದು ಇತಿಹಾಸವನ್ನೂ ನಿರ್ಮಿಸಿ ದೇಶದ ಎರಡು ಅತ್ಯುನ್ನತ ಪ್ರಶಸ್ತಿಗೆ 10 ವರ್ಷಗಳ ಅಂತರದಲ್ಲಿ ಭಾಜನರಾದ ಕರ್ನಲ್ ನಾಯರ್ ದೇಶಕ್ಕಾಗಿ ಸಲ್ಲಿಸಿದ ಅಪರಿಮಿತ ಸೇವೆಯನ್ನು ನಾವು ಇಂದಿಗೂ ಮರೆಯಬಾರದು. ಕರ್ನಲ್ ನಾಯರ್ ರ ಜೀವನಗಾಥೆಯು ಅನೇಕ ಯುವಕರಿಗೆ ಮಾದರಿಯಾಗಲಿ .
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.