ರಾಮಾಯಣದ ಒಂದು ಘಟನೆ ಹೀಗಿದೆ. ಶ್ರೀರಾಮ ಪಟ್ಟಾಭಿಷೇಕದ ಸಮಯ. ಸೀತಾಮಾತೆಗೆ, ಲಂಕೆಯಿಂದ ತನ್ನ ಬಿಡುಗಡೆಗೆ ಕಾರಣರಾದ ಎಲ್ಲರಿಗೂ ಏನಾದರೊಂದು ನೆನಪಿನ ಕಾಣಿಕೆ ಕೊಡುವ ಬಯಕೆ. ಅದೇ ರೀತಿ ಎಲ್ಲ ಕಪಿ ವೀರರಿಗೂ ಕಾಣಿಕೆ ಕೊಟ್ಟಳು. ಕೊನೆಯ ಸರದಿ ಹನುಮಂತನದು. ಅವನನ್ನು ಕರೆದು ತನ್ನ ಕುತ್ತಿಗೆಯಲ್ಲಿದ್ದ ಮುತ್ತಿನ ಹಾರವನ್ನೇ ನೀಡಿದಳು. ಅಂಜಲೀಬದ್ದನಾಗಿ ಹನುಮ ಹಾರವನ್ನು ಪಡೆದುಕೊಂಡು, ಒಂದೊಂದೇ ಮುತ್ತನ್ನು ಕಡಿದು, ತುಂಡರಿಸಿ ಅದರಲ್ಲಿ ರಾಮನಿದ್ದಾನೆಯೇ ಎಂದು ಪರೀಕ್ಷಿಸುತ್ತಾ ಹೋದ. ತನ್ನ ತವರು ಮನೆಯಲ್ಲಿ ಕೊಟ್ಟ ಸರವನ್ನು ಹನುಮಂತ ಹೀಗೆ ಹಾಳು ಮಾಡುತ್ತಿರುವುದನ್ನು ಕಂಡು ಸೀತಾಮಾತೆಗೆ ವಿಪರೀತ ಕೋಪ ಬಂತು. ಹನುಮಾ, ಏನು ಮಾಡುತ್ತಿರುವೆ? ಎಂದು ಕೇಳಿದಳು. ಆಗ ಹನುಮಂತ ಅಮ್ಮಾ ಈ ಮಣಿಗಳಲ್ಲಿ ಆರಾಧ್ಯ ದೈವ ರಾಮಸೀತೆಯರು ಇದ್ದಾರೋ ಇಲ್ಲವೋ ಎಂದು ಪರೀಕ್ಷಿಸುತ್ತಿರುವೆ ಅವರಿಲ್ಲದ ಈ ಮಣಿಗಳು ನನಗೆ ತೃಣಕ್ಕೆ ಸಮಾನ ಎಂದ. ಆಗ ಸೀತಾಮಾತೆ, ಹೀಗೆ ಎಲ್ಲ ವಸ್ತುಗಳಲ್ಲಿ ರಾಮಸೀತೆಯರನ್ನೇ ಹುಡುಕುತ್ತಿರುವ ನೀನು ನಿನ್ನಲ್ಲಿ ಅವರಿದ್ದಾರೆಯೇ ಎಂದು ಕೇಳಿದಳು. ತಕ್ಷಣ ಹನುಮಂತ ತನ್ನ ಎದೆಯನ್ನು ಬಗೆದು ತೋರಿಸಿದ. ಸೀತಾಮಾತೆಗೆ ಅಲ್ಲಿ ರಾಮಸೀತೆಯರು ಆಸೀನರಾಗಿರುವ ಚಿತ್ರ ಕಂಡಿತು. ಧನ್ಯ ಹನುಮ ಎಂದು ಮೆಚ್ಚಿಗೆ ಸೂಸಿದಳು.
ರಾಮಾಯಣ ಕಾಲದಲ್ಲಿ ಶ್ರೀ ರಾಮ ಕೇವಲ ಹನುಮ ಹೃದಯ ನಿವಾಸಿ ಅಷ್ಟೇ ಆಗಿರಲಿಲ್ಲ. ಸರ್ವ ಪ್ರಜ್ಞಾ ಹೃದಯ ನಿವಾಸಿಯೂ ಆಗಿದ್ದ. ತಂದೆಯ ಆಣತಿಯಂತೆ ರಾಮನು ವನವಾಸಕ್ಕೆ ಹೊರಟಾಗ ಅಯೋಧ್ಯೆಯ ಪ್ರಜೆಗಳೆಲ್ಲ ಅವನನ್ನು ಹಿಂಬಾಲಿಸಿದರು. ಎಷ್ಟೇ ಬೇಡಿಕೊಂಡರೂ ಪ್ರಜೆಗಳು ಅಯೋಧ್ಯೆಗೆ ಹಿಂದಿರುಗಲು ಒಪ್ಪಲಿಲ್ಲ. ಕೊನೆಗೆ ಅವರೆಲ್ಲಾ ಮಲಗಿದ ನಂತರ ರಾತ್ರೋರಾತ್ರಿ ಅವರಿಗೆ ತಿಳಿಯದಂತೆ ರಾಮ ಕಾಡಿನತ್ತ ಹೊರಟ. ಮತ್ತೆ ಪುನಃ, ರಾಮ ಸಮಾಗಮಕ್ಕಾಗಿ ಭರತನು ಕಾಡಿನತ್ತ ಹೊರಟಾಗ, ಪ್ರಜೆಗಳೂ ಅವನ ಹಿಂದೆ ಹೊರಟರು. ಚಿತ್ರಕೂಟದಲ್ಲಿ ಅಯೋಧ್ಯೆಗೆ ಹಿಂದೆ ಹೋಗಲು ಭರತನನ್ನು ಒಪ್ಪಿಸಿದಂತೆ, ಪ್ರಜೆಗಳನ್ನು ಒಪ್ಪಿಸಬೇಕಾಯ್ತು. ಇಷ್ಟರ ಮಟ್ಟಿಗೆ ಅವನು ಪ್ರಜಾರಂಜಕನಾಗಿದ್ದನು.
ತ್ರೇತಾಯುಗದಿಂದ ಇಂದಿನವರೆಗೆ ಸಹಸ್ರಾರು ವರ್ಷಗಳು ಕಾಲಪ್ರವಾಹದಲ್ಲಿ ಹರಿದು ಹೋಗಿದೆ. ಆಗ ಕೆಲವು ಕೋಟಿಗಳಷ್ಟಿದ್ದ ಭಾರತೀಯರು ಇಂದು ನೂರು ಕೋಟಿಗಳಾದರೂ ಇಂದೂ ಅವರ ಹೃದಯ ಕಮಲದಲ್ಲಿ ಶ್ರೀರಾಮ ಸೀತೆಯರು ವಿರಾಜಮಾನರಾಗಿದ್ದಾರೆ. ಕೇವಲ ಭಾರತವಾಸಿಗಳಷ್ಟೇ ಅಲ್ಲ ಜಗತ್ತಿನ ವಿವಿಧ ಭಾಗಗಳಲ್ಲಿ ನೆಲಸಿರುವ ಭಾರತೀಯರ ಹೃದಯದಲ್ಲೂ ರಾಮನಿದ್ದಾನೆ. ಇದಕ್ಕೆ ಜ್ವಲಂತ ಸಾಕ್ಷಿ ೨೦೧೯ರ ನವೆಂಬರ್ ೯ನೇ ತಾರೀಖು ಸುಪ್ರೀಂಕೋರ್ಟು ರಾಮಜನ್ಮ ಭೂಮಿಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪಿಸಲು ಇಡೀ ಜಾಗವನ್ನು ಹಿಂದೂ ಸಮಾಜಕ್ಕೆ ಕೊಡುವ ತೀರ್ಪನ್ನು ಪ್ರಕಟಿಸಿದಾಗ ಕೋಟಿ ಕೋಟಿ ಜನ ಸಂಭ್ರಮಿಸಿದರು.
ಸಹಸ್ರಮಾನಗಳು ಉರುಳಿದರೂ ಶ್ರೀರಾಮಭಕ್ತಿ, ಆರಾಧನೆಗಳು ಈ ದೇಶದಲ್ಲಿ ನಡೆಯುತ್ತಿರುವುದಾದರೂ ಏಕೆ? ಗ್ರಾಮ ಗ್ರಾಮಗಳಲ್ಲಿ ರಾಮಮಂದಿರಗಳು, ರಾಮಭಜನೆ ಏಕೆ? ೮೦ರ ದಶಕದಲ್ಲಿ ರಮಾನಂದ ಸಾಗರರು ನಿರ್ಮಿಸಿದ ರಾಮಾಯಣದ ಕಥೆ ಟಿ.ವಿಯಲ್ಲಿ ಬರುತ್ತಿದ್ದಾಗ, ಭಾರತದ ಎಲ್ಲ ಗ್ರಾಮ, ನಗರಗಳಲ್ಲಿ ಜನ ಟಿ.ವಿ ಮುಂದೆ ಕೂರುತ್ತಿದ್ದರು. ಮದುವೆಯ ಆಹ್ವಾನ ಪತ್ರಿಕೆಯಲ್ಲೂ ರಾಮಾಯಣ ನೋಡಲು ಟಿ ವಿ ವ್ಯವಸ್ಥೆ ಇದೆ ಎಂದು ಮುದ್ರಿಸುತ್ತಿದ್ದರು. ಜನರಿಗೆ ರಾಮನ ಬಗ್ಗೆ ಅಷ್ಟು ಭಕ್ತಿ, ಅಷ್ಟು ಶ್ರದ್ಧೆ, ಅಷ್ಟು ಪೂಜ್ಯಭಾವನೆ, ಕೋಟಿ ಕೋಟಿ ಜನರ ಆರಾಧ್ಯ ದೈವ ಶ್ರೀರಾಮಚಂದ್ರ ಇದೇಕೆ?
ಇದಕ್ಕೆ ಉತ್ತರ ಶ್ರೀರಾಮನ ವ್ಯಕ್ತಿತ್ವ! ಶ್ರೀರಾಮ, ಮರ್ಯಾದ ಪುರುಷೋತ್ತಮ. ಅವನು ಸದ್ಗುಣಗಳ ಸಾಗರ. ಆ ಎಲ್ಲ ಗುಣಗಳಲ್ಲಿ ಕೆಲವನ್ನಾದರೂ ಮಾನವನು ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಅವನು ಉತ್ತಮ ಮನುಷ್ಯನಾಗುವುದರಲ್ಲಿ ಸಂದೇಹವೇ ಇಲ್ಲ. ಅದೆಷ್ಟು ಗುಣಗಳು ಅವನಲ್ಲಿ ಕೇಂದ್ರೀಕೃತವಾಗಿದೆ. ಜಗತ್ತಿನ ಎಲ್ಲ ನದಿಗಳ ನೀರು ಸಾಗರದಲ್ಲಿ ಸೇರಿದಂತೆ! ಸತ್ಯ, ದಯೆ, ಕ್ಷಮೆ, ಧೀರತೆ, ವೀರತೆ, ಗಾಂಭೀರ್ಯ, ಶಸ್ತ್ರಾಸ್ತ್ರ ಜ್ಞಾನ, ಪರಾಕ್ರಮ, ನಿರ್ಭಯತೆ, ವಿನಯ, ಶಾಂತಿ, ಸಂಯಮ ತೇಜಸ್ಸು, ಪ್ರೇಮ, ತ್ಯಾಗ, ಪ್ರಜಾರಂಜನೆ ಮಾತೃಭಕ್ತಿ, ಪ್ರಿತೃಭಕ್ತಿ, ಗುರುಭಕ್ತಿ, ಭ್ರಾತೃಪ್ರೇಮ, ಶರಣಾಗತವತ್ಸಲತೆ, ಸರಳತೆ, ಮೈತ್ರಿ, ಧರ್ಮಪಾಲನೆ, ಪ್ರತಿಜ್ಞಾಪಾಲನೆ, ಸಾಧುಸಂತರ ರಕ್ಷಣೆ, ದುಷ್ಟರದಮನ, ಧರ್ಮಪಾರಾಯಣತೆ, ಇನ್ನೂ ಬಹಳಷ್ಟು ಗುಣಗಳು ರಾಮನಲ್ಲಿ ಪೂರ್ಣರೂಪದಿಂದ ವಿಕಾಸಗೊಂಡಿತ್ತು. ಎಲ್ಲಕ್ಕಿಂತ ಮಿಗಿಲಾಗಿ ತನ್ನ ಪುತ್ರನ ಏಳಿಗೆಗಾಗಿ ರಾಮನನ್ನು ಕಾಡಿಗೆ ಕಳಿಸಬೇಕೆಂದು ದಶರಥನನ್ನು ಒತ್ತಾಯಿಸಿದ ಕೈಕೇಯಿ ರಾಮನ ಬಗ್ಗೆ ಹೇಳುವ ಮಾತನ್ನು ಓದಿರಿ.
ಧರ್ಮಜ್ಞೋ ಗುಣವಾನ್ ದಾತಃ ಕೃತಜ್ಞಃ ಸತ್ಯವಾಂಘಚಿಃ|
ರಾಮೋ ರಾಜಸುತೋ ಜ್ಯೇಷ್ಠೋ ಯೌವರಾಜ್ಯಮನೋರ್ಹತಿ||
ಭ್ರಾತೃನ್ ಭೃತ್ಯಾಂಶ್ಚ ದೀರ್ಘಾಯುಃ ಪಿತೃವತ್ ಪಾಲಯಿಷ್ಯತಿ|
ಸಂತಸ್ಯಸೇ ಕಥಂ ಕುಬ್ಜೇ ಶುತ್ವಾ ರಾಮಾಭಿಷೇಚನಮ್||
(ವಾಲ್ಮೀಕಿ ರಾಮಾಯಣ ೨-೮-೧೪-೧೫)
ಕುಬ್ಜೆ| ರಾಮನು ಧರ್ಮಜ್ಞ, ಗುಣವಂತ, ಜಿತೇಂದ್ರಿಯ, ಕೃತಜ್ಞ, ಸತ್ಯವಾದಿ, ಪವಿತ್ರನೂ ಆಗಿರುವ ಜೊತೆಗೆ ಮಹಾರಾಜರ ಹಿರಿಯ ಪುತ್ರನೂ ಆಗಿದ್ದಾನೆ. ಆದ್ದರಿಂದ ಯುವರಾಜನಾಗುವ ಅಧಿಕಾರ ಅವನಿಗೇ ಇರುವುದು. ಅವನು ಚಿರಂಜೀವಿಯಾಗಿ ತನ್ನ ಸಹೋದರರನ್ನು ಮತ್ತು ನೌಕರರನ್ನು ತಂದೆಯಂತೆ ಪೋಷಣೆ ಮಾಡುವನು. ಹಾಗಿರುವಾಗ ಅವನ ಪಟ್ಟಾಭಿಷೇಕದ ಮಾತನ್ನು ಕೇಳಿ ಏಕೆ ಇಷ್ಟೊಂದು ಕಿಡಿಕಾರುತ್ತಿರುವೆ? ಎಂದು ಮಂಥರೆಗೆ ಛೀಮಾರಿ ಹಾಕುತ್ತಾಳೆ. ಕೈಕೇಯಿಗೆ ರಾಮನ ಮೇಲೆ ಎಂತಹ ವಾತ್ಸಲ್ಯ, ಪ್ರೇಮ ವಿಶ್ವಾಸ ಮತ್ತು ಭರವಸೆ!
ಮನುಷ್ಯ ಸಂಬಂಧಗಳು ನಶಿಸಿ ಹೋಗುತ್ತಿರುವ ಈ ಹೊತ್ತಿನಲ್ಲಿ ಶ್ರೀರಾಮನ ನಡತೆ ನಮಗೆ ಆದರ್ಶವಾಗುತ್ತದೆ. ಶ್ರೀ ರಾಮನ ಮಾತೃಭಕ್ತಿ ಅಸಾಧಾರಣ. ಹೆತ್ತ ತಾಯಿಯಂತೆ ಉಳಿದ ತಾಯಂದಿರ ಬಗ್ಗೆಯೂ ಸಮಾನಭಕ್ತಿ. ಭರತ, ಶತೃಘ್ನರು ಚಿತ್ರಕೂಟಕ್ಕೆ ಬಂದಾಗ, ತಾಯಿ ಕೈಕೇಯಿಯನ್ನು ನಿಂದಿಸಿ ಮನ ನೋಯಿಸಬೇಡಿ ಎಂದು ಹೇಳಿ ಕಳಿಸುತ್ತಾನೆ. ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ತೆರಳಿ ಪುತ್ರ ಧರ್ಮವನ್ನು ಪಾಲಿಸುತ್ತಾನೆ. ವನವಾಸದಲ್ಲಿ ಶೂರ್ಪನಖಿ ತನ್ನನ್ನು ವರಿಸೆಂದು ಪೀಡಿಸಿದಾಗ, ಸೀತೆಯಲ್ಲದೆ ಮಿಕ್ಕೆಲ್ಲರೂ ನನಗೆ ಪರಸ್ತ್ರೀಯರು, ಮಾತೃಸಮಾನರೆನ್ನುತ್ತಾನೆ. ತಮ್ಮಂದಿರನ್ನು ಪ್ರಾಣ ಸಮಾನರೆಂದು ಭಾವಿಸುತ್ತಾನೆ. ರಾಮನ ಮಿತ್ರಪ್ರೇಮವನ್ನು ವಾಲ್ಮೀಕಿ ವರ್ಣಿಸುತ್ತಾ ವನವಾಸಿ ವಾನರರೇ? ನೀವೆಲ್ಲರೂ ನನ್ನ ಮಿತ್ರರೂ, ಸಹೋದರರೂ ಹಾಗೂ ಶರೀರವೂ ಆಗಿದ್ದೀರಿ. ನಿಮ್ಮಂಥ ಶ್ರೇಷ್ಠ ಮಿತ್ರರ ಜತೆಯಲ್ಲಿರುವ ರಾಜ ಸುಗ್ರೀವನು ಧನ್ಯ! ಎಂದು ಅಯೋಧ್ಯೆಯಿಂದ ವಾನರಸೇನೆಯನ್ನು ಬೀಳ್ಕೊಡುವಾಗ ಹೇಳುತ್ತಾನೆ. ಇಷ್ಟೇ ಅಲ್ಲ ತನ್ನ ಪರಮ ಶತೃವಾದ ರಾವಣನ ವಧೆಯ ನಂತರ ವಿಭೀಷಣನು ಅಣ್ಣನ ಅಂತ್ಯ ಸಂಸ್ಕಾರ ಮಾಡುವುದಿಲ್ಲವೆಂದಾಗ ಮರಣಾಂತಾನಿ ವೈರಾಣಿ, ನಿವೃತ್ತಾ ನಃ ಪ್ರಯೋಜನಂ ಸತ್ತ ನಂತರ ಒಬ್ಬರೂ ವೈರಿಯಲ್ಲ. ಅವನ (ಯುದ್ಧಕಾಂಡ) ಮರಣದೊಡನೆಯೇ ವೈರವೂ ಮುಕ್ತಾಯವಾಗುತ್ತದೆ ಎಂದು ವಿಭೀಷಣನ ಕೈಯಲ್ಲಿ ರಾವಣನ ಅಂತ್ಯ ಸಂಸ್ಕಾರ ಮಾಡಿಸುತ್ತಾನೆ. ಹೀಗೆ ಆದರ್ಶ ಶತ್ರು ಎಂಬುದನ್ನೂ ತೋರಿಸಿದ್ದಾನೆ. ಜಟಾಯುವಿಗೆ ತಾನೇ ವಿಧಿ ವತ್ತಾಗಿ ಅಂತ್ಯ ಸಂಸ್ಕಾರ ಮಾಡಿ ಎಲ್ಲ ಪ್ರಾಣಿಗಳನ್ನೂ ಸಮಾನತೆ ಯಿಂದ ಕಾಣುವವನು ಎಂಬುದನ್ನು ಸಾಬೀತು ಪಡಿಸಿದ್ದಾನೆ.
ಇಷ್ಟೆಲ್ಲಾ ಗುಣಗಳ, ಆದರ್ಶಗಳ ಗಣಿಯಾಗಿದ್ದ ಶ್ರೀರಾಮ ಪರಮ ದೇಶಭಕ್ತ. ವನವಾಸಕ್ಕೆ ಹೊರಡುವಾಗ ಅಯೋಧ್ಯೆಯ ಕಡೆ ತಿರುಗಿ ಭಕ್ತಿ ಪೂರ್ವಕವಾಗಿ ನಮಸ್ಕರಿಸುತ್ತಾನೆ. ರಾವಣ ವಧೆಯ ನಂತರ ಸ್ವರ್ಣನಗರಿ ಲಂಕೆಯಿಂದ ಮೋಹ ಗೊಂಡ ಲಕ್ಷ್ಮಣನು ಅಣ್ಣಾ, ನಾವು ಲಂಕೆಯನ್ನು ಗೆದ್ದಿದ್ದೇವೆ ಇಲ್ಲೇ ಏಕಿರಬಾರದು ಎಂದಾಗ ಶ್ರೀರಾಮನು ಜನನೀ ಜನ್ಮಭೂಮಿಶ್ವ ಸ್ವರ್ಗಾದಪಿ ಗರೀಯಸೀ ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತ ಮಿಗಿಲು ಎಂದು ಲಕ್ಷ್ಮಣನಿಗೆ ತಾಯ್ನಾಡಿನ ಮಹತ್ವ ತಿಳಿಸುತ್ತಾನೆ.
ರಾಮನ ಚರಿತ್ರೆಯೇ ರಾಮಾಯಣ. ಒಂದೊಂದು ಇಲ್ಲಿನ ಪ್ರತಿಪಾತ್ರಧಾರಿಯೂ ಒಂದೊಂದು ಜೀವನ ಮೌಲ್ಯಗಳ ಪ್ರತಿಬಿಂಬ. ಆದ್ದರಿಂದಲೇ ಇಂದಿಗೂ ಸಹಸ್ರಾರು ಜನ ರಾಮಾಯಣ ಪಾರಾಯಣವನ್ನು ಪ್ರತಿನಿತ್ಯ ಮಾಡುತ್ತಾರೆ. ಪುರಂದರ ದಾಸರಂತೂ ಈ ಮಂತ್ರ, ಆಮಂತ್ರ ನೆಚ್ಚಿ ನೀ ಕೆಡಬೇಡ, ರಾಮ ಮಂತ್ರವ ಜಪಿಸೋ ಹೇ ಮಾನವಾ ಎಂದು ರಾಮತಾರಕ ಮಂತ್ರದ ಮಹಿಮೆ ಹಾಡಿದ್ದಾರೆ.
ಅದಕ್ಕೆಂದೇ ಇಂದಿಗೂ ಶ್ರೀರಾಮ ಸೀತೆಯರು ಕೋಟಿ ಕೋಟಿ ಭಾರತೀಯರ ಹೃದಯ ನಿವಾಸಿಗಳು.
✍️ ಹೆಚ್ಚೆನ್ನಾರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.